CONNECT WITH US  

ಗಂಡು ಹೆಣ್ಣಿನ ಸಂಬಂಧ ಸೂಕ್ಷ್ಮ ಹಂತಕ್ಕೆ ಬಂತೇ?

ಈಗಿನ ಹೆಚ್ಚಿನ ಯುವಕ ಯುವತಿಯರು ಬೇಗನೆ ಮದುವೆಯಾಗಲು ಬಯಸುವುದಿಲ್ಲ. ಮೊದಲು 18 ವರ್ಷಕ್ಕೆ ಮದುವೆಗೆ ಸಿದ್ಧವಾಗುತ್ತಿದ್ದ ಹುಡುಗಿಯರು ಈಗ ಇಪ್ಪತೈದು ಇಪ್ಪತೆಂಟು ವರ್ಷದವರೆಗೂ ವಿವಾಹವಾಗಲು ಸುತರಾಂ ಸಿದ್ಧವಾಗುವುದಿಲ್ಲ. ಕೆಲವರು ಇನ್ನೂ ತಡವಾದರೂ ಪರವಾಗಿಲ್ಲ ಎನ್ನುತ್ತಾರೆ. ವಿವಾಹ ಬೇಕೆನಿಸಿದರಷ್ಟೇ ಅವರು ವಿವಾಹವಾಗುವುದು. ಅಲ್ಲದೇ ಸಂಗಾತಿ ಅವರಿಗೆ ಸಂಪೂರ್ಣವಾಗಿ ಇಷ್ಟವಾದರೆ ಮಾತ್ರವೇ ಮದುವೆ. 

ಚೈತ್ರ ಬಂದಂತೆ, ವಿವಾಹ ಸಂಭ್ರಮಗಳು ಆರಂಭವಾದಂತೆ ಬದಲಾಗುತ್ತಿರುವ ಹೆಣ್ಣು ಗಂಡಿನ ಸಂಬಂಧದ ಕುರಿತಾದ ಮಾತುಗಳು ಮನಸ್ಸನ್ನು ಮುತ್ತಿಕೊಂಡಿವೆ. ನನ್ನ ಪ್ರೀತಿಯ ಹುಡುಗನೊಬ್ಬನ ಉದಾಹರಣೆ ಹೇಳಿಕೊಳ್ಳಬೇಕು. ತುಂಬ ಸ್ಟೈಲಿಷ್‌ ಆದ ಸುಂದರ ಹುಡುಗ ಆತ. ಹುಡುಗಿಯರ ವೃಂದದಲ್ಲೆ ಇರುವವನು. ಸುಂದರಾಂಗಿಯರ ಸಾಮಿಪ್ಯವೆಂದರೆ ಅವನಿಗೆ ತುಂಬ ಪ್ರೀತಿ. ಕೆಟ್ಟ, ಚಾರಿತ್ರÂಹೀನ ಹುಡುಗನಲ್ಲ. ತುಂಬ ಒಳ್ಳೆಯ ವನು. ಆದರೆ ನೂರಾರು ಸುಂದರಿಯರೊಂದಿಗೆ ಕೈ ಕುಲಕುವ, "ಹಾಯ್‌ ಬಾಯ್‌' ಎನ್ನುವ ರೀತಿಯ, ಬಹುಶಃ "ಐ ಲೈಕ್‌ಯೂ' ಎಂದು ಹಲವರಿಗೆ ಹೇಳಬಲ್ಲ ಮಾನಸಿಕ ಸ್ಥಿತಿ ಉಳ್ಳವನು. ಆಧುನಿಕತೆಯ ಗಾಳಿಯಲ್ಲೇ ಹುಟ್ಟಿ ಅದೇ ಗಾಳಿಯಲ್ಲಿಯೇ ಬೆಳೆದ ಹುಡುಗ. ಅವನ ನೂರಾರು ಗೆಳೆಯ, ಗೆಳತಿಯರೂ ಹಾಗೆಯೇ. ಎಲ್ಲರೂ ಮುಕ್ತ ಮನಸ್ಸಿನ, ಸುಂದರ ಮನಸ್ಸಿನ, ತುಂಬ ಒಳ್ಳೆಯ, ಆದರೆ ಯಾವುದೇ ರೀತಿಯ ಬಂಧನಗಳನ್ನು, ಪೂರ್ವ ಗ್ರಹಗಳನ್ನು ಇಟ್ಟುಕೊಳ್ಳದೇ ಮುಕ್ತವಾಗಿ ಬದುಕಲು ಬಯಸು ವವರು. ಸಂಪ್ರದಾಯಗಳಿಗೆ ಅಥವಾ ಸಾಮಾಜಿಕ ಕಟ್ಟಳೆಗಳಿಗೆ ಕಟ್ಟು ಹಾಕಿಕೊಂಡು ಬದುಕಲಿಚ್ಛಿಸದವರು. ಹಾಗೆಂದು ಅವರನ್ನು ಚರಿತ್ರಹೀನರು ಎಂದು ಕರೆಯುವುದು ಸೂಕ್ತವಾಗಲಿಕ್ಕಿಲ್ಲ. ಏಕೆಂದರೆ ಹೂವುಗಳಂತೆ ಬಂಧನವಿಲ್ಲದೆ ಬದುಕಲಿಚ್ಛಿಸುವವರು ಅವರು. ಬಹುಶಃ ಹಳೆಯ ರೀತಿಯ ವ್ಯಾಖ್ಯೆಗಳಿಗೆ ಸಿಗದ ರೀತಿಯ ಗಂಡು ಹೆಣ್ಣಿನ ಸಂಬಂಧ ಅದು. ಇಂತಹ ಹುಡುಗ ಈಗ ವಿವಾಹ ಬಂಧನದಲ್ಲಿ ಸಿಲುಕಿಕೊಂಡ ನಂತರ ಯಾಕೋ ಆತ ತುಂಬ ಸಂಕೀರ್ಣ ಸಂಬಂಧಗಳ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿರುವಂತೆ ಅನ್ನಿಸಿತು. ಆತನ ಮುಖ ಸಪ್ಪಗಾದಂತೆ ಅನಿಸಿತು.

