ಸಂಕಲ್ಪ ವೃಕ್ಷ


Team Udayavani, Jan 1, 2019, 12:30 AM IST

13.jpg

ದೇವರು ವರವನು ಕೊಟ್ರೆ, ಅಂದ್ಕೊಡಿದ್ದು ತಕ್ಷಣ ನೆರವೇರಿಬಿಡುತ್ತಿತ್ತು. ದೇವರಿಗೆ ಹೋಲಿಸಿದರೆ ನಾವೇ ಸ್ವಲ್ಪ ಕಂಜೂಸ್‌. ಅಂದುಕೊಂಡ ಸಂಕಲ್ಪವನ್ನು ಮುಂದೂಡುತ್ತೇವೆ, ನೆಪ ಹೇಳುತ್ತೇವೆ. ಪೂರೈಸಲು ಹರಸಾಹಸ ಪಡುತ್ತೇವೆ.  ಹೀಗಾಗಿಯೇ ಹೊಸ ವರ್ಷದಂದು ನಾವು ಕೈಗೊಳ್ಳುವ ರೆಸಲ್ಯೂಷನ್ನುಗಳೆಲ್ಲವೂ ಯಶಸ್ವಿಯಾಗುವುದಿಲ್ಲ. ಈ ಕಾರಣಕ್ಕೆ ಬದುಕೆಂಬ ವೃಕ್ಷದಲ್ಲಿ ಹಣ್ಣುಗಳೆಷ್ಟೋ, ಅಷ್ಟೇ ಪ್ರಮಾಣದಲ್ಲಿ ಕಾಯಿಗಳೂ ಸಿಗುತ್ತವೆ. ಅವುಗಳನ್ನು ಓದುಗರು ಇಲ್ಲಿ ಹಂಚಿಕೊಂಡಿದ್ದಾರೆ. 

ಹೂ ಬೀಜಗಳು ಬದುಕಿನ ಗಣಿತ ಕಲಿಸಿದವು
ಒಂದಿಷ್ಟು ವರ್ಷಗಳಿಂದ ತುಂಬ ಅಶಿಸ್ತು ಮತ್ತು ಲಂಗುಲಗಾಮಿಲ್ಲದೇ ದಿನಚರಿ ರೂಢಿಸಿಕೊಂಡಿದ್ದರ ಪರಿಣಾಮ ದೇಹ, ಮನಸ್ಸುಗಳ ಮೇಲೆ ಆಗತೊಡಗಿತು. ಹೊಸ ಹೊಸ ಆರೋಗ್ಯ ಸಮಸ್ಯೆ, ಖಾಯಿಲೆಗಳ ಮೆಡಿಕಲ್‌ ಟರ್ಮಿನಾಲಜಿಯ ಪರಿಚಯ ಆಗತೊಡಗಿತು. ಈ ಹಂತದಲ್ಲಿ ಒಂದು ನಿರ್ಣಯ ಕೈಗೊಂಡೆ. ಆದಷ್ಟೂ ಪ್ರಕೃತಿಗೆ ಹತ್ತಿರವಾಗುವುದು ಮತ್ತು ಯಾವುದೇ ಕಾರಣಕ್ಕೂ ನನ್ನ ಡಿ.ಎನ್‌.ಎ, ಇಷ್ಟಕ್ಕೆ ವಿರುದ್ಧವಾದ ಯಾವುದೇ ಕೆಲಸಗಳನ್ನು ಮಾಡಬಾರದು ಅಂತ. ಇದರ ಮುಂದುವರಿಕೆಯಾಗಿ, ನನ್ನ ಮನೆಯ ಬಾಲ್ಕನಿಯಲ್ಲಿ ವಿವಿಧ ಹೂಗಳ ಬೀಜ ನೆಟ್ಟು ಗಿಡ ಬೆಳೆಸಿದೆ. ನೀರುಣಿಸುವುದು ಮರೆತುಹೋಗಿ ಅವು ಬಾಡಿ ನಿಂತಾಗ ನಾನೂ ಬಾಡಿದೆ. ಮರುದಿನ ಅವು ಚಿಗಿತುಕೊಂಡಾಗ ನಾನೂ ಚಿಗಿತುಕೊಂಡೆ. ಬೆಳೆದು ನಿಂತಿರುವ ಗಿಡಗಳನ್ನು ನರ್ಸರಿಯಿಂದ ತರುವುದಕ್ಕಿಂತ, ಸ್ವತಃ ಬೀಜ ನೆಟ್ಟು ಪೋಷಿಸಿ ಗಿಡ ಬೆಳೆಸುವ ಪ್ರಕ್ರಿಯೆ ನನಗೆ ಬೇರೇನೋ ಕಲಿಸಿತು. ನನ್ನೊಳಗೆ ಬದುಕಿನ ಹೊಸ ವ್ಯಾಖ್ಯಾನವನ್ನು ಬರೆಯಿತು. ಅಂದಿನಿಂದ ಆದಷ್ಟೂ ನೈಸರ್ಗಿಕ ಪದಾರ್ಥಗಳನ್ನು ಬಳಸತೊಡಗಿದ್ದೇನೆ. ತೋರಿಕೆಗೆ, ಸ್ಟೇಟಸ್ಸಿಗಾಗಿ ಬದುಕುವದಕ್ಕಿಂತ ನನ್ನ ವೈಯಕ್ತಿಕ ಕೋರಿಕೆಯ ಅನುಸಾರವಾಗಿ ಬದುಕುವುದನ್ನು ತಕ್ಕಮಟ್ಟಿಗೆ ರೂಢಿಸಿಕೊಂಡಿದ್ದೇನೆ. ಆ ಮಟ್ಟಿಗೆ ಈ ರೆಸಲ್ಯೂಷನ್‌ ಸಫ‌ಲ ಎಂದೇ ಹೇಳಬೇಕು.
ರಾಘವೇಂದ್ರ ಜೋಶಿ             

