CONNECT WITH US  

ತುಳು ಸಿನೆಮಾ ರಿಲೀಸ್‌ ವಾರದ ಗಡುವು ಇಳಿಕೆ!

ಒಂದರ ಹಿಂದೊಂದರಂತೆ ತೆರೆಕಾಣಲು ತುಳು ಚಿತ್ರಗಳು ಸಿದ್ಧವಾಗುತ್ತಿರುವಂತೆ ತುಳು ಸಿನಿಪ್ರಿಯರು ಕನ್‌ಫ್ಯೂಸ್‌ಗೆ ಬಿದ್ದಿದ್ದು ಇಂದು ನಿನ್ನೆಯ ಸಂಗತಿಯಲ್ಲ. ಬೆನ್ನು ತಿರುಗಿಸುವ ಹೊತ್ತಿನಲ್ಲಿ ತೆರೆಕಾಣುವ ರೀತಿಯಲ್ಲಿ ಸಿನೆಮಾ ಬಂದು ಹೋಗುವ ಸಂಗತಿ ಕೋಸ್ಟಲ್‌ವುಡ್‌ನ‌ಲ್ಲಿ ಎಷ್ಟು ಬಾರಿ ಚರ್ಚೆಗೆ ಬಂದರೂ, ಸುಧಾರಣೆಯಂತು ಕಾಣುತ್ತಿಲ್ಲ. ಇದಕ್ಕಾಗಿಯೇ ಮೂರು ವಾರಕ್ಕೊಂದು ತುಳು ಸಿನೆಮಾ ರಿಲೀಸ್‌ ಮಾಡಲು ಅವಕಾಶ ನೀಡಬೇಕು ಎಂದು ತುಳು ಚಿತ್ರ ನಿರ್ಮಾಪಕರ ಸಂಘ ಷರತ್ತು ವಿಧಿಸಿತ್ತು. ಆದರೆ ಅದೂ ಕೂಡ ಸರಿಯಾಗಿ ಪಾಲನೆಯಾಗಲೇ ಇಲ್ಲ!

ಮೂರು ವಾರ ಬಿಡಿ, ಒಂದು ವಾರ ಕಾಯುವ ಪುರುಸೋತ್ತನ್ನು ಕೆಲವರು ಮಾಡಿಲ್ಲ. ಅಪ್ಪೆ ಟೀಚರ್‌ ಹಾಗೂ ತೊಟ್ಟಿಲ್‌ ಎರಡೂ ಕೂಡ ಜಿದ್ದಿಗೆ ಬಿದ್ದಂತೆ ಒಂದೇ ದಿನ ರಿಲೀಸ್‌ ಆಗಿ ಸಾಕಷ್ಟು ಪ್ರತಿರೋಧಕ್ಕೂ ಕಾರಣವಾಯಿತು. ಇದನ್ನು ಸಂಘದಲ್ಲಿ ಕೇಳಿದರೆ, ಕೆಲವು ಸಿನೆಮಾದವರು ನಮ್ಮೊಂದಿಗೆ ಸದಸ್ಯರಾಗಿಲ್ಲ. ಹೀಗಾಗಿ ನಮಗೇನು ಮಾಡುವ ಹಾಗಿಲ್ಲ ಎನ್ನುತ್ತಿದ್ದರು. ಆದರೆ, ಇದೆಲ್ಲದಕ್ಕೆ ಈಗ ಕಡಿವಾಣ ಹಾಕಲು ಹೊಸ ಐಡಿಯಾ ಮಾಡಲು ಮುಂದಾಗಲಾಗಿದೆ.

ತುಳು ಸಿನೆಮಾ ಸದ್ಯ ತಯಾರಾಗಿರುವುದೇ ಹಲವಾರಿದ್ದು, ತಯಾರಾಗುತ್ತಿರುವುದು ಕೆಲವು ಇವೆ. ಹೀಗಿರುವಾಗ ಈಗಿನ ಎಲ್ಲ ಸಿನೆಮಾಗಳು 3 ವಾರದ ಲೆಕ್ಕ ಹಾಕಿ ರಿಲೀಸ್‌ ಮಾಡುವುದಾದರೆ ಒಂದೂವರೆ ವರ್ಷ ಕಾಯಬೇಕಾಗಬಹುದು. ಇದಕ್ಕಾಗಿ ಮೂರು ವಾರದ ಅಂತರವನ್ನು ಒಂದು ವಾರಕ್ಕೆ ಕಡಿತಗೊಳಿಸಲಾಗಿದೆ. ಇದರಂತೆ ಇನ್ನು ಮುಂದೆ ಎರಡು ವಾರಕ್ಕೊಂದು ಸಿನೆಮಾ ತೆರೆಕಾಣಲಿದೆ. 