ಬಹುಶಃ ಪ್ರೀತಿ, ಪ್ರೇಮ, ಗಂಡು ಹೆಣ್ಣಿನ ಸಂಕೀರ್ಣ ಸಂಬಂಧ ಗಳು ತುಂಬ ಬದಲಾಗಿ ಹೋಗುತ್ತಿವೆಯೇ ಎನ್ನುವ ಪ್ರಶ್ನೆಯನ್ನು ಇಲ್ಲಿ ಕೇಳಿಕೊಳ್ಳಬೇಕು. ಮೊದಲು ನಾವು ನಂಬಿಕೊಂಡು ಬಂದ ರೀತಿಯ ಗಂಡು ಹೆಣ್ಣಿನ ಸಂಬಂಧ ಎಂದರೇನು ಎಂಬುವುದನ್ನೂ ಇಲ್ಲಿ ಹೇಳಿಕೊಳ್ಳಬೇಕು. ಅಲ್ಲಿ ಸಂಬಂಧಗಳು ಹೇಗಿರುತ್ತವೆ ಎಂದರೆ ಹಳೆಯ ಹಿಂದಿ ಸಿನಿಮಾಗಳಲ್ಲಿನ ನಾಯಕ, ನಾಯಕಿಯರ ಸಂಬಂಧದ ಹಾಗೆ, ಉದಾಹರಣೆಗೆ ಖ್ಯಾತ ಹಿಂದಿ ಸಿನಿಮಾ "ದೇವದಾಸ್‌'ನ್ನು ನೋಡಬೇಕು ಇಲ್ಲಿ ಪ್ರೀತಿ ಎಂದರೆ ಕೇವಲ ಒಂದೇ ಗಂಡು ಮತ್ತು ಒಂದೇ ಹೆಣ್ಣಿನ ನಡುವೆ ಜನುಮ ಜನುಮಕ್ಕೂ ಬಿಡದ ಅಪೂರ್ವ ಬಂಧ. ಪ್ರೀತಿ ಎಂದರೆ ಜನ್ಮ ಜನ್ಮಾಂತರದ ಸಂಬಂಧ. ಗಂಡು ಹೆಣ್ಣಿನ ನಡುವೆ ಎಂತಹ ಪ್ರೀತಿ ಎಂದರೆ ಆ ಸಂಬಂಧದ ಪವಿತ್ರತೆಯನ್ನು ಬಿಟ್ಟರೆ ಇಬ್ಬರಿಗೂ ಬೇರೇನೂ ಇಲ್ಲ. ಪ್ರೀತಿ ಜೀವನವನ್ನು ಸಂಪೂರ್ಣವಾಗಿ ಆವರಿಸಿ ಕೊಂಡು ಬಿಡುವ ದಿವ್ಯ ಶಕ್ತಿ. "ಏಕ್‌ ದೂಜೆ ಕೇಲಿಯೆ' ಅಂತಹ ಸಿನಿಮಾಗಳಲ್ಲಿ ತಾನು ಪ್ರೀತಿಸಿದ ಹುಡುಗಿ ಅಥವಾ ಹುಡುಗ ಸಿಗದಿದ್ದರೆ ಅಲ್ಲಿ ಬರುವ ಪಾತ್ರಗಳು ತಮ್ಮ ಜೀವನವನ್ನೇ ದುರಂತ ಆಗಿಸಿಕೊಳ್ಳುವುದನ್ನು ನೋಡಿದ್ದೇವೆ. "ನೀನಿಲ್ಲದೇ ನನಗೇನಿದೆ?' ಎನ್ನುವ ರೀತಿಯ ಪ್ರೀತಿ ಅದು. ಅಲ್ಲಿ ಗಂಡು ಹೆಣ್ಣಿನ ಸಂಬಂಧ ವೆಂದರೆ ಗೆಳೆತನವಲ್ಲ. ಇಡೀ ಅಸ್ತಿತ್ವವನ್ನೇ ಆಕ್ರಮಿಸಿಕೊಂಡು ಬಿಡುವ, ಮೈ ಮನಗಳನ್ನೇ ಸಂಪೂರ್ಣವಾಗಿ ಅವರಿಸಿಕೊಂಡು ಮುನ್ನಡೆಸುವ ಶಕ್ತಿ. ಉತ್ತರ ಧ್ರುವದಿಂದ ದಕ್ಷಿಣಧ್ರುವಕ್ಕೆ ಬೀಸುವ ಚುಂಬಕ ಗಾಳಿ ಅದು. ಉದಾಹರಣೆಗೆ ಪ್ರಸಿದ್ಧ ಸಿನಿಮಾ "ದೇವದಾಸ್‌'ನಲ್ಲಿ ಅವಳ ವಿವಾಹ ಬೇರೊಬ್ಬನೊಂದಿಗೆ ಆಗಿ ಹೋದಾಗ ಪ್ರೇಮಿ ಸಂಪೂರ್ಣವಾಗಿ ಹುಚ್ಚನಾಗಿ ಹೋಗುತ್ತಾನೆ. ಅವಳನ್ನು ಬಿಟ್ಟರೆ ಅವನಿಗೆ ಎಲ್ಲವೂ ಶೂನ್ಯ. ಇಡಿ ಜಗತ್ತೇ ಒಂದು ಮರು ಭೂಮಿ. ಅಲ್ಲಿ ಪ್ರೀತಿಯ ಪರಿಕಲ್ಪನೆಯೆಂದರೆ ತುಡಿಯುವ ಎರಡು ಜೀವಗಳು ಒಂದು ತಾತ್ವಿಕ ಮಟ್ಟದಲ್ಲಿ ಬೆಸೆದು ಹೋಗುವುದು. ಅಲ್ಲಿ ಒಂದು ಜೀವ ಇಲ್ಲವೆಂದರೆ ಇನ್ನೊಂದು ಜೀವ ಬದುಕಿನ ಅರ್ಥವನ್ನೇ ಕಳೆದುಕೊಳ್ಳುತ್ತದೆ.

