CONNECT WITH US  

ಸೇತುವೆ ಕಥೆ: ನಾಗರಿಕರ ವ್ಯಥೆ

ಭದ್ರಾವತಿ: ಯಾವುದೇ ನದಿ ನಗರದೊಳಗಿಂದ ಹರಿದು ಹೋಗುವಂತಿದ್ದರೆ ಆ ನದಿಯ ಉಭಯ ಪಾರ್ಶ್ವದಲ್ಲಿ ವಾಸಿಸುವ ಜನರ ಸಂಚಾರಕ್ಕೆ ಸೇತುವೆ ಎಂಬುದು ನದಿ ದಾಟುವ ಸಾಧನವಾಗಿರುತ್ತದೆ. ಈ ದಿಸೆಯಲ್ಲಿ ಪುರಾತನ ಕಾಲದಿಂದಲೂ ನದಿ ಕಾಲುವೆ ದಾಟಲು ಸೇತುವೆ ನಿರ್ಮಿಸುವ ಪದ್ಧತಿ ಬೆಳೆದುಬಂದಿದೆ. ಆ ರೀತಿ ನಿರ್ಮಿತವಾದ ಸೇತುವೆಗಳು ಕಾಲಕ್ಕೆ ತಂಕ್ಕಂತೆ ತಮ್ಮ ವಿನ್ಯಾಸಗಳನ್ನು ಬದಲಿಸಿಕೊಂಡು ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿತವಾಗಿವೆಯಾದರೂ ಸಹ ಸೇತುವೆ ನಿರ್ಮಾಣದ ಉದ್ದೇಶ ಮತ್ತು ಬಳಕೆ ಮಾತ್ರ ಹಿಂದಿಗಿಂತ ಇಂದು ಹೆಚ್ಚಾಗಿದ್ದು ಹಳೇಕಾಲದ ಸೇತುವೆಗಳು ಇಂದಿಗೂ ಜನರಿಗೆ ಉತ್ತಮ ಸೇವೆ ನೀಡುತ್ತಾ ಬಂದಿರುವುದನ್ನು ಯಾವ ದೃಷ್ಟಿಕೋನದಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ.

ಓಲ್ಡ್‌ ಈಸ್‌ ಗೋಲ್ಡ್‌ ಎಂಬಂತೆ ಪುರಾತನ ಕಾಲದಲ್ಲಿ ನಿರ್ಮಿತವಾದ ಸೇತುವೆಗಳು ಇಂದಿಗೂ ಗಟ್ಟಿಮುಟ್ಟಾಗಿ ಆಧುನಿಕ ತಂತ್ರಜ್ಞಾನದಿಂದ ನಿರ್ಮಿತವಾದ ಸೇತುವೆಗಳಿಗೆ ಸವಾಲಾಗಿ ಜನಮಾನಸ ಗೆದ್ದಿವೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಭದ್ರಾವತಿಯಲ್ಲಿರುವ ಹಳೇ ಸೇತುವೆ. ಹೆಸರಿಗೆ ಹೊಸ ಸೇತುವೆ ಎನಿಸಿದ್ದರೂ ನದಿಯಲ್ಲಿ ನೀರಿನ ಪ್ರವಾಹ ಬಂದಾಗ ತೀವ್ರ ಹಾನಿಗೊಳಗಾಗಿ ವಾಹನ ಜನ ಸಂಚಾರಕ್ಕೆ ಅನುಪಯುಕ್ತವಾಗಿರುವ ಸೇತುವೆ.

ಹಳೇ ಸೇತುವೆ: ಭದ್ರಾವತಿ ನಗರ ಪ್ರದೇಶದ ನಡುವೆ ಹಾದು ಹೋಗಿರುವ ಭದ್ರಾನದಿಗೆ 1890 ರಲ್ಲಿ ಸುಮಾರು ರೂ 74997 ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಎತ್ತರವಾಗಿ ಕಟ್ಟಲ್ಪಟ್ಟಿದೆ. ನದಿಯಲ್ಲಿ ನೀರು ಗರಿಷ್ಠ ಮಟ್ಟದಲ್ಲಿ ಹೆಚ್ಚಾದಾಗಲೂ ಸಹ ಜನ ಮತ್ತು ವಾಹನ ಸಂಚಾರಕ್ಕೆ ಈ ಸೇತುವೆ ತನ್ನ ಸೇವೆಯನ್ನು ಜನರಿಗೆ ಒದಗಿಸುವ ಮೂಲಕ ತಾನೂ ವಯೋಮಾನದಲ್ಲಿ ಹಳಬನಾದರೂ ಇಂದಿನ ಆಧುನಿಕ ತಂತ್ರಜ್ಞಾನದ ನೆರವಿನಿಂದ ನಿರ್ಮಿತವಾದ ಹೊಸ,
ಹೊಸ ಸೇತುವೆಗಳಿಗಿಂತ ಬಲಿಷ್ಠವಾಗಿದ್ದೇನೆ ಎಂದು ಸಾರುತ್ತಾ ಬಂದಿದೆ.

