CONNECT WITH US  

ಮಹಿಳೆಯರಿಗೆ ಭತ್ತ ನಾಟಿ ನೆಡುವ ಸ್ಪರ್ಧೆ

ಮದ್ದೂರು: ಹಾಕಿ ಮಾಂತ್ರಿಕ ಮೇಜರ್‌ ಧ್ಯಾನ್‌ಚಂದ್‌ ತಮ್ಮ ಆಟದ ವೈಖರಿಯಿಂದ ವಿಶ್ವಹಾಕಿ ಪಂದ್ಯದಲ್ಲಿ ತಮ್ಮದೇ ದಂತಕಥೆ ಸೃಷ್ಟಿಸಿದ ಮಹಾನ್‌ ವ್ಯಕ್ತಿ ಎಂದು ರಾಹುಲ್‌ ದ್ರಾವಿಡ್‌ ಕ್ರೀಡಾಬಳಗದ ಅಧ್ಯಕ್ಷ ಆಬಲವಾಡಿ ಅನಿಲ್‌ಕುಮಾರ್‌ ಬಣ್ಣಿಸಿದರು.

ತಾಲೂಕಿನ ಹೊಸಗಾವಿ ಗ್ರಾಮದ ರೈತ ರಮೇಶ ಅವರ ಜಮೀನಿನಲ್ಲಿ ರಾಹುಲ್‌ ದ್ರಾವಿಡ್‌ ಕ್ರೀಡಾಬಳಗ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಆಯೋಜಿಸಿದ್ದ "ಭತ್ತ ನಾಟಿ ನೆಡುವ ಸ್ಪರ್ಧೆ'ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಆ.29 ಧ್ಯಾನ್‌ಚಂದ್‌ ಅವರ ಜನ್ಮದಿನವಾಗಿದ್ದು, ಅವರ ಸವಿನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಿದ್ದು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕ್ರೀಡಾಪಟುವಾಗಿ ಸ್ಪರ್ಧಿಸಿ ದೇಶಕ್ಕೆ ಕೀರ್ತಿತಂದ ಇವರ ಸಾಧನೆ ಅವಿಸ್ಮರಣೀಯವೆಂದರು.

ಬಾಂಧವ್ಯ ವೃದ್ಧಿಗೆ ಸಹಕಾರಿ:  ಕ್ರೀಡಾ ದಿನದ ಅಂಗವಾಗಿ ಮಹಿಳೆಯರಿಗೆ ನಾಟಿ ನೆಡುವ ಸ್ಪರ್ಧೆ ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ಮಹಿಳೆಯರು ವಯಸ್ಸಿನ ಅಂತರವಿಲ್ಲದೆ ಉತ್ಸುಕತೆಯಿಂದ ಭಾಗವಹಿಸಿ ಸ್ಪರ್ಧಾ ಮನೋಭಾವ ಹೊಂದಿರುವುದು ಸ್ವಾಗತಾರ್ಹವೆಂದ ಅವರು, ಕ್ರೀಡೆಯು ಪ್ರತಿಯೊಬ್ಬರಲ್ಲಿ ಆತ್ಮಸ್ಥೈರ್ಯ ತುಂಬುವ ಜತೆಗೆ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತದೆಂದು ಹೇಳಿದರು.

ವಿಜೇತರ ವಿವರ: ನಾಟಿ ನೆಡುವ ಸ್ಪರ್ಧೆಯಲ್ಲಿ 18 ಮಂದಿ ಮಹಿಳೆಯರು ಭಾಗವಹಿಸಿ   ನಿಗದಿಪಡಿಸಿದ 20 ಮೀಟರ್‌ ಉದ್ಧವನ್ನು 13 ನಿಮಿಷದಲ್ಲಿ ಗುರಿಮುಟ್ಟಿದ ಮಂಜುಳಾ (ಪ್ರಥಮ) 14 ನಿಮಿಷದಲ್ಲಿ ಗುರಿ ತಲುಪಿದ ಮಂಚಮ್ಮ (ದ್ವಿತೀಯ) ಹಾಗೂ 15 ನಿಮಿಷದಲ್ಲಿ ಗುರಿ ತಲುಪಿದ ಮಂಚಮ್ಮ (ತೃತೀಯ) ಬಹುಮಾನ ಪಡೆದರು. 

ಹೊಸಗಾವಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚನ್ನಪ್ಪರವರು ವಿಜೇತರಿಗೆ ಬಹುಮಾನ ವಿತರಿಸಿದರು. ಈ ವೇಳೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಂಘದ ಉಪಾಧ್ಯಕ್ಷ ಸಂದೀಪ್‌, ಪದಾಧಿಕಾರಿಗಳಾದ ಪ್ರಮೋದ, ಕುಮಾರ್‌, ಕೆ.ಪಿ.ನವೀನ್‌, ಆಶಿಕ್‌, ಸುರೇಶ, ಶ್ರೀಕಂಠ ಇನ್ನಿತರರಿದ್ದರು.


Trending videos

Back to Top