ನೋಡುತ್ತಿದ್ದೇವೆ, ಬಹುಶಃ ಇಂದಿನ ದಿನಗಳಲ್ಲಿ ಪ್ರೀತಿಯ ಪರಿಕಲ್ಪನೆಯೇ ಬದಲಾಗಿ ಹೋದಂತೆ ಅನಿಸುತ್ತಿದೆ. ಇಂದಿನ ಹದಿಹರೆಯದ ಹುಡುಗ ಹುಡುಗಿಯರು ಗಂಡು ಹೆಣ್ಣೆಂಬ ಭೇದವಿಲ್ಲದೆ ಮುಕ್ತವಾಗಿ ಬೆಳೆಯುತ್ತಾರೆ. ಮೈಗೆ ಮೈ ತಾಗಿದರೆ ಇತ್ಯಾದಿ ಒಂದು ಚೂರೂ ಬೇಸರವಿಲ್ಲ. ಇಬ್ಬರ ಬಟ್ಟೆಗಳಲ್ಲಿಯೂ ಅಂತಹ ವ್ಯತ್ಯಾಸವೇನೂ ಇಲ್ಲ. ಜೊತೆ ಜೊತೆಯಾಗಿ ಅಡ್ಡಾಡು ತ್ತಾರೆ. ಬೈಕ್‌ಗಳ ಮೇಲೆ ಸಂಚರಿಸುತ್ತಾರೆ. ಗುಂಪುಗಳಲ್ಲಿ, ರೆಸಾರ್ಟ್‌ ಗಳಲ್ಲಿ ವಸತಿ ಮಾಡುತ್ತಾರೆ, ಕುಡಿಯುತ್ತಾರೆ, ಕುಣಿಯುತ್ತಾರೆ. ಮಹಿಳೆಯರಿಗೆ ಹೊಸದಾಗಿ ಸಿಕ್ಕಿರುವ ಸ್ವಾತಂತ್ರÂವನ್ನು ಮನ 
ದುಂಬಿ ಅನುಭವಿಸಿ ಸಂಭ್ರಮಿಸುತ್ತಾರೆ. ಹದಿಹರೆಯದ, ಏರು ಯೌವನದ ಈ ರೀತಿಯ ಸಂಬಂಧಗಳು ಎಲ್ಲಿ ನಿಲ್ಲುತ್ತವೆ ಎಂದು ಹೇಗೆ ಹೇಳುವುದು? ಯುವಜನರು ಒಂದು ಸಮಾಜದ ಸಂಸ್ಕೃತಿಯನ್ನು ನಾಶಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಬಲವಾಗಿ ಕೇಳಿಬರುತ್ತಿದೆ. ಆದರೂ ಯುವಜನತೆಯ ಸಂಭ್ರಮಾಚರಣೆ ಅವಿರತವಾಗಿ, ಅವಿಚ್ಛಿನ್ನವಾಗಿ ಮುಂದು ವರೆದಿದೆ. ಹೆಚ್ಚಿನ ಯುವ ಜನತೆ ಈ ಮಾತುಗಳನ್ನೆಲ್ಲ ಕಿವಿಗೆ ಹಾಕಿಕೊಳ್ಳಲು ಕೂಡ ಸಿದ್ಧರಿಲ್ಲ. ಕಾಲ ಮತ್ತು ಹರಿಯುವ ನದಿ ಯಾರ ಮಾತನ್ನೂ ಕೇಳುವುದಿಲ್ಲ. 

