CONNECT WITH US  

ವಲಸೆ ನಿಷೇಧ: ಟ್ರಂಪ್‌ ಹೊಸ ಅಸ್ತ್ರ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊಸ ವಲಸೆ ನೀತಿಗೆ ಸೋಮವಾರವಷ್ಟೇ ಸಹಿ ಹಾಕಿದ್ದಾರೆ. ಈ ಹಿಂದೆ ಟ್ರಂಪ್‌ ಸರ್ಕಾರ ಹೊರತಂದಿದ್ದ ವಲಸೆ ನೀತಿಯ ಕೆಲವು ಮುಖ್ಯ ನಿಯಮಗಳಿಗೆ ಅಮೆರಿಕದ ವಿವಿಧ ಕೋರ್ಟ್‌ಗಳಲ್ಲಿ ಹಿನ್ನಡೆಯಾಗಿದ್ದು, ಪರಿಣಾಮ ಹೊಸ ನೀತಿಯನ್ನು ಟ್ರಂಪ್‌ ಸರ್ಕಾರ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಹೊಸ ವಲಸೆ ನೀತಿಯ ಕುರಿತ ಮಾಹಿತಿಗಳು ಇಲ್ಲಿವೆ.

ಮಾ.16ರಿಂದ ವಲಸೆ ನಿಷೇಧ ಅನ್ವಯ

6 ಮುಸ್ಲಿಂ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ. 90 ದಿನಗಳ ಕಾಲ ಈ ನಿಷೇಧ ಜಾರಿಯಲ್ಲಿರಲಿದೆ. ಈ ಮೊದಲು ತಕ್ಷಣದಿಂದಲೇ ನಿಷೇಧ ಜಾರಿ ಮಾಡಲಾಗಿತ್ತು. ಆದರೆ ಹೊಸ ನೀತಿಯ ಪ್ರಕಾರ ಮಾ.16ರಿಂದ ನಿಷೇಧ ಜಾರಿಗೆ ಬರಲಿದೆ. ನಿಷೇಧಕ್ಕೊಳಗಾದ ದೇಶಗಳಲ್ಲಿ ಇರಾಕ್‌ ಅನ್ನು ಕೈಬಿಡಲಾಗಿದೆ. ಇರಾನ್‌, ಲಿಬಿಯಾ, ಸೊಮಾಲಿಯಾ, ಸುಡಾನ್‌, ಸಿರಿಯಾ, ಯೆಮೆನ್‌ ರಾಷ್ಟ್ರಗಳ ನಾಗರಿಕರಿಗೆ ನಿಷೇಧ ಅನ್ವಯವಾಗಲಿದೆ. ಆದರೆ ಸದ್ಯ ವೀಸಾ ಹೊಂದಿದ್ದವರಿಗೆ ಈ ನಿಷೇಧದಿಂದ ಏನೂ ಸಮಸ್ಯೆಯಿಲ್ಲ. ಸಿರಿಯಾ ಯುದ್ಧ ಸಂತ್ರಸ್ತರಿಗೆ ತಾತ್ಕಾಲಿಕ ನಿಷೇಧವನ್ನಷ್ಟೇ ಹೇರಲಾಗಿದೆ. ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ಸಂತ್ರಸ್ತರಿಗೂ ಯಾವುದೇ ವಿಶೇಷ ಅವಕಾಶ ಕಲ್ಪಿಸಲಾಗಿಲ್ಲ. 

ನಿಷೇಧ ಯಾರಿಗೆಲ್ಲ ಅನ್ವಯಿಸುತ್ತೆ?
ಸದ್ಯ 6 ರಾಷ್ಟ್ರಗಳ ನಾಗರಿಕರಿಗೆ. ಆದರೆ ಸದ್ಯ ವೀಸಾ ಹೊಂದಿದ್ದವರಿಗೆ ಇದರ ಚಿಂತೆ ಇಲ್ಲ. ಜೊತೆಗೆ
ವಲಸೇತರ ವೀಸಾ ಹಿಂದಿದ ವಿದ್ಯಾಥಿರ್ಸಗಳು, ನೌಕರರಿಗೂ ಸಮಸ್ಯೆಯಿಲ್ಲ. ಆದರೆ ಸದ್ಯ ವೀಸಾ ಹೊಂದಿದ್ದು, ಅಮೆರಿಕದಿಂದ ಹೊರಹೋಗಲು, ವಾಪಸಾತಿಗೆ ಅನುಮತಿ ಇದ್ದವರಿಗೆ ನಿಷೇಧ ಪರಿಣಾಮ ಬೀರುತ್ತದೆ. 

ಹೊಸ ವಲಸೆಗಾರರಿಗೆ ಅವಕಾಶವಿಲ್ಲ

ಮೂಲ ಆದೇಶದಂತೆಯೇ, ಹೊಸ ಆದೇಶದಲ್ಲೂ 6 ದೇಶಗಳ ಹೊಸ ವಲಸೆಗಾರರಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ ಮುಂದುವರಿಸಲಾಗಿದೆ. ಹೊಸ ವಲಸೆಗಾರ ವೀಸಾದಲ್ಲಿ ಉದ್ಯೋಗಕ್ಕೆ ಬರುವ ಅಥವಾ ಕುಟುಂಬ ಕಾರಣಕ್ಕೆ ಅಮೆರಿಕಕ್ಕೆ ಬರುವವರಿಗೂ ನಿಷೇಧ ಅನ್ವಯ. ಇನ್ನು ಈ ಹಿಂದೆ 6 ರಾಷ್ಟ್ರಗಳ ನಾಗರಿಕರಿಗೆ ನೀಡಲಾಗಿದ್ದ ವಲಸೆ ವೀಸಾಗಳನ್ನು ಮಾನ್ಯ ಮಾಡಲಾಗುವುದು. ಗ್ರೀನ್‌ಕಾರ್ಡ್‌ ಅರ್ಜಿಗಳನ್ನೂ ನಿಷೇಧ ಅವಧಿ ಮುಕ್ತಾಯದ ಬಳಿಕ ವಿಲೇವಾರಿ ಮಾಡಲಾಗುತ್ತದೆ.

