CONNECT WITH US  

ಉಸಿರು ನಿಂತರೂ...ನಿನ್ನ ಹಸಿಹಸಿ ನೆನಪು ನನ್ನೊಂದಿಗಿರಲಿ...

ನಿತ್ಯ ಕಣ್ಣು ತೆರೆದಾಗ...ಕಣ್ಣ ತುಂಬಾ ನಿನ್ನ ನೋಟವಿರಬೇಕು...ಕಣ್ಣು ಮುಚ್ಚುವಾಗ ಕಣ್ಣ ತುಂಬಾ ನಿನ್ನ ನೆನಪಿರಬೇಕು..ತೆರೆದು ಮುಚ್ಚುವುದರ ನಡುವಣ ಸಮಯವೇ ನಿನ್ನ ನೆನಪನ್ನು ಹೊತ್ತು ಸಾಗಬೇಕು ನಾನು. ಜನ್ಮ ಜನ್ಮಾಂತರದಲ್ಲೂ ನೀ ನನ್ನ ಜೊತೆಯಾಗಬೇಕು.....ಬಹಳ ಮುದ್ದು ಮಾಡಿ ಎದೆಯಲ್ಲಿ ಪುಟ್ಟದೊಂದು ಗುಡಿಕಟ್ಟಿ ಅದರಲ್ಲಿ ಕ್ಷಣ ಕ್ಷಣಕ್ಕೂ ಮಿಡಿಯುತ್ತಿರೋ ಒಂದೇ ಒಂದು ಬಡಿತ ನೀನು!!! . ನಿನ್ನೆದೆಯ ಪಿಸುಮಾತನ್ನೇ ಹಾರವಾಗಿ ಹಾಕಿಕೊಂಡವನು ನಾನು. ನಿನ್ನೊಂದಿಗೆ ಮೌನದಲ್ಲಿ ಬೆರೆತು ನನ್ನೊಂದಿಗೇ ಮಾತಾಗುವ ಪ್ರೀತಿ ನೀನು. ಉಸಿರಿಗೆ ಉಸಿರಾಗಿ ಜೀವದ, ಭಾವವಾದವನು ನಾನು. ಉಸಿರು ನಿಲ್ಲುವವರೆಗೂ ನಿನ್ನ ಪ್ರೀತಿಯನ್ನು ಕಣ್ಣ ಕಾಡಿಗೆಯಂತೆ ಕಾಪಿಟ್ಟು ಬರುವೆ, ಅಲ್ಲಿ ತನಕ ನನ್ನನ್ನು ಸಹಿಸಿಕೊಂಡಿರು.

ನನ್ನ ಹೃದಯವೇ...ನೀನೆನಗೆ ಏನು? ಜೀವಸೆಲೆಯೇ? ಅದರೊಳಗಿನ ಉಸಿರೇ? ಯಾವ ಕವಿಯೂ ಕಟ್ಟಲಾರದ ಕಾವ್ಯ ಕಾಣಿಕೆಯೇ? ಶಬ್ದ ಭಂಡಾರದ ಯಾವ ಪದಗಳೂ ನಿನ್ನ ಮೇಲಿನ ನನ್ನ ಒಲವನ್ನು  ಬಣ್ಣಿಸಲಾರವು. ಅದಕ್ಕೆಂದೇ ಭಾವನೆಗಳ ಹೂರಣವಾದ ನನ್ನೀ ಪ್ರೀತಿಯನ್ನ ಅಕ್ಷರ ರೂಪಕ್ಕಿಳಿಸಿದ್ದೇನೆ. ಪ್ರಕೃತಿಯೂ ನೀನೇ ಆಗಿ ಗೋಚರಿಸಿಸುವಾಗ ನಾನು ನನ್ನಲ್ಲೇ ಮಾತಾಗುತ್ತೇನೆ. ಮುಂಜಾನೆ ಮಬ್ಬು ಬೆಳಕಲ್ಲಿ ನೆತ್ತಿ ಮೇಲೆತ್ತಿ ದಿಟ್ಟಿಸುವಾಗ ಮನೆಯತ್ತ ತೆರಳಲು ಮುಖ ಮಾಡಿ ನಿಂತಿರುವ ಶಶಿ ತುಂಟನಗು ಬೀರುತ್ತಾ ನನ್ನೆಡೆಗೆ ನೋಟ ಬೀರಿದಾಗ ಯಾಕೋ ಬೊಗಸೆಯಲ್ಲಿ ಮುಖ ಮುಚ್ಚಿಕೊಳ್ಳುವಂತಾಯಿತು. ಕ್ಷಣ ಮಾತ್ರದಲ್ಲಿ ನಿನ್ನ ನೆನಪಿಂದ ನೇತ್ರದ್ವಯಗಳು ನೀರಲ್ಲಿ ಅದ್ದಿ ಪಟಪಟನೆ ತೆರೆದವು.

