CONNECT WITH US  

ಎಲ್ಲಿದ್ದಾರೆ ಓಂಬುಡ್ಸ್‌ಮನ್‌?

ದೇವದುರ್ಗ: ನರೇಗಾ ಯೋಜನೆಯಡಿ ಭ್ರಷ್ಟಾಚಾರ, ಸಾರ್ವಜನಿಕ ಹಕ್ಕು ಹಾಗೂ ಹಿತಾಸಕ್ತಿ ಉಲ್ಲಂಘನೆ ಬಗ್ಗೆ ಬಂದ ದೂರುಗಳ ಸ್ವತಂತ್ರ ತನಿಖೆ ಕೈಗೊಳ್ಳುವ ಅಧಿಕಾರ ಹೊಂದಿರುವ ಓಂಬುಡ್ಸ್‌ಮನ್‌ಗಳ ನಿರ್ಲಕ್ಷ್ಯದಿಂದ ನರೇಗಾದಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ನರೇಗಾ ಯೋಜನೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರದ ವಿರುದ್ಧ ಸಾಕಷ್ಟು ದೂರುಗಳು ತಾಲೂಕು ಆಡಳಿತದಿಂದ ಹಿಡಿದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಲ್ಲಿಕೆಯಾದರೂ ಕಾರ್ಯಭಾರ ಒತ್ತಡದಲ್ಲಿ ಅಧಿಕಾರಿಗಳು ಸಾರ್ವಜನಿಕರ
ದೂರುಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ 2008ರಲ್ಲಿ
ಯಡಿಯೂರಪ್ಪ ನೇತೃತ್ವದ ಸರಕಾರ ರಾಜ್ಯದಲ್ಲಿ ಓಂಬುಡ್ಸ್‌ಮನ್‌ಗಳನ್ನು ನೇಮಕ ಮಾಡಿತು. ನರೇಗಾದಡಿ
ಭ್ರಷ್ಟಾಚಾರದ ಆರೋಪ ಕೇಳಿಬಂದರೆ ತ್ವರಿತ ಹಾಗೂ ಸ್ವತಂತ್ರ ತನಿಖೆ ಕೈಗೊಳ್ಳುವ ಅಧಿಕಾರ ಇವರಿಗೆ ನೀಡಲಾಯಿತು.

ಓಂಬುಡ್ಸ್‌ಮನ್‌ಗಳ ಜವಾಬ್ದಾರಿ ಏನು: ನರೇಗಾ ಯೋಜನೆಯಡಿ ನಡೆದಿರುವ ಭ್ರಷ್ಟಾಚಾರ, ಸಾರ್ವಜನಿಕ
ಹಕ್ಕು ಹಾಗೂ ಹಿತಾಸಕ್ತಿಗಳು ಉಲ್ಲಂಘನೆಯಾದ ಬಗ್ಗೆ ದೂರುಗಳು ಬಂದರೆ ನೇರವಾಗಿ ತನಿಖೆ ಕೈಗೊಳ್ಳುವ ಸ್ವತಂತ್ರ ಅಧಿ ಕಾರ ಓಂಬುಡ್ಸ್‌ಮನ್‌ಗಳಿಗಿದೆ. ಇದರ ಜೊತೆಗೆ ಗ್ರಾಮಸಭೆ, ಉದ್ಯೋಗ ಚೀಟಿ ವಿತರಣೆ, ಕೆಲಸದ
ಅಳತೆ, ಯಂತ್ರೋಪಕರಣಗಳ ಬಳಕೆ, ಕಾಮಗಾರಿಗಳ ಗುಣಮಟ್ಟ, ಖಾತೆಗಳ ಕಾರ್ಯಾಚರಣೆ, ದಾಖಲಾತಿಗಳ
ತನಿಖೆ, ದಾಖಲಾತಿಗಳ ನಿರ್ವಹಣೆ, ಅನುದಾನ ಬಿಡುಗಡೆ, ಸಾಮಾಜಿಕ ಪರಿಶೋಧನೆ, ಕುಟುಂಬ ನೋಂದಣಿ, ಕೆಲಸಗಳ ಬೇಡಿಕೆಗೆ ಅರ್ಜಿ ಸಲ್ಲಿಸುವುದು, ಲಿಂಗ ತಾರತಮ್ಯ, ಗುತ್ತಿಗೆದಾರರ ತೊಡಗಿಸಿಕೊಳ್ಳುವಿಕೆ, ಬ್ಯಾಂಕ್‌ ಅಥವಾ
ಅಂಚೆ ಕಚೇರಿ, ಕೂಲಿ ಪಟ್ಟಿ ಪರಿಶೀಲನೆ, ಅನುದಾನ ಬಳಕೆ, ನಿರುದ್ಯೋಗ ಭತ್ಯೆ, ಕೆಲಸ ಮಾಡುವ ಕಾಮಗಾರಿಗಳ
ಸ್ಥಳಗಳಲ್ಲಿ ಒದಗಿಸಬೇಕಾದ ಸೌಕರ್ಯ ಸೇರಿ ಖಾತರಿ ಯೋಜನೆಯಡಿಯಲ್ಲಿನ ಪ್ರತಿಯೊಂದು ಕುಂದುಕೊರತೆ
ಹಿಡಿದು ಯಾವುದಾದರೂ ದೂರು ಬಂದರೂ ತ್ವರಿತ ತನಿಖೆ ನಡೆಸುವ ಸ್ವತಂತ್ರ ಅಧಿಕಾರವನ್ನು ಓಂಬುಡ್ಸ್‌ಮನ್‌ಗಳು
ಹೊಂದಿದ್ದಾರೆ.

