CONNECT WITH US  

ಇಲ್ಲಿ ವಾರ್ಡನ್‌, ಸ್ನೇಹಿತರು ಮತ್ತು ಈತ ರಿಯಲ್‌ ಹೀರೋಗಳು!

ದುಶ್ಚಟ ಎಂಬುದು ನಮ್ಮನ್ನು ಸದಾ ಆಕರ್ಷಿಸುತ್ತಲೇ ಇರುತ್ತದೆ. ಯಾವುದೋ ಸಂದರ್ಭದಲ್ಲಿ ಅದಕ್ಕೆ ಬಿದ್ದು ಬಿಡುತ್ತೇವೆ ಎಂದುಕೊಳ್ಳೋಣ. ಆ ಹೊತ್ತಿನಲ್ಲಿ ತಪ್ಪೆಸಗಿರಬಹುದು. ಆದರೆ ತಪ್ಪು ಎಂದು ಉಳಿದವರು ಹೇಳುವಾಗ ಅರ್ಥಮಾಡಿಕೊಂಡು ಹೊಸ ಹಾದಿ ತುಳಿಯುವವರೇ ನಿಜವಾದ ಹೀರೋಗಳು. ಇಂದಿನ ಯುವಜನರೂ ಇದನ್ನೇ ಮಾಡಬೇಕು. ಅದೇ ಜೀವನ ಪ್ರೀತಿ. ಬದುಕನ್ನು ಪ್ರೀತಿಸುವುದೆಂದರೂ ಅಕ್ಷರಶಃ ಅದೇ.

ಮಂಗಳೂರು: ದುಶ್ಚಟವೊಂದರ ದಾಸನಾಗಿ ಬದುಕು ಕಳೆದುಕೊಳ್ಳಲು ಹೊರಟವ ಇಂದು ವೈದ್ಯಕೀಯ ಶಿಕ್ಷಣದಲ್ಲಿ ಟಾಪರ್‌! ಇದು ಸತ್ಯಕಥೆ. ಇಲ್ಲಿ ಹಾಸ್ಟೆಲ್‌ ವಾರ್ಡನ್‌, ಆತನ ಗೆಳೆಯರು ಹೀರೋಗಳು. ಮುರುಟಿಹೋಗುತ್ತಿದ್ದ ಸಹಜೀವಿಯೊಬ್ಬನನ್ನು ಹೊಸ ಬದುಕಿನತ್ತ ಕೊಂಡೊಯ್ದರು. ಅದರೊಂದಿಗೆ ತನ್ನ ತಪ್ಪು ತಿದ್ದಿಕೊಂಡು ಬದುಕನ್ನು ಪ್ರೀತಿಸುವುದನ್ನು ಕಲಿತ ಈತನೂ ನಿಜವಾದ ಹೀರೋನೇ.

ಇದು ವಿದ್ಯಾರ್ಥಿಗಳಲ್ಲಿ ಸಾರ್ವತ್ರಿಕವಾಗಿ ಕಂಡುಬರುವಂಥ ಪ್ರಕರಣ. ಇದೂ ಅದೇ. ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದವ ಸೇರಿದ್ದು ವೈದ್ಯಕೀಯ ಶಿಕ್ಷಣಕ್ಕೆ. ಮೊದಲ ವರ್ಷದಲ್ಲಿ ಎಲ್ಲವೂ ಚೆನ್ನಾಗಿತ್ತು. ಎರಡನೇ ವರ್ಷದಲ್ಲಿ ಮನೆಗೆ ಹೋಗುವುದು ಕಡಿಮೆಯಾಯಿತು; ಹೋದರೂ ತನ್ನಷ್ಟಕ್ಕಿರುತ್ತಿದ್ದ. ಕೊನೆಗೆ ಫೋನ್‌ ಸಂಪರ್ಕವೂ ಕಡಿಮೆಯಾಯಿತು. ಸದಾಕಾಲ ತನ್ನ ಕೊಠಡಿಯೊಳಗೇ ಇರುತ್ತಿದ್ದ. ಹೀಗಿರುವಾಗ ಒಂದು ದಿನ ಏಕಾಏಕಿ ತಂದೆಗೆ ಹಾಸ್ಟೆಲ್‌ ವಾರ್ಡನ್‌ ಕರೆ ಮಾಡಿದಾಗ ಗಾಬರಿಗೊಂಡರು. ಸ್ನೇಹಿತರೆಲ್ಲ ಸೇರಿ ಹುಡುಗನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕಾರಣ ದುಶ್ಚಟಕ್ಕೆ ಬಿದ್ದು ತೀರಾ ಸಮಸ್ಯೆಯಲ್ಲಿ ಸಿಲುಕಿದ್ದ. ಆತ ಮಾದಕ ವಸ್ತುವಿನ ಚಟಕ್ಕೆ ಸಿಲುಕಿದ್ದ.

