ಭಾರತೀಯ ಮೂಲದ ಸಿದ್ಧಾರ್ಥ ಐಸಿಸ್ಗೆ ಹಿರಿಯ ಕಮಾಂಡರ್

ಲಂಡನ್: 'ಹೊಸ ಜಿಹಾದಿ ಜಾನ್' ಎಂದೇ ಕುಖ್ಯಾತಿ ಗಳಿಸಿರುವ ಭಾರತೀಯ ಮೂಲದ ಬ್ರಿಟನ್ ಪ್ರಜೆ ಸಿದ್ಧಾರ್ಥ ಧರ್ ಸದ್ಯ ಐಸಿಸ್ ಉಗ್ರಗಾಮಿ ಸಂಘಟನೆಯ ಹಿರಿಯ ಕಮಾಂಡರ್ ಆಗಿದ್ದಾನೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಸಿದ್ಧಾರ್ಥ ಧರ್ ನನ್ನನ್ನು ಅಪಹರಿಸಿ, ಮಾನವ ಕಳ್ಳ ಸಾಗಣೆ ಮಾಡಿದ್ದ. ಆತ ಈಗ ಐಸಿಸ್ ಉಗ್ರರ ಕಪಿಮುಷ್ಟಿಯಲ್ಲಿರುವ ಇರಾಕ್ನ ಮೊಸುಲ್ ಪಟ್ಟಣದಲ್ಲಿದ್ದಾನೆ ಎಂದು ಭಯೋತ್ಪಾದಕರ ಲೈಂಗಿಕ ಜೀತದಾಳಾಗಿದ್ದ, ಈಗ ರಕ್ಷಿಸಲ್ಪಟ್ಟಿರುವ ಯಜೀದಿ ಸಮುದಾಯದ ಬಾಲಕಿ ನಿಹಾದ್ ಬಾರಾ ಕತ್ ತಿಳಿಸಿದ್ದಾಳೆ.
ಸಿದ್ಧಾರ್ಥ ಧರ್ ಹಿಂದು ಆಗಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಅಬು ರುಮಾಯ್ಸಾ ಎಂದು ಬದಲಿಸಿಕೊಂಡಿದ್ದ. ಪೊಲೀಸರಿಂದ ಪಡೆದಿದ್ದ ಜಾಮೀನು ಉಲ್ಲಂಘಿಸಿ, ಹೆಂಡತಿ, ಮಗನ ಸಮೇತ 2014ರಲ್ಲಿ ಸಿರಿಯಾಕ್ಕೆ ಪರಾರಿಯಾಗಿದ್ದ. ಪಾಶ್ಚಾತ್ಯ ಒತ್ತೆಯಾಳುಗಳನ್ನು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕತ್ತು ಕೊಯ್ದು ಕೊಲ್ಲುತ್ತಿದ್ದ 'ಜಿಹಾದಿ ಜಾನ್' ಹತನಾದ ನಂತರ ಆತನ ಪಾತ್ರವನ್ನು ಸಿದ್ಧಾರ್ಥ ಧರ್ ನಿರ್ವಹಿಸುತ್ತಿದ್ದಾನೆ ಎಂಬ ವರದಿಗಳು ಈ ಹಿಂದೆ ಬಂದಿದ್ದವು.