CONNECT WITH US  

ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ನಿಧನ

ಕಾಸರಗೋಡು: ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ರಾಜ್ಯ ಕೋಶಾಧಿಕಾರಿ, ಮಾಜಿ ಸಚಿವ, ಸತತ ನಾಲ್ಕು ಬಾರಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡಿದ್ದ ಚೆರ್ಕಳಂ ಅಬ್ದುಲ್ಲ (76) ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಬೆಳಗ್ಗೆ 8.20ಕ್ಕೆ ಚೆರ್ಕಳಂ ಅಬ್ದುಲ್ಲ ನಿಧನದ ಸುದ್ದಿಯನ್ನು ಐಯುಎಂಎಲ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್‌ ರಹಿಮಾನ್‌ ತಿಳಿಸಿದರು. ವಯೋ ಸಹಜ ಕಾಯಿಲೆಗಳಿಂದ ಬಳಲಿದ್ದ ಚೆರ್ಕಳಂ ಅಬ್ದುಲ್ಲ ಕಳೆದ ಎರಡು ವಾರಗಳಿಂದ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಚೇತರಿಸಿದ್ದ ಅವರನ್ನು ಗುರುವಾರ ರಾತ್ರಿ ಚೆರ್ಕಳದ ನಿವಾಸಕ್ಕೆ ಕರೆತರಲಾಗಿತ್ತು.

ಐದು ದಶಕಗಳ ಸಕ್ರಿಯ ರಾಜಕಾರಣದಲ್ಲಿ ಹೊಸ ಛಾಪು ಮೂಡಿಸಿದ್ದ ಚೆರ್ಕಳಂ ಜಿಲ್ಲೆಯಲ್ಲಿ ಐಯುಎಂಎಲ್‌ ಪಕ್ಷದ ಪ್ರಾಬಲ್ಯಕ್ಕೆ ಕಾರಣರಾಗಿದ್ದರು. 1987ರಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಕೇರಳ ವಿಧಾಸಭೆ ಪ್ರವೇಶಿಸಿದ ಚೆರ್ಕಳಂ ಅಬ್ದುಲ್ಲ ಕನ್ನಡಿಗರ ದನಿಯಾಗಿ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅನಂತರ 19 ವರ್ಷ ಕಾಲ ಗಡಿ ಕ್ಷೇತ್ರದಲ್ಲಿ ಲೀಗ್‌ ಪಕ್ಷದಿಂದ ಸ್ಪರ್ಧಿಸಿ ಜಯವನ್ನು ಆಲಂಗಿಸಿದ್ದರು.

ಸಚಿವರಾಗಿದ್ದ ಅಬ್ದುಲ್ಲ
2001ರಲ್ಲಿ ಎ.ಕೆ. ಆ್ಯಂಟನಿ ಕೇರಳ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚೆರ್ಕಳಂ ಅಬ್ದುಲ್ಲ ಸ್ಥಳೀಯಾಡಳಿತ ಸಚಿವರಾಗಿ ಆಯ್ಕೆಗೊಂಡು ಪ್ರಗತಿಪರ ಬದಲಾವಣೆಗೆ ಕಾರಣರಾದರು. ಬಡತನ ನಿರ್ಮೂಲನೆ ಸಹಿತ ಮಹಿಳಾ ಸ್ವಾವಲಂಬನೆಗೆ ಮಾದರಿಯಾದ ಕುಟುಂಬಶ್ರೀ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತಂದ  ಮಂತ್ರಿಯಾದರು. ಸ್ಥಳೀಯಾಡಳಿತ ಸಂಸ್ಥೆಗಳ ಅಭಿವೃದ್ಧಿ ರೂಪುರೇಷೆ ಗೊತ್ತುಪಡಿಸುವ ಉದ್ದೇಶದಿಂದ ಯೋಜನೆ ನಿರ್ವಹಣೆ ಮತ್ತು ಅಭಿವೃದ್ಧಿ ಲೆಕ್ಕ ಪರಿಶೋಧನಾ ಕಾರ್ಯವನ್ನು ಜಾರಿಗೆ ತಂದರು.

ಚೆರ್ಕಳದಲ್ಲಿ  ಜನನ
ಚೆರ್ಕಳಂ ಎಂದೇ ಖ್ಯಾತರಾಗಿದ್ದ ಅಬ್ದುಲ್ಲ ಜನಿಸಿದ್ದು ಕಾಸರಗೋಡು ನಗರ ಸಮೀಪದ ಚೆರ್ಕಳದಲ್ಲಿ. ಬಾರಿಕ್ಕಾಡು ಮುಹಮ್ಮದ್‌ ಹಾಜಿ ಮತ್ತು ಆಸ್ಯಮ್ಮಾ ದಂಪತಿಯ ಪುತ್ರನಾಗಿ 1942ರ ಸೆ. 15ರಂದು ಜನಿಸಿದ ಚೆರ್ಕಳಂ ಅಬ್ದುಲ್ಲ ವಿದ್ಯಾರ್ಥಿ ದಿಸೆಯಿಂದಲೇ ರಾಜಕೀಯಕ್ಕೆ ಧುಮುಕಿ, ರಾಜಕೀಯದ ಕೆಳ ಸ್ತರದಿಂದ ಹಂತ ಹಂತವಾಗಿ ಪ್ರಬುದ್ಧ ನಾಯಕನಾಗಿ ಬೆಳೆದಿದ್ದರು. ಕಾಸರಗೋಡು ಜಿಲ್ಲಾ ಐಕ್ಯರಂಗ ಘಟಕದ ಅಧ್ಯಕ್ಷರಾದ ಚೆರ್ಕಳಂ ಅಬ್ದುಲ್ಲ ಪತ್ನಿ ಆಯೇಷಾ ಚೆರ್ಕಳಂ (ಚೆರ್ಕಳ ಗ್ರಾ.ಪಂ. ಮಾಜಿ ಅಧ್ಯಕ್ಷೆ), ಪುತ್ರಿಯರಾದ ಮೆಹರುನ್ನೀಸಾ, ಮುಮ್ತಾಜ್‌ ಸಮೀರಾ (ಕಾಸರಗೋಡು ಜಿ.ಪಂ. ಸದಸ್ಯೆ), ಪುತ್ರರಾದ ಸಿ.ಟಿ. ಮುಹಮ್ಮದ್‌ ನಾಸರ್‌ ಮತ್ತು ಸಿ.ಎ. ಅಹಮ್ಮದ್‌ ಕಬೀರ್‌ ಅವರನ್ನು ಅಗಲಿದ್ದಾರೆ. ಚೆರ್ಕಳಂ ಅಬ್ದುಲ್ಲ ಅಗಲಿಕೆಗೆ ಹಲವು ಮಂದಿ ಗಣ್ಯರು ಕಂಬನಿ ಮಿಡಿದಿದ್ದಾರೆ. 

ಇಂದು ಹೆಚ್ಚು ಓದಿದ್ದು

ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ 'ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು' ಗೋಷ್ಠಿಯಲ್ಲಿ ಡಾ| ಶಿವ ವಿಶ್ವನಾಥನ್‌ ಮಾತನಾಡಿದರು.

Jan 20, 2019 05:03pm

ಶಿರಸಿ: ಬಣ್ಣದ ಮಠದ ಶ್ರೀಗಳು ಆಶೀರ್ವಚನ ನೀಡಿದರು.

Jan 20, 2019 04:54pm

Trending videos

Back to Top