CONNECT WITH US  

ಅನುಭವಗಳನ್ನು ಬೋಧಿಸುವ ಕಾಡು...

ಪ್ರತಿಯೊಬ್ಬರ ಒಳಗೂ ಕಳೆದುಕೊಳ್ಳುವಷ್ಟು ಶ್ರೀಮಂತ, ಬೇಡುವಷ್ಟು ಬಡವನಿರಬೇಕು!

ಮೊನ್ನೆ ಒಂದು ಪುಸ್ತಕದ ಅಂಗಡಿಗೆ ಹೋಗಿದ್ದೆ. ಒಳ್ಳೆಯ ಪುಸ್ತಕವನ್ನು ಹುಡುಕುವುದೇ ತುಂಬಾ ಸ್ವಾರಸ್ಯಕರವಾದ ಅನುಭವ. ಅಲ್ಲಿ ವಿಧವಿಧವಾದ ಟೈಟಲ್‌ಗ‌ಳಿರುವ ಪುಸ್ತಕಗಳನ್ನು ಜೋಡಿಸಿಡಲಾಗಿತ್ತು. "ಪರೀಕ್ಷೆಯಲ್ಲಿ ಗೆಲ್ಲುವುದು ಹೇಗೆ?' ಅನ್ನೋ ನಮ್ಮ ಹಣೆಬರಹ ತಿದ್ದುವ ದೊಡ್ಡ ಪುಸ್ತಕವೊಂದಿತ್ತು. ಅದನ್ನು ಓದದೇ ಪಠ್ಯವನ್ನು ಸರಿಯಾಗಿ ಓದಿಕೊಂಡೇ ಪಾಸಾಗಬಹುದು. "ಈಜುವುದು ಹೇಗೆ?'- ನೀರಿಗೆ ಬಿದ್ದಾಗಲೇ ಕಲಿಯುವ ಆ ವಿದ್ಯೆಯನ್ನು ಪುಸ್ತಕವಾಗಿ ಬರೆದಿಟ್ಟಿದ್ದ ಒಬ್ಬ ಭೂಪ. 

ಅರೆ, ಕಸದಂತೆ ತೋಚಿದ್ದನ್ನೆಲ್ಲಾ ಬರೆಯೋಕೆ ಶುರುಮಾಡಿಬಿಟ್ಟಿದ್ದಾರಲ್ಲಾ ಅಂತ ಅಂದುಕೊಳ್ಳುತ್ತಿರುವಾಗಲೇ "ಕಸದಿಂದ ರಸ, ಕಸವನ್ನು ಉಪಯೋಗಿಸುವುದು ಹೇಗೆ?' ಅನ್ನೋ ಪುಸ್ತಕ ಕಣ್ಣಿಗೆ ಬೀಳ್ಳೋದೇ?

ಹೊಸದಾಗಿ ಬಂದ ಪುಸ್ತಕಗಳು ಯಾವುದಾದರು ಇದ್ಯಾ ಅಂತ ಅಂಗಡಿಯವನನ್ನು ಕೇಳಿದೆ. ಆತ ಅಲ್ಲೊಂದು ಕಪಾಟಿನ ಕಡೆ ಬೆರಳು ತೋರಿಸಿದ.  

"ಜೀವನದಲ್ಲಿ ನಂ.1 ಆಗುವುದು ಹೇಗೆ?' "ನಿಮ್ಮ ಆತ್ಮಸ್ಥೈರ್ಯಕ್ಕೆ ಟಾನಿಕ್‌', "ಗೆಲುವು ನಿಶ್ಚಯ' - ಹೀಗೆ ಹಲವು ಟೈಟಲ್‌ಗ‌ಳು. ಮನುಷ್ಯನಾಗಿ ಹುಟ್ಟಿದ ಮೇಲೆ ಗೆದ್ದೇ ತೀರಬೇಕೆಂದು ಬೋಧಿಸುವುದನ್ನು ಟೈಟಲ್‌ಗ‌ಳಿಂದಲೇ ನೋಡಿ ತಿಳಿದುಕೊಳ್ಳಬಹುದು. ಇನ್ನೊಂದು ಕಪಾಟಿನಲ್ಲಿ ಅಧ್ಯಾತ್ಮದ ಪುಸ್ತಕಗಳು. ಎಲ್ಲವೂ ಬೆಸ್ಟ್‌ ಸೆಲ್ಲರ್ಶೇ. 

