CONNECT WITH US  

ಮಿಲಿಟರಿ ನಾಯಕರ ಕೀರ್ತಿಯ ಪಾಲೆಲ್ಲ ರಾಜಕೀಯ ನಾಯಕರಿಗೆ!

ಹಾಗೆ ನೋಡಿದರೆ ಭೂ ಸೇನೆ, ವಾಯುಸೇನೆ, ನೌಕಾಸೇನೆಗಳ ಮುಖ್ಯಸ್ಥರುಗಳು ಯುದ್ಧ ಸಂದರ್ಭದಲ್ಲಿ ತೋರುವ ಸಾಧನೆಯನ್ನು ಗುರುತಿಸುವ, ವಿಜಯದ ಶ್ರೇಯಸ್ಸನ್ನು ಅವರಿಗೆ ಸಲ್ಲಿಸುವ ಗೋಜಿಗೆ ಭಾರತೀಯರಾದ ನಾವು ಹೋಗುವುದಿಲ್ಲ! ಎಲ್ಲ ಕೀರ್ತಿಯೂ ಸಲ್ಲುವುದು ಅಂದಂದಿನ ರಾಜಕೀಯ ನಾಯಕರಿಗೆ. 1971ರ ಸಮರದಲ್ಲಿ ಪಾಕಿಸ್ಥಾನ ಸೋತಾಗ ಇಂದಿರಾರನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಹೊಗಳಲಾಯಿತು.

ಕಳೆದ ವಾರ ತಮ್ಮ 92ರ ಹರೆಯದಲ್ಲಿ ನಿಧನರಾದ 1971ರ ಭಾರತ - ಪಾಕ್‌ ಸಮರದ ಅಪ್ರತಿಮ ವೀರ ದಂಡ ನಾಯಕ ಲೆ|ಜ| ಜೆ.ಎಫ್.ಆರ್‌. ಜೇಕಬ್‌ ಅವರಿಗೆ ಸಲ್ಲಿಸಲಾದ ಅಂತಿಮ ನಮನ ಅತ್ಯಂತ ಹೃದಯಸ್ಪರ್ಶಿಯಾಗಿತ್ತು. ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಅವರದು ಎದ್ದು ತೋರುವ ವ್ಯಕ್ತಿತ್ವ - ಇದು ಇಂದಿನ ಭೂಸೇನಾ ಮುಖ್ಯಸ್ಥರಾದ ಜ| ದಲ್‌ಬಿರ್‌ ಸಿಂಗ್‌ ಅವರು ಜ| ಜೇಕಬ್‌ ಅವರನ್ನು ವರ್ಣಿಸಿದ ಬಗೆ.

