CONNECT WITH US  

ಹಾಲು ಉತ್ಪಾದಕರಲ್ಲಿ ಕಿಡಿಹೊತ್ತಿಸಿದ ದರ ಕಡಿತ

ಚಿಕ್ಕಬಳ್ಳಾಪುರ: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸದ್ದಿಲ್ಲದೇ ಪ್ರತಿ ಲೀಟರ್‌ ಹಾಲಿನ ದರದಲ್ಲಿ 3 ರೂ. ಕಡಿತ ಮಾಡಿರುವುದು ಇದೀಗ ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಲಿನ ದರ ಕಡಿತ ಅವಳಿ ಜಿಲ್ಲೆಯ ರೈತರಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿ ಸಿದ್ದು, ಸೋಮವಾರ ಜಿಲ್ಲೆಯಲ್ಲಿ ಹಲವು ರೈತಪರ ಸಂಘಟನೆಗಳು ದರ ಕಡಿತದ ವಿರುದ್ಧ ಹೋರಾಟಕ್ಕೆ ಬೀದಿಗೆ ಇಳಿಯುತ್ತಿವೆ.

ಕಳೆದ ಜೂನ್‌ ತಿಂಗಳಲ್ಲಿ ಮಳೆಗಾಲದ ಪ್ರಯುಕ್ತ ಹಾಲಿನ ಉತ್ಪಾದನೆ ಅಧಿಕವಾಗಿದೆ ಎಂದು 1 ರೂ. ಕಡಿತಗೊಳಿಸಿದ್ದ ಕೋಚಿಮುಲ್‌ ಇತ್ತೀಚೆಗೆ ಮತ್ತೆ ಪ್ರತಿ ಲೀ. ಹಾಲಿನ ಮೇಲೆ 2 ರೂ. ಕಡಿತಗೊಳಿಸುವ ಮೂಲಕ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಎರಡು ಜಿಲ್ಲೆಗಳಲ್ಲಿ ಕೋಚಿಮುಲ್‌ ದರ ಕಡಿತದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕಡಿತ ಗೊಳಿಸಿರುವ ದರ ಏರಿಕೆ ಮಾಡಬೇಕೆಂಬ ಒಕ್ಕೊರಲಿನ ಆಗ್ರಹ ಜೋರಾಗಿ ಕೇಳಿ ಬರುತ್ತಿದೆ.

ಪ್ರತಿ ಲೀ. ಹಾಲು 25ರಿಂದ 22ಕ್ಕೆ ಕುಸಿತ: ರಾಜ್ಯ ಸರ್ಕಾರ ಪ್ರತಿ ಲೀ.ಹಾಲಿಗೆ ನೀಡುವ 5 ರೂ. ಪ್ರೋತ್ಸಾಹ ಧನ ಹೊರತುಪಡಿಸಿ ರೈತರಿಗೆ ಒಕ್ಕೂಟ ದಿಂದ ಪ್ರತಿ ಲೀ.ಹಾಲಿಗೆ 25 ರೂ. ಸಿಗುತ್ತಿತ್ತು. ಆದರೆ ಇದೀಗ ಹಾಲಿನ ಉತ್ಪಾದನೆ ಜಾಸ್ತಿಯಾಗಿದೆ. 

ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲದೇ ಒಕ್ಕೂಟ ಆರ್ಥಿಕ ನಷ್ಟ ಅನುಭವಿಸುತ್ತಿದೆಯೆಂದು ಹೇಳಿ, ಎರಡು ಬಾರಿ ಒಟ್ಟು 3 ರೂ. ದರ ಕಡಿತಗೊಳಿಸಿರುವ ಪರಿಣಾಮ ಜಿಲ್ಲೆಯ ಹಾಲು ಉತ್ಪಾದಕರಿಗೆ ಇದೀಗ ಪ್ರತಿ ಲೀ.ಹಾಲಿಗೆ ಬರೀ 22 ರೂ. ಮಾತ್ರ ಸಿಗುತ್ತಿದೆ.