 "ಟೆನ್ಷನ್‌ ಕಮ್ಮಿ ಮಾಡುವ ಯೋಗ', "ಮನಸ್ಸಿನ ಬಿಡುಗಡೆ', "ಹೊಸ್ತಿಲಲ್ಲಿ ನಿಂತ ಯಶಸ್ಸು' ಹೀಗೆ ಆಧ್ಯಾತ್ಮಿಕವಾಗಿಯೂ ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತೇವೆ ಎಂದು ಸಾರುವ ಪುಸ್ತಕಗಳು ಸಾಲುಸಾಲಾಗಿ ಕುಂತಿದ್ದವು. ಸಾಲದಕ್ಕೆ, ಅಧ್ಯಾತ್ಮವನ್ನು ಬೋಧಿಸುವವರ ನಾನಾ ಭಂಗಿಗಳಲ್ಲಿರುವ ಫೋಟೋಗಳು ಬೇರೆ. ಇವರನ್ನೆಲ್ಲಾ ನೋಡುತ್ತಿದ್ದಂತೆ ರೇಸ್‌ನಲ್ಲಿ ಗೆದ್ದೇ ತೀರಬೇಕೆಂದು ಕುದುರೆಗೆ ಹೆಂಡ ಕುಡಿಸುವವರು ನೆನಪಾದರು. 

ವಿಭಿನ್ನ ಕ್ಷೇತ್ರಗಳ ಸಾಧಕರ ಪುಸ್ತಕಗಳೂ ಅಲ್ಲಿದ್ದವು. ನೂರಾರು ಜನರಲ್ಲಿ ಗೆದ್ದ ಒಬ್ಬನನ್ನು ಯಾವ ಪ್ರಶ್ನೆಯನ್ನೂ ಕೇಳದೆ ಕೊಂಡಾಡುವ ಬರಹಗಳು ಅವು. ಹೀಗೆ ಒಬ್ಬನನ್ನು ಉದಾಹರಣೆಯಾಗಿ ತೋರಿಸಿ ಮಿಕ್ಕ ತೊಂಬತ್ತೂಂಬತ್ತು ಜನ ಗೆಲ್ಲಬಹುದೆಂದು ಪ್ರಚಾರ ಮಾಡುವುದಕ್ಕಿಂತ ಅಪ್ಪಟ ಮೋಸ ಇನ್ನೊಂದಿರಲು ಸಾಧ್ಯವೇ? ತೊಂಬತ್ತೂಂಬತ್ತು ಜನ ಸೋತರಷ್ಟೇ ಒಬ್ಬನು ಗೆಲ್ಲಬಹುದೆಂಬುದನ್ನು ತಮ್ಮ ಅನುಕೂಲಕ್ಕಾಗಿ ಸಲೀಸಾಗಿ ಮರೆಸಿಬಿಡುತ್ತಾರೆ. 

ಈ ಯಶಸ್ಸಿನ ಸಾಂಕ್ರಾಮಿಕ ರೋಗ ನಮ್ಮ ಶಾಲೆಗಳಿಂದಲೇ ಶುರುವಾಗಿಬಿಡುತ್ತದೆ.  ಆ ಕಾರಣದಿಂದಲೇ ಒಂದು ವಿಷಯದಲ್ಲಿ ಫೇಲಾದರೂ ಸಾಕು, ಆ ಸೋಲನ್ನು ಹೊರಲಾರದೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗುತ್ತಿರುವುದು. 

ಪರಿಸ್ಥಿತಿ ಹೀಗೆ ಮುಂದುವರಿದರೆ "ಸ್ಟ್ರೆಸ್‌ ಮ್ಯಾನೇಜ್‌ಮೆಂಟ್‌' ಅನ್ನೋ ಎಂಬಿಎ ಡಿಗ್ರಿ ಶುರುವಾಗಲೂಬಹುದು. ಅದರಲ್ಲೂ ಹೆಚ್ಚಿಗೆ ಅಂಕ ಪಡೆದು ಗೆಲ್ಲಲೇಬೇಕೆಂಬ "ಸ್ಟ್ರೆಸ್‌' ಹೆಚ್ಚಾಗಿ ಆತಂಕದಿಂದ ಓದಲೇಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯಪಡಬೇಕಿಲ್ಲ.