ಲೆ| ಜ| ಜೇಕಬ್‌ ಅವರು ದೇಶದ ಸಾರ್ವಜನಿಕ ಜೀವನದಲ್ಲಿ ಉತ್ತುಂಗ ಸ್ಥಾನಕ್ಕೇರಿದ ಭಾರತೀಯ ಯಹೂದಿಗಳಲ್ಲೊಬ್ಬರು. ನಮ್ಮ ರಾಷ್ಟ್ರದ ಅಲ್ಪಸಂಖ್ಯಾಕರಲ್ಲಿ ಪಾರ್ಸಿಗಳಂತೆ ಯಹೂದಿಗಳ ಸಂಖ್ಯೆ ತೀರಾ ಚಿಕ್ಕದು. ಭಾರತದ ಯಶಸ್ವೀ ಯಹೂದಿಗಳ ಪೈಕಿ ಇಂದು ನೆನಪಿಗೆ ಬರುವವರೆಂದರೆ ಪುಣೆಯ ಸಸೂನ್‌ ಕುಟುಂಬ, 1930ರ ದಶಕದ ಸುಪ್ರಸಿದ್ಧ ಕಲಾವಿದರಾಗಿದ್ದ ಡೇವಿಡ್‌, ನಾದಿರಾ ಹಾಗೂ ಕಮಲೇಶ್‌ ಕುಮಾರಿ. ಜ| ಜೇಕಬ್‌ ಅವರು ಟೀಕೆಗೊಳಗಾಗಿರುವ ಪ್ರಸಂಗವೂ ಇಲ್ಲದಿಲ್ಲ. ಅದರಲ್ಲೂ ವಿಶೇಷವಾಗಿ 1972ರಲ್ಲಿ ಯುದ್ಧ ಕೈದಿಯಾಗಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಲೆ|ಜ| ಎ.ಎ. ಎ. ನಿಯಾಜಿ ಅವರೊಂದಿಗೆ ಗಾಲ್ಫ್ ಆಡಿದ್ದಕ್ಕಾಗಿ ಅವರನ್ನು ಚೆನ್ನಾಗಿಯೇ ಟೀಕಿಸಲಾಯಿತು. ಹೀಗೆ ಆಡಿದ್ದು, ಅವರ ಆತ್ಮ ವಿಶ್ವಾಸದ ದ್ಯೋತಕವಾಗಿತ್ತು. ಅಲ್ಲದೆ ಯುದ್ಧ ಕೈದಿಯೊಬ್ಬನಿಗೆ ಅವರು ತೋರಿದ್ದ ಗೌರವದ ಸಂಕೇತವೂ ಇದಾಗಿತ್ತು. ವಾಸ್ತವವಾಗಿ, ಚೇಕಬ್‌ ಅವರ ಇಂಥ ನಡೆಗಾಗಿ ಅವರಿಗೆ ಅಭಿನಂದನೆ ಸಲ್ಲಬೇಕಿತ್ತು. ಅವರು ಗೋವಾ ಹಾಗೂ ಪಂಜಾಬ್‌ನ ರಾಜ್ಯಪಾಲರಾಗಿದ್ದಾಗ ಅವರ ನಡೆ ಒಬ್ಬ ಹೋರಾಟಗಾರನದಾಗಿತ್ತು. ಅವರು ಪಂಜಾಬಿನ ರಾಜ್ಯಪಾಲರಾಗಿದ್ದಾಗ ಅಧಿಕಾರಿಗಳ ಕೆಲಸದ ರೀತಿಯನ್ನು ಪತ್ತೆ ಹಚ್ಚುವ ಸಲುವಾಗಿ ಸರಕಾರಿ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡುತ್ತಿದ್ದರು.

ಸಾಧನೆಯನ್ನು ಗುರುತಿಸುವುದಿಲ್ಲ
ಹಾಗೆ ನೋಡಿದರೆ ಭೂ ಸೇನೆ, ವಾಯುಸೇನೆ, ನೌಕಾಸೇನೆಗಳ ಮುಖ್ಯಸ್ಥರುಗಳು ಯುದ್ಧ ಸಂದರ್ಭದಲ್ಲಿ ತೋರುವ ಸಾಧನೆಯನ್ನು ಗುರುತಿಸುವ, ಅವರ ಕಾರ್ಯಭಾರದ ಯಶಸ್ಸಿಗಾಗಿ ಅಭಿನಂದಿಸುವ, ಯುದ್ಧದಲ್ಲಿ ದೊರೆಯುವ ವಿಜಯದ ಶ್ರೇಯಸ್ಸನ್ನು ಅವರಿಗೆ ಸಲ್ಲಿಸುವ ಗೋಜಿಗೆ ಭಾರತೀಯರಾದ ನಾವು ಹೋಗುವುದಿಲ್ಲ! ಎಲ್ಲ ಕೀರ್ತಿಯೂ ಸಲ್ಲುವುದು ಅಂದಂದಿನ ರಾಜಕೀಯ ನಾಯಕರಿಗೆ. 1971ರ ಸಮರದಲ್ಲಿ ಪಾಕಿಸ್ತಾನ ಸೋತಾಗ ಇಂದಿರಾ ಗಾಂಧಿಯವರನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಹೊಗಳಲಾಯಿತು. 1947-48ರ ಕಾಶ್ಮೀರದ ಜತೆಗಿನ ಯುದ್ಧವನ್ನು ನಿರ್ವಹಿಸಿದ ರೀತಿಗಾಗಿ, ಹಾಗೆಯೇ 1962ರಲ್ಲಿ ಚೀನ ವಿರುದ್ಧದ "ಹಿಮಾಲಯನ್‌ ಬ್ಲಿಂಡರ್‌'ಗೆ ಸಂಬಂಧಿಸಿದಂತೆ ನೆಹರೂ ಅವರನ್ನು ಆಕ್ಷೇಪಿಸಲಾಯಿತು. 1962ರ ಸಮರದಲ್ಲಿ ನೆಹರೂ ಅವರ ಜತೆಗೆ ಆಗಿನ ದರ್ಪಿಷ್ಟ ರಕ್ಷಣಾ ಸಚಿವ ವಿ.ಕೆ. ಕೃಷ್ಣ ಮೆನೋನ್‌ ಅವರನ್ನೂ ದೂರಲಾಯಿತು. ಇವರಿಬ್ಬರ ಜತೆಗೆ ಆಕ್ಷೇಪಕ್ಕೊಳಗಾದ ಇನ್ನಿಬ್ಬರೆಂದರೆ, ಆಗಿನ ಭೂ ಸೇನಾ ಮುಖ್ಯಸ್ಥ ಜ| ಪಿ.ಎನ್‌. ಥಾಪರ್‌ ಹಾಗೂ ಉಪದಂಡನಾಯಕ ಬೃಜ್‌ಮೋಹನ್‌ ಕೌಲ್‌.

