CONNECT WITH US  

ಗಣೇಶ ಹಬ್ಬ: ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ

ಉಡುಪಿ/ಮಂಗಳೂರು: ಸೋಮವಾರ ಗಣೇಶಚತುರ್ಥಿ, ರವಿವಾರ ಗೌರಿ ಹಬ್ಬಕ್ಕೆ ಮಾರುಕಟ್ಟೆ ಶನಿವಾರ ಚುರುಕುಗೊಂಡಿದೆ. ವಿವಿಧೆಡೆಗಳಲ್ಲಿ ಹೂವಿನ ಮಾರಾಟಗಾರರು ವ್ಯಾಪಾರವನ್ನು ಚುರುಕುಗೊಳಿಸಿದ್ದಾರೆ. ಕಬ್ಬಿನಕೋಲು ಮಾರಾಟ ಭರದಿಂದ ಸಾಗಿದೆ.

ಉಡುಪಿ ರಥಬೀದಿಗೆ ಈ ಬಾರಿ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಮೊದಲಾದೆಡೆಗಳಿಂದ ಹೆಚ್ಚಿನ ಸಂಖ್ಯೆಯ ಹೂ ವ್ಯಾಪಾರಸ್ಥರು ಆಗಮಿಸಿದ್ದಾರೆ. ಹೋದ ವರ್ಷಕ್ಕಿಂತಲೂ ಈ ಬಾರಿ ವ್ಯಾಪಾರಸ್ಥರ ಸಂಖ್ಯೆ ಹೆಚ್ಚಿಗೆ ಇದೆ. ಈ ಕಾರಣದಿಂದ ಹೋದ ವರ್ಷಕ್ಕಿಂತ ದರವೂ ಕಡಿಮೆಯಾಗಿದೆ. ಮುಖ್ಯವಾಗಿ ಸೇವಂತಿಗೆ, ಜೀನಿಯಾ ಹೂವು ಬಂದಿದೆ. ಮೊಳಕ್ಕೆ 30ರಿಂದ 40 ರೂ.ನಲ್ಲಿ ಮಾರಾಟವಾಗುತ್ತಿದೆ. ಉಡುಪಿ ನಗರ ಮಾತ್ರವಲ್ಲದೆ ಮಣಿಪಾಲ ಸಹಿತ ಸುತ್ತಮುತ್ತಲಿನ ಪರಿಸರದಲ್ಲೂ ಹೂ ವ್ಯಾಪಾರಸ್ಥರು ಮಾರಾಟ ನಿರತರಾಗಿದ್ದಾರೆ. ರವಿವಾರ ಗೌರಿ ಹಬ್ಬವಾಗಿರುವುದರಿಂದ ಶನಿವಾರವೇ ಹೂವಿಗೆ ಉತ್ತಮ ಬೇಡಿಕೆ ಇತ್ತು.

ತರಕಾರಿ ಬೆಲೆ ಗಗನಕ್ಕೆ
ಹಬ್ಬ ಹತ್ತಿರ ಬರುತ್ತಿದ್ದಂತೆ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಮುಖ್ಯವಾಗಿ ಊರಿನ ಹರಿವೆ, ಬೆಂಡೆ, ಹೀರೆಕಾಯಿ, ಮುಳ್ಳುಸೌತೆಗಳ ಧಾರಣೆ ಏರಿಕೆಯಾಗಿದೆ. ಮಂಗಳೂರಿನಲ್ಲಿ ಊರಿನ ಬೆಂಡೆಕಾಯಿ ಬೆಲೆ ಕೆ.ಜಿ.ಗೆ 100 ರೂ. ದಾಟಿದೆ. ಕೆಲ ದಿನಗಳ ಹಿಂದೆ 60 ರೂ. ಇತ್ತು. ಕಿರಾಣಿ ಸಾಮಗ್ರಿಗಳಿಗೂ ಬೇಡಿಕೆ ಹೆಚ್ಚಿದೆ. ಎರಡು ದಿನಗಳ ಹಬ್ಬಕ್ಕೆ ಬೇಕಾದ ಸಾಮಾನುಗಳ ಖರೀದಿ ಭರದಿಂದ ಸಾಗಿದೆ.

ಬಸ್‌ಗಳಲ್ಲಿ ಫ‌ುಲ್‌ ರಶ್‌
ಸೋಮವಾರ ಹಬ್ಬದ ರಜೆ ಇರುವುದರಿಂದ ಶನಿವಾರದ ಕೆಲಸ ಮುಗಿಸಿ ಹೆಚ್ಚಿನವರು ಊರಿಗೆ ಹೊರಟಿದ್ದು, ಬಸ್‌ಗಳಲ್ಲಿ ಫ‌ುಲ್‌ ರಶ್‌ ಇತ್ತು. ಉಡುಪಿ ಮತ್ತು ಮಂಗಳೂರು ಬಸ್‌ ನಿಲ್ದಾಣಗಳಲ್ಲಿ ಜನಜಾತ್ರೆಯೇ ಇತ್ತು. ಖಾಸಗಿ ಬಸ್‌ಗಳಲ್ಲದೆ ದೂರದ ಊರುಗಳಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಕೂಡ ಜನ ತುಂಬಿದ್ದರು.

Trending videos

Back to Top