ಎಷ್ಟೇ ಚತುರ ಓಟಗಾರನಾದರು, ಬೀಳುವುದನ್ನು ತಪ್ಪಿಸಲಾಗದು. ಸೋಲೋ, ಗೆಲುವೋ. ನಮ್ಮ ಜೀವನದಲ್ಲಿ ನಿರಂತರ ಹುಡುಕಾಟ ಇದ್ದಾಗಲೇ ಬದುಕು ಯಾವಾಗಲೂ ಹೊಸತನದಿಂದ ಕೂಡಿರುತ್ತದೆ. ಈ ಕಾರಣದಿಂದಲೇ ನಿಂತ ಕೊಳಕ್ಕಿಂತ ಹರಿಯುವ ನದಿಗೆ ಹೆಚ್ಚು ಕವಿತೆಗಳೂ, ಕತೆಗಳೂ ಇವೆ. ಗೆಲ್ಲುತ್ತಲೇ ಇರುವುದಕ್ಕಿಂತ ಬೋರ್‌ ಹೊಡೆಯುವ ವಿಷಯ ಇನ್ನೊಂದಿಲ್ಲ. ಇನ್ನೊಬ್ಬನ್ನನ್ನು ಗೆಲ್ಲುವ ಪ್ರಯತ್ನಕ್ಕಿಂತ, ಸೋಲಿನಿಂದ ಎದ್ದುಬರುವ ಯತ್ನಕ್ಕೆ ಹೆಚ್ಚು ಅರ್ಥವಿದೆ.   ನಾವೆಲ್ಲಾ ಸೋಲಿಗೂ, ಗೆಲುವಿಗೂ ನಡುವೆ ಸಿಲುಕಿ ತವಕಿಸುತ್ತಿದ್ದೇವೆ. 

**
"ಸಾರ್‌, ನೀವು ಯಾವುದಕ್ಕೆ ಬಹಳ ಹೆದರುತ್ತೀರಿ?' ಅಂತ ನಿರೂಪಕಿಯೊಬ್ಬಳು ರೇಡಿಯೋ ಕಾರ್ಯಕ್ರಮದಲ್ಲಿ ಕೇಳಿದಳು. 
"ಗೆಲುವಿಗೆ' ಅಂತ ಉತ್ತರಿಸಿದೆ. 
ಆಕೆ ಆಶ್ಚರ್ಯದಿಂದ ನೋಡಿದಳು.  
ಇದು ನಿಜ. ಸೋಲು ನನ್ನ ಸಹಜತೆಯನ್ನು ಇದುವರೆಗೂ ಕೆಡಿಸಿಲ್ಲ. ಆದರೆ ಗೆಲುವಿನ ಸಂಭ್ರಮ ಇದೆಯಲ್ಲ, ಅದು ನನ್ನೊಳಗಿನ ಸಹಜತೆಯನ್ನು ನನಗೆ ಅರಿವಿಲ್ಲದೆಯೇ ಕಳೆದುಕೊಳ್ಳುವಂತೆ ಮಾಡಿದ್ದೂ ಇದೆ. ಇದಕ್ಕೆ ಉದಾಹರಣೆಗಳನ್ನು ಹೊರಗೆಲ್ಲೋ ಹುಡುಕಬೇಕಿಲ್ಲ. ನಮ್ಮ ಬದುಕಿನಲ್ಲಿ ನಾವು ಗೆದ್ದಾಗ ಎಷ್ಟು ಅಸಹ್ಯವಾಗಿ ನಡೆದುಕೊಳ್ಳುತ್ತೇವೆಂದು ಸ್ವಲ್ಪ ಮನಸ್ಸಾಕ್ಷಿಯಿಂದ ನಮ್ಮೊಳಗೆ ನಾವು ಇಣುಕಿದರೆ ಸಾಕು. ಒಂದು ನಾಡನ್ನು ಗೆಲ್ಲಲು ದಂಡೆತ್ತಿಹೋಗಿ, ಗೆದ್ದ ಆ ಸೈನಿಕರ ಹದ್ದುಮೀರಿದ ನಡತೆಯನ್ನು, ಎಸಗಿದ ಪಾಪಗಳನ್ನು ಇತಿಹಾಸವನ್ನು ಓದಿದ ಎಲ್ಲರೂ ಬಲ್ಲರು. 