ಇನ್ನೂ ಹೇಳಬೇಕೆಂದರೆ ನಮ್ಮ ಮಿಲಿಟರಿ ಮುಖ್ಯಸ್ಥರ ಬಗ್ಗೆ ನಮ್ಮ ಜನರಲ್ಲಿರುವ ತಿಳಿವಳಿಕೆ ತೀರಾ ಕಡಿಮೆ. ಉದಾಹರಣೆಗೆ ಭೂ ಸೇನಾ ಮುಖ್ಯಸ್ಥರುಗಳ ಪೈಕಿ ಕರ್ನಾಟಕದವರು ಇಬ್ಬರಲ್ಲ, ಮೂವರು ಎಂಬುದು ಅನೇಕರಿಗೆ ಗೊತ್ತಿಲ್ಲ. ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರಿಯಪ್ಪ ಹಾಗೂ ಜ| ಕೆ.ಎಸ್‌. ತಿಮ್ಮಯ್ಯ ಈ ಇಬ್ಬರ ಹೆಸರಷ್ಟೇ ನಮಗೆ ಗೊತ್ತಿರುವುದು. ಮೂರನೆಯವರೆಂದರೆ, ಜ| ಗೋಪಾಲ್‌ ಗುರುನಾಥ್‌ ಬೇವೂರ್‌ (1973-75). ಬಾಗಲಕೋಟೆ ಜಿಲ್ಲೆಯ ಬೀಳಗಿಯವರಾದ ಇವರು ಉತ್ತರ ಕರ್ನಾಟಕದ ಪ್ರಪ್ರಥಮ ಐಎಎಸ್‌ ಅಧಿಕಾರಿ ಸರ್‌ ಗುರುನಾಥ್‌ ಬೇವೂರ್‌ ಅವರ ಪುತ್ರ. ಇವರು ಮೂವರಲ್ಲದೆ, ಕರ್ನಾಟಕದೊಂದಿಗೆ ಸಂಪರ್ಕ ಹೊಂದಿದ್ದ ಇನ್ನೊಬ್ಬ ಭೂ ಸೇನಾ ಮುಖ್ಯಸ್ಥರೆಂದರೆ ಜ| ಸತ್ಯವಂತ್‌ ಮಲ್ಲಣ್ಣ ಶೃಂಗಾರೇಶ್‌. ಮೂಲತಃ ಮಹಾರಾಷ್ಟ್ರದ ಕೊಲ್ಹಾಪುರದವರಾದ ಇವರು ಬ್ರಹ್ಮಸಮಾಜದ ಪ್ರಭಾವಕ್ಕೆ ಒಳಗಾದ ಲಿಂಗಾಯತ ಕುಟುಂಬವೊಂದಕ್ಕೆ ಸೇರಿದವರು. ಇವರು 1964-65ರಲ್ಲಿ ಮೈಸೂರಿನ ರಾಜ್ಯಪಾಲರೂ ಆಗಿದ್ದರು.