ಪಿಜ್ಜಾ ವನ್ನು ಮರೆಸಿದ ಎಣ್ಣೆ ಪಾಕೀಟು!
ನಾನು ಲೈಫ‌ಲ್ಲಿ ಒಮ್ಮೆಯೂ ಪಿಜ್ಜಾ ತಿಂದವನಲ್ಲ. ನಾನೇನೂ ಪಿಜ್ಜಾ ವಿರೋಧಿಯಲ್ಲ. ಆದೇಕೋ ತಿನ್ನಲೇಬೇಕೆಂಬ ಹಪಾಹಪಿಯೂ ಬಂದಿಲ್ಲ. ಅದಕ್ಕೇ ಕಳೆದ ವರ್ಷ ಸ್ನೇಹಿತರೆಲ್ಲ ಸೇರಿ ನನಗೆ ಪಿಜ್ಜಾ ತಿನ್ನಿಸುವುದೆಂದು ರೆಸಲ್ಯೂಷನ್‌ ಸಿದ್ಧವಾಯಿತು. ಜನವರಿಯಲ್ಲಿ ಗೆಳೆಯನೊಬ್ಬನ ಗೃಹಪ್ರವೇಶದ ದಿನದಂದು ಮುಹೂರ್ತ ಇಟ್ಟಾಗಿತ್ತು. ಗೃಹಪ್ರವೇಶದ ಸಮಾರಂಭಕ್ಕೆಂದು ಬೈಕಿನಲ್ಲಿ ನಿಧಾನವಾಗಿ ಹೋಗುತ್ತಿ¨ªೆ. ಎದುರಿಗೆ ಆಸಾಮಿಯೊಬ್ಬ ತುಂಬಿ ತುಳುಕುತ್ತಿದ್ದ ದಿನಸಿ ಸಾಮಾನುಗಳ ದೊಡ್ಡದೊಂದು ಚೀಲ ಹೇರಿಕೊಂಡು ಸ್ಕೂಟರ್‌ ಓಡಿಸುತ್ತಿದ್ದ. ರಸ್ತೆಯಲ್ಲಿ ಹಂಪ್‌ ಬಂದಾಗ ಸ್ಕೂಟರ್‌ನಲ್ಲಿದ್ದ ದಿನಸಿ ಬ್ಯಾಗಿನಿಂದ ಎಣ್ಣೆಯ ಪಾಕೀಟು ಚಂಗನೆ ಮೇಲಕ್ಕೆ ಹಾರಿತು. “ಎಲಾ! ಪಾಕೀಟು ಬೀಳಿಸಿಕೊಂಡನಲ್ಲ’ ಎನ್ನುತ್ತ, ಆತನಿಗೆ ಈ ವಿಷಯ ತಿಳಿಸುವ ಭರದಲ್ಲಿ ನಾನು ಸರ್ರಂತ ನನ್ನ ಬೈಕಿನ ವೇಗ ಹೆಚ್ಚಿಸಿದೆ. ಅರ್ಧ ಸೆಕೆಂಡ್‌ ಅಷ್ಟೇ! ಗಾಳಿಯಲ್ಲಿ ತೇಲಾಡಿದ ಆ ಪಾಕೀಟು ರಸ್ತೆಗೆ ಬಿದ್ದು ಒಡೆದುಕೊಂಡಿತ್ತು. ಎಣ್ಣೆ ಜಿಡ್ಡಿನ ಮೇಲೆ ನನ್ನ ಬೈಕು ಸಾಗುತ್ತಿದ್ದಂತೆ ಸ್ಕಿಡ್‌ ಆಗಿ ನಿಯಂತ್ರಣ ತಪ್ಪಿತು. ಎದುರಿಗೆ ಬರುತ್ತಿದ್ದ ಟೆಂಪೋ ಗಾಲಿಯ ಕೆಳಗೆ ನನ್ನ ತಲೆ ಸಾಗುತ್ತಿದ್ದುದು ನನಗೇ ಗೊತ್ತಾಗುತ್ತಿತ್ತು. ಯಾವತ್ತೂ ಮುಖಪೂರ್ತಿ ಮುಚ್ಚುವಂಥ ಹೆಲ್ಮೆಟ್‌ ಹಾಕದಿದ್ದ ನಾನು, ಪುಣ್ಯಕ್ಕೆ ಹಿಂದಿನ ದಿನವೇ ಫ‌ುಲ್‌ ಹೆಲ್ಮೆಟ್‌ ಖರೀದಿಸಿ ಹಾಕಿಕೊಂಡಿದ್ದೆ. ಕೆಳಕ್ಕೆ ಬಿದ್ದಿದ್ದ ನನ್ನನ್ನು ಒಂದಷ್ಟು ಜನ ಮೇಲೆಕ್ಕೆತ್ತಿದರು. ತರಚು ಗಾಯಗಳೊಂದಿಗೆ, ಹರಿದ ಪ್ಯಾಂಟಿನ ಸಮೇತ ಗೃಹಪ್ರವೇಶದ ಸಮಾರಂಭಕ್ಕೆ ಹೋದಾಗ ಎಲ್ಲ ಗಾಬರಿಯಾಗಿದ್ದರು. ನಡೆದ ಘಟನೆ ವಿವರಿಸುತ್ತಿದ್ದಂತೆಯೇ ಗೆಳೆಯರಿಗೆಲ್ಲ ಪಿಜ್ಜಾ ಠರಾವೇ ಮರೆತುಹೋಗಿತ್ತು!