ಕೌನ್ಸೆಲಿಂಗ್‌ ನಡೆಸಿ ದುಷ್ಪರಿಣಾಮಗಳನ್ನು ತಿಳಿಸಲಾಯಿತು. ಬದುಕಿನ ಬಗ್ಗೆ ತಿಳಿ ಹೇಳಿ ವಿವಿಧ ಹಂತದ ಚಿಕಿತ್ಸೆಗಳನ್ನು ನೀಡಲಾಯಿತು. ಹುಡುಗನೂ ನಿಜವನ್ನು ಅರಿತುಕೊಂಡ. ಕ್ರಮೇಣ ಬದಲಾದ. ಪ್ರಸ್ತುತ ವೈದ್ಯಕೀಯ ಶಿಕ್ಷಣದ ಅಂತಿಮ ಹಂತದಲ್ಲಿದ್ದಾನೆ. ವಿಶೇಷವೆಂದರೆ ಈಗ ತರಗತಿಯ ಟಾಪರ್‌ಗಳಲ್ಲಿ ಈತನೂ ಒಬ್ಬ.

ಅತಿ ಒತ್ತಡ ಬೇಡ
ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕ್ಲಾಸ್‌ರೂಂ ಶಿಕ್ಷಣವಲ್ಲದೆ, ಟ್ಯೂಶನ್‌ ಹೆಸರಿನಲ್ಲೂ ನಿರಂತರ ಒತ್ತಡ ಹಾಕಲಾಗುತ್ತಿದೆ. ಮನುಷ್ಯನ ಮೆದುಳು ನಿರಂತರ 45 ನಿಮಿಷ ಕಾಲ ಚಟುವಟಿಕೆಯಿಂದಿರಬಲ್ಲದು, ಬಳಿಕ ಅದಕ್ಕೂ ಸ್ವಲ್ಪ ವಿಶ್ರಾಂತಿ ಬೇಕಾಗುತ್ತದೆ. ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ವೇಳಾಪಟ್ಟಿ ಮಕ್ಕಳಸ್ನೇಹಿಯಾಗಿರಬೇಕು. ದಂಡನೆಯಂತಿರಬಾರದು. ಇಲ್ಲಿ ಪೋಷಕರ ತಪ್ಪು ಸಾಕಷ್ಟಿದೆ. ಶೇ. 60 ಅಂಕ ಪಡೆದ ಮಗುವನ್ನು ಪಕ್ಕದ ಮನೆಯ ಶೇ.90 ಅಂಕ ಪಡೆದವನೊಂದಿಗೆ ಹೋಲಿಸಿ ಹೀಯಾಳಿಸಬಾರದು. ಇದು ಖನ್ನತೆ (ಡಿಪ್ರಶನ್‌)ಗೆ ಕಾರಣವಾಗಿ ಕೊನೆಗೆ ಶೇ. 30 ಅಂಕ ಗಳಿಸಲಷ್ಟೇ ಶಕ್ತನಾಗಬಹುದು. ಬೇರೆ ಯೋಚನೆಗೂ ಕಾರಣವಾಗಬಹುದು.

ವಾತಾವರಣ ಬದಲಾವಣೆ ಕಾರಣ
ಹೈಸ್ಕೂಲ್‌, ಪಿಯುಸಿ ಶಿಕ್ಷಣವನ್ನು ಒಂದೆಡೆ ಪಡೆದು, ಉನ್ನತ ಶಿಕ್ಷಣಕ್ಕಾಗಿ ಬೇರೆಡೆಗೆ ಹೋದಾಗ ಬಹುಮುಖ್ಯವಾಗಿ ಕಾಡುವುದು ಹೊಂದಾಣಿಕೆಯ ಸಮಸ್ಯೆ. ಜತೆಗೆ ಶೈಕ್ಷಣಿಕ ಒತ್ತಡ. ಇವುಗಳಿಂದ ಹೊರಬರಲು ಸ್ನೇಹಿತರ ಬಳಗವನ್ನು ಕಟ್ಟಿಕೊಳ್ಳುತ್ತಾರೆ. ಹತ್ತು ಮಾವಿನ ಹಣ್ಣುಗಳ ಪೈಕಿ ಒಂದು ಕೊಳೆತರೂ ಅದು ಉಳಿದವುಗಳು ಕೆಡಲು ಕಾರಣವಾಗುತ್ತದೆ. ಇಲ್ಲಾಗಿದ್ದೂ ಅದೇ. ಒತ್ತಡ ಕಳೆಯಲು ಸ್ನೇಹಿತರೊಂದಿಗೆ ಸೇರಿ ದುಶ್ಚಟಕ್ಕೆ ಬಿದ್ದ ಈತ.