ದೂರುದಾರರು ತಪ್ಪಿತಸ್ಥರು ಎಂದು ಕಂಡು ಬಂದರೆ, ಅವರ ವಿರುದ್ಧ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಗೆ ವರದಿ ನೀಡಿ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡುವ ಅಧಿಕಾರದೊಂದಿಗೆ ಪ್ರತಿಯೊಂದು
ದೂರಿನ ಮಾಹಿತಿಯನ್ನು ನರೇಗಾ ಯೋಜನೆಯ ಜಾಲತಾಣದಲ್ಲಿ ಒದಗಿಸುವ ಅಧಿಕಾರ ಓಂಬುಡ್ಸ್‌ಮನ್‌ಗಳಿಗೆ ಇದೆ.

ಇಷ್ಟೆಲ್ಲಾ ಜವಾಬ್ದಾರಿ ಹೊತ್ತುಕೊಂಡಿರುವ ಓಂಬುಡ್‌ಮನ್‌ಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಹಲವು ಗ್ರಾಮ ಪಂಚಾಯತಿಗಳಲ್ಲಿ ನರೇಗಾದಡಿ ಅವ್ಯವಹಾರ ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನು ಜನತೆಗೆ ಓಂಬುಡ್ಸ್‌ಮನ್‌ಗಳ ಬಗ್ಗೆ ಮಾಹಿತಿ, ಕರ್ತವ್ಯದ ಹೊಣೆ, ಅವರು ಇರುವದೆಲ್ಲಿ ಎಂಬ ಮಾಹಿತಿ ಇಲ್ಲದ್ದು ಗ್ರಾಪಂ ಅಧಿಕಾರಿಗಳಿಗೆ ವರದಾನವಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. 

ಇನ್ನು ಮುಂದಾದರೂ ಓಂಬುಡ್ಸ್‌ಮನ್‌ಗಳು ಗ್ರಾಮ ಪಂಚಾಯತಿ ಸೇರಿ ತಾಲೂಕು ಕಚೇರಿಗಳಿಗೆ ವಾರಕೊಮ್ಮೆ
ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕೆಲಸ ಮಾಡಬೇಕು ಎಂದು ರೈತ ಸಂಘಟನೆ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.

ಓಂಬುಡ್ಸ್‌ಮನ್‌ಗಳ ಕರ್ತವ್ಯ ನಿರ್ಲಕ್ಷ್ಯದಿಂದ ದೇವದುರ್ಗ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಭ್ರಷ್ಟಾಚಾರ ಮಿತಿ
ಮೀರಿದೆ. ಸತ್ತವರ ಹೆಸರಿನಲ್ಲಿ ಕೂಲಿ ಹಣ ಪಾವತಿ, ಮನೆ, ಶೌಚಾಲಯ ಸೇರಿ ಇನ್ನಿತರ ಸರಕಾರದ ಯೋಜನೆಗಳ ಅನುದಾನ ದುರ್ಬಳಕೆ ಆಗುತ್ತಿದೆ. ಪ್ರತಿಯೊಂದು ಗ್ರಾಮ ಪಂಚಾಯತಿ ಹಾಗೂ ತಾಲೂಕು ಕೇಂದ್ರ ಕಚೇರಿಗಳಿಗಳಲ್ಲಿ ಓಂಬುಡ್ಸ್‌ಮನ್‌ಗಳ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸುವ ಆದೇಶವಿದ್ದರೂ ಯಾವುದೇ ಇಲಾಖೆ ನಿಯಮ ಪಾಲಿಸುತ್ತಿಲ್ಲ. ಈ ಬಗ್ಗೆ ಓಂಬುಡ್ಸ್‌ಮನ್‌ಗಳು ಮೌನ ವಹಿಸಿರುವುದು ಅನುಮಾನ ಹುಟ್ಟಿಸಿದೆ.
  ಬಸವರಾಜ ಹುರುಕಡ್ಲಿ, ಮಾಹಿತಿ ಹಕ್ಕು ಕಾರ್ಯಕರ್ತ ದೇವದುರ್ಗ.

ಪ್ರತಿ ತಾಲೂಕು ಕಚೇರಿಗಳಿಗೆ ಭೇಟಿ ನೀಡುತ್ತೇನೆ. ದೇವದುರ್ಗ ತಾಲೂಕಿನಿಂದ ಕೆಲ ದೂರುಗಳು ಬಂದಿವೆ. ಅವುಗಳ ತ್ವರಿತ ತನಿಖೆ ನಡೆಸಲಾಗಿದೆ. ಪ್ರತಿ ಕಚೇರಿಯಲ್ಲಿಯ ಮಾಹಿತಿ ಫಲಕದಲ್ಲಿ ದೂರವಾಣಿ ಸಂಖ್ಯೆ ನಮೂದಿಸಲು ಸೂಚಿಸುತ್ತೇನೆ.
  ಅಶೋಕ ಪಿ. ಜಿಲ್ಲಾ ಓಂಬುಡ್ಸ್‌ಮನ್‌ ರಾಯಚೂರು.

Trending videos

Back to Top