CONNECT WITH US  

ಸ್ಟೆಂಟ್‌ ಹೇಗೆ ಕೆಲಸ ಮಾಡುತ್ತೆ ಗೊತ್ತಾ..?

ಹೃದ್ರೋಗಿಗಳಿಗೆ ಅಗತ್ಯವಾದ ಸ್ಟೆಂಟ್‌ಗಳ ದರಗಳ ಮೇಲೆ ಶೇ.40ರಷ್ಟು ಮಿತಿ ಹೇರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿದೆ. ಇದರಿಂದ ಸ್ಟೆಂಟ್‌ಗಳ ಬೆಲೆ ತೀವ್ರ ಇಳಿಕೆಯಾಗಿದ್ದು ಬಡ ಹೃದ್ರೋಗಿಗಳಿಗೆ ವರದಾನವಾಗಿದೆ. ಈ ಹಿನ್ನೆಲೆಯಲ್ಲಿ ಸ್ಟೆಂಟ್‌ಗಳು ಎಂದರೇನು? ಕೇಂದ್ರ ಸರ್ಕಾರದ ಕ್ರಮವೇನು? ಅದರಿಂದೇನಾಗುತ್ತೆ? ಎಂಬುದರ ಕುರಿತ ವಿವರಗಳು ಇಲ್ಲಿವೆ. 

ಸ್ಟೆಂಟ್‌ ಅಂದರೇನು? 
ಸ್ಟೆಂಟ್‌ ಅಂದರೆ ಅತ್ಯಂತ ಸಣ್ಣದಾದ, ಹಿಗ್ಗುವ ಪುಟಾಣಿ ಟ್ಯೂಬ್‌. ಇದು ಜಾಲರಿಯಂತೆ ಇರುತ್ತದೆ. ಹೃದಯ ರಕ್ತನಾಳದಲ್ಲಿ ತಡೆ ಉಂಟಾದರೆ ಅವುಗಳನ್ನು ಹೋಗಲಾಡಿಸುತ್ತದೆ. ಮುಖ್ಯವಾಗಿ ಪ್ಲೇಕ್‌ ಎಂಬ ಜಿಡ್ಡಿನ ರೀತಿಯ ಸಂರಚನೆ ಹೃದಯ ರಕ್ತನಾಳದ ಒಳಗೆ ಬೆಳೆದಿದ್ದರೆ ಆಗ ಪ್ರಮುಖ ರಕ್ತನಾಳದಲ್ಲಿ ಸರಾಗ ರಕ್ತ ಸಂಚಾರಕ್ಕೆ ತಡೆಯಾಗುತ್ತದೆ. ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯಿಂದಲೂ ಪ್ರಮುಖ ರಕ್ತನಾಳದಲ್ಲಿ ತಡೆಯಾಗಬಹುದು. ಈ ಸಂದರ್ಭ ವ್ಯಕ್ತಿಗೆ ಎದೆನೋವು, ಹೃದಯಸ್ತಂಭನ, ಹೃದಯದ ಕಾಯಿಲೆಗೆ ಕಾರಣವಾಗುತ್ತದೆ. ಈ ಸಂದರ್ಭ ಪ್ರಮುಖ ರಕ್ತನಾಳವನ್ನು ಸರಾಗವಾಗಿಸಲು ಈ ಸ್ಟೆಂಟ್‌ಗಳ ಬಳಕೆಯಾಗುತ್ತದೆ. ಇಂತಹ ಸ್ಟೆಂಟ್‌ ಗಳಿಗೆ ಕರೋನರಿ ಸ್ಟೆಂಟ್ಸ್‌ ಎಂದು ಕರೆಯುತ್ತಾರೆ. ಇದು ಲೋಹದಿಂದ ಮಾಡಿದ್ದು. ಒಂದು ಸಾಮಾನ್ಯ (ಬಿಎಮ್‌ಎಸ್‌) ಸ್ಟೆಂಟ್‌ ಆದರೆ ಇನ್ನೊಂದು ಔಷಧ ಹೊರಸೂಸುವ (ಡ್ರಗ್‌ ಇಲ್ಯೂಟಿಂಗ್‌) ಸ್ಟೆಂಟ್‌. ಈ ಸ್ಟೆಂಟ್‌ ನಿಧಾನವಾಗಿ ರಕ್ತನಾಳದಲ್ಲಿ ಔಷಧವನ್ನು ಹೊರಸೂಸಿ ತಡೆಯನ್ನು ತೆರವುಗೊಳಿಸುತ್ತದೆ. ಇಂತಹ ಕರೋನರಿ ಸ್ಟೆಂಟ್‌ಗಳನ್ನು ಹೃದಯ ರಕ್ತನಾಳದಲ್ಲಿ ಕೂರಿಸುವ ಪ್ರಕ್ರಿಯೆಗೆ "ಆ್ಯಂಜಿಯೋಪ್ಲಾಸ್ಟಿ' ಎಂದು ಹೆಸರು.