  **
ನನ್ನ ಗುರುಗಳಾದ ಕೆ. ಬಾಲಚಂದರ್‌ ನಿರ್ದೇಶನದಲ್ಲಿ "ಪೊಯ್‌' ಎನ್ನುವ  ಸಿನಿಮಾ ನಿರ್ಮಿಸಿದೆ. ಸಿನಿಮಾ ಸೋತಾಗ ಬಹಳ ಜನ ನನಗಾಗಿ ಪರಿತಪಿಸಿದರು.  ಅವರಲ್ಲಿ ಒಬ್ಬರು. "ಅಲ್ಲಾ ಪ್ರಕಾಶ್‌, ಹಲವು ಭಾಷೆಗಳಲ್ಲಿ ಖಳನಟನಾಗಿ ಗೆದ್ದು,  ಹೀಗೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸಿ ಏಕೆ ಸಿಕ್ಕಿ ಹಾಕಿಕ್ಕೋಳ್ತೀರಿ' ಎಂದು ಖಡಕ್ಕಾಗಿ ಕೇಳಿದರು. ನಾನು ಯಾವುದನ್ನು ಸೋಲು ಎಂದು ಭಾವಿಸುತ್ತೇನೋ ಅದನ್ನು ಅವನು ಗೆಲುವೆನ್ನುತ್ತಿದ್ದಾನೆ, ನಾನು ಯಾವುದನ್ನು ಗೆಲುವೆಂದು ನಂಬುತ್ತಿದ್ದೇನೋ ಅದನ್ನು ಅವನು ಸೋಲೆನ್ನುತ್ತಿದ್ದಾನೆ. ಇಂಥವರಿಗೆ ಏನು ಹೇಳ್ಳೋದು? 

"ಎಲ್ಲಾ ಚಿತ್ರಗಳಲ್ಲೂ ಖಳನಟನಾಗಿ ಬಹಳ ಚೆನ್ನಾಗಿ ಮರ್ಡರ್‌ ಮಾಡ್ತೀರಿ,  ಚೆನ್ನಾಗಿ ಬಲಾತ್ಕಾರನೂ ಮಾಡ್ತೀರಿ' ಅಂತ ಯಾರೂ ಬಂದು ನನ್ನ ಕೈ ಕುಲಕಿಲ್ಲ. ಆದರೆ ಒಳ್ಳೆಯ ಸದಭಿರುಚಿ ಚಿತ್ರಗಳನ್ನು ನಿರ್ಮಿಸಿದ್ದೀರಿ, ಸಮಾಜದ ಆರೋಗ್ಯದ ಬಗ್ಗೆ ಕಾಳಜಿಯಿಂದ ಇದ್ದೀರಿ ಅಂತ ಹುಡುಕಿ, ಬಂದು ಬೆನ್ನು ತಟ್ಟಿಹೋಗಿದ್ದಾರೆ. 

ಖಳನ ಪಾತ್ರಗಳಿಂದ ನಾನು ಸಾಕಷ್ಟು ಸಂಪಾದಿಸಬಹುದು. ಆದರೆ ನಾನು ನಿರ್ಮಿಸುವ, ನಿರ್ದೇಶಿಸುವ ಒಳ್ಳೇ ಚಿತ್ರಗಳಿಂದಲೇ ಆ ಹಣಕ್ಕೆ, ಹೂಡಿದ ಸಮಯಕ್ಕೆ ಅರ್ಥಸಿಗುವುದು. ಇದನ್ನು ನಾನು ಅವನಿಗೆ ವಿವರಿಸೋದಾದರು ಹೇಗೆ? 