ಹಣ್ಣು-
“ಇಲ್ಲ’ ಎಂದು ನೈಸಾಗಿ ಹೇಳುವ ಕಲೆ
ಯಾರಿಗಾದರೂ “ಇಲ್ಲ’ ಎಂದು ಹೇಳುವುದು ನನಗೆ ಕಡು ಕಷ್ಟದ ಕೆಲಸ. ಪ್ಲೀಸ್‌ ಎಂದು ಸಹಾಯ ಕೇಳುವವರಿಗೆ, “ಒಂದೈದು ಸಾವಿರ ಕೊಡು, ಮತ್ತೆ ಕೊಡ್ತೀನಿ’ ಎನ್ನುವ ಸ್ನೇಹಿತರಿಗೆ ಇಲ್ಲ ಎನ್ನಲಾಗದೆ, ಕೊನೆಗೆ ಪಡಬಾರದ ಕಷ್ಟ ಪಡುವ ಜಾಯಮಾನ ನನ್ನದು. ಒಮ್ಮೆ ಹಣ ಕೊಟ್ಟ ಸ್ನೇಹಿತನಲ್ಲಿ ಅದನ್ನು ವಾಪಸ್‌ ಕೇಳುವಾಗ ಹಣದ ಜತೆ, ಸ್ನೇಹವನ್ನೂ ಕಳಕೊಂಡಿದ್ದೆ. ಇವನ್ನೆಲ್ಲಾ ನೋಡಿಯೇ ಹೊಸವರ್ಷಕ್ಕೆ “ಇಲ್ಲ’ ಎಂದು ಹೇಳಲು ಕಲಿಯಬೇಕೆಂದು ನಿರ್ಧರಿಸಿದೆ.

