CONNECT WITH US  

ರಾಜೀನಾಮೆ ನೀಡಿದರೂ ತನಿಖೆ ನಿಲ್ಲಿಸಬೇಡಿ: ಬಿಜೆಪಿ

ಬೆಂಗಳೂರು: ಲೋಕಾಯುಕ್ತ ಸ್ಥಾನಕ್ಕೆ ನ್ಯಾ| ಭಾಸ್ಕರ್‌ ರಾವ್‌ ರಾಜೀನಾಮೆ ನೀಡಿದ್ದರೂ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಿಲ್ಲಬಾರದು ಎಂದು ರಾಜ್ಯ ಬಿಜೆಪಿಯ ವಕ್ತಾರ ಹಾಗೂ ಮಾಜಿ ಕಾನೂನು ಸಚಿವ ಎಸ್‌.ಸುರೇಶ್‌ಕುಮಾರ್‌ ಒತ್ತಾಯಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಪಕ್ಷದ ಕೊಠಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನ್ಯಾ| ಭಾಸ್ಕರ್‌ ರಾವ್‌ ಮೇಲಿನ ಆರೋಪಗಳ ಬಗ್ಗೆ ತನಿಖೆ ಚುರುಕುಗೊಳಿಸಲು ಇದು ಸಕಾಲ. ಅವರಿಗೆ  ಈಗ ಯಾವುದೇ ರಕ್ಷಾ ಕವಚ ಇಲ್ಲ. ಹೀಗಾಗಿ, ತನಿಖಾ ಸಂಸ್ಥೆಗೆ ಪೂರ್ಣ ಸ್ವಾತಂತ್ರ್ಯ ಕೊಡಬೇಕು ಎಂದು ಆಗ್ರಹಿಸಿದರು. ನ್ಯಾ| ಭಾಸ್ಕರ್‌ ರಾವ್‌ ರಾಜೀನಾಮೆ ಕೊಟ್ಟಿದ್ದಾರೆ ಎಂದಾಕ್ಷಣ ತನಿಖೆ ಕೈಬಿಡುವುದು ಅಥವಾ ಮುಂದಿನ ಪ್ರಕ್ರಿಯೆ ವಿಳಂಬ ಮಾಡುವ ಅಗತ್ಯವಿಲ್ಲ. ಭ್ರಷ್ಟಾಚಾರದ ಆರೋಪದ ಬಗ್ಗೆ ಸಮಗ್ರ ತನಿಖೆ ಯಾಗಲೇಬೇಕು ಎಂದರು.

ನ್ಯಾ| ಭಾಸ್ಕರ್‌ ರಾವ್‌ ರಾಜೀನಾಮೆ ಕೊಟ್ಟಿದ್ದು, ಉಪಲೋಕಾಯುಕ್ತ ನ್ಯಾ| ಸುಭಾಷ್‌ ಅಡಿ ಅವರ ಪದಚ್ಯುತಿ ಪ್ರಸ್ತಾವವೂ ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವುದರಿಂದ ಅವರೂ ಕೆಲಸ ಮಾಡಲು ಸಾಧ್ಯವಾಗದು. ಹೀಗಾಗಿ, ಲೋಕಾಯುಕ್ತ ಸಂಸ್ಥೆ ಖಾಲಿಯಾದ ಸ್ಥಿತಿ ನಿರ್ಮಾಣವಾಗಿದೆ. ತತ್‌ಕ್ಷಣ ಲೋಕಾಯುಕ್ತ, ಉಪ ಲೋಕಾಯುಕ್ತರ ನೇಮಕಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಲೋಕಪಾಲ್‌ ಮಾದರಿಯಲ್ಲಿ ಲೋಕಾಯುಕ್ತಕ್ಕೆ ಹೊಸ ಕಾಯ್ದೆ ತರುವ ಪ್ರಸ್ತಾವ ಕೇಳಿ ಬರುತ್ತಿದ್ದು, ದಿಲ್ಲಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಆ ಪ್ರಯತ್ನ ಮಾಡಿದ ಅನಂತರ ಉಂಟಾಗಿರುವ ಬೆಳವಣಿಗೆಗಳ ಬಗ್ಗೆಯೂ ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು. ಈಗಿರುವ ಕಾಯ್ದೆಯಲ್ಲೇ ಲೋಕಾಯುಕ್ತ ಸಂಸ್ಥೆಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಸುರೇಶ್‌ಕುಮಾರ್‌ ಒತ್ತಾಯಿಸಿದರು.

ಲೋಕಾಯುಕ್ತರ ಪದಚ್ಯುತಿಗೆ ಆಧಾರ ಇತ್ತು. ಆ ಕುರಿತ ದಾಖಲೆಗಳೂ ಲಭ್ಯವಾಗಿವೆ. ವಿಧಾನ ಮಂಡಲದ ಉಭಯ ಸದನಗಳಲ್ಲಿ ಚರ್ಚೆ ಮಾಡಿ ಸಂಬಂಧಿಸಿದ ಅಧಿಕಾರಿ ಮತ್ತು ತನಿಖಾ ಸಂಸ್ಥೆಯಿಂದ ಸಮಗ್ರ ಮಾಹಿತಿ ಪಡೆದು ಪ್ರಸ್ತಾವ ಅಂಗೀಕಾರ ಮಾಡಲಾಗಿದೆ. ಆದರೆ, ಉಪ ಲೋಕಾಯುಕ್ತರ ವಿಚಾರದಲ್ಲಿ ಹಾಗೆ ಆಗಿಲ್ಲ. ಇದೊಂದು ರಾಜಕೀಯ ತಂತ್ರಗಾರಿಕೆ ಎಂಬಂತೆ ಪ್ರಸ್ತಾವ ಮಂಡಿಸಿ ಅಂಗೀಕಾರ ಪಡೆಯಲಾಗಿದೆ ಎಂದು ದೂರಿದರು.


Trending videos

Back to Top