"ಪೊಯ್‌' ಸಿನಿಮಾ ವ್ಯಾಪಾರದ ದೃಷ್ಟಿಯಲ್ಲಿ ನಿಜಕ್ಕೂ ದೊಡ್ಡ ಸೋಲೇ. ಆ ಸಿನಿಮಾದ ಜಾಹೀರಾತಿಗೆ ಹೂಡಿದ ಹಣವೂ ಹಿಂದಿರುಗಲಿಲ್ಲ. ಆದರೆ ಆ ಸೋಲಿನ ಹಿಂದೆ ಇದ್ದ ನನ್ನ ಗೆಲುವುಗಳ ಬಗ್ಗೆ ಯಾರಿಗೂ ಗೊತ್ತಾಗಲಿಲ್ಲ. 

ಹೀಗೇನೇ, ಗೆಲುವಿನ ಹಿಂದಿರುವ ಸೋಲುಗಳ ಬಗ್ಗೆಯೂ ಯಾರೂ ಯೋಚಿಸುವುದೂ ಇಲ್ಲ. "ಪೊಯ್‌' ಎಂಬ ಸಿನಿಮಾ ನನಗೆ ಅರ್ಥಮಾಡಿಸಿದ ಸತ್ಯಗಳ ಬಗ್ಗೆ ಈಗ ಮಾತನಾಡುವುದಕ್ಕೆ ಕಾರಣ, ಆ ಸೋಲು ನನ್ನನ್ನು ಅಸಹ್ಯಪಡಿಸಲಿಲ್ಲ ಎನ್ನುವ ಗರ್ವ. ಯಾವ ಗೆಲುವೂ ಹಂಡ್ರೆಡ್‌ ಪರ್ಸೆಂಟ್‌ ಗೆಲುವಲ್ಲ; ಹಾಗೇ ಯಾವ ಸೋಲೂ ಹಂಡ್ರೆಡ್‌ ಪರ್ಸೆಂಟ್‌ ಸೋಲಲ್ಲ. 

ಬದುಕಲ್ಲಿ ಯಾವ ಯಾವ ರೀತಿಯ ಸೋಲುಗಳನ್ನು ಹೇಗೇಗೆಲ್ಲಾ  ಎದುರಿಸುತ್ತೇವೆ ಅನ್ನೋದು ಮುಖ್ಯ.  
ನನ್ನ "ನಾನು ನನ್ನ ಕನಸು' ಅನ್ನೋ ಚಿತ್ರ ಒಂದು ವೇಳೆ ಸೋತಿದ್ದರೆ ಮುಂದಿನ ಸಿನಿಮಾ "ಒಗ್ಗರಣೆ' ಚಿತ್ರದ ಬಗ್ಗೆ ಇನ್ನೂ ಹೆಚ್ಚು ಗಮನ ಹರಿಸಿ, ಯೋಚಿಸುವುದನ್ನು  ಬಿಟ್ಟರೆ, ಬೇರೆ ದಾರಿ ಏನು? ನಾನು ನಂಬುವ ಪ್ರಯಾಣ ಮುಂದುವರಿಯಬೇಕಲ್ಲವೇ, ಅಷ್ಟೇ ತಾನೇ ?

ಪ್ರತಿ ಪ್ರಯತ್ನದಲ್ಲೂ ಪ್ರಾಮಾಣಿಕತೆಯಿಂದ, ಆತ್ಮವಿಶ್ವಾಸದಿಂದ ತೊಡಗಿಸಿಕೊಂಡರೆ ಸಾಕು. ಈ ಸೋಲು ಗೆಲುವುಗಳು, ಹಗಲು, ರಾತ್ರಿಗಳಂತೆ ಬದಲಾಗುತ್ತಾ, ಬದಲಾಗುತ್ತಲೇ ಬರುತ್ತವೆ. 

ಭೂಮಿಯ ಎಲ್ಲಾ ಜೀವರಾಶಿಗಳಿಗೆ ಶಕ್ತಿ ತುಂಬುವ ನದಿ ದಾಹ ತಣಿಸಲು ಆಗದ ಕಡಲನ್ನು ಹೋಗಿ ಸೇರಿಬಿಡುತ್ತದೆ. ಅಲ್ಲಿಗೆ ಅದರ ಪ್ರಯಾಣ ಮುಗಿಯೋದಿಲ್ವಲ್ಲಾ?  ನಂತರ ಆ ಉಪ್ಪುನೀರೇ ಆವಿಯಾಗಿ, ಮೇಘವಾಗಿ, ಮತ್ತೆ ಮಳೆಯಾಗಿ, ನದಿಯ ನೀರಾಗಿ ಹರಿಯುತ್ತದೆ. ನಿಸರ್ಗದ ಈ ಋತುಚಕ್ರದ ಯಾನ, ಸುಂದರ ಪ್ರಯಾಣ. ಅದನ್ನು ಗೆಲುವು ಸೋಲೆಂಬ ವ್ಯಾಪರೀ ಮನೋಭಾವದಿಂದ ನೋಡಲಾಗದು. 