ನಮ್ಮ ದೇಶದಲ್ಲಿ ಮಿಲಿಟರಿ ನಾಯಕರು ಹೀಗೆ ಅವಗಣನೆಗೀಡಾಗಿದ್ದರೆ, ಪಶ್ಚಿಮದಲ್ಲಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ವಾಸ್ತವವಾಗಿ ಜರ್ಮನಿ ವಿರುದ್ಧದ ಯುದ್ಧದಲ್ಲಿ (ದ್ವಿತೀಯ ಮಹಾಯುದ್ಧದಲ್ಲಿ) ಬ್ರಿಟನ್‌ ಜಯಗಳಿಸಿದ್ದು ಸರ್‌ ವಿನ್‌ಸ್ಟನ್‌ ಚರ್ಚಿಲ್‌ ಅವರ ನಾಯಕತ್ವದಡಿಯಲ್ಲೇ ಹೌದಾದರೂ ಇದರ ಶ್ರೇಯಸ್ಸು ಅಂದಿನ ಫೀಲ್ಡ್‌ ಮಾರ್ಶಲ್‌ಗ‌ಳಾಗಿªದ್ದ ಮಾಂಟ್‌ಗೊಮೆರಿ, ಆರ್ಕಿಬಾಲ್ಡ್‌ ವಾವೆಲ್‌ (ಭಾರತದ ಗವರ್ನರ್‌ ಜನರಲ್‌ ಆಗಿದ್ದವರು) ಹಾಗೂ ಸರ್‌ ಕ್ಲಾಡ್‌ ಆಫ್ಲೆಕ್‌ (ಭಾರತದ ಕಮಾಂಡರ್‌ ಇನ್‌ ಚೀಫ್ ಆಗಿದ್ದವರು) ಅವರಿಗೆ ನ್ಯಾಯವಾಗಿಯೇ ಸಂದಿದೆ. ಈ ಸಮರದಲ್ಲಿ ಕೀರ್ತಿ ಭಾಜನರಾದ ಇತರ ಜನರಲ್‌ಗ‌ಳೆಂದರೆ ಡ್ವೆ„ಟ್‌ ಇ. ಐಸನ್‌ಹೋವರ್‌ (ಮುಂದೆ ಅಮೆರಿಕದ ಅಧ್ಯಕ್ಷರಾದವರು), ಪ್ಯಾಟನ್‌ ಹಾಗೂ ಡಗ್ಲಾಸ್‌ ಮೆಕಾರ್ಥರ್‌. ದ್ವಿತೀಯ ಮಹಾಯುದ್ಧದಲ್ಲಿ ವೀರಾಗ್ರೇಸರರೆಂದು ಹೆಸರು ಪಡೆದ ಮಿಲಿಟರಿ ಮುಖಂಡರಲ್ಲಿ ಫೀಲ್ಡ್‌ ಮಾರ್ಷಲ್‌ ರೋಮೆಲ್‌ ಹಾಗೂ ಅಡ್ಮಿರಲ್‌ ದುಯಿನಿತ್ಸ್ ಮುಂತಾದವರಿದ್ದರು.