ಸಮಯದ ಮಿತಿಯ ಬಗ್ಗೆ ಈ ಹಿಂದೆ ತುಳು ಚಲನಚಿತ್ರ ನಿರ್ಮಾಪಕರ ಸಂಘ ಕಣ್ಣಿಟ್ಟಿತ್ತು. ಆದರೂ ಇದರ ಬಗ್ಗೆ ವಿಶೇಷ ಗಮನ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಈ ಬಾರಿಯ ಸಂಘದ ಅಡಿಯಲ್ಲಿ 'ಸ್ಕ್ರೀನಿಂಗ್‌ ಕಮಿಟಿ' ಮಾಡಲು ನಿರ್ಧರಿಸಲಾಗಿದೆ. ಮೊದಲು ಕನ್ನಡ ಸಿನೆಮಾಕ್ಕೂ ಇಂತಹುದೇ ಕಮಿಟಿ ಕಾರ್ಯ ನಡೆಸುತ್ತಿತ್ತು. ಒಂದು ಸಿನೆಮಾ ಆದ ಮೇಲೆ ಇನ್ನೊಂದು ಸಿನೆಮಾಕ್ಕೆ ಎಷ್ಟು ಅವಧಿ ಬೇಕು ಎಂಬ ವಿಚಾರವನ್ನು ಕಮಿಟಿ ಲೆಕ್ಕ ಹಾಕಿ ಸೂಚನೆ ನೀಡುತ್ತಿತ್ತು. ಆದರೆ, ಬಹಳಷ್ಟು ಸಿನೆಮಾಗಳು ಬರಲು ಶುರು ಆದಂತೆ ಈ ಕಮಿಟಿ ಕೆಲಸ ಕಷ್ಟವಾಯಿತು.

ಆದರೆ, ಸೀಮಿತ ಸಿನೆಮಾ ಹಾಗೂ ಲೆಕ್ಕಾಚಾರ ಪಕ್ಕಾ ಇರುವ ತುಳುನಾಡಿನಲ್ಲಿ ಈ ಕಮಿಟಿ ಕೆಲಸ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಕೋಸ್ಟಲ್‌ ವುಡ್‌ನ‌ಲ್ಲಿ ಈ ಕಮಿಟಿಗೆ ಹುಟ್ಟು ನೀಡಲಾಗಿದೆ. ಅಂದರೆ, ಇದರ ಮಾರ್ಗದರ್ಶನದಲ್ಲಿ ಮುಂದೆ ಸಿನೆಮಾ ರಿಲೀಸ್‌ ದಿನಾಂಕಗಳ ಫಿಕ್ಸ್‌ ಎಲ್ಲ ಪಕ್ಕಾ ಆಗಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಅಂದಹಾಗೆ ಕಮಿಟಿಗೆ ನಿರ್ಮಾಪಕ ದೇವದಾಸ್‌ ಪಾಂಡೇಶ್ವರ ಅಧ್ಯಕ್ಷರು. ಉಳಿದಂತೆ ಸುಮಾರು 12 ಜನ ಸದಸ್ಯರಿದ್ದಾರೆ.

ಈ ಕಮಿಟಿಯು ತುಳು ಸಿನೆಮಾಗಳ ಬಿಡುಗಡೆಗೆ 2 ವಾರಗಳ ಗ್ಯಾಪ್‌ ನೀಡಲಿದೆ. ಯಾರಾದರೂ ಎರಡು ವಾರ ಗ್ಯಾಪ್‌ ಮೀರಿದರೆ ಅವರನ್ನು ಕರೆದು ಮಾತಾಡಿಸಿ ಎರಡು ವಾರದ ಮಾಹಿತಿ ನೀಡಲಾಗುತ್ತದೆ. ಸಂಘದಲ್ಲಿ ಇಲ್ಲದವರು ಸಿನೆಮಾ ರಿಲೀಸ್‌ಗೆ ಮುಂದಾದರೆ ಅವರಿಗೂ ಕರೆದು ಮಾತುಕತೆ ನಡೆಸಲಾಗುತ್ತದೆ. ಸದ್ಯ ಇಂತಹ ಕಮಿಟಿ ತುಳು ಸಿನೆಮಾಕ್ಕೆ ಕೆಲಸ ಮಾಡಬೇಕಿತ್ತು.

