CONNECT WITH US  

ಜಿಲ್ಲೆಗೆ ದೊರೆಯದ ಇಂದಿರಾ ಕ್ಯಾಂಟೀನ್‌ ಭಾಗ್ಯ

ಕೋಲಾರ: ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹಿಂದಿನ ಸರಕಾರದ ಜನಪ್ರಿಯ ಕಾರ್ಯಕ್ರಮವಾದ ಇಂದಿರಾ ಕ್ಯಾಂಟೀನ್‌ ಭಾಗ್ಯಜಿಲ್ಲೆಯ ಜನರಿಗೆ ದೊರೆಯದಂತಾಗಿದೆ. ಬೆಂಗಳೂರು ನಗರದಲ್ಲಿ ಮೊಟ್ಟ ಮೊದಲು ಆರಂಭವಾಗಿ ಇಡೀ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವ ಮೂಲಕ ಚುನಾವಣಾ ಪ್ರಚಾರ ಅಸ್ತ್ರವಾಗಿದ್ದ ಇಂದಿರಾ ಕ್ಯಾಂಟೀನ್‌, ಬೆಂಗಳೂರಿಗೆ ಅತೀ ಸಮೀಪ ದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಇನ್ನೂ ಆರಂಭವಾಗಿಯೇ ಇಲ್ಲ.

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ ಜನಪ್ರಿಯವಾಗಿದ್ದರಿಂದ ಹಿಂದಿನ ರಾಜ್ಯ ಸರಕಾರ ಚುನಾವಣೆಗೆ ಮುನ್ನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್‌ ಆರಂಭಿಸುವುದಾಗಿ ಘೋಷಿಸಿತ್ತು. ಈ ಘೋಷಣೆಯಿಂದ ಕೋಲಾರ ಜಿಲ್ಲಾ ಕೇಂದ್ರದಲ್ಲೂ ಇಂದಿರಾ ಕ್ಯಾಂಟೀನ್‌ ಭಾಗ್ಯ ಸಿಗುತ್ತದೆ ಎಂದು ಜಿಲ್ಲೆಯ ಜನರು ಕಾದಿದ್ದರು. ಆದರೆ, ಇದುವರಿಗೂ ಜಿಲ್ಲಾ ಕೇಂದ್ರ ಸೇರಿದಂತೆ ಯಾವುದೇ ತಾಲೂಕು ಕೇಂದ್ರದಲ್ಲೂ ಇಂದಿರಾ ಕ್ಯಾಂಟೀನ್‌ ಆರಂಭವಾಗಿಲ್ಲ. ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಹಳೇ ಬಸ್‌ ನಿಲ್ದಾಣದಲ್ಲಿ ಜಾಗ: ಕೋಲಾರ ಜಿಲ್ಲಾ ಕೇಂದ್ರವನ್ನೊಳಗೊಂಡ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಶಾಸಕರಾಗಿದ್ದ ಆರ್‌.ವರ್ತೂರು ಪ್ರಕಾಶ್‌ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸರಕಾರ ದೊಂದಿಗೆ ಮುನಿಸಿಕೊಂಡಿದ್ದರಿಂದ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಆಸಕ್ತಿ ತೋರಲಿಲ್ಲ.  ಆದರೂ, ಜಿಲ್ಲಾ ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸುವುದು ಚುನಾವಣೆ ದೃಷ್ಟಿಯಿಂದ ಅನು ಕೂಲವೆಂದು ಭಾವಿಸಿದ್ದ ಕಾಂಗ್ರೆಸ್ಸಿಗರು ನಗರಸಭೆ ಮೂಲಕ ಹಳೇ ಬಸ್‌ ನಿಲ್ದಾಣದಲ್ಲಿ ಜಾಗ ಹುಡುಕಿದ್ದರು.

ಚುನಾವಣಾ ನೀತಿ ಸಂಹಿತೆ ನೆಪ: ಇಂದಿರಾ ಕ್ಯಾಂಟೀನ್‌ಗೆ ಗುರುತಿಸಿದ್ದ ಜಾಗ ಮೊದಲು ಶೌಚಾಲಯ ಹಾಗೂ ಕಸ ಹಾಕುವ ಜಾಗವಾಗಿತ್ತೆಂಬ ಟೀಕೆಗಳನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಆದರೂ, ಹಳೇ ಬಸ್‌ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭ ವಾದ ಮೇಲೆ ಈ ಜಾಗ ಸ್ವತ್ಛವಾಗಬಹುದು ಎನ್ನುವ ನಿರೀಕ್ಷೆ ಜನರಲ್ಲಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಇಂದಿರಾ ಕ್ಯಾಂಟೀನ್‌ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. 