ಯಾರಿಗೂ ಬೇಸರವಾಗದಂತೆ ಇಲ್ಲ ಎನ್ನುವುದು ಮ್ಯಾನೇಜ್‌ಮೆಂಟ್‌ನ ಮುಖ್ಯ ಪಾಠ. “ಐ ಆ್ಯಂ ಸಾರೀ… ಐ ವಿಷ್‌ ಐ ಹ್ಯಾಡ್‌ ಡನ್‌ ದಾಟ್‌, ಬಟ್‌..!’ ಎಂದು ರಾಗ ತೆಗೆದು, ಕಡ್ಡಿ ಮುರಿದಂತೆ “ಇಲ್ಲ’ ಎಂದು ಹೇಳುವ ಕೌಶಲ ನನ್ನ ಪಾಶ್ಚಾತ್ಯ ಸಹೋದ್ಯೋಗಿಗಳಿಗೆ ಕರತಲಾಮಲಕ. ಆದ್ದರಿಂದಲೇ ಅವರ ಬದುಕು ಯಾವತ್ತೂ ಬಿಂದಾಸ್‌. “ಇಲ್ಲ’ ಎನ್ನುವ ಕಹಿಯನ್ನೂ ಅಕ್ಕರೆಯ ಸಕ್ಕರೆಯಲ್ಲಿ ಬೆರೆಸಿ, ಎದುರಿನವರ ಬಾಯಲ್ಲಿರಿಸುವುದಕ್ಕೆ ನಾನು ಈಗ ತಕ್ಕಮಟ್ಟಿಗೆ ಕಲಿತಿದ್ದೇನೆ. ಇದರಿಂದ ಅನಗತ್ಯ ಹೊರೆ, ಕೆಲಸ, ಕಷ್ಟ- ಕಾರ್ಪಣ್ಯಗಳನ್ನು ಒಂದೇ ಏಟಿಗೆ ಮುಗಿಸಿಬಿಡಬಹುದು. ನೀವೂ ಟ್ರೈ ಮಾಡಿ ನೋಡಿ.

ಕಾಯಿ-
ಅಡ್ಡಾದಿಡ್ಡಿ ಆಹಾರಪದ್ಧತಿಗೆ ಸಿಗದ ಮೋಕ್ಷ
ಹಿತ- ಮಿತ ಆಹಾರ, ಅಪರಿಮಿತ ವ್ಯಾಯಾಮ- ಇದು 2018ರಲ್ಲಿ ನಾನು ಮಾಡಿದ್ದ ರೆಸಲ್ಯೂಷನ್‌. ಅಡ್ಡಾದಿಡ್ಡಿಯಾದ ಆಹಾರಪದ್ಧತಿಯಿಂದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದ ಬರಮಾಡಿಕೊಂಡಿದ್ದ ಸ್ನೇಹಿತರನ್ನು ನೋಡಿ, ನಾನೂ ಅವರಂತಾಗಬಾರದೆಂದು, ಈ ವರ್ಷದಿಂದ ಊಟ ಬಿಟ್ಟು, ರಾತ್ರಿ ನ್ಯಾಚುರೋಪತಿ ಶೈಲಿಯಲ್ಲಿ ಮೊಳಕೆ ಕಾಳು, ಹಣ್ಣು ಮಾತ್ರ ತಿನ್ನಬೇಕು. ಜೊತೆಗೆ, ಯೋಗ ಕಲಿಯಬೇಕೆಂದು ನಿರ್ಣಯ ಮಾಡಿದ್ದೆ. ಆದ ಕಥೆಯೇ ಬೇರೆ. ವರ್ಷದ ಆರಂಭದಲ್ಲಿ ಒಮಾನ್‌ ದೇಶದಲ್ಲಿದ್ದ ನಾನು, ಮಧ್ಯಭಾಗದಲ್ಲಿ ಬಹರೈನ್‌ ದೇಶದಲ್ಲಿದ್ದೆ. ಈಗ ವರ್ಷಾಂತ್ಯದಲ್ಲಿ ದುಬೈಗೆ ಬಂದು ನೆಲೆಸಿದ್ದೇನೆ. ಒಂದು ವರ್ಷದಲ್ಲಿ ಮೂರು ದೇಶಗಳಲ್ಲಿ ಆವಾಸಿಯಾಗಿದ್ದು ಇದೇ ಮೊದಲು.