ಈಗಾಗಲೇ ಹಾಲು ಉತ್ಪಾದಕರಿಗೆ ಪಶು ಆಹಾರ ಬೂಸ, ಹಿಂಡಿ, ಪೀಡ್‌ ಬೆಲೆ ಹೆಚ್ಚಳವಾಗಿ ಹಾಲು ಉತ್ಪಾದಕರ ಕೈ ಕಚ್ಚುತ್ತಿದೆ. ಇತಂಹ ಸಂದರ್ಭದಲ್ಲಿ ಹಾಲಿನ ಬೆಲೆ ದಿಢೀರ್‌ ಕಡಿತಗೊಳಿಸಿರುವುದರಿಂದ ಹಾಲು ಉತ್ಪಾದಕರಿಗೆ ಲಾಭ ಬಿಡಿ ಪಟ್ಟ ಪರಿಶ್ರಮಕ್ಕೂ ಬೆಲೆ ಇಲ್ಲವಾಗಿದೆ. ಹಾಲಿನ ಬಿಲ್‌ ಬರೀ ಪಶು ಆಹಾರ ಖರೀದಿಗೆ ಸಾಲುತ್ತಿಲ್ಲ. ಆದ್ದರಿಂದ ಪಶು ಆಹಾರ ಬೆಲೆಯನ್ನು ಕಡಿತಗೊಳಿಸುವುದರ ಜತೆಗೆ ಒಕ್ಕೂಟ ಇಳಿಸಿರುವ ಹಾಲಿನ ಹಾಲಿ ದರ ಹೆಚ್ಚಳ ಮಾಡಬೇಕೆಂಬ ಒತ್ತಾಯ ಹಾಲು ಉತ್ಪಾದಕರದ್ದಾಗಿದೆ.

ಹಾಲು ಒಕ್ಕೂಟಗಳಿಗೆ ಲಾಭ: ಪಕ್ಕದ ಆಂಧ್ರ, ಕೇರಳ, ತಮಿಳುನಾಡಿನಲ್ಲಿ ರೈತರ ಪ್ರತಿ ಲೀ. ಹಾಲಿಗೆ 27 ರಿಂದ 32 ರೂ. ವರೆಗೂ ಬೆಲೆ ಸಿಗುತ್ತಿದೆ. ರಾಜ್ಯದಲ್ಲಿ ಕೂಡ ಪ್ರತಿ ಲೀ.ಹಾಲನ್ನು 38 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಒಕ್ಕೂಟಗಳು ಲಾಭದಲ್ಲಿ ಇದ್ದರೂ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾಲು ಒಕ್ಕೂಟಗಳು ದರ ಕಡಿತಗೊಳಿಸಿರುವುದು ತೀವ್ರ ಅಶ್ಚರ್ಯವಾಗಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ ಹಾಲು ಉತ್ಪಾದಹಕರ ಸಹಕಾರ ಸಂಘದ ಅಧ್ಯಕ್ಷ ಬಿ. ಎನ್‌.ಮುನಿಕೃಷ್ಣಪ್ಪ. ಪಶು ಆಹಾರವನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ನೀಡುವಂತೆ ಕೇಳಿದರೂ ಒಕ್ಕೂಟಗಳು ಸ್ವಂದಿಸುತ್ತಿಲ್ಲ. ಈಗ ಹಾಲಿನ ದರ ಕಡಿಮೆ ಮಾಡಿ ಹಾಳು ಉತ್ಪಾದಕರ ಮೇಲೆ ಒಕ್ಕೂಟಗಳು ಸವಾರಿ ಮಾಡಲು ಹೊರಟಿವೆ ಎಂದು ಅಸಮಾಧಾನ ಹೊರ ಹಾಕಿದರು.