ವಿಧಾನಸಭಾ ಚುನಾವಣೆ ನಂತರ ವಿಧಾನಪರಿಷತ್‌ ಚುನಾವಣೆ ಹೀಗೆ ನೀತಿ ಸಂಹಿತೆಗಳ ನೆಪದಲ್ಲಿ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಇದುವರಿಗೂ ಆರಂಭ ವಾಗಿಯೇ ಇಲ್ಲ. ಮಾಲೂರು: ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ ಅನ್ನು ಸ್ವಂತ ವೆಚ್ಚದಿಂದ ಆರಂಭಿಸಲು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೆ. ವೈ.ನಂಜೇಗೌಡ ಮುಂದಾಗಿದ್ದರು. ಅಲ್ಲಿನ ಕಾಂಗ್ರೆಸ್‌ ಭವನದ ಬಳಿ ಸ್ವಂತ ವೆಚ್ಚದಿಂದಲೇ ಇಂದಿರಾ ಕ್ಯಾಂಟೀನ್‌ ಆರಂಭಿಸಿದ್ದರು. ಆದರೆ, ಇದಕ್ಕೆ ಪೂರಕ ವಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್‌.ಎನ್‌. ಕೃಷ್ಣಯ್ಯಶೆಟ್ಟರು ತಮ್ಮ ಹಿಂದಿನ ಶೈಲಿಯಲ್ಲಿಯೇ ತಾಲೂಕಿನಾದ್ಯಂತ ಉಚಿತವಾಗಿ ಉಪಹಾರ ನೀಡುವ ಕಾರ್ಯಕ್ರಮವನ್ನು ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಆರಂಭಿಸಿದ್ದರು. ಇದರಿಂದ ಕೆ.ವೈ. ನಂಜೇ ಗೌಡರ ಇಂದಿರಾ ಕ್ಯಾಂಟೀನ್‌ಗೆ ಅಷ್ಟಾಗಿ ಜನರ ಸ್ಪಂದನೆ ವ್ಯಕ್ತವಾಗಲಿಲ್ಲ. ಇದೂ ಸಹ ಚುನಾವಣಾ ನೀತಿ ಸಂಹಿತೆಯಿಂದ ನಿಲ್ಲುವಂತಾಯಿತು. ಈಗ ಅದೇ ಕೆ.ವೈ.ನಂಜೇಗೌಡ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಇನ್ನೂ ಶಾಶ್ವತವಾಗಿ ಮಾಲೂರು ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ ಪುನರಾರಂಭಿಸಲು ಮನಸು ಮಾಡುತ್ತಿಲ್ಲ ಎನ್ನಲಾಗುತ್ತಿದೆ.

ಮುಳಬಾಗಿಲು: ಮುಳಬಾಗಿಲು ಪಟ್ಟಣದಲ್ಲಿ ಪಕ್ಷೇತರ ಶಾಸಕರಾಗಿದ್ದ ಕೊತ್ತೂರು ಮಂಜುನಾಥ್‌ ಕಾಂಗ್ರೆಸ್‌
ಪಕ್ಷ ಸೇರಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಉತ್ಸುಕತೆ ತೋರಿದ್ದರು. ಸ್ಥಳೀಯ ನಗರಸಭೆಯಿಂದ ಆಂಜನೇಯಸ್ವಾಮಿ ದೇವಾಲಯದ ಪಕ್ಕದ ನೆಹರೂ ಉದ್ಯಾನವನದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಜಾಗ ಗುರುತಿ ಸಲಾಗಿತ್ತು. 

ಅಡಿಪಾಯ ಹಾಕುವ ಚಿಂತನೆಯೂ ನಡೆದಿತ್ತು. ಆದರೆ, ಚುನಾವಣಾ ಸಂದರ್ಭದಲ್ಲಿ ಕೊತ್ತೂರು ಮಂಜುನಾಥ್‌ರ ಜಾತಿ ಪ್ರಮಾಣ ಪತ್ರದ ಗಲಾಟೆ, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಲಿಲ್ಲ. ಕೊತ್ತೂರು ಮಂಜುನಾಥ್‌ ಹಾಗೂ ಕಾಂಗ್ರೆಸ್‌ ಬೆಂಬಲದಿಂದ ಎಚ್‌.ನಾಗೇಶ್‌ ಶಾಸಕರಾಗಿದ್ದಾರೆ. 

