CONNECT WITH US  

ವನಿತಾ ಹಾಕಿ: ಭಾರತ-ಜಪಾನ್‌ 2-2 ಡ್ರಾ

ರಿಯೋ ಡಿ ಜನೈರೊ: 36 ವರ್ಷಗಳ ದೀರ್ಘ‌ ಅವಧಿಯ ಬಳಿಕ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆ ಗಳಿಸಿದ ಭಾರತೀಯ ವನಿತಾ ಹಾಕಿ ತಂಡವು "ಬಿ' ಬಣದಲ್ಲಿ ರವಿವಾರ ನಡೆದ ಮೊದಲ ಪಂದ್ಯದಲ್ಲಿ ಜಪಾನ್‌ ವಿರುದ್ಧ ಅಮೋಘ ನಿರ್ವಹಣೆ ನೀಡಿ 2-2 ಗೋಲುಗಳಿಂದ ಡ್ರಾ ಸಾಧಿಸಲು ಯಶಸ್ವಿಯಾಗಿದೆ.

ತನಗಿಂತ ಉನ್ನತ ರ್‍ಯಾಂಕಿನ ಜಪಾನ್‌ ವಿರುದ್ಧ ಎರಡು ಗೋಲು ಹಿನ್ನಡೆಯಲ್ಲಿದ್ದರೂ ಅದ್ಭುತ ಹೋರಾಟದ ಪ್ರದರ್ಶನ ನೀಡಿದ ಭಾರತ ಅಂತಿಮವಾಗಿ ಸಮಬಲ ಸಾಧಿಸಿ ಸೋಲು ತಪ್ಪಿಸಿಕೊಂಡಿತು. ವಿಶ್ವದ 13ನೇ ರ್‍ಯಾಂಕಿನ ಭಾರತ ಮೊದಲ ಅವಧಿಯ ಆಟ ಮುಗಿದಾಗ ಎರಡು ಗೋಲು ಹಿನ್ನಡೆಯಲ್ಲಿತ್ತು. ಅಂತಿಮ ಅವಧಿಯಲ್ಲಿ ಭಾರತೀಯ ವನಿತೆಯರು ತೀವ್ರ ಪೈಪೋಟಿಯಿಂದ ಹೋರಾಡಿ ಎರಡು ಗೋಲು ಹೊಡೆದು ಒತ್ತಡ ಹೇರಿದರು. ಅಂತಿಮ ಹಂತದಲ್ಲಿ ಎರಡೂ ತಂಡಗಳಿಗೆ ಗೋಲು ಹೊಡೆಯುವ ಅವಕಾಶ ಲಭಿಸಿದ್ದರೂ ಗೋಲ್‌ಕೀಪರ್‌ಗಳ ಅಮೋಘ ನಿರ್ವಹಣೆಯಿಂದಾಗಿ ಇದು ಸಾಧ್ಯವಾಗಲಿಲ್ಲ.

ವಿಶ್ವದ 10ನೇ ರ್‍ಯಾಂಕಿನ ಜಪಾನ್‌ 15ನೇ ನಿಮಿಷದಲ್ಲಿ ಎಮಿ ನಿಶಿಕೋರಿ ಮೂಲಕ ಮೊದಲ ಗೋಲು ಹೊಡೆದಿತ್ತು. ಮೀ ನಕಶಿಮಾ 28ನೇ ನಿಮಿಷದಲ್ಲಿ ಇನ್ನೊಂದು ಗೋಲು ಹೊಡೆದರು. 31ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ರಾಣಿ ರಾಮ್‌ಪಾಲ್‌ ಗೋಲು ಹೊಡೆದು ತೀರುಗೇಟು ನೀಡಿದರು. 40ನೇ ನಿಮಿಷದಲ್ಲಿ ಲಿಲಿಮಾ ಮಿಂಝ್ ಇನ್ನೊಂದು ಗೋಲು ಹೊಡೆದು ಸಮಬಲ ಸಾಧಿಸಿದರು.

Trending videos

Back to Top