ಒಟ್ಟಾರೆ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಜೀವನೋಪಾಯವಾಗಿರುವ ಹೈನುದ್ಯೋಮ ಈಗ ಹಾಲಿನ ದರ ಕಡಿತದಿಂದ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಒಂದೇ ತಿಂಗಳಲ್ಲಿ ಎರಡು ಬಾರಿ ದರ ಕಡಿತಗೊಳಿಸಿರುವ ಕೋಚಿಮುಲ್‌ ನಡೆ ಜಿಲ್ಲೆಯ ಹಾಲು ಉತ್ಪಾದಕರನ್ನು ತೀವ್ರ ಅನುಮಾನ ಮಾಡಿ ಸಿರುವುದಲ್ಲದೇ ದರ ಕಡಿತ ರೈತರಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿದೆ. ಎರಡು ಜಿಲ್ಲೆಗಳಲ್ಲಿ ರೈತಪರ ಸಂಘಟನೆಗಳು ಹಾಲಿನ ದರ ಕಡಿತ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು, ಕೋಚಿಮುಲ್‌ ಒಕ್ಕೂಟ ರೈತರ ಒತ್ತಾಯಕ್ಕೆ ಮಣಿದು ಹಾಲಿನ ದರ ಹೆಚ್ಚಿಸುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ಹಾಲು ಒಕ್ಕೂಟ ಹಾಲಿನ ದರ 3 ರೂ. ಕಡಿತ ಮಾಡಿರುವುದು ನನ್ನ ಗಮನಕ್ಕೆ ಬಂದಿಲ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವೆ. ಹಾಲಿ ದರ ಕಡಿತ ಮಾಡಿದರೆ ರೈತರ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಡುತ್ತದೆ. ಎರಡು ಜಿಲ್ಲೆಗಳಲ್ಲಿ ರೈತ ಕುಟುಂಬಗಳಿಗೆ ಹೈನೋದ್ಯಮವೇ ಜೀವಾಳ. ಸರ್ಕಾರ ಪ್ರತಿ ಲೀ. ಹಾಲಿಗೆ ನೀಡುವ 5 ರೂ. ಪ್ರೋತ್ಸಾಹ ಧನವನ್ನು ಕೂಡ ಯಾವುದೇ ಕಾರಣಕ್ಕೆ ಕಡಿತ ಮಾಡದಂತೆ ಸದನಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ.
 ಡಾ.ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಶಾಸಕ

ಪಕ್ಕದ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಗೆ ಹೋಲಿಸಿಕೊಂಡರೆ ರಾಜ್ಯದ ಹಾಲು ಉತ್ಪಾದಕರಿಗೆ ಅತ್ಯಂತ ಕಡಿಮೆ ದರ ನೀಡಲಾಗುತ್ತಿದೆ. ಒಕ್ಕೂಟಗಳಿಗೆ ಉತ್ತಮ ಲಾಭ ಇದ್ದರೂ ಹಾಲಿನ ದರ ಕಡಿಮೆ ಮಾಡುವ ಅವಶ್ಯಕತೆ ಏನಿತ್ತು. ಕೂಡಲೇ ಹಾಲು ಒಕ್ಕೂಟಗಳು ಕಡಿಮೆ
ಮಾಡಿರುವ ಹಾಲಿನ ದರ ಹೆಚ್ಚಿಸಬೇಕು. ಪಶು ಆಹಾರ ಬೆಲೆ ಕಡಿತಗೊಳಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ. ಹಾಲಿನ ದರ ಕಡಿತಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದಕ್ಕೆ ಒಕ್ಕೂಟಗಳು ಮಣಿ ಯದಿದ್ದರೆ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆ.
 ಭರಕ್ತಹಳ್ಳಿ ಬೈರೇಗೌಡ, ಜಿಲ್ಲಾಧ್ಯಕ್ಷರು, ರೈತ ಸಂಘ

ಕಾಗತಿ ನಾಗರಾಜಪ್ಪ


Trending videos

Back to Top