ಹೆಚ್ಚಿನ ಯುವಕ ಯುವತಿಯರು ಬೇಗನೆ ಮದುವೆಯಾ ಗಲೂ ಬಯಸುವುದಿಲ್ಲ. ಮೊದಲು 18 ವರ್ಷಕ್ಕೆ ಮದುವೆಗೆ ಸಿದ್ಧವಾಗುತ್ತಿದ್ದ ಹುಡುಗಿಯರು ಈಗ ಇಪ್ಪತೈದು ಇಪ್ಪತೆಂಟು ವರ್ಷದವರೆಗೂ ವಿವಾಹವಾಗಲು ಸುತರಾಂ ಸಿದ್ಧವಾಗುವುದಿಲ್ಲ. ಕೆಲವರು ಇನ್ನೂ ತಡವಾದರೂ ಪರವಾಗಿಲ್ಲ ಎಂದೇ ಹೇಳುತ್ತಾರೆ. ಕೆಲವರು ಅವಿವಾಹಿತರಾಗಿಯೂ ಉಳಿಯಬಹುದು ಅಥವಾ ಲಿವ್‌ ಇನ್‌ ಸಂಬಂಧದಲ್ಲಿ ಉಳಿಯಲೂಬಹುದು. ವಿವಾಹ ಬೇಕೆನಿಸಿದರಷ್ಟೇ ಅವರು ವಿವಾಹವಾಗುವುದು. ಅಲ್ಲದೇ ಸಂಗಾತಿ ಅವರಿಗೆ ಸಂಪೂರ್ಣವಾಗಿ ಇಷ್ಟವಾದರೆ ಮಾತ್ರವೇ ವಿವಾಹ ವಾಗುವುದು. ಇಲ್ಲವಾದರೆ ಅವರು ವಿವಾಹವಾಗಲು ಇಷ್ಟವಿಲ್ಲ ಎಂದು ನೇರವಾಗಿಯೇ ಹೇಳಿಬಿಡುತ್ತಾರೆ. ಅಲ್ಲದೇ ಅದೆಲ್ಲ ನನ್ನ ವೈಯಕ್ತಿಕ ವಿಷಯ, ನೀವೆಲ್ಲ ಅದರಲ್ಲಿ ತಲೆ ಹಾಕಿಕೊಳ್ಳುವುದು ಬೇಡ ಎಂದು ತಂದೆ ತಾಯಿಗೆ ಕೂಡ ನೇರವಾಗಿಯೇ ಹೇಳಿ ಬಿಡುತ್ತಾರೆ. ಅವರ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು.