ಒಮಾನ್‌ ಬಿಟ್ಟು ಬಹರೈನ್‌ಗೆ ಹೋದಾಗ, ಅಲ್ಲಿನ ಸಾಲುಸಾಲು ಹೋಟೆಲುಗಳನ್ನು ಕಂಡು, ಇಂದ್ರಿಯ ನಿಗ್ರಹ ಮಾಡಲಾಗಲಿಲ್ಲ. ಪರಿಣಾಮ, ನನ್ನ ರೆಸಲ್ಯೂಷನ್‌ ಮರೆತು ಹೋಗಿ ಇಷ್ಟೂ ವರ್ಷಗಳಲ್ಲಿ ತಿನ್ನದ ಥರಹೇವಾರಿ ತಿಂಡಿ ತಿನಿಸುಗಳನ್ನು ತಿಂದು ತೇಗಿದೆ. ಜಪಾನೀಸ್‌, ಚೈನಿಸ್‌, ಫಿಲಿಪಿನೋ, ಸೌತ್‌ ಇಂಡಿಯನ್‌, ನಾರ್ತ್‌ ಇಂಡಿಯನ್‌, ಅರೇಬಿಕ್‌, ಯುರೋಪಿಯನ್‌… ಹೀಗೆ ಬೇರೆ ಬೇರೆ ದೇಶದ ತಿಂಡಿ ಒಂದೇ ಬೀದಿಯಲ್ಲಿ ಸಿಕ್ಕರೆ, ಹೊಸವರ್ಷದ ರೆಸಲ್ಯೂಷನ್‌ ಹೇಗಾದರೂ ನೆನಪಿಗೆ ಬಂದೀತು? 2019ಕ್ಕೆ ಹೊಸ ರೆಸಲ್ಯೂಷನ್‌ ಮಾಡದಿರುವುದೇ ನನ್ನ ರೆಸಲ್ಯೂಷನ್‌! 
– ಶ್ರೀಶ ಪುಣಚ, ದುಬೈ

ಮೊದಲನೇ ರೆಸಲ್ಯೂಷನ್ನೇ ಕೊನೆಯ ರೆಸಲ್ಯೂಷನ್‌!
ಶಾಲೆಯಲ್ಲಿದ್ದಾಗ ಶಿಕ್ಷಕರು ಪ್ರತಿ ಹೊಸ ವರ್ಷದ ಆರಂಭದಲ್ಲಿ, “ಹೇಳಿ ಮಕ್ಕಳೇ ನಿಮ್ಮ ಹೊಸವರ್ಷದ ಯೋಜನೆಗಳು ಏನು?’ ಎಂದು ಕೇಳುತ್ತಿದ್ದ ಪ್ರಶ್ನೆಗೆ ನಾನು ಪ್ರತಿ ವರ್ಷವೂ ಕಣ್ಣು ಬಾಯಿ ಬಿಟ್ಟುಕೊಂಡು “ಬೆಬ್ಬೆಬ್ಬೆ’ ಎನ್ನುತ್ತಿದ್ದೆ. ಹೋಗಲಿ, ಈ “ಬೆಬ್ಬೆಬ್ಬೆ’ ಎನ್ನುವುದಾದರೂ ಪ್ರತಿ ಹೊಸ ವರ್ಷಕ್ಕೂ ಹೊಸ ರೀತಿಯಲ್ಲಿದ್ದಿದ್ದರೆ! 

ಮೊದಲಿಂದಲೂ ಈ ರೆಸೊಲ್ಯೂಷನ್‌ಗಳ ಬಗ್ಗೆ ನನಗೆ ಅಂಥ ಅಕ್ಕರೆ ಇರಲಿಲ್ಲವಾದರೂ ನಾನು ಕೂಡ ಈ ಸಮೂಹ ಸನ್ನಿಗೆ ಒಳಗಾಗಿ ಶಾಲೆಯಲ್ಲಿದ್ದಾಗ ಹೊಸ ವರ್ಷಕ್ಕೆಂದು ಒಮ್ಮೆ ರೆಸಲ್ಯೂಷನ್‌ ಮಾಡಿಕೊಂಡಿ¨ªೆ. ಅಂದು ತರಗತಿಯಲ್ಲಿ ಟೀಚರ್‌ ಕೇಳುತ್ತಿದ್ದಂತೆ “ಹಿರಿಯರಿಗೆ, ಅಂಧರಿಗೆ ರಸ್ತೆ ದಾಟಲು ಸಹಾಯ ಮಾಡುತ್ತೇನೆ. ಬೆಳಗ್ಗೆ ಬೇಗ ಎದ್ದು ಗಿಡಗಳಿಗೆ ನೀರು ಹಾಕುತ್ತೇನೆ. ಪ್ರಾಣಿ ಪಕ್ಷಿಗಳನ್ನು ಪ್ರೀತಿಯಿಂದ ಕಾಣುತ್ತೇನೆ. ಚೆನ್ನಾಗಿ ಓದಿ ವಿದ್ಯಾವಂತೆಯಾಗುತ್ತೇನೆ…..’ ಎಂದು ಒಂದೇ ಸಮನೆ ಹೇಳಿದೆ. 

