CONNECT WITH US  

ಕವಿಯೊಬ್ಬನ ಪ್ರೀತಿ ಗೀತಿ ಇತ್ಯಾದಿ...

ಚಿತ್ರ ವಿಮರ್ಶೆ

ಯಾವುದೇ ಒಂದು ಕವಿತೆಗೆ ಎಲ್ಲವನ್ನು ಗೆಲ್ಲುವ ಮತ್ತು ಸಮಾಧಾನಿಸುವ ಶಕ್ತಿ ಇರುತ್ತೆ. ಅದೇ ಕವಿತೆ ಬರೆದ ಕವಿಗೆ ಇರುತ್ತಾ? ಅದೇ ಈ ಚಿತ್ರದೊಳಗಿರುವ ಗುಟ್ಟು. ಈ "ಕವಿ' ನೋಡುಗನ ಮನಸ್ಸನ್ನು ಗೆಲ್ಲುತ್ತಾನಾ ಅಥವಾ ಪ್ರಭಾವ ಬೀರುತ್ತಾನಾ ಎಂಬುದನ್ನು ಹೇಳುವುದು ಕಷ್ಟ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತೆ. ಕೆಲವರು ಪ್ರಕೃತಿ ನೋಡಿ ಕವಿಯಾಗುತ್ತಾರೆ. ಇನ್ನೂ ಕೆಲವರು ಕಣ್ಣಿಗೆ ಚಂದ ಕಾಣುವ ಹುಡುಗಿ ನೋಡಿ ಕವಿಯಾಗುತ್ತಾರೆ. ಆದರೆ, ಇಲ್ಲೊಬ್ಬ ಪೊರ್ಕಿ ಹೇಗೆ ಕವಿಯಾಗುತ್ತಾನೆ ಅನ್ನೋದೇ ಕಥೆ.

ಅವನ ಕವಿತೆಗೆ ಕಿವಿಯಾಗುವ ಹುಡುಗಿಯೊಬ್ಬಳು ಹೇಗೆ ಪ್ರೀತಿಯಲ್ಲಿ ಕರಗುತ್ತಾಳೆ ಅನ್ನುವುದನ್ನು ಕಾವ್ಯಾತ್ಮಕವಾಗಿ ಬಣ್ಣಿಸುತ್ತಲೇ, ಹೊಸ ರೂಪಕ ಆನಾವರಣಗೊಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಇಲ್ಲಿ ಕಥೆ ಬಗ್ಗೆ ಹೇಳುವಂಥದ್ದೇನೂ ಇಲ್ಲ. ಸರಳ ಕಥೆಗೆ ಬಿಗಿಯಾದ ನಿರೂಪಣೆ ಕೊರತೆ ಇದೆ. ಆ ಕೊರತೆಯನ್ನು ಹಾಡಲ್ಲಿ ನೀಗಿಸುವ ಸಣ್ಣ ಪ್ರಯತ್ನ ಮಾಡಿರುವುದೇ ಸಮಾಧಾನ.

ಕವಿ ಅಂದಾಕ್ಷಣ, ಸಿನಿಮಾದುದ್ದಕ್ಕೂ ಕವಿಯ ಪದಪುಂಜಗಳೇ ಹರಿದಾಡುವುದಿಲ್ಲ. ಕವಿಯೊಬ್ಬನ ಕಾವ್ಯ ವಾಚನಕ್ಕಷ್ಟೇ ಸೀಮಿತವಾಗದ ನಿರ್ದೇಶಕರು, ಬಿಲ್ಡಪ್‌ಗಾಗಿ ಫೈಟು, ಒಂದು ಇಂಟ್ರಡಕ್ಷನ್‌ಗೊಂದು ಹಾಡು ಕಟ್ಟಿಕೊಟ್ಟು, ಸ್ವಲ್ಪ ನೋಡುಗನ ತಾಳ್ಮೆ ಕೆಡಿಸಲು ಕಾರಣರಾಗುತ್ತಾರೆ. ಕಮರ್ಷಿಯಲ್‌ ಅಂಶಗಳು ಇರಬೇಕು ಎಂಬ ಒತ್ತಡಕ್ಕೆ ಮಣಿದಂತಿರುವ ನಿರ್ದೇಶಕರು, ವಿನಾಕಾರಣ ಕೆಲ ದೃಶ್ಯಗಳಿಗೆ ಮೊರೆ ಹೋಗಿದ್ದಾರೆ.