ಮೆಲ್ಲನೆ ಅಂಗಳಕ್ಕೆ ಇಳಿದಾಗ ಹಿಮ ಬಿಂದುವಿನಲ್ಲಿ ಮಿಂದ ನಸುಹಳದಿ ಬಣ್ಣದ ದಾಸವಾಳದತ್ತ ಕಣ್ಣು ಹಾಯಿಸಿದಾಗ ನೀನೆದ್ದು ಜಳಕಮಾಡಿ ನನ್ನ ಬರುವಿಕೆಯನ್ನು ಕಾತರದಿಂದ ಎದುರು ನೋಡುತ್ತಿರುವಂತೆ ಭಾಸ. ಕೊರಳ ನರಗಳು ಉಬ್ಬಿ ಕಣ್ಣೆವೆಗಳು ಕೆನ್ನೆಮೇಲೆ ಮಲಗಿ ನಿನ್ನ ನೆನಪಿಗೆ ಪನ್ನೀರ ಸಿಂಚನದ ಧಾರೆಯಾದವು. ಮೆಲ್ಲನೆ ಹೆಜ್ಜೆಗಳು ನದಿಯತ್ತ ಹೊರಟಾಗ ಹೊಳೆ ಬದಿಯ ದಟ್ಟವಾದ ಪೊದರುಗಳೆಡೆಯಿಂದ ಕಳ್ಳ ಹೆಜ್ಜೆಯನ್ನಿರಿಸುತ್ತಾ ಸಾಲಾಗಿ ಬರುವ ಮಯೂರಗಳ ದಂಡು ಉದ್ದು ಬೀಸಿದ ಗದ್ದೆಗಿಳಿದಾಗ ಆ ಚೆಲುವಿನಲ್ಲೂ ಮೇಳೈಸಿದ್ದು ನಿನ್ನ ಮಧುರ ನೆನಪು. ಈಗ ನೀನಿರಬೇಕಿತ್ತು ಜತೆಯಲ್ಲಿ !! ಒಲವಿಂದ ನಿನ್ನ ಕಣ್ಣೊಳಗೆ ಅವಿತು ಅದರೊಳಗೆ ಮನೆಮಾಡಿ ಚಿರಕಾಲ ನೆಲೆಸುವಾಸೆ. ಎದೆಬಾಗಿಲ ಬಳಿ ಸಪ್ತವರ್ಣದ ಮಳೆಬಿಲ್ಲು ನಿನ್ನ ನೆನಪಿಗೆ ರಂಗೇರಿ  ಕಂಗೊಳಿಸುವಾಗ.....ಕಳ್ಳಿ ನೀನು ಬಂದೇ ಬಿಡುವೆ ಮುದ್ದುಗರೆಯಲು....ಕಣ್ಣು ತೆರೆದರೆ ಎಲ್ಲಿ ನಿನ್ನ ಮುದ್ದು ಬಿಂಬ ಜಾರಿ ಹೋಗುವುದೋ ಅನ್ನೋ ಕಳವಳಕ್ಕೆ ರೆಪ್ಪೆಯನ್ನು ಭದ್ರವಾಗಿ ಮುಚ್ಚಿ ಒರಗಿಕೊಂಡದ್ದು ಅದೆಷ್ಟೋ ಬಾರಿ.

