CONNECT WITH US  

ಬಂಟ್ವಾಳ: ಕೋಟಿಯಲ್ಲಿ ಅನುದಾನ; ಲಕ್ಷದಲ್ಲಿ ಅನುಷ್ಠಾನ 

ತೋಟಗಾರಿಕೆ ಇಲಾಖೆ: ಸ. ಕೃಷಿ ನಿರ್ದೇಶಕರೇ ಪ್ರಭಾರ | 24ರಲ್ಲಿ ಇರುವುದು 3 ಮಂದಿ ಮಾತ್ರ 

ಬಂಟ್ವಾಳ: ಜಿಲ್ಲೆಯ ತೋಟಗಾರಿಕೆ ಇಲಾಖೆಯಲ್ಲಿ ಬಂಟ್ವಾಳವು ತೋಟಗಾರಿಕೆ ರೈತ ಸ್ನೇಹಿ ಎಂದು ಪ್ರಸಿದ್ಧಿ ಪಡೆದಿತ್ತು. ಅಲ್ಲಿನ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಮೂರು ವರ್ಷಗಳ ಹಿಂದೆ ವರ್ಗಾವಣೆ ಮಾಡಿದ ಬಳಿಕ ಇಲಾಖೆಯು ಅಸ್ತಿತ್ವವನ್ನೇ ಕಳೆದುಕೊಂಡಿದೆ. ಕೋಟಿಯಲ್ಲಿ ಅನುದಾನ ಬಂದಿರುವುದು ಲಕ್ಷದಲ್ಲಿ ಅನುಷ್ಠಾನವಾಗಿದೆ. 4 ವರ್ಷಗಳಿಂದ ಇಲ್ಲಿವರೆಗೆ ಶಾಶ್ವತ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ನಿಯೋಜಿಸಲು ಸಾಧ್ಯವಾಗಿಲ್ಲ. ಇಲಾಖೆ ನಿಷ್ಕ್ರಿಯ ಸ್ಥಿತಿಗೆ ಬಂದಿದ್ದು, ರೈತಾಪಿ ವರ್ಗ ಇಲ್ಲಿಗೆ ಸಂಪರ್ಕಿಸುವುದನ್ನೇ ನಿಲ್ಲಿಸಿದ್ದಾರೆ.

ಕಳೆದ 3 ವರ್ಷಗಳಿಂದ ಇಲ್ಲಿ ಹಂಗಾಮಿ ತೋಟಗಾರಿಕ ನಿರ್ದೇಶಕರಿದ್ದಾರೆ. ಅವರಿಗೆ 2 ತಾ|ಗಳ ಹೊಣೆ ನೀಡಿ ಅವರು ಎಲ್ಲಿಯೂ ಕೆಲಸ ಮಾಡಲಾಗದ ಸನ್ನಿವೇಶ ಸೃಷ್ಟಿಯಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ಒಟ್ಟು 24 ಸಿಬಂದಿ ಇರಬೇಕಿತ್ತು. ಕೇವಲ ಮೂರು ಮಂದಿ ಇದ್ದಾರೆ. ಅಂದರೆ 21 ಮಂದಿ ಸಿಬಂದಿ ಕೊರತೆ ಬಾಧಿಸುತ್ತಿದೆ.

ಇಲ್ಲಗಳ ಸರಮಾಲೆ
ಇಲ್ಲಿನ ಸಹಾಯಕ ತೋಟಗಾರಿಕೆ ನಿರ್ದೇಶಕರ ಸ್ಥಾನ ಕಳೆದ 3 ವರ್ಷ ಗಳಿಂದ ಪ್ರಭಾರವಾಗಿದೆ. 6 ಮಂದಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಲ್ಲಿ ಯಾರೊಬ್ಬರೂ ಇಲ್ಲ. ತೋಟಗಾರಿಕೆ ಸಹಾಯಕ ಹುದ್ದೆಯಲ್ಲಿ 5 ಮಂದಿ ಬದಲು ಇಬ್ಬರಿದ್ದಾರೆ. ಗಾರ್ಡನರ್‌ 12 ಮಂದಿಯಲ್ಲಿ ಇಬ್ಬರಿದ್ದಾರೆ. ಉಳಿದ ಎಲ್ಲ ಹುದ್ದೆಗಳು ಶೂನ್ಯ ವಾಗಿವೆ. ದ್ವಿತೀಯ ದರ್ಜೆ ನೌಕರರ, ಡಿ ಗ್ರೂಪ್‌ ನೌಕರರ ಕೆಲಸವನ್ನು ಸ. ತೋಟ ಗಾರಿಕೆ ನಿರ್ದೇಶಕರೇ ನಿರ್ವಹಿಸ ಬೇಕು.