ಆದರೂ, ಮುಳಬಾಗಿಲು ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ ಕಡೆಗೆ ಗಮನ ಹರಿಸಲಿಲ್ಲ. ಮಂತ್ರಿ ಸ್ಥಾನ ಸಿಗಲಿಲ್ಲವೆಂಬ ಅಸಮಾಧಾನ ಹಾಗೂ ಕೊತ್ತೂರು ಮಂಜುನಾಥ್‌ ಬೆಂಬಲಿಗರ ಅಸಹಕಾರಕ್ಕೆ ಗುರಿಯಾ ಗಿರುವ ಎಚ್‌.ನಾಗೇಶ್‌ರಿಗೆ ಇಂದಿರಾ ಕ್ಯಾಂಟೀನ್‌ ಆರಂಭಿಸುವುದು ಸದ್ಯದ ಆದ್ಯತೆ ಯಾಗಿಲ್ಲ. 

ಶ್ರೀನಿವಾಸಪುರ: ರಾಜ್ಯದಲ್ಲಿಯೇ ಅತಿ ಹೆಚ್ಚು ಮನೆಗಳನ್ನು ಶ್ರೀನಿವಾಸಪುರ ಕ್ಷೇತ್ರದಲ್ಲಿ ಹಂಚಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ಕುಮಾರ್‌ ಕ್ಷೇತ್ರದಲ್ಲೂ ಇಂದಿರಾ ಕ್ಯಾಂಟೀನ್‌ ಆರಂಭವಾಗಿಲ್ಲ. ಪಟ್ಟಣದಲ್ಲಿ ಪಿಡಬ್ಲೂéಡಿ ಕಚೇರಿ ಹಾಗೂ ಆಸ್ಪತ್ರೆ ಬಳಿ ಇಂದಿರಾ ಕ್ಯಾಂಟೀನ್‌ ಆರಂಭಿಸಬೇಕೆಂದು ಸ್ಥಳ ಗುರುತಿಸ ಲಾಗಿತ್ತು. ಆದರೆ, ಚುನಾವಣೆ ಆರಂಭವಾಗುವುದರೊಳಗಾಗಿ ಇಂದಿರಾ ಕ್ಯಾಂಟೀನ್‌ ಆರಂಭವಾಗಲೇ ಇಲ್ಲ. ಇದೀಗ ಸಮ್ಮಿಶ್ರ ಸರಕಾರದಲ್ಲಿ ಸ್ಪೀಕರ್‌ ಆಗಿರುವ ರಮೇಶ್‌ಕುಮಾರ್‌ ಶ್ರೀನಿವಾಸಪುರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಆಸಕ್ತಿ ತೋರಿಸುತ್ತಿಲ್ಲ.

ಕೆಜಿಎಫ್: ಹಿಂದಿನ ಸರಕಾರದ ಅವಧಿಯಲ್ಲಿ ಕೆಜಿಎಫ್ ನೂತನ ತಾಲೂಕು ಆದರೂ, ಅಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಬಿಜೆಪಿ ಶಾಸಕಿಯಾಗಿದ್ದ ವೈ. ರಾಮಕ್ಕ ಆಸಕ್ತಿ ತೋರಲಿಲ್ಲ. ಇದೀಗ ಕಾಂಗ್ರೆಸ್‌ ಶಾಸಕಿ ರೂಪಕಲಾ ಮಂತ್ರಿ ಸ್ಥಾನ ಸಿಗಲಿಲ್ಲವೆಂಬ ಚಿಂತನೆಯಲ್ಲಿ ಮುಳುಗಿರುವುದರಿಂದ ಇನ್ನೂ ಕೆಜಿಎಫ್ ನಗರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಯೋಜಿಸಿಲ್ಲ.