ಅರ್ಥವಿರದ ಖಳನಟರ ದೃಶ್ಯಗಳನ್ನಿಟ್ಟು, ಅವರ ಕಿರುಚಾಟ, ಕೂಗಾಟಕ್ಕಷ್ಟೇ ಜಾಗ ಕಲ್ಪಿಸಿದ್ದಾರೆ ವಿನಃ, ಅದಕ್ಕೊಂದು ಪರಿಪೂರ್ಣ ಚೌಕಟ್ಟು ಹಾಕಿಲ್ಲ. ಅದನ್ನು ಬಿಟ್ಟರೆ, "ಕವಿ' ಮನಸ್ಸಿನೊಳಗಿನ ಪ್ರೀತಿ, ಗೆಳೆತನ ಮತ್ತು ತಲ್ಲಣವನ್ನು ಅಷ್ಟೇ ಸೊಗಸಾಗಿ ತೋರಿಸುವ ಮೂಲಕ ಸಣ್ಣದ್ದೊಂದು ಸಮಾಧಾನಕ್ಕೆ ಕಾರಣರಾಗುತ್ತಾರೆ. ನೋಡುಗರಿಗೆ ಸಾಕಷ್ಟು ಗೊಂದಲಗಳು ಎದುರಾಗುತ್ತವೆಯಾದರೂ, ನಿರ್ದೇಶಕರ ಚೊಚ್ಚಲ ಪ್ರಯತ್ನವಾದ್ದರಿಂದ ಅದನ್ನು ಬದಿಗಿರಿಸಿ ಒಮ್ಮೆ "ಕವಿ' ಮನಸ್ಸಿಗೆ ಕಿವಿಯಾಗುವ ಹುಡುಗಿಯ ತಿಲ್ಲಾನವನ್ನು ನೋಡಲ್ಲಡ್ಡಿಯಿಲ್ಲ.

ರಾಜ ಅವನೊಬ್ಬ ಪೊರ್ಕಿ. ಕಾಲೇಜ್‌ಗೆ ಹೋದರೂ ಅವನಿಗೆ ಓದು ತಲೆಗತ್ತಲ್ಲ.  ಮನೆಯಲ್ಲಿ ಅಪ್ಪ, ಅಮ್ಮನ ಬಳಿ ಕಾಸು ಪಡೆದು ಗೆಳೆಯರ ಜೊತೆ ತಿರುಗಾಡುವ ಹುಡುಗ. ಕಾಲೇಜು ಕವಿಗೋಷ್ಠಿಯಲ್ಲೊಮ್ಮೆ ಅವನು ವಾಚಿಸುವ ಕವನ ಕೇಳುವ ಹುಡುಗಿ ಹಂಸ ಮೆಲ್ಲನೆ ಪ್ರೀತಿಗೆ ಜಾರುತ್ತಾಳೆ. ಅವನ ಹಿಂದೆ, ಮುಂದೆ ಓಡಾಡಿದರೂ, ಅವನು ಮಾತ್ರ ತನಗೇನೂ ಗೊತ್ತಿಲ್ಲದಂತೆ ಇರುತ್ತಾನೆ. ಕೊನೆಗೆ ಆಕೆ ಪ್ರೀತಿ ನಿವೇದನೆ ಮಾಡಿಕೊಂಡಾಗ, ಅಲ್ಲೊಂದು ಸುಳ್ಳು ಹೇಳುತ್ತಾನೆ. ಅವನೇ ಹೇಳಿದ ಕಟ್ಟು ಕಥೆ, ಲೈಫ‌ಲ್ಲೂ ಸತ್ಯಕಥೆಯಾಗುತ್ತೆ. ಅದೇ ಹೈಲೆಟ್‌.

ಆ ಕುತೂಹಲವಿದ್ದರೆ "ಕವಿ' ಕವಿತೆಗೆ ಕಿವಿಯಾಗಬಹುದು. ಪುನೀತ್‌ ನಟನೆ ಪರವಾಗಿಲ್ಲ. ಡ್ಯಾನ್ಸ್‌ ಮತ್ತು ಫೈಟ್‌ ಬಗ್ಗೆ ಹೆಚ್ಚು ಗಮನಹರಿಸುವ ಅಗತ್ಯವಿದೆ. ಶೋಭಿತಾ ಸಿಕ್ಕ ಅವಕಾಶಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಬರುವ ಪಾತ್ರಗಳ್ಯಾವೂ ಹೆಚ್ಚು ಗಮನಸೆಳೆಯಲ್ಲ. ತ್ಯಾಗರಾಜು ಸಂಗೀತದ ಎರಡು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತದ ಅಬ್ಬರ ಮಾತುಗಳನ್ನೇ ನುಂಗಿಕೊಂಡಿದೆ. ಶರತ್‌ಕುಮಾರ್‌ ಮತ್ತು ಕಾರ್ತಿಕ್‌ ಶರ್ಮ ಛಾಯಾಗ್ರಹಣದಲ್ಲಿ "ಕವಿ'ಯ ಒಳ್ಳೆಯ ಪರಿಸರ ತುಂಬಿದೆ.

ಚಿತ್ರ: ಕವಿ
ನಿರ್ಮಾಣ: ಪುನೀತ್‌
ನಿರ್ದೇಶನ: ಎಂ.ಎಸ್‌.ತ್ಯಾಗರಾಜು
ತಾರಾಗಣ: ಪುನೀತ್‌ಗೌಡ, ಶೋಭಿತಾ, ಸ್ನೇಹ ನಾಯ್ಡು, ಉಮೇಶ್‌, ರಾಕ್‌ಲೈನ್‌ ಸುಧಾಕರ್‌, ಶಿವಣ್ಣ, ಮಹೇಶ್‌ ಇತರರು.

* ವಿಭ


Trending videos

Back to Top