ಇಂತಹ ವಿಚಾರ ಸದ್ಯ ಚರ್ಚೆಯಲ್ಲಿ ಇರುವಾಗಲೇ ಪ್ರಸ್ತುತ ರಿಲೀಸ್‌ಗೆ ಹೊರಟಿರುವ 'ಪತ್ತೀಸ್‌ ಗ್ಯಾಂಗ್‌' ಆದರ್ಶ ಮೆರೆದಿದೆ. ಈಗಾಗಲೇ ಬಿಡುಗಡೆಯಾಗಿರುವ 'ದಗಲ್‌ಬಾಜಿಲು' ಸಿನೆಮಾ ಮಂಗಳೂರಿನ ಜ್ಯೋತಿಯಲ್ಲಿ ಪ್ರದರ್ಶನ ಕಾಣುತ್ತಿರುವ ಕಾರಣಕ್ಕೆ ಜ್ಯೋತಿಯಲ್ಲಿ ಪತ್ತೀಸ್‌ ಗ್ಯಾಂಗ್‌ ಪ್ರದರ್ಶನ ಹಠ ತೊಟ್ಟಿಲ್ಲ. ಒಂದು ತುಳು ಸಿನೆಮಾ ಉತ್ತಮ ಪ್ರದರ್ಶನ ಕಾಣುತ್ತಿರುವಾಗ ಇನ್ನೊಬ್ಬ ಬಂದು ಸಿನೆಮಾವನ್ನು ಕೊಲ್ಲುವುದು ಸರಿಯಲ್ಲ ಎಂಬ ಕಾರಣಕ್ಕೆ ಪತ್ತೀಸ್‌ ಗ್ಯಾಂಗ್‌ ಎಂಟ್ರಿ ಜ್ಯೋತಿಯಲ್ಲಿಲ್ಲ!

ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ ಹೇಳುವ ಪ್ರಕಾರ, 'ಕನ್ನಡದಲ್ಲಿ ಚಿತ್ರ ಬಿಡುಗಡೆಗೆ ಯಾವುದೇ ಸಮಯದ ನಿರ್ಬಂಧಗಳಿಲ್ಲ. ಕನ್ನಡ ವಿಶ್ವವ್ಯಾಪಿಯಲ್ಲೂ ಬಿಡುಗಡೆಯ ಅವಕಾಶ ಪಡೆಯುವುದರಿಂದ ಸಮಯದ ಅಗತ್ಯವೂ ಇಲ್ಲ. ಆದರೆ ಪ್ರಾದೇಶಿಕ ಭಾಷೆಯ ಸಿನೆಮಾಗಳು ಮಾತ್ರ ನಿರ್ದಿಷ್ಟ ಪರಿಧಿಯೊಳಗೆ ಮಾತ್ರ ಪ್ರದರ್ಶನ ಕಾಣುವ ಕಾರಣಕ್ಕಾಗಿ ನಮ್ಮೊಳಗೆ ಎಚ್ಚರಿಕೆ ಸೂತ್ರ ಅನುಸರಿಸುವುದು ಅಗತ್ಯ. ಇದು ಪಾಲನೆಯಾದರೆ ತುಳು ಚಿತ್ರರಂಗಕ್ಕೆ ಉತ್ತಮ ಅವಕಾಶಗಳು ಇನ್ನಷ್ಟು ದೊರೆಯಬಹುದು.

ಅದರಲ್ಲೂ ಮುಖ್ಯವಾಗಿ ಅನಾವಶ್ಯಕ ಗೊಂದಲ/ ಸಮಸ್ಯೆ ನಿವಾರಣೆಯಾಗಬಹುದು. ಇದಕ್ಕಾಗಿ ಎಲ್ಲ ತುಳು ಚಿತ್ರ ನಿರ್ಮಾಪಕರು ವಿಶೇಷ ಕಾಳಜಿ ವಹಿಸಿದರೆ ಉತ್ತಮ ಎನ್ನುತ್ತಾರೆ.

ದಿನೇಶ್‌ ಇರಾ

ಇಂದು ಹೆಚ್ಚು ಓದಿದ್ದು

Trending videos

Back to Top