CONNECT WITH US  

ನ. 18 - 20: ಆಳ್ವಾಸ್‌ ನುಡಿಸಿರಿ-2016 

ಮಂಗಳೂರು: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡಬಿದಿರೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿರುವ ಕನ್ನಡ ನಾಡು-ನುಡಿಯ ಸಮ್ಮೇಳನ ಆಳ್ವಾಸ್‌ ನುಡಿಸಿರಿ - 2016ರ ಸರ್ವಾಧ್ಯಕ್ಷರಾಗಿ ಹಿರಿಯ ವಿಮರ್ಶಕಿ ಹಾಗೂ ಸಂಶೋಧಕಿ ಡಾ| ಬಿ.ಎನ್‌. ಸುಮಿತ್ರಾಬಾಯಿ ಹಾಗೂ ಉದ್ಘಾಟಕರಾಗಿ ಖ್ಯಾತ ಸಾಹಿತಿ ಡಾ| ಜಯಂತ ಗೌರೀಶ ಕಾಯ್ಕಿಣಿ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ನವೆಂಬರ್‌ 18ರಿಂದ 20ರ ವರೆಗೆ ನಡೆಯಲಿರುವ ನುಡಿಸಿರಿ "ಕರ್ನಾಟಕ: ನಾಳೆಗಳ ನಿರ್ಮಾಣ' ಎನ್ನುವ ಪ್ರಧಾನ ಪರಿಕಲ್ಪನೆಯೊಂದಿಗೆ ಆಯೋಜನೆಗೊಂಡಿದೆ. ಕಳೆದ 12 ವರ್ಷಗಳಿಂದ ಯಶಸ್ವಿಯಾಗಿ ನಡೆದಿರುವ ಈ ಕನ್ನಡ ಹಬ್ಬ ಈ ಬಾರಿ 13ನೇ ವರ್ಷಕ್ಕೆ ಕಾಲಿಟ್ಟಿದೆ ಎಂದರು.

ವಿದ್ಯಾರ್ಥಿಗಳಿಗೆ ಉಚಿತ
ನುಡಿಸಿರಿಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಉಚಿತ ಅವಕಾಶವಿರುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆ ಮುಖ್ಯಸ್ಥರ ದೃಢೀಕರಣ ಪತ್ರದೊಂದಿಗೆ ಭಾಗವಹಿಸಬಹುದು. ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸುವವರು 100 ರೂ. ಶುಲ್ಕ ಪಾವತಿಸಿ ಭಾಗವಹಿಸಬಹುದು.

ನುಡಿಸಿರಿಯ ಜತೆಗೆ ನ. 17ರಂದು ವಿದ್ಯಾರ್ಥಿ ಸಿರಿ, ಅಂದು ಸಂಜೆ ಕೃಷಿ ಸಿರಿ ಉದ್ಘಾಟನೆಗೊಳ್ಳಲಿದೆ. ಜತೆಗೆ ಚಿತ್ರ ಸಿರಿ, ಛಾಯಾಚಿತ್ರ ಸ್ಪರ್ಧೆ, ಪುಸ್ತಕ ಮಳಿಗೆ, ಫಲಪುಷ್ಪ ಪ್ರದರ್ಶನ, ಕವಿ ಗೋಷ್ಠಿ, ಸಂವಾದ, 10 ವೇದಿಕೆಗಳಲ್ಲಿ ಸಾಂಸ್ಕೃತಿಕ ವೈಭವ ಮೊದಲಾದವುಗಳು ಆಯೋಜನೆಗೊಂಡಿರುತ್ತವೆ. ಈ ಬಾರಿ ಸುಮಾರು 25,000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸುಮಾರು 4 ಕೋ. ರೂ. ವೆಚ್ಚದಲ್ಲಿ ನುಡಿಸಿರಿ ಆಯೋಜನೆಗೊಳ್ಳುತ್ತಿದ್ದು, ಕಳೆದ ವರ್ಷ ಈ ಕಾರ್ಯಕ್ರಮಗಳಿಗೆ ಸಂಸ್ಥೆಗೆ ಸರಕಾರದಿಂದ 15 ಲಕ್ಷ ರೂ. ಲಭಿಸಿತ್ತು. ಸುಮಾರು 20 ಲಕ್ಷ ರೂ. ಪ್ರತಿನಿಧಿ ಶುಲ್ಕವಾಗಿ ಸಿಗುತ್ತದೆ. ಉಳಿದಂತೆ ಎಲ್ಲ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರೊ| ವೇಣುಗೋಪಾಲ್‌ ಶೆಟ್ಟಿ ಉಪಸ್ಥಿತರಿದ್ದರು.

