CONNECT WITH US  

ಸಂತೋಷ್‌ ನಿವಾಸಕ್ಕೆ ಬಿಜೆಪಿ ನಾಯಕರ ಭೇಟಿ

ಬೆಂಗಳೂರು: ಇತ್ತೀಚೆಗೆ ಕೊಲೆಯಾಗಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್‌ ನಿವಾಸಕ್ಕೆ ಶನಿವಾರ ಕೇಂದ್ರ ಸಚಿವ ಅನಂತಕುಮಾರ್‌ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌ ಭೇಟಿ ನೀಡಿ  ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಶಿವಾಜಿನಗರದ ಚಿನ್ನಪ್ಪಗಾರ್ಡನ್‌ನಲ್ಲಿರುವ ಸಂತೋಷ್‌ ನಿವಾಸಕ್ಕೆ  ಭೇಟಿ ನೀಡಿದ ಬಿಜೆಪಿ ನಾಯಕರು, ಪಕ್ಷ ನಿಮ್ಮ ಜತೆಯಿದೆ. ಸಂಸತ್‌ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪಿಸಿ ಕೇಂದ್ರ ಗೃಹ ಸಚಿವ ಗಮನಕ್ಕೂ ತರಲಾಗುವುದು ಎಂದು ಭರವಸೆ ನೀಡಿದರು. ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಸಂತೋಷ್‌ ತಾಯಿ  ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ನಂತರ  ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅನಂತಕುಮಾರ್‌, ಈ ಭಾಗದಲ್ಲಿ ಗಾಂಜಾ ಮಾರಾಟದ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಹೋದವರ ಮೇಲೆ ಹಲ್ಲೆ ನಡೆಸುತ್ತಾರೆ. ಸಂತೋಷ್‌ ತಾಯಿ ಸಹ ಇದನ್ನು ಹೇಳಿದ್ದಾರೆ. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಸಂತೋಷ್‌ ಹೋರಾಟ ಮಾಡುತ್ತಿರುವುದನ್ನು ಸಹಿಸದ ದುಷ್ಕರ್ಮಿಗಳು ಅಮಾನುಷವಾಗಿ ಕೊಂದಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ 30ಕ್ಕೂ ಅಧಿಕ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ರಾಜ್ಯ ಸರ್ಕಾರ ವೈಫ‌ಲ್ಯದ ವಿರುದ್ಧ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌ ಮಾತನಾಡಿ, ಬಾಡಿಗೆ ಮನೆಯಲ್ಲಿರುವ ಸಂತೋಷ್‌ ಕುಟುಂಬ ತುಂಬಾ ಬಡತನದಿಂದ ದಿನದೂಡುತ್ತಿದೆ. ಸಂತೋಷ್‌ ಒಳ್ಳೆಯ ಎಂದು ಸ್ಥಳೀಯರು ಹೇಳಿದ್ದಾರೆ. ರಾಜಕೀಯ ಬದ್ಧತೆ ಹಾಗೂ ಸಿದ್ಧಾಂತ ಅಡಿಯಲ್ಲಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದ ಸಂತೋಷ್‌ನನ್ನು ಕೊಂದಿದ್ದಾರೆ. ರಾಜ್ಯದಲ್ಲಿ ನಡೆದಿರುವ ಹಿಂದು ಕಾರ್ಯಕರ್ತರ ಹತ್ಯೆಯನ್ನು ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವರ ಮೇಲೆ ಒತ್ತಡ ಹೇರಲಿದ್ದೇವೆ ಎಂದು ಹೇಳಿದರು. ಮಾಜಿ ಸಚಿವರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಗೋವಿಂದ ಕಾರಜೋಳ, ವಿ.ಸೋಮಣ್ಣ  ಉಪಸ್ಥಿತರಿದ್ದರು.

Trending videos

Back to Top