CONNECT WITH US  

ಅಧಿಕೃತ ಅಂಗಡಿಯಲ್ಲೇ ಬೀಜ ಖರೀದಿಸಿ

ಚಿಂಚೋಳಿ: ಸರಕಾರದಿಂದ ಪರವಾನಗಿ ಪಡೆದುಕೊಂಡಿರುವ ಅಧಿಕೃತ ಅಂಗಡಿಗಳಿಂದಲೇ ಬಿತ್ತನೆ ಬೀಜ ಖರೀದಿಸಬೇಕು ಕಡಿಮೆ ದರದಲ್ಲಿ ಸಿಗುವ ಯಾವುದೇ ಬಿತ್ತನೆ ಬೀಜಗಳನ್ನು ಖರೀದಿಸಿ ಬೆಳೆ ಹಾಳು ಮಾಡಿಕೊಳ್ಳಬೇಡಿರಿ ಎಂದು ಸೇಡಂ ವಿಭಾಗ ಸಹಾಯಕ ಉಪ ಕೃಷಿ ನಿರ್ದೇಶಕ ಡಾ| ಬಾಲರಾಜ ತಿಳಿಸಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ತಾಲೂಕು ಕೃಷಿ ಇಲಾಖೆ ಏರ್ಪಡಿಸಿದ್ದ 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಯೋಜನೆ ಅಡಿಯಲ್ಲಿ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಮತ್ತು ಕೃಷಿ ವಸ್ತು ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದರು.

ರೈತರಿಗಾಗಿ ರಿಯಾಯ್ತಿ ದರದಲ್ಲಿ ಪ್ರಸಕ್ತ ಸಾಲಿನಲ್ಲಿ ತೊಗರಿ, ಉದ್ದು, ಹೆಸರು, ಸೋಯಾ ಹಾಗೂ ಇನ್ನಿತರ ಬಿತ್ತನೆ
ಬೀಜಗಳನ್ನು ನೀಡಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಸಿಗುವ ಬಿತ್ತನೆ ಬೀಜ ಖರೀದಿಸಿ ಮುಂದೆ ಸಂಕಷ್ಟಕ್ಕೆ ಸಿಲುಕಬೇಡಿರಿ. ಕಡಿಮೆ ದರದಲ್ಲಿ ಸಿಗುವ ಬಿತ್ತನೆ ಬೀಜಗಳು ನಕಲಿ ಆಗಿರುತ್ತವೆ ಎಂದರು.

ಕಲಬುರಗಿ ಕೃಷಿ ಸಂಶೋಧನಾ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು ಮಾತನಾಡಿ, ಜಿ.ಆರ್‌.ಜಿ-811 ತೊಗರಿ ಹೊಸ ತಳಿ ಹೊರ ತರಲಾಗಿದೆ. ಸದ್ಯ400 ಕ್ವಿಂಟಲ್‌ ಬೀಜ ಲಭ್ಯವಿದೆ. ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರಗಳಲ್ಲಿ 37 ಸಾವಿರ ಕ್ವಿಂಟಲ್‌ಗ‌ಳಲ್ಲಿ 26 ಸಾವಿರ ಕ್ವಿಂಟಲ್‌ ಬೀಜ ದಾಸ್ತಾನು ಮಾಡಲಾಗಿದೆ. ಅಲ್ಲದೇ 35 ಮೆಟ್ರಿಕ್‌ ಟನ್‌ ರಸಗೊಬ್ಬರ ಪೈಕಿ 25 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಯಾವದೇ ಬಿತ್ತನೆ ಬೀಜಗಳ ಕೊರತೆಯಿಲ್ಲವೆಂದು ಸ್ಪಷ್ಟಪಡಿಸಿದರು.

ಕೀಟ ರೋಗ ತಜ್ಞ ಡಾ| ರಾಜು ತೆಗ್ಗಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಂಚೋಳಿ ತಾಲೂಕು ಅತ್ಯಂತ
ತಂಪು ವಾತಾವಾರಣದಿಂದ ಕೂಡಿದ ಪ್ರದೇಶವಾಗಿದೆ. ಆದ್ದರಿಂದ ಬೆಳೆಗಳಿಗೆ ನೆಟೆ ರೋಗ ಮತ್ತು ಗೊಡ್ಡು ರೋಗ ಬರುವುದಿಲ್ಲ. ಕಲಬುರಗಿ ಕೃಷಿ ವಿಜ್ಞಾನಿಗಳು ಹೊಸದಾಗಿ ಜಿ.ಆರ್‌.ಜಿ ಬೀಜ ಸಂಶೋಧನೆ ಮಾಡಿದ್ದಾರೆ. ಇದನ್ನು ರೈತರು ಬಿತ್ತನೆ ಮಾಡಿ ಹೆಚ್ಚಿನ ಇಳುವರಿ ಪಡೆದುಕೊಳ್ಳಬೇಕು ಎಂದರು. 

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಸಕ ಹರ್ಷವರ್ಧನ ಪಾಟೀಲ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಪದ್ಮಾವತಿ, ರೈತ ನಾರಾಯಣ ಕೊಟ್ರಕಿ, ಮಸ್ತಾನ ಐನೋಳಿ, ವಾಹಿದ ಇನಾಂದಾರ, ಗಂಗಾಧರ, ವಿತರಕ ಅಬ್ದುಲ್‌ ಖಾದೀರ ಸಾಬ ಇದ್ದರು. ಸಹಾಯಕ ಕೃಷಿ ನಿರ್ದೇಶಕ ಎಸ್‌.ಎಚ್‌. ಗಡಿಗಿಮನಿ ಸ್ವಾಗತಿಸಿದರು, ಕೃಷಿ ಅಧಿಕಾರಿ ಸೈಯದ ಶಿರಾಜುದ್ದೀನ್‌ ನಿರೂಪಿಸಿದರು, ತಾಂತ್ರಿಕ ಅಧಿಕಾರಿ ಧರ್ಮಣ್ಣ ವಂದಿಸಿದರು

Trending videos

Back to Top