2018ಕ್ಕೆ ಆಳ್ವಾಸ್‌ ವಿಶ್ವ  ನುಡಿಸಿರಿ-ವಿರಾಸತ್‌
2018ರಲ್ಲಿ ನುಡಿಸಿರಿಗೆ 15 ವರ್ಷಗಳು ಹಾಗೂ ವಿರಾಸತ್‌ಗೆ 25 ವರ್ಷ ತುಂಬಲಿದ್ದು, ಆ ವರ್ಷ ಆಳ್ವಾಸ್‌ ವಿಶ್ವ ನುಡಿಸಿರಿ-ವಿರಾಸತ್‌ ಎಂಬ ಹೆಸರಿನೊಂದಿಗೆ ಎರಡೂ ಉತ್ಸವಗಳೂ ಒಟ್ಟಿಗೆ ನಡೆಯಲಿವೆ ಎಂದು ಡಾ| ಮೋಹನ ಆಳ್ವ  ತಿಳಿಸಿದರು.

ಡಾ| ಬಿ. ಎನ್‌. ಸುಮಿತ್ರಾಬಾಯಿ
ಮೈಸೂರಿನಲ್ಲಿ ಹುಟ್ಟಿ ಹಾಸನದಲ್ಲಿ ಬೆಳೆದ ಡಾ| ಬಿ.ಎನ್‌. ಸುಮಿತ್ರಾಬಾಯಿ ಅವರು ಸಂಸ್ಕೃತ ಭಾಷಾ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು. ಸಂಸ್ಕೃತ, ಇಂಗ್ಲಿಷ್‌ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿರುವ ಅವರು ಜೈನಶಾಸ್ತ್ರ ಮತ್ತು ಪ್ರಾಕೃತ ವಿಷಯವಾದ "ಜಿನಸೇನನ ಹರಿವಂಶ ಪುರಾಣ-ಒಂದು ಅಧ್ಯಯನ' ಎಂಬ ವಿಷಯಕ್ಕೆ ಪಿಎಚ್‌ಡಿ ಪದವಿ ಪಡೆದಿರುತ್ತಾರೆ. ಜತೆಗೆ ಅನೇಕ ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನೂ ನೀಡಿದ್ದಾರೆ.

ಮಹಿಳಾ ಅಧ್ಯಯನ, ಸ್ತ್ರೀವಾದಿ ಸಾಹಿತ್ಯ ವಿಮರ್ಶೆ, ಶಾಸ್ತ್ರಾಧ್ಯಯನ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿರುವ ಅವರು ಕನ್ನಡದ ಮಹಿಳಾ ಬರವಣಿಗೆ, ಜೈನ ಧರ್ಮದ ದೇವತೆಗಳು, ಕನ್ನಡದಲ್ಲಿ ಬಂದ ಜೈನ ಮಹಾಭಾರತಗಳ ಕುರಿತು ಸಂಶೋಧನೆಗಳನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಹಿರಿಯ ವಿಮರ್ಶಕರಾಗಿ, ಸಂಶೋಧಕರಾಗಿ, ಕನ್ನಡದ ಸ್ತ್ರೀನಿಷ್ಠ ವಿಮರ್ಶೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಡಾ| ಜಯಂತ ಗೌರೀಶ ಕಾಯ್ಕಿಣಿ
ಸಮಕಾಲೀನ ಕನ್ನಡ ಸಾಹಿತಿಗಳಲ್ಲಿ ಪ್ರಮುಖರಾಗಿರುವ ಡಾ| ಜಯಂತ ಗೌರೀಶ ಕಾಯ್ಕಿಣಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ಎಂಎಸ್ಸಿ ಬಯೋಕೆ ಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿರುವ ಅವರು ತನ್ನ 19ನೇ ವಯಸ್ಸಿನಲ್ಲಿಯೇ "ರಂಗದಿಂದೊಂದಿಷ್ಟು ದೂರ' ಎನ್ನುವ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದು, 4 ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕವಿ, ಕತೆಗಾರ, ನಾಟಕಕಾರ, ಅಂಕಣ ಬರಹಗಾರರಾಗಿರುವ ಜತೆಗೆ ಚಲನಚಿತ್ರ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ ಎಂದರು.

Trending videos

Back to Top