ಸ್ಟೆಂಟ್‌ಗಳನ್ನು ಕೂರಿಸೋದು ಹೇಗೆ? 
ಹೃದಯದ ಪ್ರಮುಖ ರಕ್ತನಾಳಗಳಲ್ಲಿನ ತಡೆಗಳನ್ನು ಕಂಡುಹಿಡಿದ ಬಳಿಕ ವೈದ್ಯರು ಹೃದಯಕ್ಕೆ ಸಾಗುವ ಪ್ರಮುಖ ರಕ್ತನಾಳ (ಕುತ್ತಿಗೆ, ಭುಜ ಇತ್ಯಾದಿ) ಮೂಲಕವಾಗಿ ಪುಟ್ಟ ಟ್ಯೂಬ್‌ ಅನ್ನು ಹಾಯಿಸುತ್ತಾರೆ. ಇದಕ್ಕೆ ಕ್ಯಾಥರ್‌ ಎಂದು ಹೆಸರು. ಹೊರಭಾಗದಲ್ಲಿ ಹಿಗ್ಗುವ ಸ್ಟೆಂಟ್‌ ಮತ್ತು ಸ್ಟೆಂಟ್‌ ಹಿಗ್ಗಿಸಲು ಅನುಕೂಲವಾದ ಪುಟ್ಟ ಬಲೂನ್‌ ಇರುತ್ತದೆ. ರಕ್ತನಾಳಕ್ಕೆ ತಡೆಯಾದ ಜಾಗವನ್ನು ಎಕ್ಸ್‌ರೇಯಿಂದ ಗುರುತಿಸಿ ನಿರ್ದಿಷ್ಟ ಜಾಗದಲ್ಲಿ ಅದನ್ನು ಹಿಗ್ಗಿಸಲಾಗುತ್ತದೆ. ಈ ಮೂಲಕ ರಕ್ತನಾಳದಲ್ಲಿನ ತಡೆಯನ್ನು ಬದಿಗೆ ಸರಿಸಿ, ಸರಾಗ ರಕ್ತ ಪರಿಚಲನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಇನ್ನೊಂದು ಅತ್ಯಾಧುನಿಕ ವಿಧಾನದಲ್ಲಿ ಸ್ಟೆಂಟ್‌ಗಳನ್ನು ಬಳಸಿ ರಕ್ತನಾಳದೊಳಗಿನ ಜಿಡ್ಡನ್ನು ತೆಗೆಯಲಾಗುತ್ತದೆ. ಒಂದು ವೇಳೆ ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿಂದ ರಕ್ತನಾಳ ಬಂದ್‌ ಆಗಿದ್ದಲ್ಲಿ ಸ್ಟೆಂಟ್‌ ಅಳವಡಿಕೆ ಬಳಿಕ ರಕ್ತ ಹೆಪ್ಪುಗಟ್ಟದಂತೆ ವೈದ್ಯರು ಚಿಕಿತ್ಸೆಯನ್ನು ನೀಡುತ್ತಾರೆ. 

 ಕೇಂದ್ರ ಸರ್ಕಾರ ಮಾಡಿದ್ದೇನು?
ಕೇಂದ್ರ ಸರ್ಕಾರ ಇದೀಗ ಸ್ಟೆಂಟ್‌ಗಳ ಬೆಲೆ ಮೇಲೆ ಮಿತಿ ಹೇರಿದೆ. ಅಂದರೆ ಯಾವುದೇ ರೀತಿಯ ಸ್ಟೆಂಟ್‌ಗಳನ್ನು (ವಿದೇಶದಿಂದ ಆಮದು ಮಾಡಿದ ಸ್ಟೆಂಟ್‌ ಆಗಿದ್ದರೂ ಕೂಡ) 29,600 ಸಾವಿರ ರೂ. ಮೇಲ್ಪಟ್ಟು (ಡ್ರಗ್‌ ಇಲ್ಯೂಟಿಂಗ್‌ ಸ್ಟೆಂಟ್‌) ಮಾರಾಟ ಮಾಡುವಂತಿಲ್ಲ. ಬಿಎಂಎಸ್‌ ಸ್ಟೆಂಟ್‌ಗಳ ಬೆಲೆಯನ್ನು ಕೇಂದ್ರ ಸರ್ಕಾರ ಗರಿಷ್ಠ 7,260 ರೂ. ಎಂದು ನಿಗದಿ ಮಾಡಿದ್ದು, ಡ್ರಗ್‌ ಇಲ್ಯೂಟಿಂಗ್‌ ಸ್ಟೆಂಟ್‌ ಬೆಲೆಯನ್ನು ಗರಿಷ್ಠ 29,600 ಎಂದು ನಿಗದಿ ಪಡಿಸಿದೆ. ಅಂದರೆ ಅವುಗಳ ಬೆಲೆಯಲ್ಲಿ ಶೇ.40ರಷ್ಟು ಕಡಿತ. ಈ ಮೊದಲು ಎರಡೂ ರೀತಿಯ ಸ್ಟೆಂಟ್‌ಗಳ ಬೆಲೆ 25 ಸಾವಿರ ರೂ.ಗಳಿಂದ 1.50 ಲಕ್ಷ ರೂ. ವರೆಗೆ ಇತ್ತು. ಸದ್ಯ ವ್ಯಾಟ್‌, ಸ್ಥಳೀಯ ತೆರಿಗೆಯನ್ನು ಸೇರಿಸಿ ಹೊಸ ಬೆಲೆ ಅನ್ವಯಿಸಲಾಗಿದೆ. 

