CONNECT WITH US  

ರೊಟ್ಟಿ ಬೇಕಾ ರೊಟ್ಟಿ?

ಹಸಿದ ಹೊಟ್ಟೆಗೆ ಅಮ್ಮಂದಿರ ಪ್ರಸಾದ

ಬಾದಾಮಿ ಅಂದಾಗ ತಕ್ಷಣ ನೆನಪಾಗೋದು ಅಲ್ಲಿನ ಗುಹಾಂತರ ದೇವಾಲಯ ಹಾಗೂ ವಾಸ್ತುಶಿಲ್ಪದ ಸೊಬಗು. ಅಲ್ಲಿಗೆ ಹೋದವರೆಲ್ಲ ಬನಶಂಕರಿ ದೇವಸ್ಥಾನಕ್ಕೂ ತಪ್ಪದೇ ಹೋಗುತ್ತಾರೆ. ಅಲ್ಲಿ ಬನಶಂಕರಿಯಮ್ಮನಷ್ಟೇ ಅಲ್ಲ, ಅನ್ನಪೂರ್ಣೇಶ್ವರಿಯರೂ ಇದ್ದಾರೆ. ಪ್ರತಿನಿತ್ಯ ಬರುವ ಪ್ರವಾಸಿಗಳಿಗೆ ರುಚಿಕಟ್ಟಾದ ಊಟ ಬಡಿಸುವುದೇ ಇವರ ಕಾಯಕ...

ಉತ್ತರ ಕರ್ನಾಟಕದ ಬಹುತೇಕ ದೇವಸ್ಥಾನಗಳಲ್ಲೂ ಪ್ರತಿ ನಿತ್ಯ ಅನ್ನ ದಾಸೋಹ ನಡೆಯುತ್ತದೆ. ಊಟದ ಸಮಯದಲ್ಲಿ ಬಂದ ಭಕ್ತಾದಿಗಳು ಹಸಿದ ಹೊಟ್ಟೆಯಲ್ಲಿ ಹೋದದ್ದೇ ಇಲ್ಲ. ಇದಕ್ಕೆ ಬಾದಾಮಿಯ ಬನಶಂಕರಿ ಅಮ್ಮನ ದೇವಸ್ಥಾನವೂ ಹೊರತಾಗಿಲ್ಲ. ಆದರೆ, ಇಲ್ಲಿ ಇನ್ನೊಂದು ವಿಶೇಷವಿದೆ. ದಾಸೋಹದ ಸಮಯ ಮೀರಿದರೂ ನಿಮ್ಮನ್ನು ಸತ್ಕರಿಸುವ ಅನ್ನಪೂರ್ಣೆಯರಿದ್ದಾರೆ ಅಲ್ಲಿ. ಬುಟ್ಟಿಯಲ್ಲಿ ರೊಟ್ಟಿ ಇಟ್ಟುಕೊಂಡು ಮಾರುವ ಅಮ್ಮಂದಿರು, ಅಜ್ಜಿಯರು ಕೇವಲ 20 ರೂಪಾಯಿಗೆ 2 ಖಡಕ್‌ ರೊಟ್ಟಿ, 2 ಬಗೆಯ ಕಾಳು ಪಲ್ಯ, ಚಟ್ನಿ- ಮೊಸರು, ಅನ್ನ ನೀಡುತ್ತಾರೆ. 

  ಈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳು ಪ್ರಸಾದದ ಜೊತೆಗೆ ರೊಟ್ಟಿ ಊಟವನ್ನೂ ಮಾಡಲು ಬಯಸುತ್ತಾರೆ. ಕಾರಣ ಆ ಅಡುಗೆಯ ರುಚಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಮಹಿಳೆಯರು ಬಾದಾಮಿ ಸಮೀಪದ ಗ್ರಾಮದವರು. ಮನೆಯಿಂದಲೇ ಅಡುಗೆ ತಯಾರಿಸಿಕೊಂಡು ಬಂದು ದೇವಸ್ಥಾನದ ಬಳಿ ಮಾರಾಟ ಮಾಡುತ್ತಾರೆ. ದಿನಕ್ಕೆ 300- 400 ರೊಟ್ಟಿಗಳು ಇಲ್ಲಿ ಮಾರಾಟವಾಗುತ್ತವೆ. ಮನೆಯಲ್ಲಿಯೇ ಹೆಪ್ಪು ಹಾಕಿ, ಕಡೆದ ಮಜ್ಜಿಗೆಯೂ ಇವರ ಬಳಿ ಸಿಗುತ್ತದೆ. ಅವರಲ್ಲಿ ಹೆಚ್ಚಿನವರು 50-60 ವರ್ಷ ದಾಟಿದವರೇ. ಇಳಿವಯಸ್ಸಿನಲ್ಲಿಯೂ ಸ್ವಂತ ದುಡಿಮೆಯಿಂದ ಬದುಕುತ್ತಿರುವ ಇವರ ಪರಿಶ್ರಮ, ಅವರ ಬುತ್ತಿಯ ಊಟದ ರುಚಿಯನ್ನು ಹೆಚ್ಚಿಸಿದೆ. ನೀವು ಅಲ್ಲಿಗೆ ಹೋದರೆ, ರೊಟ್ಟಿ ಊಟ ಮಿಸ್‌ ಮಾಡಬೇಡಿ.

ನಮ್ಮ ಅವ್ವಾರ ಕಾಲದಿಂದಾನೂ ಈ ಕೆಲಸಾ ಮಾಡ್ಕೊಂಡ್‌ ಬಂದಿದೇನ್ರೀ. ನಮ್ಮೂರು ಬಾನಾಪುರ. ಅಲ್ಲಿಂದ ಬಂದು, ಇಲ್ಲಿ ರೊಟ್ಟಿ ಮಾರತೀನ್ರೀ. 14-15 ವರ್ಷದಾಕಿ ಇದ್ದಾಗಿಂದೂ ಇದೇ ನನ್ನ ಕೆಲಸಾರೀ.
- ನೀಲಮ್ಮಾ, ರೊಟ್ಟಿ ಊಟ ಮಾರುವಾಕೆ

ಐಶ್ವರ್ಯ ಬ ಚಿಮ್ಮಲಗಿ


Trending videos

Back to Top