CONNECT WITH US  

ಧರ್ಮಸ್ಥಳ ಲಕ್ಷದೀಪೋತ್ಸವ; ಲಲಿತೋದ್ಯಾನದಲ್ಲಿ ದೀಪಗಳ ಉತ್ಸವ

ಲಲಿತೋದ್ಯಾನ ಉತ್ಸವದಲ್ಲಿ ಇಡೀ ಉದ್ಯಾನವನವು ದೀಪಗಳ ಬೆಳಕಿನಿಂದ...

ಉಜಿರೆ: ಶ್ರೀ ಕ್ಷೇತ್ರದ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಲಲಿತೋದ್ಯಾನ ಉತ್ಸವವು ಹಲವು ಪೂಜಾ ವಿಧಿವಿಧಾನಗಳ ಮೂಲಕ ವಿಜೃಂಭಣೆಯಿಂದ ನೆರವೇರಿತು.

ಲಕ್ಷದೀಪೋತ್ಸವದ ಅಂಗವಾಗಿ 5 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಈ ಲಲಿತೋದ್ಯಾನ ಉತ್ಸವ ಪ್ರಮುಖವಾದ ಆಕರ್ಷಣೆಯಾಗಿದೆ. ಮಂಗಳವಾರದಂದು ಮಂಜುನಾಥ ಸ್ವಾಮಿಯ ಪೂಜಾ ಕಾರ್ಯಗಳನ್ನು ಪೂರೈಸಿ ವಿಶೇಷವಾಗಿ ಅಲಂಕರಿಸಿ ದೇಗುಲದ ಒಳಗೆ 16 ಸುತ್ತು ಬಂದ ಬಳಿಕ.  ಮೂರ್ತಿಯನ್ನುದೇಗುಲದ ಮುಂಭಾಗದಲ್ಲಿ ತಂದು ಸ್ವರ್ಣ ಪಲ್ಲಕ್ಕಿಯಲ್ಲಿ ಸ್ವಾಮಿಯನ್ನು ಕೂರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಸ್ವಾಮಿಗೆ ದೇಗುಲದ ಆನೆ ಚಾಮರ ಬೀಸಿದವು. ಪಲ್ಲಕ್ಕಿಯ ಎರಡು ಬದಿಯಲ್ಲಿ ಪಂಜನ್ನು ಹಿಡಿದು, ವಾಲಗ, ಕೊಳಲು, ಚೆಂಡೆ, ಶಂಖ ವಿವಿಧ ವಾದ್ಯಗಳ ಜೊತೆಗೆ ಒಂದು ಸುತ್ತು ಪೇಟೆಯಲ್ಲಿ ಪಲ್ಲಕ್ಕಿಯ ಮೂಲಕ ಪ್ರದಕ್ಷಿಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವಾಮಿಯ ದರ್ಶನಕ್ಕೆ ಕಾದು ನಿಂತಿದ್ದ ಭಕ್ತರು ಪಲ್ಲಕ್ಕಿಯಲ್ಲಿ ವಿಶೇಷವಾಗಿ ಅಲಂಕೃತಗೊಂಡಿದ್ದ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ನಂತರ ಸ್ವಾಮಿಯ ಪಲ್ಲಕ್ಕಿಯು ದೇವಸ್ಥಾನದ ಮುಂಭಾಗದಲ್ಲಿರುವ ಲಲಿತೋದ್ಯಾನಕ್ಕೆ ಕರೆತರಲಾಯಿತು. ಹಲವಾರು ದೀಪಗಳಿಂದ ಅಲಂಕೃತಗೊಂಡಿದ್ದ ಉದ್ಯಾನದಲ್ಲಿ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಉದ್ಯಾನದಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಸ್ವಾಮಿಗೆ ಅಷ್ಟಾವಧಾನ ಸೇವೆ. ನೈವೇದ್ಯ.ದೀಪಾಲಂಕಾರದ ನಂತರ ಮಹಾ ಮಂಗಳಾರತಿ ಪೂಜೆಯನ್ನು ಮಾಡಿ ಉತ್ಸವವನ್ನು ಪೂರ್ಣಗೊಳಿಸಲಾಯಿತು. ನಂತರದಲ್ಲಿ ಲಲಿತೋದ್ಯಾನದಿಂದ ದೇವರ ಮೂರ್ತಿಯನ್ನುದೇವಸ್ಥಾನದ ಬಳಿ ತಂದು ಬೆಳ್ಳಿ ರಥದಲ್ಲಿ ದೇವಸ್ಥಾನದ ಸುತ್ತಲೂ ಮೆರವಣಿಗೆಯನ್ನು ಮಾಡಲಾಯಿತು .ಈ ಮೆರವಣಿಗೆಯಲ್ಲಿ ಭಕ್ತರು ಬೆಳ್ಳಿ ರಥವನ್ನು ಎಳೆಯುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ಬಳಿಕ ದೇವರ ಮೂರ್ತಿಗೆ ಮಂಗಳಾರತಿ ಮಾಡಿ ಮೂರ್ತಿಯನ್ನು ದೇಗುಲದೊಳಗೆ ಕೊಂಡೊಯ್ಯಲಾಯಿತು.

ಪ್ರತಿವರ್ಷದಂತೆ ಈ ವರ್ಷವೂ ಸಹ ಧರ್ಮಸ್ಥಳದ ದೀಪೋತ್ಸವದ ಸಂದರ್ಭದಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು. ಭಕ್ತರೆಲ್ಲರು ಸ್ವಾಮಿಗೆ ದೀಪವನ್ನು ಬೆಳಗುವುದರ ಮೂಲಕ ತಮ್ಮ ಹರಕೆಯನ್ನು ಪೂರೈಸಿಕೊಂಡರು.ಈ ಲಲಿತೋದ್ಯಾನ ಉತ್ಸವದಲ್ಲಿ ಇಡೀ ಉದ್ಯಾನವನವು ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿತ್ತು.

ವರದಿ : ವರದಶಂಕರ ಕೆ.ಎಂ.

ಚಿತ್ರ :ಗುರುಗಣೇಶ್ ಭಟ್

Trending videos

Back to Top