ಮಾಸ್‌ ಚಿತ್ರಗಳಲ್ಲಿ “ಬಿಲ್ಡ್‌ ಅಪ್‌ ಡೈಲಾಗು’ ಕೇಳಿ ಅಭಿಮಾನಿಗಳು ಶಿಳ್ಳೆ ಹಾಕುವಂತೆ ನನ್ನ ರೆಸಲ್ಯೂಷನ್‌ ಕೇಳಿ ಸಹಪಾಠಿಗಳೆಲ್ಲರೂ ಜೋರಾಗಿ ಚಪ್ಪಾಳೆ ಹೊಡೆದಿದ್ದೇ ಹೊಡೆದಿದ್ದು. ಕ್ಲಾಸ್‌ ಮುಗಿದ ನಂತರ ಪಕ್ಕದ ಬೀದಿಯಲ್ಲೇ ಇದ್ದ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ “ನಾನು ಎಷ್ಟೊಂದು ಸುಳ್ಳು ಹೇಳಿಬಿಟ್ಟೆನಲ್ಲ’ಅನ್ನಿಸಿಬಿಟ್ಟಿತು. ಆ ಸುಳ್ಳಿಗೆ ಇಷ್ಟೊಂದು ಮನ್ನಣೆ ಸಿಕ್ಕಿಬಿಟ್ಟಿತಲ್ಲ ಎಂಬ “ಸತ್ಯ’ ತೀವ್ರವಾಗಿ ಕಾಡತೊಡಗಿತು. ಇದೇನು ಅಂತಹ ವಿಶೇಷವಾದ ಯೋಜನೆಯಲ್ಲ. ಹಾಗೆ ನೋಡಿದರೆ ಇದು ಯೋಜನೆಯಾಗದೆ ದಿನ ನಿತ್ಯದ ಯೋಚನೆ, ಆಲೋಚನೆಯಾಗಬೇಕಿತ್ತು. ಇದೇಕೆ ನಾನು ಪಾಪ್ಯುಲರ್‌ ಕಲ್ಚರ್‌ನ ಸೋಗಿಗೆ ಬಲಿಯಾಗಿಬಿಟ್ಟೆ ಎಂದು ಯೋಚಿಸಿ ಅವತ್ತೇ ನಿರ್ಧರಿಸಿದೆ. ಇನ್ನು ಮುಂದೆ ಹೊಸ ವರ್ಷದವರೆಗೆ ಕಾಯುವ ಅವಶ್ಯಕತೆಯೇ ಇಲ್ಲ. ಪ್ರತಿ ದಿನವೂ ಹೊಸ ದಿನ. ಪ್ರೀತಿ ತೋರಿಸಲು, ಅಸಹಾಯಕರಿಗೆ ಬೆಂಬಲವಾಗಿ ನಿಲ್ಲಲು, ಎಲ್ಲರನ್ನೂ ಸಮನಾಗಿ ಕಾಣಲು ರೆಸೊಲ್ಯೂಷನ್‌ಗಳ ಹಂಗು ಬೇಕಿಲ್ಲ, ಅದು ನಮ್ಮ ದಿನನಿತ್ಯದ ನಡವಳಿಕೆಯ ಭಾಗವಾಗಬೇಕು ಎಂದು. ಹೀಗೆ ನನ್ನ ಮೊದಲ ಮತ್ತು ಕೊನೆಯ ರೆಸೊಲ್ಯೂಷನ್‌ ನನ್ನನ್ನು ಸೋಲಿಸಿ ಗೆಲ್ಲಿಸಿತು. ಸಾಕಷ್ಟು ಕಲಿಸಿತು.

