CONNECT WITH US  

ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಖಾತ್ರಿ ಹೇಗೆ?

ಖಾಸಗಿ ಶಿಕ್ಷಣ ಸಂಸ್ಥೆಗಳು ಲಾಭದ ಹೊರತಾಗಿ ಬೇರೆ ಯೋಚಿಸುವುದಿಲ್ಲ. ವಿವಿ ಮತ್ತು ಕಾಲೇಜುಗಳು ಅವುಗಳಿಗೆ ಉದ್ಯಮಕ್ಕಿಂತ ಭಿನ್ನವಾದ ಸಂಸ್ಥೆಯಲ್ಲ. ಕೊನೆಗೆ ಅವು ಲೆಕ್ಕ ಹಾಕುವುದು ಲಾಭ-ನಷ್ಟವನ್ನು. ಹೀಗಾಗಿ ಐಷಾರಾಮಿ ಕ್ಯಾಂಪಸ್‌ ನಿರ್ಮಿಸುತ್ತವೆ. ಆದರೆ ಅಷ್ಟೇ ಸಮರ್ಪಕವಾದ ಶಿಕ್ಷಕರನ್ನು ನೇಮಿಸಿಕೊಳ್ಳಲಾರವು. ಕೆಲವೇ ಸಂಸ್ಥೆಗಳು ಮಾತ್ರ ಎರಡನ್ನೂ ಸಮದೂಗಿಸುತ್ತವೆ.

ನಾವು ಪಡೆಯುವ ಶಿಕ್ಷಣ ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಭರವಸೆಯನ್ನು ಕುದುರಿಸಬೇಕೇ ಹೊರತು ಗೊಂದಲಗಳನ್ನಲ್ಲ. ಪ್ರಚಲಿತ ಸಂದರ್ಭದಲ್ಲಿ ಅನೇಕ ಬಗೆಯ ಸಾಂಸ್ಕೃತಿಕ ಬಿಕ್ಕಟ್ಟುಗಳ ನಡುವೆ ಶಿಕ್ಷಣ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳು ಎಡ-ಬಲ ವಿಚಾರಧಾರೆಗಳಲ್ಲಿ ಸಿಲುಕಿ ಸಂಘರ್ಷದ ನೆಲೆಗಳಾಗಿ ರೂಪಾಂತರಗೊಳ್ಳುತ್ತಿವೆ. ಇನ್ನೊಂದು ಬದಿ ಜಾಗತೀಕರಣದ ಭರಾಟೆಯ ನಡುವೆ ಹೊಸ ಬಗೆಯ ಆವಿಷ್ಕಾರಗಳು, ತಂತ್ರಜ್ಞಾನ, ವ್ಯವಸ್ಥೆಯನ್ನು ತೀವ್ರವಾಗಿ ಬಾಧಿಸುವ ಆರ್ಥಿಕ ವಿದ್ಯಮಾನಗಳು, ಅತ್ಯಂತ ತೀಕ್ಷ್ಣವಾಗಿರುವ ಸ್ಪರ್ಧೆಗಳ ನಡುವೆ ನಿಂತು ನಮ್ಮ ದೇಶದ ಉನ್ನತ ಶಿಕ್ಷಣದ ಸ್ಥಿತಿಗತಿಗಳನ್ನು ಅವಲೋಕಿಸಬೇಕಾಗುತ್ತದೆ. 

ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣದ ಹಿನ್ನೆಲೆಯಲ್ಲಿ ನಾವು ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಇದ್ದೇವೆ, ಆದರೆ ಗುಣಮಟ್ಟದ ವಿಚಾರದಲ್ಲಿ ಮಾತ್ರ ನಾವು ಹಿಂದೆ ಬಿದ್ದಿದ್ದೇವೆ. ವಿವಿಗಳ, ಕಾಲೇಜುಗಳ ಸಂಖ್ಯೆ ಮತ್ತು ಅಲ್ಲಿ ಪ್ರವೇಶ ಪಡೆಯುತ್ತಿರುವವರ ಪ್ರಮಾಣದಲ್ಲಿ ನಾವು ವರ್ಷದಿಂದ ವರ್ಷಕ್ಕೆ ಏರಿಕೆ ಕಾಣಬಹುದು. 2001-02ರ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಕೇವಲ 8.1 ಪ್ರತಿಶತದಷ್ಟಿದ್ದರೆ, 2013-14ರ ಸಂದರ್ಭದಲ್ಲಿ ಆ ಪ್ರಮಾಣ 23.6 ಪ್ರತಿಶತದಷ್ಟಿತ್ತು. ಸದ್ಯ ಉನ್ನತ ಶಿಕ್ಷಣದ ವಲಯದಲ್ಲಿ 2.67 ಕೋಟಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 2020ಕ್ಕೆ ಈ ಪ್ರಮಾಣ ಸುಮಾರು 4 ಕೋಟಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. 

ಇದು ಸಾಧ್ಯವೂ ಆಗಬಹುದು. ಆದರೆ ಇಷ್ಟೇ ಕರಾರುವಾಕ್ಕಾಗಿ ನಾವು ಗುಣಮಟ್ಟದ ಬಗ್ಗೆ ಮಾತನಾಡಬಲ್ಲೆವೆ? ಈ ಗುಣಮಟ್ಟದ ಬಗ್ಗೆ ಮಾತನಾಡುವಾಗ ಉನ್ನತ ಶಿಕ್ಷಣದಲ್ಲಿ ಶೇ.62ರಷ್ಟು ಪಾಲುದಾರಿಕೆಯಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಮಾತನಾಡಬೇಕಾಗುತ್ತದೆ. ಶಿಕ್ಷಣವನ್ನು ಸರಕಿನ ಸ್ಥಾನದಲ್ಲಿ ನಿಲ್ಲಿಸಿ ವ್ಯವಹರಿಸುವ ಅನೇಕ ಖಾಸಗಿ ಸಂಸ್ಥೆಗಳಿವೆ. ಗುಣಮಟ್ಟದ ಬಗ್ಗೆ ಅವರು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಾರರು. ಕೇವಲ ಹಣ ಗಳಿಕೆಯ ಸಾಧನವೆನ್ನುವಂತೆ ವಿವಿಗಳು ಮತ್ತು ಕಾಲೇಜುಗಳು ಕೆಲಸ ಮಾಡುವುದರಿಂದ ಭೌತಿಕವಾಗಿ ಮಾತ್ರ ನಮ್ಮ ಶೈಕ್ಷಣಿಕ ಸಂಸ್ಥೆಗಳು ಗುರುತಿಸಲ್ಪಡುವಂತಾಗುತ್ತಿವೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಲಾಭದ ಹೊರತಾಗಿ ಬೇರೆ ಯೋಚಿಸುವುದಿಲ್ಲ. ಕೊನೆಗೆ ಅವರು ಲೆಕ್ಕ ಹಾಕುವುದು ಲಾಭ-ನಷ್ಟವನ್ನು. ಹೀಗಾಗಿ ಐಷಾರಾಮಿ ಕ್ಯಾಂಪಸ್‌ ನಿರ್ಮಿಸುತ್ತಾರೆ. ಆದರೆ ಅಷ್ಟೇ ಸಮರ್ಪಕವಾದ ಶಿಕ್ಷಕರನ್ನು ನೇಮಿಸಿಕೊಳ್ಳಲಾರರು. ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಎರಡನ್ನೂ ಸಮದೂಗಿಸುತ್ತವೆ. ಇಂಗ್ಲೆಂಡ್‌ ಮತ್ತು ಅಮೆರಿಕದಂಥ ರಾಷ್ಟ್ರಗಳಲ್ಲಿ ಪ್ರತಿ ಹದಿನಾರು ವಿದ್ಯಾರ್ಥಿಗಳಿಗೆ ಒಬ್ಬ ಅಧ್ಯಾಪಕನಿದ್ದರೆ, ನಮ್ಮಲ್ಲಿ 26-30 ವಿದ್ಯಾರ್ಥಿಗಳಿಗೆ ಒಬ್ಬ ಅಧ್ಯಾಪಕನಿದ್ದಾನೆ. ಇನ್ನು ಅಧ್ಯಾಪಕರಲ್ಲಿ ಬಹಳಷ್ಟು ಜನ ಕಾಯಂ ಉಪನ್ಯಾಸಕರಲ್ಲದೆ ಬೇರೆ ಬೇರೆ ಕಡೆಗಳಲ್ಲಿ ಪಾರ್ಟ್‌ ಟೈಮ್‌ ಕೆಲಸ ಮಾಡುವವರು. ಇವರ ಸಂಖ್ಯೆಯೇ ದೊಡ್ಡದು. ಇವರ ಮನಸ್ಥಿತಿ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕಿಸದೇ ಗುಣಮಟ್ಟದ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ಕರ್ನಾಟಕದಲ್ಲಿಯೇ ಸುಮಾರು 20 ವಿವಿಗಳು ಮತ್ತು 725 ಕಾಲೇಜುಗಳಿವೆ. ಸಂಖ್ಯೆಯ ಪ್ರಮಾಣ ಗುಣಮಟ್ಟದಲ್ಲಿ ಇನ್ನೂ ಸಾಧ್ಯವಾಗಬೇಕಿದೆ. 

