CONNECT WITH US  

ಇನ್ನು ಮೊಬೈಲ್‌ನಲ್ಲೇ ಡಿಎಲ್‌, ಆರ್‌ಸಿ ಬುಕ್‌ ತೋರಿಸಿ ಸಾಕು!

ಹೊಸದಿಲ್ಲಿ: ವಾಹನ ಚಾಲನೆ ವೇಳೆ, ಚಾಲನಾ ಪರವಾನಗಿ (ಡಿಎಲ್‌) ಮತ್ತು ವಾಹನದ ನೋಂದಣಿಯ ಪುಸ್ತಕ (ಆರ್‌ಸಿ ಬುಕ್‌)ದ ಮೂಲಪ್ರತಿಯನ್ನು ಕೊಂಡೊಯ್ಯಬೇಕಾದ ದಶಕಗಳ ಹಳೆಯ ಪದ್ಧತಿಗೆ ಕೇಂದ್ರ ಸರಕಾರ ಕಡೆಗೂ ಅಂತ್ಯ ಹಾಡಿದೆ. ಮೊಬೈಲ್‌ ಆ್ಯಪ್‌ನಲ್ಲೇ ಡಿಎಲ್‌ ಮತ್ತು ಆರ್‌ಸಿ ಬುಕ್‌ ಇಟ್ಟುಕೊಳ್ಳಬಹುದಾದ ವಿಶೇಷ ಯೋಜನೆಯೊಂದಕ್ಕೆ ಕೇಂದ್ರ ಸರಕಾರ ಬುಧವಾರ ಚಾಲನೆ ನೀಡಿದೆ.

ಡಿಜಿಟಲ್‌ ಇಂಡಿಯಾ ಯೋಜನೆಯಡಿ ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ಡಿಜಿಲಾಕರ್‌ ವ್ಯವಸ್ಥೆಗೆ ಇದೀಗ ಡಿಜಿಟಲ್‌ ರೂಪದಲ್ಲಿರುವ ದೇಶದ ಕೋಟ್ಯಂತರ ಜನರ ಡಿಎಲ್‌ ಮತ್ತು ಆರ್‌ಸಿ ಬುಕ್‌ ಅನ್ನು ಸಂಯೋಜಿಸುವ ಕೆಲಸವನ್ನು ಸರಕಾರ ಮಾಡಿದೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಡಿಜಿಲಾಕರ್‌ ಮೊಬೈಲ್‌ ಅಪ್ಲಿಕೇಷನ್‌ (ಆ್ಯಪ್‌) ಡೌನ್‌ ಮಾಡಿಕೊಂಡರೆ ಸಾಕು, ಅದರಲ್ಲೇ ಡಿಎಲ್‌ ಮತ್ತು ಆರ್‌ಸಿ ಬುಕ್‌ನ ಪೂರ್ಣ ಮಾಹಿತಿ ಇರುತ್ತದೆ. ಪ್ರಯಾಣದ ಸಂದರ್ಭದಲ್ಲಿ ಯಾವುದೇ ಕಾನೂನು ಜಾರಿ ಇಲಾಖೆಯ ಅಧಿಕಾರಿಗಳು ಪ್ರಶ್ನಿಸಿದಾಗ, ಈ ಆ್ಯಪ್‌ ಮೂಲಕವೇ ಡಿಎಲ್‌ ಮತ್ತು ಆರ್‌ಸಿ ಬುಕ್‌ ತೋರಿಸಿದರೆ ಸಾಕು. ಇದು ಕೂಡಾ ಮೂಲಪ್ರತಿಯಷ್ಟೇ ಕಾನೂನು ಮಾನ್ಯತೆ ಹೊಂದಿದೆ ಎಂದು ಯೋಜನೆ ಅನಾವರಣಗೊಳಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು. ಈ ಯೋಜನೆ, ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್‌ ಹಾಕುವುದರ ಜೊತೆಗೆ ಮೋದಿ ಅವರ ಡಿಜಿಟಲ್‌ ಇಂಡಿಯಾ ಕನಸು ನನಸು ಮಾಡುವ ಹಾದಿಯಲ್ಲಿ ದೊಡ್ಡ ಹೆಜ್ಜೆ ಎಂದು ಗಡ್ಕರಿ ಬಣ್ಣಿಸಿದರು.

Trending videos

Back to Top