ನನ್ನ ಮುದ್ದು ಮನಸೇ...
ನಿನ್ನ ಒಂದು ಸ್ವರಕ್ಕೆ ಜೀವನಾಡಿಗಳೆಲ್ಲಾ ಬದುಕಿ ಉಸಿರಾಗುವುದೆಂದರೆ! ದೇಹ ಮನಸು ಹೃದಯ ನಿರಾಳತೆಗೆ ಜಾರಿ ಹಾಯೆನಿಸುವಷ್ಟು ಉಸಿರು ಸರಾಗವಾಗಿ ಗಾಳಿಯಲ್ಲಿ ತೇಲಿ ಹೋಗುವ ಪರಿಗೆ ಬೆರಗಾಗುವ ಕ್ಷಣವದು. ಭಾನು ಹೇಗೆ ನಿತ್ಯ ಸತ್ಯವೋ ಅಷ್ಟೇ ಸತ್ಯ ಆ ಸ್ವರಕ್ಕೆ ಜೋತು ಬಿದ್ದ ಬದುಕು ಕೂಡ....ನಿನ್ನ ಸ್ವರ ಮಾತಾಗುತ್ತಾ ಹೋದಂತೆಲ್ಲಾ ಹೃದಯ ಕವಿತೆ ಕಟ್ಟುವ ಕಾಯಕಕ್ಕೆ ಅಣಿಯಾಗುವ ಮುಗ್ಧ ಸಮಯವದು. ದನಿ ಒಡೆದು ಬಂದ ಲಾಲಿ ಹಾಡಿಗೆ ಮಗುವಾದ ಮನ ಚಿನ್ನ ನಗುವಿನಲ್ಲೇ ದಿನವಿಡೀ ಬಿಡಿಸಿಕೊಳ್ಳುತ್ತಾ ಹೂವಾಗುತ್ತಾ, ಪ್ರತಿ ಕುಸುಮದಲ್ಲೂ ನಿನ್ನ ನೆನಪಿನ ಪರಿಮಳವನ್ನೇ ಬದುಕಾಗಿಸಿಕೊಂಡ ಅಪ್ಪಟ ಹೃದಯವದು...

ನಿನ್ನ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ನಿನ್ನ ಹೃದಯ ಮಂದಿರದಲ್ಲಿ ಪ್ರತಿಷ್ಠಿತ ನಾಗಿಲ್ಲ, ನಿನ್ನ ನಿಷ್ಕಲ್ಮಷ ಪ್ರೀತಿಗೆ ನಾನು  ಯಾವ ಜನ್ಮದಲ್ಲಿ ಪುಣ್ಯ ಮಾಡಿರಬಹುದು.    ನನ್ನೊಲವೇ....ನಿನ್ನ ಯಾವ ನಗುವೋ? ಯಾವ ಮಾತೋ?? ಸುತ್ತಲೂ ಭದ್ರ ಸರಪಳಿಯಾಗಿ ನನ್ನನ್ನು ಬಿಗಿದು ಬಂಧಿಸಿದ್ದು ?!!! ಹೃದಯದ ಕರೆಗೆ ಕಾದು ಬೇಸತ್ತ ಮನಸು ಸ್ವರ ಹೊರಡದ ಹಕ್ಕಿಗೊರಳಿನಂತೆ ಮೌನ ಯಾತನೆಗೆ ನನ್ನನ್ನು ನಾನು ಒಡ್ಡಿಕೊಳ್ಳುವ ಶಿಕ್ಷೆ ಕಲ್ಪನಾತೀತ. ಯಾಕೆ ಈ ಪರಿಯ ತುಡಿತ? ಹೊತ್ತು ಜಾರಿದಂತೆಲ್ಲಾ ಕಡಲಾಗಿ ಧುಮ್ಮಿಕ್ಕಲು ಸಜ್ಜಾಗಿ ನಿಲ್ಲವ ನಯನಗಳು!! ತಾಳ್ಮೆಯಿಲ್ಲ ಅವಕ್ಕೆ.ಯಾವ ಬಂಧನದ ಸ್ವರವದು!?! ಒಂದನ್ನೊಂದು ಬೆಸೆದುಕೊಂಡು ಭೂಮಿ ಆಕಾಶವನ್ನು ಒಂದುಮಾಡಿ ಶ್ರುತಿಯಾಗಿಸಿ ಬ್ರಹ್ಮಾಂಡವನ್ನೆಲ್ಲಾ ತನ್ನಲ್ಲೇ ಅಡಗಿಸಿಟ್ಟುಕೊಂಡ ಅದ್ಭುತ ಜೀವಸಾರ ನೀನು ಅಂದರೆ ನನ್ನವಳು!!!. ಹೊತ್ತಲ್ಲದ ಹೊತ್ತಲ್ಲೂ ತೂರಿ ಬರುವ ಸ್ವರಕ್ಕೆ ಮಾತಾಗುವ ಹೃದಯ ಕಳೆದ ನಿನ್ನೆಗಳ ಮೆಲುಕು ಮಾತುಗಳೆ ಕವಿತೆಯಾಗಿ ಅಕ್ಷರ ಮಾಲೆಯಲ್ಲಿ ಕಂಗೊಳಿಸಿ ಪ್ರತಿ ಪದಕ್ಕೂ ನಿನ್ನದೇ ರೂಪ ಕೊಡುತ್ತಾ ಸುಖೀಸುವವನು ನಾನು!!. ನಿನ್ನ ಕೆಲವೊಂದು ಮಾಣಿಕ್ಯಗಳು ಮುದ್ದು, ಶೋನ, ಬಾಬು, ಸಪ್ತಸ್ವರಗಳನ್ನೆಲ್ಲಾ ಬಲು ನವಿರಾಗಿ ಜೋಡಿಸಿ ನಿನ್ನ ಎದೆಯಾಳದಿಂದ ಹೊರಟ ಜೇನದು ನನಗೆ. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನನ್ನು ನಾನು ಅರ್ಪಿಸಿಕೊಳ್ಳುತ್ತಾ, ತೆರೆದುಕೊಳ್ಳುತ್ತಾ, ಬಂದವನು ಪುಟ ಮಗುಚಿದಂತೆಲ್ಲಾ ನಿನ್ನ ನೆನಪಿನ ಹನಿಗಳ ತುಂತುರುವಿನಲ್ಲಿ ಮೀಯುತ್ತಾ ದಿನದಿಂದ ದಿನಕ್ಕೆ ಸೊರಗುತ್ತಾ ಬಂದವನು. ಭಾವ ಸರೋವರದಲ್ಲಿ ಅರಳಿರೋ ಶುಭ್ರವಾದ ಪ್ರೇಮದ ಹೂವು ನೀನು. ಮುದುಡಿ ಬಾಡದ ಹಾಗೆ ರವಿಚಂದ್ರರಿಗೆ ಅರಿಕೆ ಮಾಡಿಕೊಂಡಿದ್ದೇನೆ. ಸದಾ ನೆರಳಾಗಿರುವ ಭರವಸೆ ರವಿಯ¨ªಾದರೆ, ಚಂದ್ರಿಕೆಯ ಹೊಳಪು ನಿರಂತರ ನೀಡುವೆ ಎನ್ನುವ ಹಾರೈಕೆಯ ಓಲೆ ಶಶಿಯದ್ದು.

