CONNECT WITH US  

ಮಳೆಗಾಗಿ ಶಾಸಕರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ

ಉಡುಪಿ: ಮಳೆ ಬರಲಿ ಎಂದು ಶಾಸಕ, ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಪ್ರಮೋದ್‌ ಮಧ್ವರಾಜ್‌ ಅವರ ನೇತೃತ್ವದಲ್ಲಿ ಜಾಮಿಯಾ ಮಸೀದಿ, ಚಂದ್ರಮೌಳೀಶ್ವರ, ಅನಂತೇಶ್ವರ ದೇವಸ್ಥಾನ, ಶ್ರೀಕೃಷ್ಣ ಮಠ ಹಾಗೂ ಶೋಕಮಾತಾ ಚರ್ಚ್‌ನಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ ನೆರವೇರಿತು.

ಜಾಮಿಯಾ ಮಸೀದಿಯಲ್ಲಿ ಮೌಲಾನಾ ರಶೀದ್‌ ಅಹಮದ್‌ ನದ್ವಿ ಅವರು ಪ್ರಾರ್ಥನೆ ನೆರವೇರಿಸಿದರು. ಮಸೀದಿ ಅಧ್ಯಕ್ಷ ಸಯ್ಯದ್‌ ಯಾಸೀನ್‌, ಕಾರ್ಯದರ್ಶಿ ಖಲೀಲ್‌ ಅಹಮ್ಮದ್‌ ಉಪಸ್ಥಿತರಿದ್ದರು. ಅನಂತರ ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ ದೇವಸ್ಥಾನಗಳಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ವೇದವ್ಯಾಸ ಐತಾಳ ಮತ್ತು ಚಂದ್ರಶೇಖರ ತಂತ್ರಿ ಅವರು ಪ್ರಾರ್ಥನೆಗೈದರು. ಬಳಿಕ ಶ್ರೀಕೃಷ್ಣ ಮಠದಲ್ಲಿಯೂ ವಿಶೇಷ ಪ್ರಾರ್ಥನೆ ನೆರವೇರಿತು. ಅಲ್ಲಿಂದ ಶೋಕಮಾತಾ ಚರ್ಚ್‌ಗೆ ತೆರಳಿ ಬಿಷಪ್‌ ರೈ|ರೆ|ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಅವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಧಾನ ಧರ್ಮಗುರು ರೆ|ಫಾ| ಫ್ರೆಡ್‌ ಮಸ್ಕರೇನಸ್‌ ಉಪಸ್ಥಿತರಿದ್ದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌, ಆಯುಕ್ತ ಡಿ. ಮಂಜುನಾಥಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ, ಕಾಂಗ್ರೆಸ್‌ ಮುಖಂಡರಾದ ಅಮೃತ್‌ ಶೆಣೈ, ಕೇಶವ ಕೋಟ್ಯಾನ್‌, ಡಾ| ಸುನಿತಾ ಶೆಟ್ಟಿ, ಭಾಸ್ಕರ್‌ ರಾವ್‌ ಕಿದಿಯೂರು, ನಿತ್ಯಾನಂದ ಶೆಟ್ಟಿ, ನಗರಸಭಾ ಸದಸ್ಯರಾದ ಜನಾರ್ದನ ಭಂಡಾರ್‌ಕರ್‌, ರಮೇಶ್‌ ಕಾಂಚನ್‌, ಗಣೇಶ್‌ ನೇರ್ಗಿ, ಸೆಲಿನಾ ಕರ್ಕಡ, ಯುವರಾಜ್‌, ನಾರಾಯಣ ಕುಂದರ್‌, ಗೀತಾ ರವಿ ಶೇಟ್‌, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮೊದಲಾದವರು ಪಾಲ್ಗೊಂಡಿದ್ದರು.

ಮಳೆ ಬಂದಿದೆ; ಸಾಲದು
'ಪೇಜಾವರ ಶ್ರೀಗಳು ಕಳೆದ 15 ದಿನಗಳಿಂದ ಮಳೆ, ಸಮೃದ್ಧಿಗಾಗಿ ಪರ್ಜನ್ಯ ಜಪ ನಡೆಸುತ್ತಿದ್ದಾರೆ' ಎಂದು ವೇದವ್ಯಾಸ ಐತಾಳ ಅವರು ತಿಳಿಸಿದರು. 'ನಾನು 3 ದಿನಗಳ ಹಿಂದೆ ಸರ್ವಧರ್ಮ ಪ್ರಾರ್ಥನೆಯ ಸಂಕಲ್ಪ ಮಾಡಿದ್ದೇನೆ. ಗುರುವಾರ ಸಾಧಾರಣ ಮಳೆಯಾಗಿದೆ. ಆದರೆ ಅದು ಸಾಕಾಗದು. ಇನ್ನೂ ಹೆಚ್ಚಿನ ಮಳೆ ಬರಬೇಕಾಗಿದೆ. ನಗರಕ್ಕೆ ನೀರು ಪೂರೈಸುವ ಬಜೆ ಅಣೆಕಟ್ಟೆಯಲ್ಲಿ ಗುರುವಾರ 2.17 ಮೀಟರ್‌ ನೀರಿತ್ತು. ಅನಂತರ ನಗರಕ್ಕೆ ನೀರು ಪೂರೈಕೆಯಾಗಿತ್ತು. ಆ ಬಳಿಕ ಮಳೆ ಬಂದ ಪರಿಣಾಮ ಶುಕ್ರವಾರ ಬೆಳಗ್ಗೆ ನೀರಿನ ಪ್ರಮಾಣ ಮತ್ತೆ ಅಷ್ಟೇ ಪ್ರಮಾಣದಲ್ಲಿತ್ತು. ಆದರೆ ಮಧ್ಯಾಹ್ನದ ವೇಳೆಗೆ 2 ಸೆಂ.ಮೀ. ಕಡಿಮೆಯಾಗಿದೆ' ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದರು.

Trending videos

Back to Top