CONNECT WITH US  

ಮಾಗಡಿಯಲ್ಲಿ ಪರಿಸರ ಸ್ನೇಹಿ ಗಣಪ ಕಲರವ

ಮಾಗಡಿ: ಭಾದ್ರಪದ ಶುಕ್ಲಪಕ್ಷ ಚೌತಿಯ ವಿಘ್ನ ನಿವಾರಕ ಗಣಪತಿ ಹಬ್ಬಕ್ಕೆ ಮೂರು ದಿನ ಮಾತ್ರ ಬಾಕಿ.  ಪಟ್ಟಣದಲ್ಲಿ ಶಿಲ್ಪಿಗಳಿಂದ ಗಣಪತಿ ಮೂರ್ತಿಗಳ ತಯಾರಿಕೆ, ಮಾರಾಟ ಭರಾಟೆ ಈಗಾಗಲೇ ಜೋರಾಗಿ ನಡೆಯುತ್ತಿದೆ. 

ಬೇರೆ ಜಿಲ್ಲೆಗಳಿಂದಲೂ ಆಗಮನ: ವಿಶೇಷವೆಂದರೆ ಮಾಗಡಿ ಪಟ್ಟಣದಲ್ಲಿ ಪಿಓಪಿ ಗಣಪತಿ ಮೂರ್ತಿ ತಯಾರಿಸುವುದಿಲ್ಲ. ಪುರಾತನದಿಂದ ಮಾಡಿಕೊಂಡು ಬರಲಾಗುತ್ತಿರುವ ಜೇಡಿ ಮಣ್ಣಿನಿಂದ ಮಾತ್ರ ಮೂರ್ತಿ ತಯಾರಿಸುವುದು ಹೆಚ್ಚು. ಬೆಂಗಳೂರು ಇತರೆಡೆ ಕಣ್ಣಿಗೆ ರಾಚುವಂತೆ ಬಣ್ಣ ಬಣ್ಣಗಳಿಂದ ತಯಾರಿಸಿದ ಗಣಪತಿ ಮೂರ್ತಿಗಳು ಮಾರಾಟಕ್ಕಿಟ್ಟಿದ್ದರೂ ವಿವಿಧ ಜಿಲ್ಲೆಗಲ್ಲಿಂದಲೂ ಜನರು ಮಾಗಡಿಯ ಮಣ್ಣಿನ ಗಣಪತಿ ಮೂರ್ತಿಯನ್ನೇ ಖರೀದಿಸಲು ಬರುತ್ತಾರೆ ಎನ್ನುತ್ತಾರೆ ಮೂರ್ತಿ ಖರೀದಿದಾರ ನಾರಾಯಣಪ್ಪ. 

ಗಣಪತಿ ಮೂರ್ತಿ ತಯಾರಿಕೆಯ ಶಿಲ್ಪಿಗಳು ಹಬ್ಬಕ್ಕೆ ಮೂರು ತಿಂಗಳ ಮುಂಚೆಯೇ ಹತ್ತಿರದ ಪುರಾತನ ಕೆರೆಯ ಜೇಡಿ ಮಣ್ಣನ್ನು ಸಂಗ್ರಹಿಸಿಕೊಂಡು ನೀರಿನಿಂದ ಮಣ್ಣನ್ನು ನೆನೆಹಾಕುತ್ತಾರೆ. ಮಣ್ಣನ್ನು ಹದಕ್ಕೆ ತಂದು ಕೊಂಡು ಜನತೆಯ ಇಷ್ಟಕ್ಕೆ ತಕ್ಕಂತೆ ಹಾಗೂ ಅವರ ಬೇಡಿಕೆಗೆ ಅನುಗುಣವಾಗಿ ವಿವಿಧ ರೂಪದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. 

