CONNECT WITH US  

ಪಿಎಲ್‌ಡಿಗೆ ಅವಿರೋಧ ಆಯ್ಕೆ:ಸಂಧಾನ ಯಶಸ್ವಿ;ಕೊನೆಗೂ ಲಕ್ಷ್ಮಿ ಮೇಲುಗೈ!

ಬೆಳಗಾವಿ : ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದ ಪಿಎಲ್‌ಡಿ ಬ್ಯಾಂಕ್‌ಗೆ ಚುನಾವಣೆಯೇ ನಡೆಯದೆ ಅವಿರೋಧ ಆಯ್ಕೆ ನಡೆದಿದೆ. ಕೆಪಿಸಿಸಿ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಲಕ್ಷ್ಮಿ ಹೆಬ್ಬಾಳ್‌ಕರ್‌ ಬಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. 

 ಅಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್‌ಕರ್‌ ಬಣದ ಮಹಾದೇವ್‌ ಪಾಟೀಲ್‌, ಉಪಾಧ್ಯಕ್ಷರಾಗಿ ಬಾಬು ಸಾಹೇಬ್‌ ಜಮಾದಾರ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಸಂಧಾನಕ್ಕೆ  ಕೆಪಿಸಿಸಿ  ಕಾರ್ಯಾಧ್ಯಕ್ಷ  ಈಶ್ವರ್‌ ಖಂಡ್ರೆ ಅವರನ್ನು ಬೆಳಗಾವಿಗೆ ಕಳುಹಿಸಲಾಗಿತ್ತು . ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ , ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ನಾಯಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಅವಿರೋಧ ಆಯ್ಕೆ ಮಾಡಿ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. 

ಸುದ್ದಿಗೋಷ್ಠಿ
ಪಿಎಲ್‌ಡಿ ಬ್ಯಾಂಕ್‌ಗೆ ಅವಿರೋಧ ಆಯ್ಕೆ ನಡೆದ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರು ಸುದ್ದಿಗೋಷ್ಠಿ ನಡೆಸಿದರು. ಲಕ್ಷ್ಮಿ ಹೆಬ್ಬಾಳ್‌ಕರ್‌ ಮತ್ತು ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕಿಹೊಳಿ ಅವರು ಉಪಸ್ಥಿತರಿದ್ದರು. 

ಸಂವಹನದ ಕೊರತೆ ನಾಯಕರಲ್ಲಿ ಇತ್ತು. ಈಗ ಸೌಹಾರ್ದದಿಂದ ಬಗೆ ಹರಿಸಲಾಗಿದೆ. ಬೆಳಗಾವಿಯ ಕಾಂಗ್ರೆಸ್‌ ನಲ್ಲಿ ಯಾವುದೇ ಸಮಸ್ಯೆ ಇಲ್ಲ,ಬಣವೂ ಇಲ್ಲ. ಇರುವುದೊಂದೆ ಕಾಂಗ್ರೆಸ್‌ ಬಣ ಎಂದರು. 

ವೈಯಕ್ತಿಕ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ 

ನಮ್ಮದಲ್ಲ , ಅವರದ್ದಲ್ಲ, ಒಮ್ಮತದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ವಿವಾದ ಸುಖಾಂತ್ಯವಾಗಿದೆ. ನಾನು ತೀರಾ ವೈಯಕ್ತಿಕ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಎಂದು ಲಕ್ಷ್ಮಿ ಹೆಬ್ಬಾಳ್‌ಕರ್‌ ಅವರು ಪ್ರತಿಕ್ರಿಯೆ ನೀಡಿದರು. 

ನೋವಿನ ಪ್ರಶ್ನೆ ಇಲ್ಲ
ಸಂವಹನದ ಕೊರತೆ ಇತ್ತು. ಈಗ ಎಲ್ಲಾ ಸಮಸ್ಯೆ ಬಗೆ ಹರಿದಿದೆ. ಯಾರಿಗೂ ನೋವಿನ ಪ್ರಶ್ನೆ ಇಲ್ಲ. ನಾವೆಲ್ಲಾ ಒಟ್ಟಾಗಿ ಲೋಕಸಭಾ ಚುನಾವಣೆಗೆ ಕೆಲಸ ಮಾಡುತ್ತೇವೆ. ಪಕ್ಷದ ಗೆಲುವು ನಮಗೆ ಮುಖ್ಯ ಎಂದು ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯೆ ನಡೆದಿದೆ. 

ರಮೇಶ್‌ ಕೊಲ್ಹಾಪುರದಲ್ಲಿ
ಸಚಿವ ರಮೇಶ್‌ ಜಾರಕಿಹೊಳಿ ಅವರು ಕೊಲ್ಹಾಪುರ ದೇವಾಲಯಕ್ಕೆ ತೆರಳಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಖಂಡ್ರೆ ತಿಳಿಸಿದರು. 

ಮುಂದೇನು? 
ಸದ್ಯಕ್ಕಂತೂ ಕೆಪಿಸಿಸಿ ಸಮಸ್ಯೆಯನ್ನು ಬಗೆಹರಿಸಿದೆ ಆದರೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಜಾರಕಿಹೊಳಿ ಕುಟುಂಬದ ಪ್ರತಿಷ್ಠೆಯ ಪ್ರಶ್ನೆ ಎದುರಾಗಿದ್ದು , ರಾಜಕೀಯ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವ ಪ್ರಶ್ನೆ ಮೂಡಿದೆ. 

ಲಕ್ಷ್ಮಿ ಮತ್ತು ಜಾರಕಿಹೊಳಿ ನಡುವೆ ಭಾರೀ ಆರೋಪ-ಪ್ರತ್ಯಾರೋಪಗಳು ನಡೆದಿದ್ದು , ಪಕ್ಷ ಹೇಗೆ ಇಬ್ಬರನ್ನೂ ನಿಭಾಯಿಸುತ್ತದೆ ಎನ್ನುವುದು ಪ್ರಶ್ನೆಯಾಗಿದೆ. 

Trending videos

Back to Top