CONNECT WITH US  

ಇರೋ ತುಸು ನೀರಲ್ಲೂ ಫ್ಲೋರೈಡ್‌

ಕುಡಿವ ನೀರಾಗಿದೆ ವಿಷಕಾರಿ - ಜಿಲ್ಲೆಗೆ ಸಿಗದ ಶುದ್ಧ ನೀರಿನ ಖಾತ್ರಿ

ಚಿಕ್ಕಬಳ್ಳಾಪುರ: ಯಾವುದೇ ಶಾಶ್ವತ ನದಿ, ನಾಲೆಗಳು ಇಲ್ಲದೇ ಸದಾ ಬರಗಾಲಕ್ಕೆ ತುತ್ತಾಗಿ ಹನಿ ಹನಿ ನೀರಿಗೂ ಹಾಹಾಕಾರ ಎದುರಿಸುವ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜನತೆ ಒಂದೆಡೆ ಜಲಬಾಧೆಯಿಂದ ತತ್ತರಿಸುತ್ತಿದ್ದಾರೆ. ಮತ್ತೂಂದಡೆ ಅತ್ಯಂತ ಆಳದ ಅಂತರ್ಜಲ ಬಳಕೆಯಿಂದ ಕುಡಿವ ನೀರಿನಲ್ಲಿ ಹೆಚ್ಚಿರುವ ಫ್ಲೋರೈಡ್‌ ಸೇವನೆಯಿಂದ ಕಾಯಿಲೆಗೆ ತುತ್ತಾಗಿರುವವರ ಸಂಖ್ಯೆಯಲ್ಲಿ ರಾಜ್ಯದಲ್ಲೇ ಜಿಲ್ಲೆ ಅಗ್ರ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 1,500 ಅಡಿಗಳಿಂದ 2000 ಅಡಿಗಳ ಗಡಿ ದಾಟಿದೆ. ಶಾಶ್ವತ ನೀರಾವರಿ ಇಲ್ಲದ ಜಿಲ್ಲೆಗೆ ಭೂಗರ್ಭ ದಲ್ಲಿನ ಅಂತರ್ಜಲ ಅನಿವಾರ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕುಡಿವ ಹಾಗೂ ಕೃಷಿಗೆ ವ್ಯಾಪಕವಾಗಿ ಕೊಳವೆ ಬಾವಿಗಳನ್ನು ಅಶ್ರಯಿಸಿ ರುವ ಪರಿಣಾಮ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದು ನೀರಿನಲ್ಲಿ ಫ್ಲೋರೈಡ್‌ ಅಂಶ ಅಧಿಕವಾಗಿ ಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ಬೆಳೆಯುವ ಹಂತದಲ್ಲಿರುವ ಚಿಕ್ಕ ಮಕ್ಕಳಲ್ಲಿ ಮೂಳೆ ಸವೆತ ಹಾಗೂ ಹಲ್ಲುಗಳಲ್ಲಿ ಅಪಾಯಕಾರಿ ಫ್ಲೋರೈಡ್‌ ಕಾಣಿಸಿಕೊಳ್ಳುತ್ತಿದೆ.

ಇದು ಗಂಭೀರ ಸ್ವರೂಪ ಪಡೆದರೆ ಕ್ಯಾನ್ಸರ್‌ ಕಾಯಿಲೆಗೂ ತುತ್ತಾಗ ಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿ ದ್ದಾರೆ. 15 ಮಂದಿಯಲ್ಲಿ ಕ್ಯಾನ್ಸರ್‌ ಪತ್ತೆಯಾಗಿದೆ. ಸಮೀಕ್ಷೆ ಪ್ರಕಾರ ಜಿಲ್ಲೆಯ 8,197 ಶಾಲಾ ಮಕ್ಕಳ ಪೈಕಿ 1,525 ಮಕ್ಕಳ ಹಲ್ಲುಗಳಿಗೆ ಅಪಾಯ ಕಾರಿ ಫ್ಲೋರೈಡ್‌ ಕಾಯಿಲೆ ಅಂಟಿಕೊಂಡಿರುಮದು ಬೆಳಕಿಗೆ ಬಂದಿದೆ. ಅಂದರೆ ಶೇ.50 ಮಕ್ಕಳಿಗೆ ಫ್ಲೋರೈಡ್‌ ಇರುವುದು ದೃಢಪಟ್ಟಿರುವುದು ಆರೋಗ್ಯ ಇಲಾಖೆ ಯನ್ನೇ ಬೆಚ್ಚಿಬೀಳಿಸಿದೆ.

22,544 ಮಂದಿ ಫ್ಲೋರೈಡ್‌ ಪರೀಕ್ಷೆಗೆ ಒಳಪಟ್ಟಿ ದ್ದು ಈ ಪೈಕಿ 8,195 ಮಂದಿಯನ್ನು ಫ್ಲೋರೈಡ್‌ ಸಂಶಯಾಸ್ಪದ ಪ್ರಕರಣಗಳಾಗಿ ಗುರುತಿಸಲಾ ಗಿದ್ದು, 1,516 ಮಂದಿ ಫ್ಲೋರೈಡ್‌ಗೆ ಸಿಲುಕಿದ್ದಾರೆ. 858 ಗ್ರಾಮಗಳಲ್ಲಿ ಸಮಸ್ಯೆ: ಜಿಲ್ಲೆಯಲ್ಲಿರುವ ಒಟ್ಟು 1,515 ಗ್ರಾಮಗಳ ಪೈಕಿ ಬರೋಬ್ಬರಿ 858 ಗ್ರಾಮಗಳು ಫ್ಲೋರೈಡ್‌ ಸಮಸ್ಯೆಯನ್ನು ಎದುರಿಸುತ್ತಿವೆ.

ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಗೌರಿ ಬಿದನೂರು ನಂತರ ಚಿಂತಾಮಣಿ ತಾಲೂಕು ಗಳಲ್ಲಿ ಈ ಪ್ರಮಾಣ ಹೆಚ್ಚಾಗಿದ್ದು ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಈ ಅಪಾಯದಿಂದ ಸ್ವಲ್ಪ ಸುಧಾರಿಸಿ ಕೊಂಡಿವೆ. ಫ್ಲೋರೈಡ್‌ ಕಾಣಿಸಿಕೊಂಡ ಚಿಕ್ಕ ಮಕ್ಕಳು ವಯಸ್ಸಾದವರಂತೆ ಕಂಡುಬರುತ್ತಿದ್ದಾರೆ. ಇದ್ದಕ್ಕಿದ್ದಂತೆ ಬೆನ್ನು ಬಾಗುತ್ತಿದೆ. ಜೊತೆಗೆ ಅಂಗವೈಕ್ಯಲತೆ ಹೊಂದಿ ಶಾಶ್ವತವಾಗಿ ಹಾಸಿಗೆ ಹಿಡಿಯುತ್ತಿದ್ದಾರೆ.

ಸಿಗದ ಶುದ್ಧ ನೀರಿನ ಖಾತ್ರಿ: ಜಿಲ್ಲೆಗೆ ದಶಕಗಳು ಉರುಳಿದರೂ ಶುದ್ಧ ಕುಡಿಯುವ ನೀರಿನ ಖಾತ್ರಿ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಸರ್ಕಾರ ಅನುಷ್ಠಾನ ಗೊಳಿಸಿರುವ ನೀರಿನ ಶುದ್ಧೀ ಕರಣ ಘಟಕಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ಬೆರಳಣಿಕೆಯಷ್ಟು ಶುದ್ದ ನೀರಿನ ಘಟಕ ಗಳು ಇದ್ದರೂ ನಿರ್ವಹಣೆ ಇಲ್ಲದೇ ಮೂಲೆ ಗುಂಪಾಗಿವೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಜನ ಸರ್ಕಾರದ ಶುದ್ಧೀಕರಣ ಘಟಕಗಳಿಗೆ ಎದುರು ನೋಡುತ್ತಿದ್ದಾರೆ. ಜನಪ್ರತಿನಿಧಿಗಳು ಯಾವಾಗ ಕಣ್ತೆರೆಯುತ್ತಾರೋ ಗೊತ್ತಿಲ್ಲ.

ಆತಂಕ ತಂದ ಕೊಳಚೆ ನೀರು..: ಸದ್ಯ ಅಂತರ್ಜಲ ಕುಸಿತದಿಂದ ಫ್ಲೋರೈಡ್‌ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಜಿಲ್ಲೆಯ ಕೆರೆ, ಕುಂಟೆಗಳಿಗೆ ತುಂಬಿಸಲು ಅನುಷ್ಠಾನಗೊಳಿಸುತ್ತಿರುವ ಬೆಂಗಳೂರಿನ ಸಂಸ್ಕರಿತ ಕೊಳಚೆ ನೀರಿನ ಯೋಜನೆ ಬಗ್ಗೆ ಜಿಲ್ಲೆಯ ಜನತೆಯಲ್ಲಿ ಆತಂಕ ಉಂಟಾಗಿದೆ. ಸರ್ಕಾರ ವೈಜ್ಞಾನಿಕವಾಗಿ ಮೂರು ಹಂತದಲ್ಲಿ ಸಂಸ್ಕರಣೆ ಮಾಡುವುದಾಗಿ ಹೇಳುತ್ತಿದೆ. ಆದರೆ ಜಿಲ್ಲೆಯ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಅದರಲ್ಲೂ ಭಾರತೀಯ ವಿಜ್ಞಾನ ಸಂಸ್ಥೆಯ ಕೆಲ ನುರಿತ ಜಲ ತಜ್ಞರು ಜಿಲ್ಲೆಗೆ ಕೊಳಚೆ ನೀರು ಹರಿಸುವುದಕ್ಕೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಅಂತರ್ಜಲ ಕುಸಿತದಿಂದ ಫ್ಲೋರೈಡ್‌ ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲೆಯ ಜನತೆಗೆ ಶುದ್ಧ ನೀರು ಕೊಡುವುದರ ಬದಲು ರಂಜಕ, ಸಾರಜನಕ ಇರುವ ಅತಿ ಹೆಚ್ಚು ಲೋಹಗಳಿಂದ ಕೂಡಿದ ಕಲುಷಿತ ನೀರು ಕೊಟ್ಟರೆ ಖಂಡಿತ ಈ ಭಾಗದ ಜಿಲ್ಲೆಗಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಜಿಲ್ಲೆಯ ಜೀವ ಸಂಕುಲಕ್ಕೆ ಗಂಡಾಂತರ ತಪ್ಪಿದ್ದಲ್ಲ.
-ಡಾ.ಟಿ.ವಿ.ರಾಮಚಂದ್ರ, ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ

* ಕಾಗತಿ ನಾಗರಾಜಪ್ಪ

Trending videos

Back to Top