ರೈತರಿಗೆ ಸೌಲಭ್ಯಗಳು 
ಹನಿ ನೀರಾವರಿ ಶೇ. 90ರ ಸಹಾಯ ಧನ, ಸಸ್ಯ ಸಾಮಗ್ರಿ ಸಹಾಯಧನ 2 ಸಾವಿರ ರೂ., ತಾಂತ್ರಿಕ ತಜ್ಞರ ನೆರವು, ತೆಂಗು ತೋಟದ ನಿರ್ವಹಣೆ, ಅಡಿಕೆ ಮೈಲುತುತ್ತು ಶೇ. 50 ಸಹಾಯ ಧನ, ಶಾಲಾ ಕೈತೋಟ ನಿರ್ಮಾಣಕ್ಕೆ ಪ್ರೋತ್ಸಾಹ ಧನ, ಕೀಟ ರೋಗಗಳ ನಿಯಂತ್ರಣ ಯೋಜನೆ ಇದರಲ್ಲಿ ಪ. ಜಾತಿ, ಪಂಗಡಕ್ಕೆ ಶೇ. 90 ಸಹಾಯಧನ, ಮಧುವನ ಜೇನು ಸಾಕಣೆಗೆ ಶೇ. 40 ಸಹಾಯಧನ, ಕೇಂದ್ರ ನೆರವಿನ ಹತ್ತು ಹಲವು ಸಹಾಯಧನ ಯೋಜನೆಗಳು, ಬಾಳೆ, ಅನಾನಸು, ಗೇರು, ಕೊಕ್ಕೊ, ಹೂವಿನ ಪ್ರದೇಶ ವಿಸ್ತರಣೆ, ಕಾಳುಮೆಣಸು, ಗೇರು ಪುನಶ್ಚೇತನ ಇತ್ಯಾದಿ ಹಲವು ರೈತ ಪರ ಯೋಜನೆಗಳು ತೋಟಗಾರಿಕೆ ಇಲಾಖೆಯಲ್ಲಿವೆ. ಸವಲತ್ತಿನ ಬಗ್ಗೆ ಪ್ರಶ್ನಿಸಿದರೆ ಅದರ ಬಗ್ಗೆ ಸಮಗ್ರ ವಿವರ ನೀಡುವುದಕ್ಕೆ ಅಧಿಕಾರಿಯೇ ಪರದಾಡುವಂತಿದೆ. ರೈತ ಅರ್ಜಿ ಸಲ್ಲಿಸಿದರೆ ಸಹಾಯಧನ ಸಕಾಲದಲ್ಲಿ ಬ್ಯಾಂಕಿಗೆ ಬರುವಂತೆ ಮಾಡಲು ಸಿಬಂದಿ ಕೊರತೆ ಯಿಂದ ಸಾಧ್ಯವಾಗದೆ ವರ್ಷಾನುಗಟ್ಟಲೆ ಕಡತಗಳು ಉಳಿದು ಹೋಗಿವೆ.

ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಪ್ರಭಾರ ಸಹಾಯಕ ನಿರ್ದೇಶಕರು ಜಿಲ್ಲಾ ಕೇಂದ್ರಕ್ಕೆ ಎಲ್ಲವನ್ನೂ ಬರೆದು ಕೊಂಡಿದ್ದಾಗಿ ಹೇಳುತ್ತಾರೆ. ಕಳೆದ ವರ್ಷ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ತರಕಾರಿ ಬೀಜ ವಿತರಿಸುವ ಯೋಜನೆ ಇತ್ತಾದರೂ ಪ್ರಸ್ತುತ ನಿಲುಗಡೆ ಆಗಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಇಲಾಖೆಗಳು ರೈತರನ್ನು ಪ್ರೋತ್ಸಾಹಿಸುವ ಯೋಜನೆಗಳನ್ನು ನಿಲ್ಲಿಸುತ್ತಾ ಬಂದಿದೆ. ಅನುದಾನ ಹೆಚ್ಚಿದೆ- ಅನುಷ್ಠಾನ ಕಡಿಮೆ ಆಗಿದೆ ಎಂಬ ಮಾತನ್ನು ಕೃಷಿಕರು ಹೇಳುತ್ತಾರೆ.

ತುಂಬೆ ನೀರಾ ಘಟಕ
ತೋಟಗಾರಿಕೆ ಇಲಾಖೆಯ ಸುಪರ್ದಿಯಲ್ಲಿ ತೆಂಗು ಕೃಷಿಕರ ಅಭಿವೃದ್ಧಿಗಾಗಿ, ಸಹಸ್ರಾರು ಸಂಖ್ಯೆಯ ಉದ್ಯೋಗ ನಿರ್ಮಾಣ ಮಾಡಬಹುದಾಗಿದ್ದ ತುಂಬೆ ನೀರಾ ಘಟಕ ಸಂಪೂರ್ಣ ನಿಲುಗಡೆ ಆಗಿದೆ. 3 ಕೋಟಿ ರೂ. ಯೋಜನೆ ತುಂಬೆಯಿಂದ ಕೇರಳಕ್ಕೆ ಸ್ಥಳಾಂತರ ಆಗುವ ಮೂಲಕ ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಬರಬಹುದಾಗ ಕೋಟ್ಯಂತರ ರೂ. ಸಹಾಯಧನ, ಯೋಜನಾ ವೆಚ್ಚಗಳ ಅನುದಾನ ರೈತರ ಪಾಲಿಗೆ ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ತಪ್ಪಿ ಹೋಗಿದೆ.