ನಮ್ಮ ರಾಜಕೀಯ ನಾಯಕರು ಇಲ್ಲಿನ ಮಿಲಿಟರಿ ಮುಖ್ಯಸ್ಥರನ್ನು ಕೈಕೆಳಗಿನ ಆಳುಗಳಂತೆ ನಡೆಸಿಕೊಳ್ಳುತ್ತ ಬಂದಿರುವುದನ್ನು ಗಮನಿಸದಿರುವವರು ಯಾರೂ ಇಲ್ಲ! ದಿಲ್ಲಿಯಲ್ಲಿ ನೋಡಿ - ಐಎಎಸ್‌ ಬಾಬುಗಳನ್ನು ಮಿಲಿಟರಿ ಮುಖ್ಯಸ್ಥರಿಗಿಂತಲೂ ಎತ್ತರದ ಸ್ಥಾನದಲ್ಲಿರಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳೂ ನಡೆದಿವೆ. ನೆಹರೂ ಸರಕಾರದ ವಿರುದ್ಧ ಸಂಚಿನ ಪ್ರಯತ್ನ ನಡೆಸಿದರೆಂಬ ಅಸ್ಪಷ್ಟ ಆರೋಪವೊಂದು ಜ| ಕೆ.ಎಸ್‌. ತಿಮ್ಮಯ್ಯ ಅವರ ಮೇಲಿತ್ತು. ಜ| ವಿ.ಕೆ. ಸಿಂಗ್‌ ಅವರ ಮೇಲೆ ಇಂಥದೇ ಆರೋಪವೊಂದು ಕೇಳಿಬಂದಿದೆ. ಆಗ್ರಾದಿಂದ ದಿಲ್ಲಿಯತ್ತ ನುಗ್ಗುವಂತೆ ಅವರು ಸೇನಾ ತುಕಡಿಗಳಿಗೆ ಆದೇಶ ನೀಡಿದ್ದರೆನ್ನಲಾಗಿದೆ. ಅದೃಷ್ಟವಶಾತ್‌ ಕಾಂಗ್ರೆಸ್‌ ಪಕ್ಷ, ತನ್ನ ವಕ್ತಾರ ಮನೀಶ್‌ ತಿವಾರಿಯವರ ಈ ಕುರಿತ ಹೇಳಿಕೆಯಿಂದ ದೂರ ಸರಿದಿದೆ. ಇನ್ನೊಂದು ಮಾತೆಂದರೆ, ಜ| ವಿ.ಕೆ. ಸಿಂಗ್‌ ಅವರಿಗೆ ನರೇಂದ್ರ ಮೋದಿ ಸರಕಾರದಿಂದ ಸಾಕಷ್ಟು ಗೌರವ ಸಿಕ್ಕಿಲ್ಲ. ದೇಶದ ಬೃಹತ್‌ ಭೂ ಸೇನೆಯ ಮುಖ್ಯಸ್ಥರಾಗಿದ್ದವರು ಜ| ಸಿಂಗ್‌. ಅವರಿಗೆ ಮೋದಿ ಸಂಪುಟದಲ್ಲಿ ಕ್ಯಾಬಿನೆಟ್‌ ದರ್ಜೆ ಸಿಗಬೇಕಿತ್ತು. ಈಗ ಸಿಕ್ಕಿರುವುದು ಸಹಾಯಕ ಸಚಿವ ಹುದ್ದೆ.

ಇನ್ನು ಭಾರತೀಯ ನೌಕಾಪಡೆಯತ್ತ ಗಮನ ಹರಿಸುವುದಾದರೆ, ಇತ್ತೀಚೆಗಷ್ಟೆ, ಎಂದರೆ 2014ರಲ್ಲಿ ಅಡ್ಮಿರಲ್‌ ಡಿ.ಕೆ. ಜೋಶಿ ಅವರು "ಸಿಂಧುರತ್ನ' ಜಲಾಂತರ್ಗಾಮಿ ದುರಂತಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿರುವ ಉದಾಹರಣೆ ನಮ್ಮ ಮುಂದಿದೆ. ಅವರ ರಾಜೀನಾಮೆಯನ್ನು ಆಗಿನ ಯುಪಿಎ ಸರಕಾರ ಭಾರೀ ತರಾತುರಿಯಿಂದ ಸ್ವೀಕರಿಸಿದ್ದನ್ನು ನೋಡಿದ್ದೇವೆ. ರಾಷ್ಟ್ರಪತಿ ಪ್ರಣವ್‌ ಮುಖರ್ಜಿಯವರು ಈ ವಿಷಯದಲ್ಲಿ ಪ್ರದರ್ಶಿಸಿದ ಮೌನ ತೀರಾ ಅಶುಭಸೂಚಕವೆಂದೇ ಹೇಳಬೇಕು. 1998ರ ಡಿಸೆಂಬರಿನಲ್ಲಿ, ನೌಕಾಸೇನೆಯ ಆಗಿನ ಮುಖ್ಯಸ್ಥ, ಅಡ್ಮಿರಲ್‌ ವಿಷ್ಣು ಭಾಗÌತ್‌ ಅವರನ್ನು ವಜಾಗೊಳಿಸಲಾದ ಪ್ರಕರಣವನ್ನು ನೆನಪಿಸಿಕೊಳ್ಳಿ. ಅವರನ್ನು ಹೀಗೆ ಹುದ್ದೆಯಿಂದ ಕಿತ್ತ ಕ್ರಮವನ್ನು ಸಮರ್ಥಿಸಿಕೊಳ್ಳಲು ಆಗಿನ ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಅವರಿಗೆ ತಮ್ಮದೇ ಸಕಾರಣಗಳಿದ್ದವು. ಭಾಗÌತ್‌ ಅವರನ್ನು ವಜಾಗೊಳಿಸಿದ್ದು ಅವರ ಅವಿಧೇಯತೆ, ಉದ್ಧಟತನ, ಬೆದರಿಕೆ ಹಾಕುವ ಬುದ್ಧಿ ಹಾಗೂ ಸುಳ್ಳುಬುರುಕ ಗುಣಗಳಿಗಾಗಿ. ಆದರೆ ಎಡಪಕ್ಷಗಳು ಮಾತ್ರ ಈ ಇಡೀ ಪ್ರಕರಣವನ್ನು ರಾಜಕೀಯಗೊಳಿಸಿದವು.