ಚಿನ್ನುಮರಿ ಅಪ್ಪಿ-ತಪ್ಪಿ ನನ್ನ ಪ್ರೀತಿ ನೀನಗೆ ಅರ್ಥ ಆಗಲಿ ಅನ್ನುವ ನಿನ್ನ ಮಾತು ನನಗೆ ಕಾದ ಕಬ್ಬಿಣದ ಬರೆ ಮರೆಯದಿರು. ನಿನ್ನ ಚಿನ್ನ ಒಲವು ಬಿಟ್ಟು ಬೇರೇನೂ ಗೊತ್ತಿಲ್ಲದ ಮುಗª. ನಿನ್ನ ಪ್ರೀತಿಯಲ್ಲೇ ಜಗತ್ತಿನ ಎಲ್ಲಾ ಖುಷಿ ಅನನ್ಯವಾಗಿ ಅನುಭವಿಸುವವನು ನಾನು. ನಿನ್ನ ನೆನಪಿಂದಲೇ ಕಣ್ಣೀರಾಗುವ ಹೃದಯ ಒಂದೊಮ್ಮೆ ನಿನ್ನ ದನಿ ನನ್ನ ಕರ್ಣಗಳನ್ನು ತಬ್ಬಿಕೊಂಡಾಗ.......ಅದು ಯಾವ ಶಬ್ದಕೋಶದಿಂದ ಹೆಕ್ಕಿ ತೆಗೆಯಲಿ ನಾನು ನನ್ನ ಆ ಕ್ಷಣದ ಖುಶಿಯನ್ನ!!!!!. ಜಗತ್ತಿನ ಎಲ್ಲಾ ಕಷ್ಟಗಳು ನನಗೆ ಲೆಕ್ಕಕ್ಕಿಲ್ಲ ಆದರೆ ನಿನ್ನ ಹುಸಿ ಕೋಪವೂ ನನ್ನ ಅದುರಿಸಿಬಿಡುತ್ತೆ. ನಿನ್ನ ಕಣ್ಣಾಲಿಗಳು ಹರಿದ ಮೇಲೆ ನಾನು ವಾಸ್ತವ ಜಗತ್ತಿಗೆ ಮರುಳುವೆ ಯಾವತ್ತೂ ನೀನು ನನ್ನಿಂದಾಗಿ ಮರುಗಬಾರದು ಇದು ನನ್ನಾಸೆ ಮುದ್ದು.

