CONNECT WITH US  

ತ್ರಾಟಕ ಎಂದರೆ ಮೂರನೆಯ ಕಣ್ಣು

ಕತ್ತಲೆ ಕೋಣೆಯಲ್ಲಿ ಕೊಲೆ ರಹಸ್ಯ ಬಯಲು

"ನಾನೊಬ್ಬ ರೀಮೇಕ್‌ ನಿರ್ದೇಶಕ ಅಲ್ಲ ಅಂತ ಪ್ರೂವ್‌ ಮಾಡಬೇಕಿತ್ತು. ಆಗ ಸಿಕ್ಕಿದ್ದೇ ಈ ಕಥೆ ...'
"ಜಿಗರ್‌ ಥಂಡಾ' ಚಿತ್ರದ ನಂತರ ಶಿವಗಣೇಶ್‌ಗೆ ರೀಮೇಕ್‌ ನಿರ್ದೇಶಕ ಎಂಬ ಹಣೆಪಟ್ಟಿ ಅಂಟಿಕೊಂಡು ಬಿಟ್ಟಿತಂತೆ. ಅದರಿಂದ ಹೊರಬರಬೇಕು ಎನ್ನುತ್ತಿದ್ದಾಗಲೇ ಸಿಕ್ಕಿದ್ದು ಒಂದು ಸ್ವಮೇಕ್‌ ಕಥೆ. ಆ ಕಥೆ ಇದೀಗ ಚಿತ್ರವಾಗಿ, ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು, ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದೇ "ತ್ರಾಟಕ'.

ತಮ್ಮ ಹೊಸ  ಚಿತ್ರ "ತ್ರಾಟಕ' ಬಿಡುಗಡೆಯಾಗುತ್ತಿರುವ ವಿಷಯವನ್ನು ಹೇಳಿಕೊಳ್ಳುವುದಕ್ಕೆ ಶಿವಗಣೇಶ್‌ ಇತ್ತೀಚೆಗೆ ತಮ್ಮ ತಂಡದೊಂದಿಗೆ ಜಮಾಯಿಸಿದ್ದರು. ಅವರ ಜೊತೆ ನಿರ್ಮಾಪಕ ಕಂ ನಾಯಕ ರಾಹುಲ್‌ ಐನಾಪುರ, ಕಲಾವಿದರಾದ ಭವಾನಿ ಪ್ರಕಾಶ್‌, ಅಜಿತ್‌ ಜಯರಾಜ್‌, ಹೃದಯ ಮುಂತಾದವರು ಮಾಧ್ಯಮದವರೆದುರು ಮಾತನಾಡಲು ಕುಳಿತಿದ್ದರು.

ಮೊದಲು ಮಾತನಾಡಿದ್ದು ರಾಹುಲ್‌. ಅವರಿಗೆ ಇದು ನಾಯಕನಾಗಿ, ನಿರ್ಮಾಪಕನಾಗಿ ಮೊದಲ ಚಿತ್ರ. ಅವರು ಮತ್ತು ಶಿವಗಣೇಶ್‌ 10 ವರ್ಷಗಳ ಸ್ನೇಹಿತರಂತೆ. ಸ್ನೇಹದಲ್ಲಿ ಚಿತ್ರ ಮಾಡುವ ಮಾತುಕತೆಯಾಗಿ, ಅದು ಬಿಡುಗಡೆಯ ಹಂತಕ್ಕೆ ಬಂದಿದೆ. "ಶಿವಗಣೇಶ್‌ ಬಹಳ ಚೆನ್ನಾಗಿ ಮಾಡಿದ್ದಾರೆ. ಇದೊಂದು ಬಹಳ ಸಹಜ ಚಿತ್ರ. ಶೋಆಫ್ಗಳೆಲ್ಲಾ ಇರುವುದಿಲ್ಲ. ನಮ್ಮಲ್ಲಿರುವ ಪ್ರತಿಭೆಯನ್ನು ಶಿವಗಣೇಶ್‌ ಬಹಳ ಚೆನ್ನಾಗಿ ತೆಗೆದಿದ್ದಾರೆ' ಎಂದು ರಾಹುಲ್‌ ಹೇಳಿದರು.