ಸರ್ಕಾರದ ಸ್ವಾಗತಾರ್ಹ ಕ್ರಮ
ಸರ್ಕಾರ ತಡವಾಗಿಯಾದರೂ ಉನ್ನತ ಶಿಕ್ಷಣದ ವಲಯದಲ್ಲಿ ಒಂದು ಮಹತ್ತರ ತೀರ್ಮಾನ ತೆಗೆದುಕೊಳ್ಳಲಿದೆ. ಇಲ್ಲಿಯವರೆಗೆ ವಿವಿ ಕುಲಪತಿಗಳು, ಕುಲಸಚಿವರು, ಕಾಲೇಜುಗಳ ಪ್ರಾಚಾರ್ಯರು ತಮಗೆ ಆಡಳಿತದ ಒತ್ತಡವಿದೆ ಎಂದು ತರಗತಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಇನ್ನು ಮುಂದೆ ಹಾಗಾಗದಂತೆ ಸರ್ಕಾರ ಹೊಸ ಆದೇಶ ಹೊರಡಿಸಲಿದೆ. ಇಂಥವರು ಪಾಠ ಮಾಡುವುದು ಕೇವಲ ಶೈಕ್ಷಣಿಕ ಗುಣಮಟ್ಟದ ಹಿನ್ನೆಲೆಯಲ್ಲಿ ಮಾತ್ರ ನೆರವಾಗದೇ ಒಟ್ಟು ಶೈಕ್ಷಣಿಕ ಪರಿಸರದ ಪರಿವರ್ತನೆಯಲ್ಲೂ ನೆರವಾಗುವುದು. ಅಷ್ಟಕ್ಕೂ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಇತರೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತ ನಿರ್ವಹಣೆಯ ಚಟುವಟಿಕೆಗಳು ಕಡಿಮೆಯಾಗಿ, ಬೋಧನೆ, ಅಧ್ಯಯನ, ಸಂಶೋಧನೆಗಳೇ ಪ್ರಧಾನವಾಗಬೇಕು. ಆಡಳಿತ ಮತ್ತು ಅಧಿಕಾರ -ಇವೆರಡೂ ಒಂದೇ ನಾಣ್ಯದ 2 ಮುಖಗಳು. ಇವುಗಳ ಪಾತ್ರ ಶೈಕ್ಷಣಿಕ ಪರಿಸರದಲ್ಲಿ ಕಡಿಮೆಯಾಗಬೇಕು. ಹಾಗಾಗದ ಹೊರತು ಶೈಕ್ಷಣಿಕ ಪರಿಸರ ಮತ್ತು ಗುಣಮಟ್ಟದ ನಿರ್ವಹಣೆ ಸಾಧ್ಯವಾಗುವುದಿಲ್ಲ. ಕೆಲ ಮುಂದುವರೆದ ರಾಷ್ಟ್ರಗಳಲ್ಲಿ ಪಾಠ ಮಾಡುವುದನ್ನೇ ಬಿಡಿಸಿ, ಆ ಜಾಗದಲ್ಲಿ ಮಶೀನ್‌ ತುರುಕಿ ಭಾವಶೂನ್ಯ ಮತ್ತು ಜೀವಹೀನ ಶಿಕ್ಷಣ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರ ಕುಲಪತಿ, ಕುಲಸಚಿವರಿಗೆ ಪಾಠ ಮಾಡಲು ಹಚ್ಚುವ ಮೂಲಕ ತನ್ನ ನಿಜವಾದ ಶೈಕ್ಷಣಿಕ ಕಾಳಜಿ ಮೆರೆದಿದೆ. 