ನನ್ನ ಉಸಿರು, ನನ್ನ ಮಾತು- ಮೌನ, ನಗು- ಅಳು, ನನ್ನ ಬಂಧು- ಬಳಗ, ನನ್ನ ಸುಖ- ಸಖ, ಕತೆ- ಕವನ, ಕನಸು- ಮನಸು, ನೋಟ - ಆಟ, ರಾಗ- ತಾಳ, ಎಲ್ಲವೂ ನೀನೆ.....ಆಸೆಯೂ ನನಗಿಲ್ಲ ಆಸ್ತಿಯೂ ನನಗಿಲ್ಲ ನಿನ್ನನ್ನು ಬಿಟ್ಟು ಬೇರೇನೂ ಬೇಕಿಲ್ಲ. ಮುಂಜಾನೆ, ಮುಸ್ಸಂಜೆ , ರಾತ್ರಿ ಎಲ್ಲವೂ ನಿನ್ನ ದನಿಯಿಂದ
ಮುಗಿಯಬೇಕು. ನಿನ್ನೆದೆ ಬಡಿತಕ್ಕೆ ನನ್ನದೂ ಒಂದು ಎದೆ ಬಡಿತವಿರಲಿ, ಅವೆರಡರ ಮಿಲನಕ್ಕೆ ಕಾಣದ ಕೈಯ ಅನುಗ್ರಹವಿರಲಿ.

ಕೊನೆಗೊಂದೇ ನಿವೇದನೆ.....
ನಿನ್ನ ಪ್ರೀತಿಯ ಈ ಹೃದಯ ತನ್ನ ಎದೆಬಡಿತ ನಿಲ್ಲಿಸುವಾಗಲೊಮ್ಮೆ ಹಾರಿ ಬಂದು ನಿನ್ನೆದೆಯಲ್ಲಿ ಪಿಸುಗುಡುವ ದನಿಗೆ ಮಾರ್ದನಿಯಾಗಿ.....ಶುಭ್ರವಾದ ಬಿಳಿ ಬಟ್ಟೆಯೊಂದಿಗೆ ನನ್ನ ಕೊನೆಯ ಯಾತ್ರೆಯಲ್ಲಿ ಭಾಗಿಯಾಗು...ಎನ್ನುವ ಅಂತರಾಳದ ನಿವೇದನೆಯೊಂದಿಗೆ....ನನ್ನ ಹೃದಯ ಮಂದಿರದಲ್ಲಿ ಪ್ರತಿಕ್ಷಣವೂ ಪೂಜೆಗೊಳ್ಳುತ್ರಿರುವ ನನ್ನೊಳಗಿನ ನೀನು...ನಿನ್ನ - ನನ್ನ ಒಲವ ಜಾತ್ರೆಯ ತೇರು ಹಸಿರಾಗಿರಲಿ ಎನ್ನುವ ಪ್ರಾರ್ಥನೆ ದೇವನಲ್ಲಿ.....ದೀರ್ಘ‌ವಾದ ಪತ್ರಕ್ಕೆ ವಿರಾಮವೀಯುವೆ....ಪ್ರತಿ ಉತ್ತರಕ್ಕೆ ಕಾಯುವವನು ನಾನಲ್ಲ ....ಪಿಸುಮಾತಿನ ರಿಂಗಣ ಎದೆಯೊಳಗೆ ರಿಂಗುಣಿಸಿದಾಗ ಕಿವಿಯಾಗುವೆ, ಕಣ್ಣಾಗುವೆ ನಿನ್ನಲ್ಲಿ ಒಂದಾಗುವೆ. ನಿನ್ನೆ ಶಿವರಾತ್ರಿ  ಮನೆಯ ಅಂಗಣದಲ್ಲಿ ಬಿದ್ದ ಪಾರಿಜಾತ ಶಿವನ ಪಾದಕ್ಕರ್ಪಿಸಿದ್ದೇನೆ ಇಂದು ಮೊಗ್ಗು ಮಲ್ಲಿಗೆ ನಿನ್ನ ಮುಡಿ ತುಂಬಿಸಲು  ಬರಬೇಕೆಂದಿರುವೆ. ನಿನ್ನವನು...

ಲೇಖಕ : ಪೇತ್ರಿ ವಿಶ್ವನಾಥ ಶೆಟ್ಟಿ

Trending videos

Back to Top