ನಮ್ಮ ದೇಶದಲ್ಲಿ ಮಿಲಿಟರಿ ಮುಖ್ಯಸ್ಥರು ತಮ್ಮ ರಾಜಕೀಯ ಬಾಸ್‌ಗಳು ಅಧಿಕಾರದ ತುತ್ತತುದಿಯಲ್ಲಿದ್ದಾಗಲೂ ತಮ್ಮ ಪಟ್ಟು ಸಡಿಲಿಸದೆ ತಮ್ಮ ಕರ್ತವ್ಯ ಪಾಲಿಸಿದ್ದನ್ನು ನೋಡಿದ್ದೇವೆ. ಉದಾಹರಣೆಗೆ, ತುರ್ತು ಪರಿಸ್ಥಿತಿಯ ದಿನಗಳಲ್ಲಿ ಇಂದಿರಾಗಾಂಧಿ ತನ್ನ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದವರನ್ನೆಲ್ಲ ಸೆರೆಮನೆಗೆ ಅಟ್ಟುತ್ತಿದ್ದಾಗಲೂ ಆಗಿನ ಭೂ ಸೇನಾ ಮುಖ್ಯಸ್ಥ, ಜ| ಟಿ.ಎನ್‌. ರೈನಾ ಅವರು ಸೇನೆಯ ತಟಸ್ಥ ನಿಲುವನ್ನು ಕಾಪಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಮಿಲಿಟರಿ ಹಿನ್ನೆಲೆಯಿಲ್ಲದ ರಕ್ಷಣಾ ಸಚಿವರು
ಗಮನಿಸಲೇಬೇಕಾದ ಸಂಗತಿಯೆಂದರೆ, ನಮ್ಮ ರಕ್ಷಣಾ ಸಚಿವರ ಪೈಕಿ ಯಾರೂ ಮಿಲಿಟರಿ ಹಿನ್ನೆಲೆಯನ್ನು ಹೊಂದಿದವರಲ್ಲ. ಅವರೆಲ್ಲರೂ  ಪೂರ್ಣಕಾಲಿಕ ರಾಜಕಾರಣಿಗಳು. ಹೀಗಿರುತ್ತ, "ಅತ್ಯಂತ ಕಳಪೆ ರಕ್ಷಣಾ ಸಚಿವರ' ಯಾದಿಯೇ ನಮ್ಮಲ್ಲಿದೆಯೆಂದರೆ, ಇದರಲ್ಲಿ ಯಾವುದೇ ಅಚ್ಚರಿ ಇಲ್ಲ! ಈ ಯಾದಿಯಲ್ಲಿ ಕೃಷ್ಣ ಮೆನೋನ್‌, ಬನ್ಸಿàಲಾಲ್‌, ಮಾಜಿ ಪ್ರಧಾನಿ ಚಂದ್ರಶೇಖರ್‌, ಶರದ್‌ ಪವಾರ್‌ ಮುಲಾಯಂ ಸಿಂಗ್‌ ಯಾದವ್‌ ಹಾಗೂ ಎ.ಕೆ. ಆ್ಯಂಟನಿ ಇದ್ದಾರೆ. ಕೊನೆಯವರಾದ ಆ್ಯಂಟನಿ ಅತ್ಯಂತ ದೀರ್ಘ‌ಕಾಲ (2005-14) ಅಧಿಕಾರದಲ್ಲಿದ್ದರೂ ಎದ್ದು ತೋರುವ ಯಾವುದೇ ಕೆಲಸವನ್ನೂ ಮಾಡಿಲ್ಲ. ಅವರಿಗೆ "ಮಿ| ಕ್ಲೀನ್‌' ಎಂದು ಕರೆಸಿಕೊಳ್ಳಬೇಕೆಂಬ ಗೀಳಿತ್ತು. ರಕ್ಷಣಾ ಖಾತೆಯ ಪ್ರಮುಖ ಯೋಜನೆಗಳಿಗೆ ತೊಡಕೊಡ್ಡಿದ ಅವರ ನಾಯಕತ್ವ, ರಕ್ಷಣಾ ಪಡೆಗಳಲ್ಲಿ ಭಾರೀ ಶಸ್ತ್ರಾಸ್ತ್ರಗಳ ಕೊರತೆ ಹಾಗೂ ವಾಯುರಕ್ಷಣಾ ವಿಷಯದಲ್ಲಿ ಅಡ್ಡಿ ವಿಡೂxರಗಳಂಥ ಪ್ರತಿಕೂಲ ಪರಿಸ್ಥಿತಿ ಸೃಷ್ಟಿಯಾಗಲು ಕಾರಣವಾಯಿತು. ಜಾರ್ಜ್‌ ಫೆರ್ನಾಂಡಿಸ್‌ ಹಾಗೂ ಇತರರು ಭ್ರಷ್ಟಾಚಾರದ ಆರೋಪಗಳಿಗೂ ಒಳಗಾದರು.