ಕೊರತೆಗಳ ನಡುವೆ ಗುಣಮಟ್ಟ 
ಮೂಲಭೂತ ಸೌಲಭ್ಯಗಳ ಕೊರತೆ, ಪೂರ್ಣಕಾಲಿಕ ಅಧ್ಯಾಪಕರ ಕೊರತೆ, ಕಟ್ಟಡಗಳ ಕೊರತೆ, ಬೋಧಕೇತರ ಸಿಬ್ಬಂದಿಯ ಕೊರತೆ -ಹೀಗೆ ಅನೇಕ ಕೊರತೆಗಳ ನಡುವೆ ಗುಣಮಟ್ಟದ ನಿರೀಕ್ಷೆ ಸಾಧ್ಯವಾಗಬಹುದೇ? ಅಧ್ಯಾಪಕ ಒತ್ತಡಗಳಲ್ಲಿ ಕೆಲಸ ಮಾಡುವಂತಿರಬಾರದು. ಆತನಿಗೆ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಲು ಸಾಕಷ್ಟು ಸಮಯಾವಕಾಶ ಬೇಕು. ನೆಮ್ಮದಿಯಿಂದ ಪಾಠ ಮಾಡಲು ಅದಕ್ಕೆ ಪೂರಕವಾದ ಪರಿಸರವಿರಬೇಕು. 2000 ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಒಬ್ಬನೇ ಒಬ್ಬ ಕಚೇರಿಯ ಸಿಬ್ಬಂದಿಯಿರುವ ಸ್ಥಿತಿಯ ನಡುವೆ ಅಧ್ಯಾಪಕರು ನೆಮ್ಮದಿಯಿಂದ ಪಾಠ ಮಾಡುವುದಾದರೂ ಹೇಗೆ? ಮತ್ತೆ ಕೆಲವು ಕಾಲೇಜುಗಳಲ್ಲಿ ಆವಶ್ಯಕತೆಗಿಂತಲೂ ಹೆಚ್ಚಿನ ಸಿಬ್ಬಂದಿಯಿದೆ. ಇದನ್ನು ಸಮದೂಗಿಸುವ ಅಗತ್ಯವಿದೆ. 

