CONNECT WITH US  

ಮಹಿಳಾ ಸಾಹಿತ್ಯ ಅಡುಗೆ ಮನೆ ಸಾಹಿತ್ಯವಲ್ಲ: ಡಾ| ಅರವಿಂದ¨

ಶಿವಮೊಗ್ಗ: ಪ್ರಗತಿಪರ ಮತ್ತು ಪ್ರಬಲ ಸ್ತ್ರೀವಾದ ಚಿಂತನೆಯ ಉಗಮಕ್ಕೆ ಕಾರಣವಾದ ಮಹಿಳಾ ಸಾಹಿತ್ಯವನ್ನು ಕೇವಲ ಅಡುಗೆ ಮನೆ ಸಾಹಿತ್ಯ ಎಂದು ಕೆಲವರು ವಿಮರ್ಶಿಸುವುದು ಸರಿಯಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ| ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರವು ಪ್ರೊ| ಹಿರೇಮಠ್ಠ ಸಭಾಂಗಣದಲ್ಲಿ ಆಯೋಜಿಸಿರುವ ಮಹಿಳೆ-ಸಾಹಿತ್ಯ ಮತ್ತು ಸಮಾಜ ಎಂಬ ಕಮ್ಮಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

 ಮಹಿಳಾ ಸಾಹಿತ್ಯ ರೂಪಿಸಿದ ಚಳವಳಿಯನ್ನು ಸ್ವಾತಂತ್ರ್ಯ ಪೂರ್ವದ ಆರಂಭಿಕ ಹಜ್ಜೆಗಳು ಮತ್ತು ಸ್ವಾತಂತ್ರೋತ್ತರದ ಹಿಂದೂ ಕೋಡ್‌ ಬಿಲ್‌ ಇತ್ಯಾದಿಗಳ ಮೂಲಕ ವಿಂಗಡಿಸಬಹುದಾಗಿದೆ. ಮಹಿಳಾ ಹಕ್ಕುಗಳಿಗಾಗಿ ಡಾ| ಅಂಬೇಡ್ಕರ್‌ ರಾಜಕೀಯ ಸ್ಥಾನ ತ್ಯಜಿಸಿದರು. ಆಸ್ತಿ ಹಕ್ಕುಗಳು
ಸೇರಿದಂತೆ ಮಹಿಳೆಯರಿಗೆ ಇರುವ ಸಾಕಷ್ಟು ಹಕ್ಕುಗಳನ್ನು ಬಳಸಿಕೊಳ್ಳುವಲ್ಲಿ ಸಮಾಜ ಸೋತಿದೆ ಎಂದರೆ ಸಾಹಿತ್ಯವು ಅರಿವು ಮೂಡಿಸುವಲ್ಲಿ ಕುಂಠಿತವಾಗಿದೆ ಎಂದರ್ಥ ಎಂದರು.
 
 ಸರಸ್ವತಿ ಬಾಯಿ ಕಾರವಾಡೆ, ಯಶವಂತ ಚಿತ್ತಾಲರ ಕೃತಿಗಳು ಒಬ್ಬ ಅನಕ್ಷರಸ್ಥ, ಶೋಷಿತ, ದಲಿತ ಮಹಿಳೆ ನಾಯಕಿಯಾಗಿ ಬೆಳೆಯಬಹುದಾದ ಸಾಧ್ಯತೆಗಳನ್ನು ಮುಂದಿಟ್ಟವು. ಸಂವಿಧಾನವು ಪ್ರಗತಿಪರ ಮತ್ತು ವಾಸ್ತವಿಕತೆಯ ಪ್ರತೀಕವೇ ಹೊರತು ಸಂಪ್ರದಾಯದ್ದಲ್ಲ. ಒಂದು ವಾದದ ಪ್ರಕಾರ ಮಹಿಳೆಯರು ದಲಿತರಿಗಿಂತ ಹೆಚ್ಚು ಶೋಷಣೆಗೆ ಒಳಗಾಗಿದ್ದಾರೆ, ಸಂಘಟನೆಯ ಕೊರತೆ ಇಲ್ಲಿ ಚಳವಳಿಯ ಮಂದತ್ವಕ್ಕೆ ಕಾರಣವಾಗಿದೆ ಎಂದು ಎಚ್ಚರಿಸಿದರು.

ಮಹಿಳೆಯರಲ್ಲೇ ದಲಿತ ಮಹಿಳೆಯರು ಮತ್ತಷ್ಟು ಶೋಷಣೆಗೆ ಒಳಗಾಗಿದ್ದು, ಜಾತಿ ವ್ಯಕ್ತಿಯನ್ನು ನಿಯಂತ್ರಿಸುವುದರೊಂದಿಗೆ ಎಲ್ಲ ಅವಕಾಶಗಳು ಮತ್ತು ಸಾಮಾಜಿಕ ಸಂಬಂಧಗಳನ್ನು ಕುಂಠಿತಗೊಳಿಸುತ್ತದೆ. ಭಾರತೀಯ ಸ್ತ್ರೀವಾದ ಇಂದು ತುರ್ತಾಗಿ ಬೇಕಿದ್ದು, ಪ್ರತಿಭಾ ನಂದಕುಮಾರ್‌ ಅವರ ನಾವು ಹುಡುಗಿಯರೇ ಹೀಗೆ ಎಂಬ ಕೃತಿ ಮಹಿಳಾ ಕೌಟುಂಬಿಕ ವ್ಯವಸ್ಥೆಯನ್ನು ಹೊಸದಿಕ್ಕಿಗೆ ಕೊಂಡೊಯ್ಯಬಲ್ಲದ್ದಾಗಿದೆ ಎಂದರು.

 ಕುಲಪತಿ ಪ್ರೊ| ಜೋಗನ್‌ ಶಂಕರ್‌ ಮಾತನಾಡಿ, ಸಮಾಜವೊಂದು ಸಾಮಾಜಿಕ ಸಂಬಂಧಗಳ ಬಲೆಯಾಗಿರುತ್ತದೆ. ಅಲ್ಲಿ ಕ್ರಾಂತಿಯ ಜನನವಾಗಿದ್ದು, ಮಹಿಳಾ ಜಗತ್ತಿಗೆ ಶಕ್ತಿ ತುಂಬಿದ್ದು ಸಾಹಿತ್ಯವೇ ಆಗಿದೆ. ಈ ನಿಟ್ಟಿನಲ್ಲಿ ಸಮಾಜ ಮತ್ತು ಸಾಹಿತ್ಯ ಲೋಕಗಳೆರಡರಲ್ಲಿಯೂ ಮಹಿಳಾ ಸ್ಥಾನಮಾನ ಮಹತ್ವದ್ದು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿವಿಯ ಕುಲಸಚಿವ ಪ್ರೊ| ಬೋಜ್ಯಾನಾಯ್ಕ ಮಾತನಾಡಿದರು. ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ| ಗೀತಾ ಸಿ.ಕನ್ನಡ ಅಧ್ಯಯನ ವಿಭಾಗದ ಡಾ| ಪ್ರಶಾಂತನಾಯಕ ಇದ್ದರು. 


Trending videos

Back to Top