ನಾಲ್ಕು ತಲೆಮಾರುಗಳಿಂದ ತಯಾರಿಕೆ: ಪಟ್ಟಣದಲ್ಲಿ ಪರಿಸರ ಸ್ನೇಹಿ ಗಣಪ ತಯಾರಿಕೆಯಲ್ಲಿ ಉಮಾಶಂಕರ್‌ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ಗಣಪ ಮೂರ್ತಿ ತಯಾರಿಕೆ ಕಾಯಕದಲ್ಲಿ ತೊಡಗಿಸಿಕೊಂಡಿದೆ. ದಿ.ಮಲ್ಲಣ್ಣ, ದಿ.ಮುದ್ದಣ್ಣ, ದಿ.ಚಿಕ್ಕಮುದ್ದಣ್ಣ, ದಿ.ನಂಜಪ್ಪ ಇವರ ಬಳುವಳಿಯಿಂದ ಇವರ ಮಕ್ಕಳೀಗ ಮಾಗಡಿಯಲ್ಲಿ ಗಣಪತಿ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದು, ವಂಶಪರಂಗತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಮೊಮ್ಮಕ್ಕಳು, ಮರಿಮೊಕ್ಕಳು ಸಹ ಗಣಪತಿ ತಯಾರಿಕೆಯಲ್ಲಿ ಖ್ಯಾತಿ ಗಳಿಸಿದ್ದಾರೆ. 

ಇವರಲ್ಲಿ ಗಣೇಶ ಮೂರ್ತಿಗಳ ಖರೀದಿ ಬಗ್ಗೆ ಮುಂಗಡವಾಗಿ ತಿಳಿಸಿದರೆ, ಗ್ರಾಹಕರು ಯಾವ ರೀತಿ ಕೇಳುತ್ತಾರೊ ಆ ರೀತಿ ತಯಾರಿಸಿಕೊಡುತ್ತಾರೆ. ಪರಿಸರ ಸ್ನೇಹಿ ಬಣ್ಣ ಇಲ್ಲದ ಮೂರ್ತಿಯನ್ನೂ ಸಹ ತಯಾರಿಸಿಕೊಡುತ್ತಾರೆ. ಆದರೂ ಬಣ್ಣ ರಹಿತ ಮೂರ್ತಿಗೆ ಬೇಡಿಕೆ ಕಡಿಮೆ ಎನ್ನುತ್ತಾರೆ ಶಿಲ್ಪಿ ಉಮಾಶಂಕರ. ಪಟ್ಟಣದ ಕುಂಬಾರ ಬೀದಿಯಲ್ಲಿರುವ ಈ ಶಿಲ್ಪಿ ಕುಟುಂಬವು ತಮ್ಮ ಪೂರ್ವಿಕರ ನಾಲ್ಕೆçದು ತಲೆಮಾರುಗಳಿಂದ ಗಣಪತಿ ಮೂರ್ತಿ ತಯಾರಿಕೆ ವೃತ್ತಿ ಮಾಡಿಕೊಂಡು ಬರುತ್ತಿದ್ದಾರೆ.

ಪ್ರತಿ ವರ್ಷವೂ ಭಿನ್ನ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಾಗಡಿ ಗಣಪತಿಗೆ ವಿಶೇಷ ಹಾಗೂ ಶಿಷ್ಟವಾದ ಮುಖವಿದೆ. ಇಂತಹ ಮುಖದ ಗಣಪತಿ ಮಾಡಲು ಕಷ್ಟ ಎನ್ನುತ್ತಾರೆ ಶಿಲ್ಪಿ ಉಮಾಶಂಕರ ಅವರು.  ಬೆಂಗಳೂರು, ರಾಮನಗರ, ಕುಣಿಗಲ್‌, ಮೈಸೂರು ಇತರೆ ದೂರದ, ಹತ್ತಿರದ ಊರುಗಳಿಂದಲೂ ಯುವಕರ ತಂಡಗಳು ಬಂದು ಮಾಗಡಿ ಗಣಪತಿ ಮೂರ್ತಿ ಖರೀದಿಸಿ ಕೊಂಡೊಯ್ಯುತ್ತಾರೆ. 