ಹಾಗಾದರೆ ತಪ್ಪಿದ್ದು ಎಲ್ಲಿ?
ಉನ್ನತ ಶಿಕ್ಷಣ ವಲಯದಲ್ಲಿ ಸಾಧ್ಯವಾದಷ್ಟು ಶ್ರೇಷ್ಠ ಶಿಕ್ಷಣ ತಜ್ಞರನ್ನೇ ನೇಮಿಸುವಂತಾಗಬೇಕು- ವಿವಿಗಳಿಗೆ ವಿ.ಸಿ.ಗಳನ್ನು ನೇಮಿಸುವ ಹಾಗೆ. ಅಧಿಕಾರಶಾಹಿಗಳ ಆಡಳಿತ ಬೇರೆ ಇಲಾಖೆಗಳಿಗಿರಲಿ. ಶಿಕ್ಷಣ ಇಲಾಖೆಗೆ ಮಾತ್ರ ಆ ವಲಯವನ್ನು ತಳ ಮೂಲದಿಂದ ಬಲ್ಲ ತಜ್ಞರೇ ನಿರ್ವಹಿಸುವಂತಾಗಬೇಕು. ಖಾಸಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಂತೂ ಕುಟುಂಬದ ಸಂಬಂಧಿಗಳೇ ಹೆಚ್ಚಿಗೆ ತುಂಬಿರುವುದರಿಂದ ಅವರ ಗಮನ ಆರ್ಥಿಕ ಅಭ್ಯುದಯದ ಕಡೆಗೇ ಹೆಚ್ಚಿರುತ್ತದೆ. ದೇಶದಲ್ಲಷ್ಟೇ ಅಲ್ಲ, ಜಗತ್ತಿನ ಅನೇಕ ಪ್ರತಿಷ್ಠಿತ ವಿವಿಗಳು ಖಾಸಗಿ ಸಹಭಾಗಿತ್ವದಲ್ಲಿಯೇ ಸ್ಥಾಪನೆಯಾಗಿವೆ. ಉದಾ: ಹಾರ್ವರ್ಡ್‌ ವಿವಿ. ಹೀಗಾಗಿ ಆಡಳಿತದಲ್ಲಿ ಅತ್ಯಂತ ಪ್ರಾಂಜಲ ಮತ್ತು ಶಿಕ್ಷಣದ ಬಗೆಗಿನ ಕಾಳಜಿಯಿಟ್ಟುಕೊಂಡವರು ಮುಂದಾದರೆ ಖಂಡಿತ ಗುಣಮಟ್ಟ ಸಾಧ್ಯವಿದೆ.

ಅನುಕರಣೆ ಎಷ್ಟು ಸರಿ?
ನಮ್ಮ ದೇಶದಲ್ಲಿ ಈಗೀಗ ಆರಂಭವಾಗುತ್ತಿರುವ ವಿವಿ ಮತ್ತು ಕಾಲೇಜುಗಳಿಗೆ ವಿದೇಶಿ ಶಿಕ್ಷಣ ಸಂಸ್ಥೆಗಳೇ ಮಾದರಿಯಾಗುವುದು ವಿಪರ್ಯಾಸ. ಅವರ ತಂತ್ರಜ್ಞಾನ ಮತ್ತು ಪಠ್ಯಕ್ರಮವನ್ನೂ ಯಥಾವತ್ತಾಗಿ ಅನುಸರಿಸಿದರೆ ಗುಣಮಟ್ಟ ಕೈಗೂಡುವುದಾದರೂ ಹೇಗೆ? ನಮ್ಮ ದೇಶದ ಶೈಕ್ಷಣಿಕ ಪರಿಸರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದನ್ನೆಲ್ಲ ಕೈಬಿಟ್ಟು ಬದಲಾವಣೆಯ ನೆಪದಲ್ಲಿ ತಿರುವು ಮುರುವು ಮಾಡುವ ಕ್ರಮ ಸರಿಯಲ್ಲ. ಜತೆಗೆ ಇಲ್ಲಿಯ ಪರಿಸರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಅವಗಣನೆ ಮಾಡಿ ಪಠ್ಯಕ್ರಮ ರೂಪಿಸುವುದರಿಂದ ನಮ್ಮ ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಲು ಸಾಧ್ಯವಾಗುತ್ತಿಲ್ಲ. 