ಹೊಸಸೇತುವೆ: ಇದೇ ಭದ್ರಾನದಿಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಸುಮಾರು 1978-80ರ ನಡುವೆ ನಿರ್ಮತವಾಗಿರುವ ಹೊಸಸೇತುವೆ ಪ್ರತೀ ಬಾರಿ ನದಿಯಲ್ಲಿ ನೀರು ಹೆಚ್ಚಾಗಿ ಹರಿದಾಗ ಮುಳುಗಿ ಹೋಗುವುದಲ್ಲದೆ ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದಾಗ ಸೇತುವೆಯ ತಡೆಗೋಡೆ ಕಂಬಿಗಳು ಮುರಿದು ಹೋಗುವುದು ಸಾಮಾನ್ಯವಾಗಿದೆ. ಈ ಬಾರಿ ಸಹ ನದಿಯಲ್ಲಿ ಹರಿದ ನೀರಿನ ರಭಸಕ್ಕೆ ಹೊಸ ಸೇತುವೆಯ ಉಭಯ ಪಾರ್ಶ್ವದ ತಡೆಗೋಡೆ ಕಂಬಿಗಳು ಕಿತ್ತು ಹೋಗಿದ್ದು ಈ ಬಾರಿ ಸಹ ಜನ ಸಂಚಾರ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಹಾಗಾಗಿ ಸದಾ ಹಳೇಸೇತುವೆಯೊಂದೆ ನಗರವ್ಯಾಪ್ತಿಯಲ್ಲಿನ ಜನ ಸಂಚಾರಕ್ಕೆ ಆಧಾರವಾಗಿದೆ.

ಆರಂಭ ವಾಗದ ಹೊಸ ಪರ್ಯಾಯ ಸೇತುವೆ ಕಾಮಗಾರಿ: ಹಳೇ ಸೇತುವೆ ಮೇಲಿನ ಸಂಚಾರದ ಒತ್ತಡ ಕಡಿಮೆ ಮಾಡಲು ಅದರ ಪಕ್ಕದಲ್ಲಿಯೇ ಹೊಸ ಪರ್ಯಾಯ ಸೇತುವೆ ನಿರ್ಮಿಸಲು ಕಾಮಗಾರಿಗೆ 2018ರ ಮಾರ್ಚ್‌ ತಿಂಗಳಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಮಹದೇವ ಪ್ರಸಾದ್‌ ಹಾಗೂ ಸಿ.ಎಂ. ಇಬ್ರಾಹಿಂ ಮತ್ತು ಅಂದಿನ ಶಾಸಕ ಎಂ.ಜೆ. ಅಪ್ಪಾಜಿ ಅವರು ಶಂಕುಸ್ಥಾಪನೆ ನೆರೆವೇರಿಸಿದರು. ಈ ಸೇತುವೆ ಕಾಮಗಾರಿ 18 ತಿಂಗಳಲ್ಲಿ ಪೂರ್ಣವಾಗುತ್ತದೆ ಎಂಬ ಭರವಸೆಯನ್ನು ಅವರು ಅಂದು ಜನತೆಗೆ ನೀಡಿದರು. ಆದರೆ 5 ತಿಂಗಳು ಕಳೆದರೂ ಈವರೆಗೆ ಈ ಸೇತುವೆ ನಿರ್ಮಾಣದ ಕಾಮಗಾರಿ (ಜಾಗ ಸ್ವತ್ಛ ಮಾಡಿದ್ದನ್ನು ಬಿಟ್ಟರೆ) ಆರಂಭವಾಗದೆ ಇರುವುದು ನೋಡಿದರೆ ಈ ಸೇತುವೆ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳ್ಳುವುದು ಸಾಧ್ಯವಿಲ್ಲ ಎಂಬುದು ಜನರಿಗೆ ಮನದಟ್ಟಾಗಿದೆ.

ಒಟ್ಟಿನಲ್ಲಿ ಹಳೇಕಾಲದ ಆಡಳಿತಗಾರರಿಗೆ ಇದ್ದ ಇಚ್ಛಾಶಕ್ತಿ ಇಂದಿನ ರಾಜಕಾರಣಿಗಳಿಗೆ ಇಲ್ಲ. ಅಂದಿನ ಸರ್‌.ಎಂ. ವಿಶ್ವೇಶ್ವರಯ್ಯನವರಂತ ಇಂಜಿನಿಯರ್‌ಗಳು ಹೊಂದಿದ್ದ ತಾಂತ್ರಿಕ ಕೌಶಲ್ಯ, ಸೇತುವೆ ನಿರ್ಮಾಣದಲ್ಲಿನ ಗುಣಮಟ್ಟ ಇಂದಿನ ಆಧುನಿಕ ತಂತ್ರಜ್ಞಾನ ಹೊಂದಿರುವ ತಂತ್ರಜ್ಞರಲ್ಲಿ ಕಂಡುಬಾರದಿರುವ ಕಾರಣವೋ ತೀವ್ರ ಮಳೆಗೆ ಸೇತುವೆಗಳು ಹಾಳಾಗುತ್ತಿವೆ. 

ಈ ಬಾರಿ ಭದ್ರಾನದಿಗೆ ಹಿಂದೆಂದಿಗಿಂತ ಅಧಿಕ ಪ್ರಮಾಣದ ನೀರನ್ನು ಭದ್ರಾ ಜಲಾಶಯದಿಂದ ಬಿಟ್ಟ ಕಾರಣ ನದಿಯಲ್ಲಿ ನೀರು ಪ್ರವಾಹ ರೂಪ ಪಡೆದು ಹರಿಯಿತು. ಆದರೂ ಈ ಹಳೇ ಸೇತುವೆ ಜನಸಂಚಾರಕ್ಕೆ ಮತ್ತು ವಾಹನ ಸಂಚಾರಕ್ಕೆ ಏಕಮಾತ್ರ ಸಾಧನವಾಗಿ ಸೇವೆ ಸಲ್ಲಿಸುವ ಮೂಲಕ ಓಲ್ಡ್‌ ಈಸ್‌ ಗೋಲ್ಡ್‌ ಎಂಬ ಮಾತನ್ನು ನೆನಪಿಸುತ್ತಿದೆ.

„ಕೆ.ಎಸ್‌. ಸುಧೀಂದ್ರ


Trending videos

Back to Top