CONNECT WITH US  

ಉಗ್ರ ರಾಜಕೀಯ :1 ಕಪ್ ಮೋದಿ ಟೀಗೆ ನಮ್ಮ 7 ಸೈನಿಕರು ಬಲಿ; ಸೇನೆ ಟೀಕೆ

ಪಂಜಾಬ್‌ನ ಪಠಾಣ್‌ಕೋಟ್‌ ವಾಯುನೆಲೆಗೆ ನುಗ್ಗಿರುವ ಉಗ್ರರನ್ನು ಅತ್ತ ಯೋಧರು ಸದೆಬಡಿಯುತ್ತಿದ್ದರೆ ಇತ್ತ ರಾಜಕೀಯ ಪಕ್ಷಗಳು ಉಗ್ರರ ವಿರುದ್ಧದ ಕಾರ್ಯಾಚರಣೆ ವಿಷಯವಾಗಿ ರಾಜಕೀಯ ಆರಂಭಿಸಿವೆ. ಕಾಂಗ್ರೆಸ್‌, ಬಿಜೆಪಿ, ಶಿವಸೇನೆ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುವ ಮೂಲಕ ಕೆಸರೆರಚಾಡುತ್ತಿವೆ. ಪಾಕ್‌ಗೆ ದಿಢೀರ್‌ ಭೇಟಿ ನೀಡಿದ ಮೋದಿಯವರಿಗೆ ಸಿಕ್ಕಿದ್ದೇನು ಎಂದು ಕಾಂಗ್ರೆಸ್‌ ಪ್ರಶ್ನಿಸಿದರೆ ಪಾಕ್‌ನಲ್ಲಿ  ಮೋದಿ 1 ಕಪ್‌ ಚಹಾ ಕುಡಿದಿದ್ದರಿಂದ ನಮ್ಮ 7 ಮಂದಿ ಯೋಧರು ಸತ್ತರು ಎಂದು ಶಿವಸೇನೆ ಟೀಕಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಇಂಥ ಹೇಳಿಕೆಗಳಿಂದ ದೇಶದ್ರೋಹಿಗಳಿಗೆ ನೆರವಾಗುತ್ತದೆ ಎಂದಿದೆ. 

ಮೋದಿಯ ಪಾಕ್‌ ನೀತಿ ನಿಷ್ಪ್ರಯೋಜಕ: ಕಾಂಗ್ರೆಸ್‌ 
ಹೊಸದಿಲ್ಲಿ:
ಪಠಾಣ್‌ಕೋಟ್‌ ಉಗ್ರ ದಾಳಿ ಹಿನ್ನೆಲೆಯಲ್ಲಿ ಪಾಕ್‌ ಕುರಿತಂತೆ ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿ 'ನಿಷ್ಪ್ರಯೋಜಕ' ಎಂದು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ ಮತ್ತು ಮೋದಿ ಅವರು ಪಾಕ್‌ಗೆ ತೆರಳಿದ್ದರ ಫ‌ಲಶ್ರುತಿ ಏನು ಎಂದು ಖಾರವಾಗಿ ಪ್ರಶ್ನಿಸಿದೆ.

ಪತ್ರಕರ್ತರ ಜತೆ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಆನಂದ ಶರ್ಮಾ, 'ಪಾಕಿಸ್ಥಾನ ಅಂದು ಭರವಸೆಯಂತೆ ನಡೆದುಕೊಳ್ಳಲಿಲ್ಲ. ಅದಕ್ಕೇ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಭೇಟಿ ನೀಡಿರಲಿಲ್ಲ. ಸಿಂಗ್‌ ಅವರು ಫ‌ಲಶ್ರುತಿ ಬಯಸಿದ್ದರು. ಆದರೆ ಕಳೆದ ಡಿ.25ರಂದು ಪ್ರಧಾನಿ ಮೋದಿ ಅವರು ಲಾಹೋರ್‌ಗೆ ಅಚ್ಚರಿಯ ಭೇಟಿ ನೀಡಿದರು. ಇದರ ಫ‌ಲವೇನು? ಪಾಕ್‌ ಪ್ರಧಾನಿಯವರು ಮೋದಿಗೆ ಏನು ಭರವಸೆ ಕೊಟ್ಟರು ಎಂಬುದು  ಬಹಿರಂಗಗೊಳ್ಳಲಿ' ಎಂದು ಪ್ರಶ್ನಿಸಿದರು.

'ಜತೆಗೆ ಭದ್ರತಾ ಸಲಹೆಗಾರರ ಮಾತುಕತೆ ಇಲ್ಲ ಎಂದು ಮತ್ತೆ ಬ್ಯಾಂಕಾಕ್‌ನಲ್ಲಿ ಮಾತುಕತೆ ನಡೆಸಲು ಕಾರಣವೇನು? ಎಂಬುದಕ್ಕೂ ಉತ್ತರಿಸಲಿ' ಎಂದು ಆಗ್ರಹಿಸಿದ ಶರ್ಮಾ, ಪಾಕ್‌ ವಿದೇಶಾಂಗ ನೀತಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