ಯುದ್ಧ ಸಂತ್ರಸ್ತರ ಕಥೆ ಏನು?
ಸಿರಿಯಾ ಸಂತ್ರಸ್ತರಿಗೆ 120 ದಿನಗಳ ಕಾಲ ನಿಷೇಧವಿದೆ. ಆದರೆ ಅವರಿಗೆ ಖಾಯಂ ಆಗಿ ನಿಷೇಧ
ಹೇರಿಲ್ಲ. ನಿಷೇಧಕ್ಕೊಳಗಾದ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ಸಂತ್ರಸ್ತರು (ಮುಸ್ಲಿಮರನ್ನು ಹೊರತುಪಡಿಸಿ) ಅವರಿಗೂ ವಿಶೇಷ ಅವಕಾಶವಿಲ್ಲ. ಇನ್ನು ಕೆಲವೊಂದು ಪ್ರಕರಣಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಪರಾಮರ್ಶಿಸಿ ವಲಸೆಗೆ ಅನುಮತಿ ಕಲ್ಪಿಸಲಾಗುವುದು. ಆದರೆ ಯುದ್ಧ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಅಮೆರಿಕ ಸರ್ಕಾರದ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಯಿಲ್ಲ. ಟ್ರಂಪ್‌ ಆಡಳಿತ 2017ನೇ ಅವಧಿಯಲ್ಲಿ 50 ಸಾವಿರ ಯುದ್ಧ ಸಂತ್ರಸ್ತರಿಗೆ ಪುನರ್ವಸತಿಗೆ ಉದ್ದೇಶಿಸಿದೆ. ಒಬಾಮಾ ಸರ್ಕಾರ ಇದ್ದ ವೇಳೆ, ಇದು 1.10 ಲಕ್ಷ ಇತ್ತು. 

ಗ್ರೀನ್‌ಕಾರ್ಡ್‌ದಾರರಿಗೆ ಚಿಂತೆ ಇಲ್ಲ!
ಸದ್ಯ ನಿಷೇಧಕ್ಕೊಳಗಾಗಿರುವ ರಾಷ್ಟ್ರಗಳ ಗ್ರೀನ್‌ಕಾರ್ಡ್‌ದಾರರಿಗೆ ಯಾವುದೇ ಚಿಂತೆ ಇಲ್ಲ. ಆದರೆ
ವಿಮಾನ ನಿಲ್ದಾಣಗಳಲ್ಲಿ ಅವರ ಪರಿಶೀಲನೆ ಕುರಿತಂತೆ ಏನೂ ಹೇಳಿಲ್ಲ. ಈ ಕುರಿತ ಗೊಂದಲ ಇನ್ನೂ ಇದೆ. 1999ರಿಂದ 2015ರವರೆಗೆ ನಿಷೇಧಕ್ಕೊಳಗಾದ 6 ರಾಷ್ಟ್ರಗಳ ಶೇ.3.6ರಷ್ಟು ಮಂದಿಗೆ ಮಾತ್ರ ಗ್ರೀನ್‌ಕಾರ್ಡ್‌ ಒದಗಿಸಲಾಗಿದೆ.

ಹೊಸ ವಲಸೆ ನೀತಿಗೆ ಕಾನೂನು ಸಂಕಷ್ಟ
ಅಮೆರಿಕದ ಕಾನೂನು ಪ್ರಕಾರ, ಲಿಂಗ, ದೇಶ, ಹುಟ್ಟಿದ ಸ್ಥಳ, ವಾಸದ ಸ್ಥಳವನ್ನು ಪರಿಗಣಿಸಿ ವಲಸೆ
ಅವಕಾಶ ನಿರಾಕರಿಸುವಂತಿಲ್ಲ. ಅಲ್ಲದೇ ಯಾವುದೇ ಖಚಿತ ಸಾಕ್ಷ್ಯ ಇಲ್ಲದೇ ವಲಸೆಗಾರರ ವಿರುದ್ಧ
ಕ್ರಮಕ್ಕೆ ಸಾಧ್ಯವಿಲ್ಲ. ಇದಕ್ಕೂ ಮುನ್ನ ವಲಸೆ ನೀತಿ ಕುರಿತ ವಿಚಾರಣೆ ವೇಳೆ ಕೋರ್ಟ್‌ಗಳಲ್ಲಿ ಅಮೆರಿಕ
ಹೋಂಲ್ಯಾಂಡ್‌ ಸೆಕ್ಯುರಿಟಿ ನಿಷೇಧಿತ ರಾಷ್ಟ್ರಗಳ ನಾಗರಿಕರ ಬಗ್ಗೆ ತನ್ನ ಬಳಿ ಯಾವುದೇ ನಿರ್ದಿಷ್ಟ
ಆರೋಪಗಳು, ಅಪರಾಧದ ಕುರಿತ ಸಾಕ್ಷ್ಯಗಳು ಇಲ್ಲ ಎಂದು ಹೇಳಿತ್ತು. ಆದ್ದರಿಂದ ಟ್ರಂಪ್‌ ವಲಸೆ ನೀತಿಗೆ ಕಾನೂನು ತೊಡಕು ಮುಂದುವರಿದಿದೆ.

Trending videos

Back to Top