 ಸ್ಟೆಂಟ್‌ಗಳ ಬೆಲೆ ಮೇಲೆ ಮಿತಿಗೆ ಕಾರಣವೇನು?
ಭಾರತದ ಸ್ಟೆಂಟ್‌ ಮಾರುಕಟ್ಟೆ ಸುಮಾರು 33 ಕೋಟಿ ರೂ. ಮೌಲ್ಯದ್ದು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸಕ್ಕರೆ ಕಾಯಿಲೆ ರೋಗಿಗಳ ಸಂಖ್ಯೆ ವೃದ್ಧಿಸುತ್ತಿರುವುದರಿಂದ ಹೃದಯದ ಕರೋನರಿ ರಕ್ತನಾಳಗಳ ಕಾಯಿಲೆ (ಸಿಎಡಿ) ಪ್ರಕರಣಗಳೂ ಹೆಚ್ಚಾಗಿವೆ. ಇದರಿಂದ ಸ್ಟೆಂಟ್‌ಗಳ ಬೇಡಿಕೆ ಹಿಂದೆಂದಿಗಿಂತ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಮುಖ್ಯ ಆರೋಗ್ಯ ಸಮಸ್ಯೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಟೆಂಟ್‌ಗಳ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಬೇಕು ಎಂಬುದು ತಜ್ಞರ ಒತ್ತಾಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಟೆಂಟ್‌ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಸ್ಟೆಂಟ್‌ಗಳ ಅಗತ್ಯ ಹೆಚ್ಚಿದ್ದರಿಂದ ಅವುಗಳನ್ನು ಭಾರೀ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಬಡ ರೋಗಿಗಿಳಿಗೆ ಆ್ಯಂಜಿಯೋಪ್ಲಾಸ್ಟಿ ಕೈಗೆಟುಕದ ಸಂಗತಿಯಾಗಿತ್ತು.

ಸ್ಟೆಂಟ್‌ ಬೆಲೆ ಇಳಿಕೆ ಹೇಗೆ?
2016 ಜುಲೈಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸ್ಟೆಂಟ್‌ಗಳನ್ನು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ (ಎನ್‌ಎಲ್‌ಇಎಮ್‌ 2015)ಗೆ ಸೇರಿಸಿತ್ತು.ಇದರಿಂದ ಔಷಧ ಬೆಲೆ ನಿಯಂತ್ರಣ ಆದೇಶ ಅನ್ವಯ ಕೇಂದ್ರ ಸರ್ಕಾರ ಸ್ಟೆಂಟ್‌ಗಳ ಬೆಲೆ ಮೇಲೆ ಮಿತಿಯನು ಹೇರಬಹುದಾಗಿದೆ. ಅಗತ್ಯವಸ್ತುಗಳ ಕಾಯ್ದೆ ಅಡಿ ಇವುಗಳೂ ಬರುವುದರಿಂದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಸ್ಟೆಂಟ್‌ಗಳನ್ನು ಒದಗಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ರಾಷ್ಟ್ರೀಯ ಫಾರ್ಮಾಸುÂಟಿಕಲ್‌ ಬೆಲೆ ನೀತಿ 2012ರ ಅನ್ವಯ ಶೇ.40ರಷ್ಟು ಬೆಲೆ ಇಳಿಕೆಗೆ ನಿರ್ಧರಿಸಲಾಗಿದೆ. 

Trending videos

Back to Top