1 ಕಪ್‌ ಮೋದಿ ಟೀಗೆ ನಮ್ಮ 7 ಸೈನಿಕರು ಬಲಿ: ಶಿವಸೇನೆ 
ಮುಂಬಯಿ:
ಶಿವಸೇನೆಯು ತನ್ನ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ನರೇಂದ್ರ ಮೋದಿ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 'ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಜತೆಗೆ ಚಹಾ-ತಿಂಡಿ ಸೇವನೆ ನಮ್ಮ ಪ್ರಧಾನಿಯ ಖಾಸಗಿ ವಿಷಯ. ಆದರೆ, ಮೋದಿ ಅವರ 1 ಕಪ್‌ ಚಹಾಗೆ ಬದಲಾಗಿ ಪಠಾಣ್‌ಕೋಟ್‌ನಲ್ಲಿ 7 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ' ಎಂದು ಶಿವಸೇನೆ ಟೀಕಿಸಿದೆ.

'ಭಾರತದಲ್ಲಿ ಗಡಿ ಮಾತ್ರವಲ್ಲದೆ, ಆಂತರಿಕ ಭದ್ರತೆಯೂ ಸುರಕ್ಷಿತವಲ್ಲ ಎಂಬುದು ಈ ದಾಳಿಯಿಂದ ಸಾಬೀತಾಗಿದೆ. ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಏಕಮಾತ್ರ ರಾಷ್ಟ್ರ ಸೇವೆ ನಡೆಯುತ್ತಿದೆ. ಈ ಘಟನೆಯಿಂದ ನಮ್ಮ ಗಡಿ ಸುರಕ್ಷಿತವಾಗಿಲ್ಲ ಎಂಬುದನ್ನು ತೋರಿಸಿದೆ. ಹಾಗೆಯೇ, ದೇಶದ ಆಂತರಿಕ ಭದ್ರತೆಯನ್ನೂ ಪ್ರಶ್ನಿಸುವಂತಿದೆ' ಎಂದು ಶಿವಸೇನೆ ಸಂಪಾದಕೀಯದಲ್ಲಿ ಕಿಡಿಕಾರಿದೆ.

ಕಾಂಗ್ರೆಸ್‌ ಹೇಳಿಕೆ ನಾಚಿಕೆಗೇಡು: ಬಿಜೆಪಿ ತಿರುಗೇಟು
ಹೊಸದಿಲ್ಲಿ:
ಪಠಾಣ್‌ಕೋಟ್‌ ವಾಯುನೆಲೆ ದಾಳಿ ವಿಚಾರದಲ್ಲಿ ಕಾಂಗ್ರೆಸ್‌ ಹೇಳಿಕೆ ನಾಚಿಕೆಗೇಡಿತನದ್ದು ಎಂದು ಬಿಜೆಪಿ ಜರೆದಿದೆ. ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮಾಡುತ್ತಿರುವ ಸತತ ಟೀಕೆಗಳಿಗೆ ತಿರುಗೇಟು ನೀಡಲು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಮುಖ್ತಾರ್‌ ಅಬ್ಟಾಸ್‌ ನಖ್ವೀ, 'ಇಂತಹ ಹೇಳಿಕೆಗಳಿಂದ ದೇಶವಿರೋಧಿಗಳನ್ನು ಮಾನಸಿಕವಾಗಿ ಬೆಂಬಲಿಸಿದಂತಾಗುತ್ತದೆ. ಕಾಂಗ್ರೆಸ್‌ ಪಕ್ಷವು ಉಗ್ರರ ವಿರುದ್ಧ ಹೋರಾಟ ಮಾಡುವವರನ್ನು ಪ್ರಶ್ನಿಸುತ್ತದೆಯೇ ಹೊರತು ಭಯೋತ್ಪಾದಕರ ಕೃತ್ಯಗಳನ್ನಲ್ಲ' ಎಂದು ಟೀಕಿಸಿದರು.

'ಒಂದು ವಿಚಾರದಲ್ಲಿ ಇಡೀ ದೇಶ ಒಂದಾಗಿದೆ. ಆದರೆ ಕಾಂಗ್ರೆಸ್‌ ದೇಶವನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿದೆ. ಕಾಂಗ್ರೆಸ್‌ನ ಹೇಳಿಕೆಗಳು ದೇಶದ ಭದ್ರತೆ ವಿಚಾರದಲ್ಲಿ ಅವರೆಷ್ಟು ಬೇಜವಾಬ್ದಾರಿ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ' ಎಂದು ನಖ್ವೀ ಕಿಡಿಕಾರಿದರು. 'ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಪಾಕ್‌ ಭೇಟಿಯ ಬಗ್ಗೆಯೂ ಪ್ರಶ್ನಿಸುವ ಕಾಂಗ್ರೆಸಿಗರು, ಸಂಸತ್ತಿನಲ್ಲಿ ಸಚಿವೆ ಈ ಬಗ್ಗೆ ಹೇಳಿಕೆ ನೀಡಿದ್ದಾಗ, ಒಂದು ಕುಟುಂಬದ ಭ್ರಷ್ಟಾಚಾರ ವಿಚಾರ ಕುರಿತಂತೆ ಗಲಾಟೆ ಮಾಡುತ್ತಿದ್ದರು' ಎಂದು ತಿವಿದರು.


Trending videos

Back to Top