ಸಿನಿಮಾಗಳಲ್ಲಿ ಮದುವೆಯಾದ ತಕ್ಷಣ THE END ಎನ್ನುವ ಚಿತ್ರ ಗೋಚರಿಸುತ್ತದೆ. ಹಾಗೆಯೇ ಒಂದು ದೃಷ್ಟಿಯಲ್ಲಿ ವಿವಾಹ ಮೊದಲಿನ ರೀತಿಯ ಜೀವನ ವಿಧಾನದ ಅಂತ್ಯ ಎಂದು ಅವರು ಭಾವಿಸುತ್ತಿರಬೇಕು. ವಿವಾಹ ಬಹುಶಃ ಅವರ ಮೊದಲಿನ ಆವೇಗಕ್ಕೆ, ಆವೇಶಕ್ಕೆ, ಆಮೋದಕ್ಕೆ, ಭಾವನೆಗಳ ತೀವ್ರತೆಗೆ, ಮುಕ್ತ ಬದುಕಿಗೆ ಒಂದು ಪೂರ್ಣವಿರಾಮ ನೀಡಬಹುದು ಕೂಡ. ಏಕೆಂದರೆ ಈಗ ಸಂಬಂಧಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕಾಗಿ ಬರುತ್ತದೆ. ಮದುವೆಯ ನಂತರ ಜೀವನ ಸರಳ ರೇಖೆಗಳಲ್ಲಿ ಸಂಚರಿಸಲಾರಂಭಿಸುತ್ತದೆ. ಗಂಡ, ಹೆಂಡತಿಯ ಪಾತ್ರಗಳು ಸ್ಪಷ್ಟ ವಾಗಿ ಗುರುತಿಸಲ್ಪಡುವ ಸ್ಥಿತಿ ಉಂಟಾಗುತ್ತದೆ. ಏನೇ ಹೇಳಿದರೂ ಒಂದು ಬದ್ಧತೆಯನ್ನು ಇಟ್ಟುಕೊಳ್ಳಬೇಕಾದ ಅವಶ್ಯಕತೆ ಗಂಡ, ಹೆಂಡತಿ ಇಬ್ಬರಿಗೂ ಎದುರಾಗುತ್ತದೆ. ಬದ್ಧತೆಯಲ್ಲಿ ತಪ್ಪಿದರೆ ವಿವಾಹ ವಿಪರೀತಕ್ಕೆ ಹೋಗಿ ವಿಚ್ಛೇದನದ ಮಟ್ಟಕ್ಕೆ ಹೋಗ ಬಹುದು. ಮೊದಲು ಹಕ್ಕಿಗಳಂತೆ ಹಾರಾಡಿಕೊಂಡಿದ್ದ ಹುಡುಗ ಹುಡುಗಿ ಇಬ್ಬರಿಗೂ ಮಕ್ಕಳು ಮರಿ ಇತ್ಯಾದಿ ಜವಾಬ್ದಾರಿಗಳು ಆರಂಭವಾಗಿ, ಈಗ ಜೀವನ ಡಲ್‌ ಆಗಿ ಎಕ್ಸೆ„ಟಿಂಗ್‌ ಕ್ಷಣಗಳು ಹಿಂದೆಯೇ ಹೊರಟು ಹೋದ ಹಾಗೆ ಕೂಡ ಅನಿಸಬಹುದು.