ಪರಿಸರ ಸ್ನೇಹಿ ಗಣಪತಿ ಪೂಜಿಸಿ: ಇನ್ನಾದರೂ ಪುರಸಭೆ ಎಚ್ಚೆತ್ತು ಪಟ್ಟಣದಲ್ಲೆಡೆ ಪರಿಸರ ಸ್ನೇಹಿ ಗಣಪತಿ ಪೂಜಿಸಿ ಪರಿಸರ ಸಂರಕ್ಷಣೆ ಮಾಡುವಂತೆ ಜನ ಜಾಗೃತಿಗೊಳಿಸಬೇಕು. ಪರಿಸರಕ್ಕೆ ಹಾನಿಯಾಗುವಂತಹ ಗಣಪತಿ ಪ್ರತಿಷ್ಠಾಪನೆ ಬೇಡ ಎಂದು ಮನವರಿಕೆ ಮಾಡಬೇಕು. ಭಕ್ತಿ ಪ್ರಧಾನ ಮಣ್ಣಿನ ಗಣಪತಿ ಪೂಜಿಸಿ ಭಕ್ತಿ ಸಮರ್ಪಿಸಿ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬೇಕು. ಮಣ್ಣಿನ ಗಣಪನಿಗೆ ಇರುವ ಭಕ್ತಿ ಹಾಗೂ ಅಧಿಕ ಮೌಲ್ಯ, ನೀರಿನಲ್ಲಿ ಕರಗದ ಪಿಒಪಿ ಗಣಪತಿಗೆ ಸಿಗದು ಎಂಬುದು ಪ್ರತಿಯೊಬ್ಬರಿಗೂ ಅರ್ಥೈಸಬೇಕಿದೆ. 

ಭಿನ್ನ ಭಿನ್ನ ರೂಪದ ಗಣಪ: ಅಂಬೆಗಾಲಿನ ಕೃಷ್ಣ, ಉಗ್ರನರಸಿಂಹ ಗಣಪತಿ ರೂಪ, ಲಲಿತಾ ತ್ರಿಪುರ ಸುಂದರಿ, ಯಕ್ಷಗಾನ ರೂಪ, ಬಬ್ರುವಾಹನ ತುಣುಕು ರೂಪ, ರೇಣುಕಾಚಾರ್ಯಸ್ವಾಮಿ ರೂಪ, ಶ್ರೀನಿವಾಸಸ್ವಾಮಿ,  ಪರಿಸರ ಸ್ನೇಹಿ  ರಾಜ್‌ಕುಮಾರ್‌ ರೂಪ, ಪಂಚಮುಖೀಗಣಪ, ಆಂಜನೇಯ ರೂಪದ ಗಣಪತಿ ಮೂರ್ತಿಗಳಿಗೆ ಗಣಪತಿ ರೂಪಕೊಡಲಾಗುತ್ತದೆ. ಭಿನ್ನರೂಪದ ಮೂರ್ತಿಗಳನ್ನು ಮಾಡಿಕೊಡುತ್ತಾರೆ. ಆದರೆ ಇಂತಹ ಕಲಾ ಶಿಲ್ಪಿಗಳಿಗೆ ಸರ್ಕಾರದಿಂದ ಇಲ್ಲಿಯವರೆಗೂ ಪೋ›ತ್ಸಾಹ ಸಿಕ್ಕಿಲ್ಲ ಎಂದು ಶಿಲ್ಪಿ ಉಮಾಶಂಕರ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಬಿ.ಕೆ.ರಸ್ತೆಯಲ್ಲಿನ ಕಲ್ಯಾಣಿಯಲ್ಲಿ ವಿಸರ್ಜನೆ: ಗಣಪತಿ ಹಬ್ಬದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಾರ್ವಜನಿಕರು ಗಣಪತಿಗಳನ್ನು ಎಲ್ಲೆಂದರಲ್ಲಿ ಕೆರೆಗಳಲ್ಲಿ ವಿಸರ್ಜನೆ ಮಾಡುವಂತಿಲ್ಲ. ಆಗೊಂದು ವೇಳೆ ವಿಸರ್ಜನೆ ಮಾಡಿದರೆ ದಂಡ ಹಾಕಲಾಗುವುದು ಎಂದು ಆರೋಗ್ಯಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಪ್ರತಿ ವರ್ಷದಂತೆ ಪಟ್ಟಣದ ಬಿಕೆ.ರಸ್ತೆಯಲ್ಲಿನ ಕಲ್ಯಾಣಿಯನ್ನು ಸ್ವತ್ಛಗೊಳಿಸಿ ಗಣಪತಿ ವಿಸರ್ಜನೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಸಾರ್ವಜನಿಕರಿಗೂ ಯಾವುದೇ ತೊಂದರೆಯಾಗದಂತೆ ಕಲ್ಯಾಣಿ ಸುತ್ತಲು ಮರಗಳನ್ನು ತಡೆಗೋಡೆಯಾಗಿ ಕಟ್ಟಿ ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಚಂದ್ರಬಾಬು ತಿಳಿಸಿದರು.  

* ತಿರುಮಲೆ ಶ್ರೀನಿವಾಸ್‌  

Trending videos

Back to Top