ಉಂಗುರವನ್ನು ಮತ್ತೆ ದುಷ್ಯಂತ ತೊಡಿಸಲು ಬಂದಾಗ ಶಕುಂತಲೆ ನಿರಾಕರಿಸಿದಂತೆ, “ಈ ರೆಸೊಲ್ಯೂಶನ್‌ಗಳಲ್ಲಿ ನನಗೆ ನೆಚ್ಚಿಗೆಯಿಲ್ಲ’ ಎಂದು ಹೇಳುತ್ತೇನಾದರೂ ಕೆಲವೊಮ್ಮೆ ನನ್ನ ವ್ಯಕ್ತಿತ್ವದ ಚೌಕಟ್ಟನ್ನು ಮೀರಿ ಹೊಸದೇನೋ ಮಾಡಿಬಿಡಬೇಕೆಂಬ ತುಡಿತ ಹೊಸ ವರ್ಷದ ಆಗಮನದೊಂದಿಗೆ ಇದ್ದೇ ಇರುತ್ತದೆ. ಹೊಸ ಪುಸ್ತಕಗಳನ್ನು ಓದಬೇಕು. ಹೊಸ ಹಾಡುಗಳನ್ನು, ಭಾಷೆಗಳನ್ನು, ಏನಾದರೂ ಹೊಸತನ್ನು  ಕಲಿಯಬೇಕು, ಹೊಸ ಜಾಗಗಳನ್ನು ನೋಡಬೇಕು, ಹೊಸ ಅನುಭವಗಳಿಗೆ ಮನಸ್ಸು ತೆರೆದುಕೊಳ್ಳಬೇಕು. ಇಂಥವುಗಳ ಜೊತೆಗೆ, ಹೇರ್‌ ಕಲರ್‌ ಮಾಡಿಸಬೇಕು, ಹಚ್ಚೆ ಹಾಕಿಸಿಕೊಳ್ಳಬೇಕು ಎಂಬ ಸಣ್ಣ ಪುಟ್ಟ ಆಸೆಗಳು… ಹೀಗೆ ನೂರಾರು ಹುಚ್ಚು ಯೋಜನೆಗಳು. ಆದರೂ ನೀವೀಗ ಬಂದು, ಹೊಸ ವರ್ಷದ ನಿಮ್ಮ ರೆಸಲ್ಯೂಷನ್‌ ಏನು ಎಂದು ಕೇಳಿದರೆ ನಾನು ಹೇಳುವುದು- No resolutions please
-ಸ್ಪರ್ಶಾ ಕೆ.ಆರ್‌, ಗಾಯಕಿ

ಹಣ್ಣು-
ಸ್ಕೂಟಿ ಕೆಟ್ಟಿದ್ದು ಒಳ್ಳೇದೇ ಆಯ್ತು
ಕೆಲ ವರ್ಷಗಳ ಹಿಂದೆ ಹೊಸ ವರ್ಷದ ದಿನ, ಇನ್ನುಮುಂದೆ ಕಾಲೇಜಿಗೆ ನಡೆದೇ ಹೋಗುವುದೆಂದು ಸಂಕಲ್ಪ ಮಾಡಿಕೊಂಡೆ. ಧನುರ್ಮಾಸದ ಚುಮುಚುಮು ಚಳಿಯಲ್ಲಿ ಆಚೆ ನಡೆದೇ ಹೊರಟವಳು, ದಾರಿಯಲ್ಲಿ ಎರಡು ಮೂರು ನಾಯಿಗಳು ಅಟಕಾಯಿಸಿಕೊಂಡಿದ್ದು ಕಂಡು ನನ್ನ ಸಂಕಲ್ಪಕ್ಕೆ ಎಳ್ಳು ನೀರು ಬಿಟ್ಟು ಸ್ಕೂಟಿ ಸಂಗ ಮಾಡಿದ್ದೆ. ಕೆಲ ದಿನಗಳಲ್ಲೇ ಗಾಡಿ ಕೈಕೊಟ್ಟಿತು. ಅದು ಜಪ್ಪಯ್ಯ ಎಂದರೂ ಸ್ಟಾರ್ಟ್‌ ಆಗಲಿಲ್ಲ. ನಾಯಿಗಳಿಂದ ತಪ್ಪಿಸಿಕೊಂಡು ಬೇರೆ ದಾರಿಯಲ್ಲಿ ಹೊರಡಲು ಶುರುಮಾಡಿದೆ. ಗಾಡಿ ರಿಪೇರಿಯವನು ಎಂಜಿನ್‌ ಜಾಮ್‌ ಆಗಿ ಅದು ಸದ್ಯಕ್ಕಂತೂ ರಿಪೇರಿ ಆಗುವುದಿಲ್ಲ ಎಂದು ಆತ್ಮವಿಶ್ವಾಸದಿಂದ ನುಡಿದ. ಇವೆಲ್ಲದರಿಂದಾಗಿ ಕಾಲೇಜಿಗೆ ನಡೆದು ಹೋಗುವುದು ಅನಿವಾರ್ಯವಾಗಿ ರೆಸಲ್ಯೂಷನ್‌ ಸಕ್ಸಸ್‌ ಆಯಿತು.