ಪಾಸಿಟಿವ್‌ ಕಿರುಕಥೆ
ಒಂದು ದಿನ ರಾಜ ಬಹುದೊಡ್ಡ  ಬಂಡೆಯನ್ನು ದಾರಿಯ ಮಧ್ಯದಲ್ಲಿರಿಸಿ ಯಾರಾದರೂ ಅದನ್ನು ಬದಿಗೆ ಸರಿಸುತ್ತಾರೆಯೇ ಎಂದು ಅಡಗಿ ಕುಳಿತು ಕಾಯತೊಡಗಿದ. ಹಲವು ಶ್ರೀಮಂತ ವ್ಯಾಪಾರಿಗಳು ಹಾದು ಹೋದರೂ ಕಲ್ಲನ್ನು ಸರಿಸುವ ಮನಸ್ಸು ಮಾಡಲಿಲ್ಲ. ಇನ್ನು ಕೆಲವರು ದಾರಿಯನ್ನು ಸರಿ ಮಾಡಲಿಲ್ಲವೆಂದು ರಾಜನೀಗೆ ಬೈದುಕೊಂಡು ಹೋದರು. 

ಒಬ್ಬ ರೈತ ನಡೆದು ಬಂದವನೇ ಬಂಡೆಯನ್ನು ನೋಡಿ ತನ್ನ ತಲೆ ಮೇಲಿದ್ದ ತರಕಾರಿ ಬುಟ್ಟಿ ಕೆಳಗಿಳಿಸಿದ. 
ಬಳಿಕ ಕಲ್ಲನ್ನು ಸರಿಸಲು ಪ್ರಯತ್ನಿಸಿದ. ಹಲವು ಪ್ರಯತ್ನಗಳ ತರುವಾಯ ಕಲ್ಲನ್ನು ಬದಿಗೆ ತಳ್ಳುವಲ್ಲಿ ಯಶಸ್ವಿಯಾದ ರೈತ,  ಅದರ ಕೆಳಗಿದ್ದ ಕೈಚೀಲವನ್ನು ಗುರುತಿಸಿದ. ಅದರಲ್ಲಿ ಚಿನ್ನದ ನಾಣ್ಯಗಳಿದ್ದವು. "ಯಾವ ವ್ಯಕ್ತಿ ಈ ಬಂಡೆಯನ್ನು ಬದಿಗೆ ಸರಿಸುತ್ತಾನೋ ಆತನಿಗೆ ಈ ಕೈ ಚೀಲ' ಎಂದು ರಾಜ ಬರೆದ ಪತ್ರವೊಂದಿತ್ತು.
ಪ್ರತಿಯೊಬ್ಬರ ಜೀವನದಲ್ಲಿ ಅಡೆತಡೆಗಳು ಸರ್ವೇ ಸಾಮಾನ್ಯ. ಅದನ್ನು ಹಿಮ್ಮೆಟ್ಟಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಪ್ರತಿ ಅವಕಾಶವನ್ನೂ ಬಳಸಿಕೊಳ್ಳುವುದನ್ನು ಕಲಿಯಬೇಕು.

ಮನೆಯೊಳಗೆ ಪ್ರೀತಿ ಇರಲಿ
ಮಕ್ಕಳ ಬಗ್ಗೆ ಪೋಷಕರು ಸದಾ ನಿಗಾ ಇಡಬೇಕು. ಆದರೆ ಅದು ಕಟ್ಟುನಿಟ್ಟಿನದ್ದಾಗಬಾರದು. ಮನೆಯೊಳಗೆ ಪ್ರೀತಿಯ ವಾತಾವರಣವಿದ್ದರೆ, ಮಕ್ಕಳಲ್ಲಿ ಸಮಸ್ಯೆಗಳು ತೋರುವುದಿಲ್ಲ. ಮಕ್ಕಳಿಗಾಗಿ ಸಮಯ ಮೀಸಲಿಡುವುದರೊಂದಿಗೆ ಅವರ ಭಾವನೆಗಳನ್ನು ಕೇಳುವ ತಾಳ್ಮೆ ಇರಬೇಕು. 
ಡಾ| ರವೀಶ್‌ ತುಂಗಾ ಮನಃಶಾಸ್ತ್ರಜ್ಞರು

ನಿಮ್ಮ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಖನ್ನತೆ, ಆತಂಕ, ಉದ್ವಿಗ್ನತೆಯ ಲಕ್ಷಣ  ಕಂಡುಬಂದರೆ ಈ ನಂಬರ್‌ಗೆ ವಾಟ್ಸ್‌ ಆ್ಯಪ್‌ ಮಾಡಿ ಸಮಸ್ಯೆ ಹೇಳಿಕೊಳ್ಳಿ. ಪರಿಣತರೊಂದಿಗೆ ಚರ್ಚಿಸಿ ಪರಿಹಾರಕ್ಕೆ  ಪ್ರಯತ್ನಿಸುತ್ತೇವೆ.
9964169554

ಧನ್ಯಾ ಬಾಳೆಕಜೆ

Trending videos

Back to Top