ನೋಡಿ, ನಾನು ನಿರಂತರ ಸಾಲಗಾರ. ಆಗ ಐದುರೂಪಾಯಿ ಸಾಲ ಪಡೆಯಲು ಆರಂಭಿಸಿದವನು, ಈಗ ಕೋಟಿ, ಕೋಟಿ ಸಾಲ ಹೊರುವಷ್ಟು ಬಲಶಾಲಿ. ಈ ಬಲದಿಂದ ಹಣ ಒಡ್ಡುವ ತಡೆಗಳನ್ನು ದಾಟುತ್ತಾ, ಸದಭಿರುಚಿಯ ಸಿನಿಮಾಗಳನ್ನು ನಿರಂತರವಾಗಿ ತಯಾರಿಸುತ್ತಲೇ ಇದ್ದೇನೆ. ನನ್ನ ಈ ಪಯಣದಲ್ಲಿ ಎದುರುಗೊಳ್ಳುವ ಏಳುಬೀಳುಗಳು ಬದುಕೋದು ಹೇಗೆ ಅಂತ ಹೇಳಿಕೊಡುವ ಮೇಷ್ಟ್ರುಗಳೇ ಆಗಿಬಿಟ್ಟಿವೆ.  

ಹತ್ತಾರು ಫೈನಾನ್ಸರ್‌ಗಳಿಗೆ ಉತ್ತರ ಕೊಡಬೇಕಾದ ಪರಿಸ್ಥಿತಿ ಇದ್ದರೂ ನನ್ನನ್ನು ಪ್ರೀತಿಸುವ ಎಷ್ಟೋ ಜನರ ಸಾಲಗಳನ್ನು ತೀರಿಸಿದ್ದೇನೆ. ಆದ್ದರಿಂದಲೇ ನಾನು ಕಳೆದು ಕೊಳ್ಳುವಷ್ಟು ಶ್ರೀಮಂತ; ಬೇಡುವಷ್ಟು ಬಡವನಾಗಿರೋದು. 

ರಾಮ ದಶರಥನ ಮಗನಾಗಿ ಅರಮನೆಯಲ್ಲಿರುವವರೆಗೂ ಅವನೊಬ್ಬ ಕೂಸೇ. ಯಾವಾಗ ಕಾಡಿಗೆ ಕಾಲಿಟ್ಟನೋ ಆ ಪಯಣ ರಾಮನನ್ನು ಅವತಾರ ಪುರುಷನನ್ನಾಗಿ ಮಾಡಿತು. ಅರಮನೆಯ ಹೊಸ್ತಿಲು ದಾಟಿದ ನಂತರ ತಾನೇ ನಮಗೆ ಬುದ್ಧ ದೊರೆತದ್ದು?  

ಗೆಲುವು ಅನ್ನೋದು ಅರಮನೆ ಇದ್ದಂತೆ, ಅಲ್ಲಿ ಭದ್ರವಾಗಿ ಇರಬಹುದು. ಆದರೆ ಏನನ್ನೂ ಕಲಿಯಲಾಗುವುದಿಲ್ಲ. ದಟ್ಟವಾಗಿ ಹರಡಿರುವ ಕಾಡುಗಳಲ್ಲಿ ಮಾತ್ರ ಅನುಭವಗಳು ಹಸಿರಾಗಿ ಅರಳಿರುತ್ತವೆ. 

ನಮ್ಮ ಗೆಲುವುಗಳೇ ನಮ್ಮ ಗೋರಿಗಳಾಗದಂತೆ ನೋಡಿಕೊಳ್ಳೋದು ಬಹಳ ಮುಖ್ಯ. 
ಏನಂತೀರಿ?

ಪ್ರಕಾಶ್‌ ರೈ

Trending videos

Back to Top