ಉಳಿಯುವ ಪ್ರಶ್ನೆಗಳೆಂದರೆ ಹಿಂದೆ ಗುಂಪು ಗುಂಪಾಗಿ ನಿರ್ಬಂಧಗಳಿಲ್ಲದೇ ಸಂಭ್ರಮಿಸಿದ ಯುವಕ ಯುವತಿಯರು ವಿವಾಹದ ನಂತರ ತಮ್ಮ ಹಿಂದಿನ ಸಂಬಂಧಗಳನ್ನೆಲ್ಲ ಹಠಾತ್‌ ಮುರಿದುಕೊಳ್ಳುತ್ತಾರೆಯೇ? ಹಾಗೆ ಒಮ್ಮೆಲೇ ಮುರಿದುಕೊಳ್ಳಲು ಸಾಧ್ಯವಾಗುತ್ತದೆಯೇ ಅಥವಾ ಎಲ್ಲ ಸಂಬಂಧಗಳನ್ನೂ ಅದೇ ರೀತಿ ಇಟ್ಟುಕೊಳ್ಳುತ್ತಾರೆಯೇ ಎನ್ನುವುದು? ಇನ್ನೂ ಉಳಿಯುವ ಪ್ರಶ್ನೆಗಳೆಂದರೆ ಒಮ್ಮೆ ಇಟ್ಟುಕೊಂಡರೆ ಈ ಸಂಬಂಧಗಳಿಗೆ ಪರಿಧಿ ಯಾವುದು? ಕುತೂಹಲವಿರುವುದು ಇಲ್ಲಿ. ಅವರ ಗೆಳೆತನಗಳು, ಸಂಬಂಧಗಳು ಮೊದಲಿನ ಹಾಗೆ ಉಳಿದೇ ಹೋದರೆ ಅವು ಕೇವಲ ಭಾವನಾತ್ಮಕ ಹಂತಗಳಲ್ಲಿಯೇ ಉಳಿಯುತ್ತವೆಯೇ ಅಥವಾ ಸೀಮೆಗಳನ್ನೆಲ್ಲ ದಾಟಿ ದೈಹಿಕ ಹಂತಗಳಿಗೂ ಹೋಗುತ್ತವೆಯೇ ಎನ್ನುವುದೂ ದೊಡ್ಡ ಪ್ರಶ್ನೆ? ಏಕೆಂದರೆ ಭಾವನೆ ಎಲ್ಲಿ ಅಂತ್ಯವಾಗುತ್ತದೆ? ಶಾರೀರಿಕತೆ ಎಲ್ಲಿ ಆರಂಭವಾಗುತ್ತದೆ? ಇತ್ಯಾದಿ ವಿವರಣೆ ನೀಡುವುದು ತುಂಬ ಕಷ್ಟದ ಕೆಲಸ. ಹಳೆಯದಾದರೂ ಇನ್ನೂ ಕಾಡುವ ಪ್ರಶ್ನೆಯೆಂದರೆ ನೈತಿಕತೆ ಎನ್ನುವುದು ಕೇವಲ ಶಾರೀರಿಕ ಸಂಬಂಧಕ್ಕೆ ಅನ್ವಯಿಸುವ ವಿಷಯವೇ ಅಥವಾ ಮಾನಸಿಕವೇ? ಮತ್ತೆ ಈ ಎಲ್ಲ ಗೋಜುಗಳಲ್ಲಿ ಸಿಕ್ಕಿ ಬಿದ್ದು ಯಾಕೆ ಸುಮ್ಮನೆ ಮದುವೆಯಾದೆ ಎನ್ನುವ ಭಾವನೆ ಇಂದಿನ ಹೊಸ ವಿವಾಹಿತ ಯುವಕ ಯುವತಿಯರನ್ನು ತೀವ್ರವಾಗಿ ಕಾಡುತ್ತದೆಯೇ? 