ಹೊಸ ರಕ್ಷಣಾ ಸಚಿವ ಮನೋಹರ್‌ ಪಾರಿಕ್ಕರ್‌ ಅವರಿಂದ ದೇಶ ಬಹಳಷ್ಟನ್ನು ನಿರೀಕ್ಷಿಸುತ್ತಿದೆ. ಭಯೋತ್ಪಾದಕರ ಹತ್ಯೆಗಾಗಿ ನಮ್ಮ ಸೇನಾ ಪಡೆ ಮ್ಯಾನ್ಮಾರ್‌ನ ಗಡಿದಾಟಿ ತನ್ನ ಕಾರ್ಯದಲ್ಲಿ ಸಫ‌ಲವಾದ ಘಟನೆಗಾಗಿ ಪಾರಿಕ್ಕರ್‌ ಅವರಿಗೆ ಹೊಗಳಿಕೆಗಳು ಸಂದಿವೆ. ""ಗನ್‌ ಹಿಡಿದು ಭಾರತಕ್ಕೆ ಬರುವ ಭಯೋತ್ಪಾದಕರು ಮಾನವ ಹಕ್ಕುಗಳನ್ನು ನಿರೀಕ್ಷಿಸಕೂಡದು. ನಮ್ಮ 13 ಲಕ್ಷದಷ್ಟು ಯೋಧರಿರುವ ಸೇನೆ ಇರುವುದು ಶಾಂತಿಯನ್ನು ಬೋಧಿಸುತ್ತ ಕೂರುವುದಕ್ಕಲ್ಲ'' ಎಂದು ಅವರು ಹೇಳಿರುವುದಾಗಿ ವರದಿಗಳು ಹೇಳುತ್ತಿವೆ. ಪಾಕಿಸ್ಥಾನದ ಪ್ರಚೋದನೆ, ಅದಕ್ಕಿಂತಲೂ ಚೀನದ ಉದ್ರಿಕ್ತ ವರ್ತನೆಯ ವಿರುದ್ಧ ಅವರು ನಿಜಕ್ಕೂ ಕಟುವಾಗಿ, ಖಾರವಾಗಿ ನಡೆದುಕೊಂಡಾರೆಂದು ನಿರೀಕ್ಷಿಸಬಹುದೆ?

ಅರಕೆರೆ ಜಯರಾಮ್‌

Trending videos

Back to Top