ಬಂಗಾರಪೇಟೆ: ಕೋಲಾರ ಜಿಲ್ಲೆಯಲ್ಲಿ ಬಂಗಾರ ಪೇಟೆ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣ ಸ್ವಾಮಿ ಬಂಗಾರಪೇಟೆಯಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಆಸಕ್ತಿ ತೋರಿದ್ದರಾದರೂ, ಕಾರ್ಯಾರಂಭಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಪಡಿಸಿತು. ಇದೀಗ ನೀತಿ ಸಂಹಿತೆ ತೆರವುಗೊಂಡಿರುವುದರಿಂದ ಜೂ.21 ಕ್ಕೆ ಬಂಗಾರಪೇಟೆಯಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇಡೀ ಕೋಲಾರ ಜಿಲ್ಲೆಯ ಪಾಲಿಗೆ ಇದೊಂದೇ ಸರಕಾರದಿಂದ ಆರಂಭವಾಗಲಿರುವ ಇಂದಿರಾ ಕ್ಯಾಂಟೀನ್‌ ಆಗಲಿದೆ ಎಂಬ ಸಮಾಧಾನ ಸಿಗಲಿದೆ.

ಬಡವರಿಗೆ ಕೇವಲ ಐದು, ಹತ್ತು ರೂ.ನಲ್ಲಿ ಉಪಾಹಾರ ಹಾಗೂ ಮಧ್ಯಾಹ್ನದ ಊಟ ಸಿಗುವ ಇಂದಿರಾ ಕ್ಯಾಂಟೀನ್‌ ಕೋಲಾರ ಜಿಲ್ಲೆಯ ಆರು ತಾಲೂಕು ಕೇಂದ್ರಗಳಲ್ಲಿ ಆರಂಭವಾದರೆ ಬಡವರು, ಕೂಲಿ ಕಾರ್ಮಿಕರು, ಶಾಲಾ, ಕಾಲೇಜುಗಳಿಗೆ ಹಸಿದ ಹೊಟ್ಟೆಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಹಾಗಾಗಿ, ಆಯಾ ಕ್ಷೇತ್ರಗಳ ಶಾಸಕರು ಇಂದಿರಾ ಕ್ಯಾಂಟೀನ್‌ ಆರಂಭಿಸಲು ಗಮನ ಹರಿಸಬೇಕಾಗಿ¨

ಕೋಲಾರ ನಗರದಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ ಕಾಮಗಾರಿಯನ್ನು ಸ್ಥಗಿತಗೊಳಿ ಸಲಾಗಿತ್ತು. ಮುಂದಿನ ವಾರದಿಂದ ಮತ್ತೇ ಕಾಮಗಾರಿ ಆರಂಭವಾಗಲಿದೆ. ಕಾಮ ಗಾರಿಯ ಗುತ್ತಿಗೆಯನ್ನು ಸರಕಾರ ವತಿಯಿಂದಲೇ ನೀಡಿರುವುದರಿಂದ ನಗರಸಭೆಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
 ಶ್ರೀಕಾಂತ್‌, ಆಯುಕ್ತರು, ನಗರಸಭೆ, ಕೋಲಾರ. 

ಕಸದ ತೊಟ್ಟಿಯಾದ ಇಂದಿರಾ ಕ್ಯಾಂಟೀನ್‌ ಜಾಗ ಕೋಲಾರ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಇಂದಿರಾ ಕ್ಯಾಂಟೀನ್‌ ಕಾಮಗಾರಿಯನ್ನು ಆರಂಭಿಸಲು ಜೆಡಿಎಸ್‌ ಶಾಸಕ ಕೆ. ಶ್ರೀನಿವಾಸ ಗೌಡರು ಆಸಕ್ತಿ ತೋರಿಸುತ್ತಿಲ್ಲ. ಕಾಮಗಾರಿ ನಿಲ್ಲಿಸಿ ಹೋದ ಬೆಂಗಳೂರು ಮೂಲದ ಗುತ್ತಿಗೆದಾರರೂ ಇತ್ತ ತಲೆ ಹಾಕಿಲ್ಲ. ಇದರ ಪರಿಣಾಮ ಅರ್ಧಕ್ಕೆ ನಿಂತ ಇಂದಿರಾ ಕ್ಯಾಂಟೀನ್‌ ಜಾಗ ಕಸದ ತೊಟ್ಟಿ ಹಾಗೂ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

 ಕೆ.ಎಸ್‌.ಗಣೇಶ್‌

Trending videos

Back to Top