CONNECT WITH US  

ವೀಳ್ಯದೆಲೆ, ಆರೋಗ್ಯಕ್ಕೆ  ಹಲವು ಲಾಭ 

ಭಾರತೀಯ ಸಂಪ್ರದಾಯದಲ್ಲಿ ವೀಳ್ಯೆದೆಲೆಗೆ ಅತಿ ಹೆಚ್ಚಿನ ಮಹತ್ವವಿದೆ. ವೀಳ್ಯದೆಲೆಯನ್ನು ಭಾರತದಲ್ಲಿ ಪಾನ್‌ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಪೈಪರೇಸಿಯೇ ಕುಟುಂಬಕ್ಕೆ ಸೇರಿದ ಇದು ಬಳ್ಳಿ ಜಾತಿಯ ಗಿಡ. ಕರಾವಳಿ ಕರ್ನಾಟಕದಲ್ಲಿ ತುಳುವರ ಎಲ್ಲ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇಬೇಕು. ಆಯುರ್ವೇದದಲ್ಲಿ ವೀಳ್ಯಕ್ಕೆ ಆಗ್ರ ಸ್ಥಾನವಿದ್ದು, ಹಲವು ರೋಗಗಳಿಗೆ ಇದನ್ನು ಔಷಧವಾಗಿ ಬಳಸಲಾಗುತ್ತದೆ.

· ಒಂದು ವೀಳ್ಯದೆಲೆ, ಸ್ವಲ್ಪ ಕರೀ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. 

· ವೀಳ್ಯದೆಲೆಯ ರಸ ಜೀರ್ಣಾಂಗಗಳನ್ನು ರಕ್ಷಿಸುವ, ವಾಯುಪ್ರಕೋಪ ನಿವಾರಕ, ಸಾರಸಂಗ್ರಹಿ ಗುಣಗಳನ್ನು ಹೊಂದಿದೆ. ವೀಳ್ಯದೆಲೆಯನ್ನು ಜಗಿದು ನುಂಗುವುದು ಆರೋಗ್ಯಕ್ಕೆ ಉತ್ತಮ. ಅಜೀರ್ಣ ಸಹಿತ ಹಲವು ಜೀರ್ಣಕ್ರಿಯೆ ತೊಂದರೆಗಳು ಇದರಿಂದ ನಿವಾರಣೆಯಾಗುತ್ತವೆ. ಎಲೆಯನ್ನು ಜಗಿದು ನುಂಗುವುದರಿಂದ ಬಾಯಿಯಲ್ಲಿ ಹೆಚ್ಚಿನ ಲಾಲಾರಸ ಉತ್ಪತ್ತಿಯಾಗಲು ನೆರವಾಗುತ್ತದೆ.

· ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.

·ವೀಳ್ಯದೆಲೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಉತ್ಕರ್ಷಣಶೀಲ ಒತ್ತಡವನ್ನು ಕಡಿಮೆಗೊಳಿಸಿ ತನ್ಮೂಲಕ ಗಾಯಗಳನ್ನು ಶೀಘ್ರವಾಗಿ ಗುಣ ಮಾಡುತ್ತದೆ. ಅಲ್ಲದೇ ಗಾಯದ ಮೂಲಕ ನಷ್ಟ ಹೊಂದಿದ್ದ ಅಂಗಾಂಶಗಳನ್ನು ಮತ್ತೆ ಮರು ಜೋಡಿಸಲು ಇದರಲ್ಲಿರುವ ಪೂರ್ಣಪ್ರಮಾಣದ ಪ್ರೊಟೀನ್‌ಗಳು ನೆರವಾಗುತ್ತವೆ. ಇದಕ್ಕಾಗಿ ಕೆಲವು ಎಲೆಗಳನ್ನು ಹಿಂಡಿ ತೆಗೆದ ರಸವನ್ನು ಗಾಯದ ಮೇಲೆ ಹಚ್ಚಬೇಕು. ಬಳಿಕ ಕೆಲವು ಎಲೆಗಳನ್ನು ಗಾಯದ ಮೇಲೆ ಸುತ್ತಿ ಬ್ಯಾಂಡೇಜು ಮಾಡಬೇಕು. ಇದರಿಂದ ಗಾಯ ಒಂದೆರಡು ದಿನಗಳಲ್ಲಿಯೇ ಮಾಗುತ್ತದೆ.

· ಎರಡು ಕಪ್‌ ಕೊಬ್ಬರಿ ಎಣ್ಣೆಗೆ ಅರ್ಧ ಕಪ್‌ ವೀಳ್ಯದೆಲೆಯ ರಸ ಮತ್ತು ಅರ್ಧ ಕಪ್‌ ಒಂದೆಲಗದ ರಸ ಬೆರೆಸಿ ಚೆನ್ನಾಗಿ ಕುದಿಸಿ ನಿತ್ಯ ತಲೆಯ ಕೂದಲಿಗೆ ಹಚ್ಚಿ ಮಾಲೀಶು ಮಾಡಿದರೆ ಕೂದಲು ಉದುರುವುದು ಕಡಿಮೆಯಾಗಿ ಸೊಂಪಾಗಿ ಬೆಳೆಯುತ್ತದೆ. 