ಪ್ರತಿಭಾವಂತ ಅಧ್ಯಾಪಕರ ಅಗತ್ಯ
ಅಧ್ಯಾಪಕರನ್ನು ಆಯ್ಕೆ ಮಾಡಿಕೊಳ್ಳುವಾಗಲೇ ಗುಣಮಟ್ಟದ ಬಗ್ಗೆ ಗಮನಹರಿಸಬೇಕು. ಹಿಂದೆ ಈ ಹುದೆ‌ªಗೆ ಸೆಳೆಯಲು ವೇತನ ಹೆಚ್ಚಿಸಲಾಯಿತು. ಆದರೆ ಸಮಾಜದ ದೃಷ್ಟಿಯಲ್ಲಿ ಅವರು ಪಡೆಯುವ ಸಂಬಳದ ಬಗ್ಗೆ ಪೂರ್ವಾಗ್ರಹಗಳು ಆರಂಭವಾದವು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂದು ಬಯಸುವ ಸಮುದಾಯ ಅಧ್ಯಾಪಕನಿಗೆ ಸಿಗುವ ಸೌಲಭ್ಯಗಳ ಬಗ್ಗೆ ಕಟುಮಾತುಗಳನ್ನು ಆಡುವುದು ವಿಪರ್ಯಾಸ! ಸಮರ್ಥ, ಅಧ್ಯಯನಶೀಲ, ಕ್ರೀಯಾಶೀಲ ಅಧ್ಯಾಪಕರ ಸಂಖ್ಯೆ ಹೆಚ್ಚಾಗಬೇಕು. ಅವರಿಗೆ ದೊರೆಯಬೇಕಾದ ಉತ್ತೇಜಕಗಳನ್ನು ಕೂಡ ಸೂಕ್ತ ಸಮಯಕ್ಕೇ ಒದಗಿಸಬೇಕು. ನಮ್ಮ ದೇಶದ ಉನ್ನತ ಶಿಕ್ಷಣ ಬರುವ ದಿನಗಳಲ್ಲಿ ಈ ಕಾಲದ ಅಗತ್ಯವನ್ನು ಗಮನಿಸಿ ಪಠ್ಯಕ್ರಮ ರೂಪಿಸಬೇಕಿದೆ. ನಿರಂತರ ಅಧ್ಯಯನ, ಬೋಧನೆ, ಸಂಶೋಧನೆಗೆ ಪೂರಕವಾದ ಪರಿಸರವನ್ನು ಒದಗಿಸಿಕೊಡಬೇಕು. ವಿಶ್ವವಿದ್ಯಾಲಯ ಧನ ಸಹಾಯ ಆಯೋಗವೂ ಕೂಡ ಇತ್ಯಾತ್ಮಕವಾದ ರೀತಿಯಲ್ಲಿ ಸುಧಾರಣೆಗಳನ್ನು ತರಬೇಕೇ ಹೊರತು ಕಟ್ಟಳೆಗಳನ್ನು ಹೇರುವುದಲ್ಲ. ವಿದ್ಯಾರ್ಥಿಗಳನ್ನು ಕೇವಲ ಪಠ್ಯಕ್ರಮವನ್ನು ಆಧರಿಸಿ ಮೌಲ್ಯಮಾಪನ ಮಾಡುವಂತಾಗದೇ ಅವರ ಕೌಶಲ, ಪ್ರತಿಭೆ, ಸಮಸ್ಯೆ ಪರಿಹರಿಸುವ ಗುಣವನ್ನಾಧರಿಸಿ ಅಂಕ ನೀಡುವಂತಾಗಬೇಕು. ಹಾಗೆಯೇ ವೈಜ್ಞಾನಿಕವಾದ ರೀತಿಯಲ್ಲಿ ವಿದ್ಯಾರ್ಥಿಗಳಿಂದ ಅಧ್ಯಾಪಕರ ಮೌಲ್ಯಮಾಪನವೂ ಆಗಬೇಕು. ಅಂದಾಗ ಮಾತ್ರ ಉನ್ನತ ಶಿಕ್ಷಣದಲ್ಲಿ ಗುಣಾತ್ಮಕವಾದ ಬದಲಾವಣೆಗಳನ್ನು ತರಲು ಸಾಧ್ಯ. 

ಡಾ| ಎಸ್‌.ಬಿ.ಜೋಗುರ

Trending videos

Back to Top