CONNECT WITH US  

20 ದಿನಗಳಲ್ಲಿ ರಾಜೀವ್‌ ಗಾಂಧಿ ವಿವಿಗೆ ಭೂಮಿಪೂಜೆ

ರಾಮನಗರ: ಇನ್ನು 15-20 ದಿನಗಳಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪುತ್ರ ನಿಖೀಲ್‌ ಗೌಡ ನಟಿಸಿರುವ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್‌ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಜೀವ್‌ ಗಾಂಧಿ ವಿವಿಗೆ ಜಮೀನು ಸ್ವಾಧೀನಕ್ಕೊಳಗಾಗಿದ್ದ ಭೂಮಾಲೀಕರು ತಮ್ಮ ಬಳಿ ಚರ್ಚೆ ನಡೆಸಿ ಸರ್ಕಾರದ ಜತೆ ಸಹಕರಿಸಲು ಒಪ್ಪಿಗೆ ಸೂಚಿಸಿದ್ದಾರೆ. 12 ವರ್ಷಗಳ ಹಿಂದೆಯೇ ಭೂಮಾಲೀಕರು ಒಪ್ಪಿಗೆ ನೀಡಿದ್ದರೆ, ಇಷ್ಟೊತ್ತಿಗೆ 1000 ಹಾಸಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧವಾಗುತ್ತಿತ್ತು. ಅಂದು 350 ಕೋಟಿ ರೂ.ಗಳಲ್ಲಿ ಪೂರ್ಣವಾಗುತ್ತಿದ್ದ ಯೋಜನೆ, ಇದೀಗ 650 ಕೋಟಿ ಆಗಲಿದೆ ಎಂದರು. 

 ಪ್ರತಿ ಹಳ್ಳಿಗೂ ಭೇಟಿ: ರಾಜ್ಯ ರಾಜಕಾರಣದಲ್ಲಿ ಸ್ಪಲ್ಪ ತಿಳಿಯಾದ ನಂತರ ತಾವು ರಾಮನಗರದ ಎಲ್ಲಾ ಹಳ್ಳಿಗಳಿಗೂ ಸ್ವಯಂ ಭೇಟಿ ಕೊಟ್ಟು ಸಮಸ್ಯೆಗಳನ್ನು ಆಲಿಸುವುದಾಗಿ ತಿಳಿಸಿದ ಅವರು, ನಗರದಲ್ಲಿ ಮುಖ್ಯಮಂತ್ರಿಗಳ ಕಚೇರಿ ಸ್ಥಾಪಿಸಲಾಗಿದೆ. ಜಿಲ್ಲೆಯ ನಾಗರಿಕರು ಬೆಂಗಳೂರಿಗೆ ಬಂದು ಅಹವಾಲು ಕೊಡುವ ಬದಲಿಗೆ ಇಲ್ಲೆ ಕೊಡುವಂತೆ ಮನವಿ ಮಾಡಿದರು. ನಾಗರಿಕರು ಕೊಟ್ಟ ಮನವಿಗಳಿಗೆ ಸ್ಪಂದಿಸಲಾಗುತ್ತದೆ ಎಂದರು.

ಗುಲ್ಬರ್ಗ, ಕೊಪ್ಪಳದಲ್ಲಿ ಕಾರ್ಖಾನೆಗಳು: ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನು ಅವಳಿ ನಗರಗಳನ್ನಾಗಿ ರೂಪಿಸುವ ಉದ್ದೇಶವನ್ನು ಮರುಪ್ರಕಟಿಸಿದ ಸಿಎಂ ಕುಮಾರಸ್ವಾಮಿ, ರಾಜ್ಯದ ರೈತರ 49 ಸಾವಿರ ಕೋಟಿ ರೂ. ಸಾಲಮನ್ನಾ ಆಗಿರುವುದರಿಂದ ರಾಜ್ಯದ ಆರ್ಥಿಕತೆಗೆ ಹಣ ಹೊಂದಿಸಬೇಕಾಗಿದೆ. ಯುವಕರಿಗೆ ನೌಕರಿ ಕೊಡಿಸಬೇಕಾಗಿದೆ. ಗುಲ್ಬರ್ಗ, ಬೀದರ್‌, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ ಕಾರ್ಖಾನೆಗಳನ್ನು ತೆರೆಯುವ ಉದ್ದೇಶವನ್ನು ಪ್ರಕಟಿಸಿದರು. ರಾಜ್ಯದ ನೀರಾವರಿ ಯೋಜನೆಗಳಿಗೂ ಸಂಪನ್ಮೂಲ ಹೊಂದಿಸಬೇಕಾಗಿದ್ದು, ಇದೆಲ್ಲಾ ಸವಾಲಿನ ಕೆಲಸ ಎಂದರು.

 ನಾನು ಎರಡು ಮೂರು ಜಿಲ್ಲೆಗಳ ಸಿಎಂ ಅಲ್ಲ, ರಾಜ್ಯದ ಯಾವ ಭಾಗಕ್ಕೂ ಅನ್ಯಾಯ ಆಗಲು ಬಿಡೋಲ್ಲ. ತಾವು 2-3 ಜಿಲ್ಲೆಗಳ ಸಿಎಂ ಎಂದು ವಿರೋಧಿಗಳು ಟೀಕಿಸುತ್ತಿದ್ದಾರೆ ಎಂದರು. 

5 ವರ್ಷ ನಾನೇ ಸಿಎಂ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾವು ಉತ್ತರ ಕರ್ನಾಟಕ ಜಿಲ್ಲೆಗಳ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಸದ್ಯದಲ್ಲೇ ಈ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಜನಸಾಮಾನ್ಯರ ಸಮಸ್ಯೆಯನ್ನು ಆಲಿಸುವೆ. 5 ವರ್ಷ ನಾನೇ ಸಿಎಂ ಆಗಿರುವೆ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Trending videos

Back to Top