ಸಕಾಲಿಕವಾಗಿ ಸಹಾಯಧನ ಖಚಿತವಿಲ್ಲ
ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ಸಹಾಯಧನದಲ್ಲಿ ಕರಿಮೆಣಸು, ತೆಂಗು, ಗೇರು, ಅಡಿಕೆ, ಕೊಕ್ಕೊ, ಕೆಂದಾವಳಿ ತೆಂಗು ಗಿಡಗಳು ಲಭ್ಯವಿವೆ. ರೈತರು ಕರಿಮೆಣಸಿಗೆ 9 ರೂ., ತೆಂಗಿಗೆ 150 ರೂ., ಗೇರಿಗೆ 25 ರೂ., ಅಡಿಕೆಗೆ 20 ರೂ., ಕೊಕ್ಕೊ 10 ರೂ., ಕೆಂದಾಳಿಗೆ 75 ರೂ.ನಂತೆ ಖರೀದಿಸಬೇಕು. ಅದರ ಬಿಲ್ಲನ್ನು ಅರ್ಜಿ ಫಾರಂ ಭರ್ತಿ ಮಾಡಿ ಇಲಾಖೆಗೆ ನೀಡಿದ ಬಳಿಕ ಇಲಾಖೆಯು ಅರ್ಜಿಯನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಿ ಅಲ್ಲಿಂದ ಸಹಾಯಧನವು ರೈತನ ಬ್ಯಾಂಕಿನ ಖಾತೆಗೆ ಬರುವ ವ್ಯವಸ್ಥೆ ಇರುವುದು. ಇಲ್ಲಿ ರೈತರಿಗೆ ಸಕಾಲಿಕವಾಗಿ ಈ ಸಹಾಯಧನ ಬರುವ ಖಚಿತವಿಲ್ಲ. ಬಾರದಿದ್ದರೆ ಬರಬಹುದು ಎಂಬ ಉತ್ತರ ಅಧಿಕಾರಿ ನೀಡುತ್ತಾರೆ. ಮತ್ತೊಮ್ಮೆ  ನೀವು ಬರುವಾಗ ನಿಮಗೆ ಉತ್ತರಿಸಿದ ಅಧಿಕಾರಿ ವರ್ಗಾವಣೆ, ರಜೆ, ಟೂರ್‌ನಲ್ಲಿದ್ದರೆ ದೂರದಿಂದ ಬರುವ ರೈತ ಮರಳಿ ಹಿಂದೆ ಹೋಗುವುದಷ್ಟೇ ಮಾಡಲು ಸಾಧ್ಯ.

ಖಾಲಿ ಇರುವ ಹುದ್ದೆ 
ಸಹಾಯಕ ಕೃಷಿ ನಿರ್ದೇಶಕರು 1, ಸಹಾಯಕ ಅಧಿಕಾರಿ 6, ತೋಟಗಾರಿಕೆ ಸಹಾಯಕರು 3, ಗಾರ್ಡನರ್‌ 10, ವಿಟ್ಲ ಫಾರಂ 1.

ಅಡಚಣೆ
ಕಳೆದ ವರ್ಷ 2.20 ಕೋಟಿ ರೂ. ಅನುದಾನ ಬಂದಿದೆ. ಪ್ರಸ್ತುತ ವರ್ಷ ಇಮ್ಮಡಿ ಮಾಡಲಾಗಿದೆ. ಆದರೆ ನಮಗೆ ಲಿಖೀತ ವಿವರ ದೊರೆತಿಲ್ಲ. ರೈತರಿಗೆ ಅನುದಾನ ಮುಟ್ಟಿಸುವಲ್ಲಿ ನಮ್ಮ ಪ್ರಯತ್ನ ಇದೆ. ಈಗ ವ್ಯವಹಾರ ಆನ್‌ಲೈನ್‌ ಆಗಿರುವ ಕಾರಣ ರೈತರು ನೇರವಾಗಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವ ಆವಶ್ಯಕತೆ ಇಲ್ಲ. ಸಿಬಂದಿ ಕೊರತೆ ಇರುವುದು ನಿಜ. ಅದು ಸರಕಾರದ ಮಟ್ಟದಲ್ಲಿ ಆಗುವಂತಹ ವಿಚಾರ. ಸಾಕಷ್ಟು ಅನುದಾನ ಸರಕಾರದಿಂದ ಮಂಜೂರಾಗುತ್ತದೆ. ವ್ಯವಸ್ಥೆ ಮಾಡುವಲ್ಲಿ ಅಡಚಣೆ ಎದುರಿಸುವಂತಾಗಿದೆ.
- ದಿನೇಶ್‌, ಪ್ರಭಾರ ಸಹಾಯಕ
ತೋಟಗಾರಿಕೆ ನಿರ್ದೇಶಕರು

ರಾಜಾ ಬಂಟ್ವಾಳ

Trending videos

Back to Top