ಹರಿಯುವ ನದಿಯಂತೆ ಜುಳು ಜುಳು ಹರಿಯುತ್ತಿದ್ದ ನನ್ನ ಪ್ರೀತಿಯ ಹುಡುಗ ಯಾಕೋ ವಿವಾಹದ ನಂತರ ತುಸು ತೆಪ್ಪಗಾಗಿ ಹೋಗಿದಕ್ಕೆ ಹೊಸ ಜಗತ್ತು ತಂದು ಇಟ್ಟ ಈ ಎಲ್ಲ ಮಾನಸಿಕ ಗೊಂದಲಗಳು, ತಲ್ಲಣಗಳು ಕಾರಣವೇ? ಈಗ ಬದಲಾದ ಸಾಮಾಜಿಕ ಸಂದರ್ಭದಲ್ಲಿ ವಿವಾಹ ಪೂರ್ವ ಹಾಗೂ ವಿವಾಹೋತ್ತರ ಸಂಬಂಧಗಳನ್ನು ವಿಚ್ಛೇದನದಂತಹ ಅತಿರೇಕಕ್ಕೆ ಹೋಗದ ರೀತಿಯಲ್ಲಿ ನಿಭಾಯಿಸುವ ಸೂತ್ರಗಳೇನಾದರೂ ಇವೆಯೇ? ಪ್ರೀತಿಯ ಪರಿಕಲ್ಪನೆಯೇ ಇಂದಿನ ದಿನಗಳಲ್ಲಿ ಬದಲಾಗಿ ಹೋಗಿದೆಯೇ? ಮೊದಲು ಭಾವಿಸಿದ ಹಾಗೆ ಪ್ರೀತಿ ಎಂದರೆ ಕೇವಲ ಎರಡೇ ಜೀವಗಳ ನಡುವೆ ನಡೆಯುವ ಮಾಂತ್ರಿಕತೆ ಎನ್ನುವುದು ಸುಳ್ಳಾಗಿ ಹೋಗಿ ಈಗ ಪ್ರೀತಿ ಹಲವು ವ್ಯಕ್ತಿಗಳೊಂದಿಗೆ ಒಂದೇ ಸಮಯದಲ್ಲಿ ಸಾಧ್ಯ ಎನ್ನುವ ರೀತಿಯ ಕಲ್ಪನೆ ಮೂಡಿ ಬರುತ್ತಿದೆಯೇ?
ಇವೆಲ್ಲ ತುಂಬ ಸಂಕೀರ್ಣವಾದ ಸಾಮಾಜಿಕ ಪ್ರಶ್ನೆಗಳು. 

ಪ್ರಸ್ತುತ ಸಮಾಜದಲ್ಲಿ ವಿವಾಹೋತ್ತರ ಸಂಬಂಧಗಳು ಬಹುಶಃ ಪುನರ್‌ ವಿಮರ್ಶೆಯ ಹಂತದಲ್ಲಿ ಇವೆಯೇ? ಪ್ರೀತಿ ಎಂಬ ಶಬ್ದ ಕೂಡ ಮರು ವ್ಯಾಖ್ಯಾಯಿಸಲ್ಪಡುತ್ತಿದ್ದೇಯೇ? ಎನ್ನುವ ಬೆಂಕಿ ಯಂತಹ ಪ್ರಶ್ನೆ ಕೂಡ ಸಮಾಜಶಾಸ್ತ್ರಜ್ಞರೆದುರು ಇದೆ. 

ತುಂಬ ಸೂಕ್ಷವಾದ, ಗಹನವಾದ ವಿಚಾರಗಳು ಇವು. ನನಗೆ ವೈಯಕ್ತಿಕ ಮಟ್ಟದಲ್ಲಿ ಹುಟ್ಟಿ ಕೊಂಡಿರುವ ಪ್ರಶ್ನೆ ಎಂದರೆ ವಿವಾಹವಾದ ಇಂತಹ ರೀತಿಯ ಹುಡುಗ ಆತನ ಎಲ್ಲ ಗೆಳತಿಯರಿಂದ ದೂರವಾಗಿ ಕೇವಲ ಹೆಂಡತಿಯ ಜತೆ ಸುಖ ಸಂಸಾರ ನಡೆಸುತ್ತಾನೆಯೇ, ನಡೆಸಬಲ್ಲನೇ ಎನ್ನುವುದು. ಈ ಪ್ರಶ್ನೆಗೆ ಉತ್ತರ ನೀಡಬಹುದಾದ್ದು ಸಮಯ ಮಾತ್ರ.

- ಡಾ. ಆರ್‌.ಜಿ. ಹೆಗಡೆ

Back to Top