CONNECT WITH US  

ಸಿದ್ದು ಯೂರೋಪ್‌ ಪ್ರವಾಸಕ್ಕೂ,ರಾಜಕೀಯ ವಿದ್ಯಮಾನಕ್ಕೂಲಿಂಕ್‌?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೂರೋಪ್‌ ಪ್ರವಾಸಕ್ಕೆ ಹೋಗುತ್ತಿದ್ದಂತೆ ಇತ್ತ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಎದುರಾಗಲಿದೆ ಎಂಬ ಮಾತುಗಳ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ನಾಯಕರ ಸಮಸ್ಯೆ ಎದುರಾಯಿತು. 

ತದನಂತರ ಸಚಿವ ಡಿ.ಕೆ.ಶಿವಕುಮಾರ್‌ ಮೇಲೆ ಇಡಿ ಎಫ್ಐಆರ್‌ ತೂಗುಕತ್ತಿಯ ಆತಂಕ ಎದುರಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಅವರು ಯೂರೋಪ್‌ ಪ್ರವಾಸದಲ್ಲಿರುವಾಗಲೇ ಈ ಎರಡೂ ವಿದ್ಯಮಾನಗಳು ನಡೆದಿದ್ದು, ಎರಡೂ ಘಟನೆಗಳು ಸಮ್ಮಿಶ್ರ ಸರ್ಕಾರವನ್ನು "ಶೇಕ್‌' ಮಾಡಿಸಿವೆ. ಇದರ ಬೆನ್ನಲ್ಲೇ ಬಿಜೆಪಿ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಕೈ ಹಾಕಿದೆ ಎಂದು ಖುದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಇನ್ನು ಕಾಂಗ್ರೆಸ್‌ ನಾಯಕರು ಕೆಲವು ಬಿಜೆಪಿ ಶಾಸಕರ ಸಂಪರ್ಕದಲ್ಲಿದ್ದಾರೆ. 

ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ನಿಜಕ್ಕೂ ಸಮ್ಮಿಶ್ರ ಸರ್ಕಾರಕ್ಕೆ ಆಪತ್ತು ಕಾದಿದೆಯಾ? ಎಂಬ ಅನುಮಾನ ಕಾಡುತ್ತಿದೆ.

ಶನಿವಾರ ನಡೆದ ವಿದ್ಯಮಾನಗಳಂತೂ ನಾನಾ ಊಹಾಪೋಹಗಳಿಗೂ ಕಾರಣವಾದವು. ಅತ್ತ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಯಡಿಯೂರಪ್ಪ, ದಿಢೀರ್‌ ಆಗಿ ಬೆಂಗಳೂರಿಗೆ ವಾಪಸ್‌ ಆದರು. ಇತ್ತ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಪತ್ರಿಕಾಗೋಷ್ಠಿ ನಡೆಸಿ, ಯಡಿಯೂರಪ್ಪ ಅವರು ನಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು ಎಂದು ಬಾಂಬ್‌ ಸಿಡಿಸಿದರು. ಮತ್ತೂಂದೆಡೆ ದೆಹಲಿಯಲ್ಲಿ ಕೆ.ಎಸ್‌.ಈಶ್ವರಪ್ಪನವರು, ಎರಡು ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಏನೇನಾಗುತ್ತೆ ಕಾದು ನೋಡಿ ಎಂದು ಹೇಳಿದರು.ಒಟ್ಟಾರೆ ಇವೆಲ್ಲವೂ ರಾಜಕೀಯವಾಗಿ ಏನೋ ನಡೆಯುತ್ತಿದೆ, ಆದರೆ, ಇನ್ನೂ ಸ್ಪಷ್ಟ ಚಿತ್ರಣ ಇಲ್ಲ ಎಂಬಂತೆ ಕಾಣುತ್ತಿದೆ.


Trending videos

Back to Top