· ವೀಳ್ಯದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯ ಸ್ವಚ್ಛತೆಯನ್ನು ಕಾಪಾಡಲು ನೆರವಾಗುತ್ತದೆ. ವೀಳ್ಯದೆಲೆಯನ್ನು ಜಗಿದು ನುಂಗುವಾಗ ಬಾಯಿಯಲ್ಲಿ ಲಾಲಾರಸ ಹೆಚ್ಚಾಗುತ್ತದೆ. ಇದರಿಂದ ಬಾಯಿಯಲ್ಲಿರುವ ಪಿಎಚ್‌ ಮಟ್ಟ ಸಂತುಲಿತ ಮಟ್ಟಕ್ಕೆ ಇಳಿಕೆಯಾಗುತ್ತದೆ. ಹೀಗಾಗಿ ಬಾಯಿಯೊಳಗೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗದಂತೆ ತಡೆಯಬಹುದು.

· ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಪರಿಹಾರವಾಗುತ್ತದೆ.

· ಕೆಲವು ವೀಳ್ಯದೆಲೆಗಳನ್ನು ಜಜ್ಜಿ ಒಂದು ಬಟ್ಟೆಯಲ್ಲಿ ಹಿಂಡಿ ರಸ ತೆಗೆಯಿರಿ. ಇದಕ್ಕೆ ಕೊಂಚ ಜೇನು ಸೇರಿಸಿ ಸುಟ್ಟ ಜಾಗಕ್ಕೆ ಹಚ್ಚಿ ಒಣಗಲು ಬಿಡಿ. ಒಣಗಿದ ಬಳಿಕವೂ ಇನ್ನಷ್ಟು ರಸ ಹಚ್ಚಿ. ಇದೇ ರೀತಿ ದಿನದಲ್ಲಿ ಕೆಲವಾರು ಬಾರಿ ಪುನರಾವರ್ತಿಸಿ. ಒಂದೆರಡು ದಿನಗಳಲ್ಲಿ ಸುಟ್ಟ ಚರ್ಮದ ಕೆಳಗೆ ಹೊಸ ಚರ್ಮ ಬೆಳೆಯಲು ಪ್ರಾರಂಭವಾಗುತ್ತದೆ.

· ಒಂದು ಕಪ್‌ ನೀರನ್ನು ಕುದಿಸಿ ಒಲೆಯಿಂದ ಇಳಿಸಿದ ಬಳಿಕ ಸುಮಾರು ಆರು ಎಳೆಯ ವೀಳ್ಯದೆಲೆಗಳನ್ನು ಹಾಕಿ ತಣಿಯಲು ಬಿಡಿ. ಬಳಿಕ ಈ ನೀರನ್ನು ಸೋಸಿ ದಿನಕ್ಕೆ ಮೂರು ಬಾರಿ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಪೂರ್ತಿಯಾಗಿ ಉರಿ ಕಡಿಮೆಯಾಗುವ ತನಕ ಈ ವಿಧಾನವನ್ನು ಅನುಸರಿಸಿ.

· ಮೈ ಕೈ ತುರಿಕೆಗೆ ಸುಮಾರು ಒಂದು ಲೀಟರ್‌ ನೀರಿಗೆ ಇಪ್ಪತ್ತು ವೀಳ್ಯದೆಲೆಗಳನ್ನು ಹಾಕಿ ಕುದಿಸಿ ತಣಿಸಿ. ತಣಿದ ನೀರಿನಿಂದ ಎಲೆಗಳನ್ನು ಸೋಸಿ ತೆಗೆದು ಈ ನೀರಿನಿಂದ ತುರಿಕೆಯಿರುವ ಜಾಗವನ್ನು ಚೆನ್ನಾಗಿ ತೊಳೆದುಕೊಳ್ಳಿ. ಈ ನೀರಿನಲ್ಲಿ ಅದ್ದಿದ ಸ್ಪಾಂಜ್‌ ಉಪಯೋಗಿಸಿ ಒರೆಸಿಕೊಳ್ಳುವುದೂ ಉತ್ತಮ ವಿಧಾನವಾಗಿದೆ. ಒಂದೆರಡು ದಿನಗಳಲ್ಲಿಯೇ ತುರಿಕೆ ಪೂರ್ಣವಾಗಿ ಮಾಯವಾಗುವುದು.

ಕಾರ್ತಿಕ್‌ ಚಿತ್ರಾಪುರ

ಇಂದು ಹೆಚ್ಚು ಓದಿದ್ದು

Trending videos

Back to Top