ನಂತರ ಮೈಕು ಕೈಗೆತ್ತಿಕೊಂಡಿದ್ದೇ ಶಿವಗಣೇಶ್‌. "ಜಿಗರ್‌ ಥಂಡಾ' ನಂತರ ರೀಮೇಕ್‌ ನಿರ್ದೇಶಕ ಎಂಬ ಹಣೆಪಟ್ಟಿ ಬಿದ್ದಾಗ, ತಾನೊಬ್ಬ ಸ್ವಮೇಕ್‌ ನಿರ್ದೇಶಕ ಅಂತ ಪ್ರೂವ್‌ ಮಾಡೋದಕ್ಕೆ ಈ ಚಿತ್ರ ಮಾಡಿದರಂತೆ. "ಒಬ್ಬ ನಿರ್ದೇಶಕ ಎಲ್ಲಾ ಚಿತ್ರಗಳೂ ಒಂದೇ. ಅವನಿಗೆ ಸ್ವಮೇಕ್‌, ರೀಮೇಕ್‌ ಅಂತ ಇರುವುದಿಲ್ಲ. ಎಲ್ಲಾ ಚಿತ್ರಗಳಿಗೂ ಅದೇ ಶ್ರಮ ಇರುತ್ತದೆ. 

ರಾಹುಲ್‌ಗೆ 10 ವರ್ಷಗಳ ಹಿಂದೆಯೇ ಚಿತ್ರ ಮಾಡಬೇಕಿತ್ತು. ಕಾರಣಾಂತರ ಗಳಿಂದ ಆಗಿರಲಿಲ್ಲ. ಈಗ ಅವರ ವಯಸ್ಸಿಗೆ ತಕ್ಕ ಹಾಗೆ ಕಥೆ ಮಾಡಿ ಚಿತ್ರ ಮಾಡುತ್ತಿದ್ದೇವೆ. "ತ್ರಾಟಕ' ಎಂದರೆ ಮೂರನೆಯ ಕಣ್ಣು ಜಾಗ್ರತವಾಗುವುದು. ಕತ್ತಲೆ ಕೋಣೆಯಲ್ಲಿ ಕ್ಯಾಂಡಲ್‌ ಇಟ್ಟು, ತದೇಕಚಿತ್ತದಿಂದ ನೋಡಿದರೆ, ಅದರಿಂದ ಮೈಂಡ್‌ ಸ್ಕಿಲ್‌ ಜಾಸ್ತಿಯಾಗುತ್ತದೆ. ಹೀರೋ ಇಲ್ಲಿ ಒಬ್ಬ ಪೊಲೀಸ್‌ ಅಧಿಕಾರಿ. ಅವನಿಗೆ ಸಿ.ಪಿ.ಎಸ್‌ ಎಂಬ ಖಾಯಿಲೆ ಇರುತ್ತದೆ. ತ್ರಾಟಕ ಬಳಸಿ ಅದರಿಂದ ಹೇಗೆ ಆಚೆ ಬರುತ್ತಾನೆ ಮತ್ತು ಕೊಲೆ ರಹಸ್ಯವನ್ನು ಹೇಗೆ ಬೇಧಿಸುತ್ತಾನೆ ಎಂಬುದು ಚಿತ್ರದ ಕಥೆ' ಎಂದು ವಿವರ ಕೊಟ್ಟರು ಶಿವಗಣೇಶ್‌. ನ್ಯೂಯಾರ್ಕ್‌ ನಡೆದ ಕೆಲವು ನೈಜ ಘಟನೆಗಳನ್ನಿಟ್ಟುಕೊಂಡು ರೆಫ‌ರ್‌ ಮಾಡಿ ಚಿತ್ರ ಮಾಡಿದ್ದಾರಂತೆ.

ಹ್ರದಯ ಮತ್ತು ಅಜಿತ್‌ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಇನ್ನು ಭವಾನಿ ಪ್ರಕಾಶ್‌ ಅವರಿಗೆ ಇಲ್ಲಿ ಬರೀ ನಟನೆಯ ಜವಾಬ್ದಾರಿಯಷ್ಟೇ ಅಲ್ಲ, ಕಲಾವಿದರನ್ನು ತಿದ್ದಿತೀಡುವ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. "ನಾನು ಇಲ್ಲಿ ಯಾರಿಗೂ ನಟನೆ ಕಲಿಸಿಲ್ಲ. ನಟನೆ ಎನ್ನುವುದು ಸಹಜವಾಗಿ ಬಂದಿರುತ್ತದೆ. ರಂಗಭೂಮಿಯಲ್ಲಿ 20 ವರ್ಷಗಳ ಅನುಭವ ಇರುವುದರಿಂದ, ನಾನು ತಿದ್ದಿತೀಡಿದ್ದೀನಿ ಅಷ್ಟೇ. ಚೆನ್ನಾಗಿ ರಿಹರ್ಸಲ್‌ ಮಾಡಿಯೇ, ಚಿತ್ರೀಕರಣ ಮಾಡಿದ್ದೇವೆ. ಎಲ್ಲರೂ ಒಳ್ಳೆಯ ಕೆಲಸ ಮಾಡಿದ್ದಾರೆ' ಎಂದರು ಭವಾನಿ ಪ್ರಕಾಶ್‌.


Trending videos

Back to Top