ಕಾಯಿ-
ಐಸ್‌ಕ್ರೀಂ ತಿಂದು ಸ್ನೇಹ ಉಳಿಸಿಕೊಂಡೆ
ಒಮ್ಮೆ ಕನ್ನಡಿಯಲ್ಲಿ ನನ್ನ ಇಮೇಜ್‌ ಯಾಕೋ ಔಟ್‌ ಹೊಡೀತಿದೆ ಅನಿಸಿದಾಗ, ಅದರ ಮೇಲೆ ಸ್ನೇಹಿತೆಯರೂ “ಯಾಕೋ ಒಂದ್‌ ಸುತ್ತು ಹೆಚ್ಚಾದ ಹಾಗೆ ಕಾಣ್ತಿಯ ಕಣೇ’ ಎಂದು ವರಾತ ತೆಗೆದಾಗ ಇದ್ದಕ್ಕಿದ್ದ ಹಾಗೇ ಸೌಂದರ್ಯ ಪ್ರಜ್ಞೆ ಕೆರಳಿ ಕೆಂಡವಾಗಿ ಹೊಸ ವರ್ಷದಿಂದ ಈ ಎಕ್ಸ್‌ಟ್ರಾ ಕೊಬ್ಬಿಗೆ ಕಾರಣೀಭೂತವಾದ ಐಸ್‌ಕ್ರೀಂಗೆ ಗುಡ್‌ಬೈ ಹೇಳಿಬಿಡಬೇಕು ಎಂದು ತೀರ್ಮಾನ ಮಾಡಿದೆ. ಬಹುತೇಕ ಹುಡುಗಿಯರ ಹೊಸ ವರ್ಷ ಐಸ್‌ಕ್ರೀಂ ಪಾರ್ಲರ್‌ನಿಂದ ಶುರುವಾಗುತ್ತೆ. ನನ್ನದು ಅಲ್ಲಿ ಕೊನೆಗೊಂಡಿತ್ತು. ಕಳೆದ ವರ್ಷ ಜನವರಿ 1ರ ಸಂಜೆ ವೇಳೆಗೆ ಒಂದು ಫೋನ್‌ ಬಂತು! ಒಂದು ಕಾಲದ ಬ್ರೇಕ್‌ಅಪ್‌ ಬರ್ಡ್‌ ರಾಜೇಶ್ವರಿ ಫೋನ್‌ ಮಾಡಿದ್ದು ಕಂಡು ಆಶ್ಚರ್ಯವಾಗಿತ್ತು. ಅವಳು ನನ್ನೊಂದಿಗೆ ಮಾತು ಬಿಟ್ಟು ಯಾವುದೋ ಕಾಲವಾಗಿತ್ತು. ಫೋನ್‌ ಎತ್ತಿದಾಗ ಗೆಳತಿ “ಲೇಯ್‌ ಶರಧಿ, ಈ ವರ್ಷ ಯಾರನ್ನೂ ಹೇಟ್‌ ಮಾಡಬಾರ್ಧು ಅಂದ್ಕೊಡಿದೀನಿ. ಪ್ಲೀಸ್‌ ಇಲ್ಲ ಅನ್ನಬೇಡ.. ಸಂಜೆ ಐಸ್‌ಕ್ರೀಂ ಪಾರ್ಲರ್‌ ಹತ್ರ ಬಾ’ ಎಂದು ಅಲವತ್ತುಕೊಂಡಾಗ ನಾನೇ ಐಸ್‌ಕ್ರೀಂ ಆಗಿ ಕರಗಿಹೋಗಿದ್ದೆ. ಹೋಗದಿದ್ದರೆ ಅವಳ ನಿಷ್ಠುರ ಕಟ್ಟಿಕೊಳ್ಳಬೇಕಲ್ಲ. ಸಂಜೆ ರಾಜಿ ಜೊತೆ ಐಸ್‌ಕ್ರೀಂ ನೆಕ್ಕಿ ರಾಜಿ ಮಾಡಿಕೊಳ್ಳುವಷ್ಟರಲ್ಲಿ ನನ್ನ ಹೊಸ ವರ್ಷದ ಸಂಕಲ್ಪ ತೋಪಾಗಿತ್ತು. ಆದರೆ ಹಳೇ ಗೆಳತಿ ವಾಪಸ್‌ ಸಿಕ್ಕಳಲ್ಲ ಅನ್ನೋ ಸಮಾಧಾನ ಆಗಿತ್ತು.

ಟಿ.ಪಿ. ಶರಧಿ, ತುರುವೇಕೆರೆ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.