CONNECT WITH US  

ಜಗತ್ತಿನ ಹಲವು ಸಮಸ್ಯೆಗೆ ವಿವೇಕ ಚಿಂತನೆಯಲ್ಲಿದೆ ಉತ್ತರ

ಬೀದರ: ಇಂದು ಜಗತ್ತಿಗೆ ವಿವೇಕವಾಣಿ, ಅಮೃತವಾಣಿ ಹಾಗೂ ಶಕ್ತಿವಾಣಿ ಜರೂರಿಯಾಗಿದೆ. ಜಗತ್ತಿನ ನೂರು
ಸಮಸ್ಯೆಗಳಿಗೆ ವಿವೇಕ ಚಿಂತನೆಯಲ್ಲಿ ಉತ್ತರವಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.

ಪ್ರತಾಪ ನಗರದ ಬೆಲ್ದಾಳೆ ಕಲ್ಯಾಣ ಮಂಟಪದಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮೂರು ದಿವಸಗಳ ಕಾಲ
ಹಮ್ಮಿಕೊಂಡಿರುವ ಕಲಬುರಗಿ ಹಾಗೂ ಬಳ್ಳಾರಿ ವಿಭಾಗಗಳ ಅಭ್ಯಾಸ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು.

ಸ್ವಾಮಿ ವಿವೇಕಾನಂದರ ಚಿಂತನೆಯಿಂದ ವಿಶ್ವ ಪರಿವರ್ತನೆ ಸಾಧ್ಯವಿದೆ. ಮಲೆಷ್ಯಾದಂಥ ಮುಸ್ಲಿಮ್‌ ರಾಷ್ಟ್ರಗಳಲ್ಲಿ ವಿವೇಕಾನಂದರು ಸಾರಿದ ಆತ್ಮ ವಿಶ್ವಾಸ ಶಿಕ್ಷಣ ಜಾರಿಯಲ್ಲಿದ್ದರೂ ಭಾರತದಲ್ಲಿ ಮಾತ್ರ ಅವರಿಗೆ ಧರ್ಮದ
ಹಣೆಪಟ್ಟಿ ಅಂಟಿಸಲಾಗುತ್ತಿದೆ. ನಮ್ಮ ಜನಪ್ರತಿನಿಧಿಗಳಿಗೆ ಅವರ ವಿಚಾರಧಾರೆ ನಿಲುಕುತ್ತಿಲ್ಲ. ನಮ್ಮಲ್ಲಿನ ಶಾಲಾ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆತ್ಮ ವಿಶ್ವಾಸಭರಿತ ಶಿಕ್ಷಣ ನೀಡುತ್ತಿಲ್ಲವಾದ್ದರಿಂದ ಯುವ ಸಂಪತ್ತು ಪೋಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮಲ್ಲಿ ಅಗಾಧ ಶಕ್ತಿ ಅಡಗಿದ್ದರೂ ಅದನ್ನು ಅರಿಯಲು ಸಂಪೂರ್ಣ ವಿಫಲರಾಗಿದ್ದೇವೆ. ಮಾನಸಿಕ, ಶಾರೀರಿಕ, ಭೌತಿಕ, ಬೌದ್ಧಿಕ ಹಾಗೂ ಮೌಲಿಕ ಬೆಳವಣಿಗೆ ಇಲ್ಲದೆ, ದುರ್ಬಲರಾಗಿ ಪ್ರಲೋಬನಕ್ಕೆ ಜಾರುತ್ತಲಿದ್ದೇವೆ. ವ್ಯಕ್ತಿಯ ವ್ಯಕ್ತಿತ್ವ ಹಾಗೂ ವಸ್ತುವಿನ ಸ್ವರೂಪ ಇವೆರಡನ್ನೂ ತಿಳಿಯದೆ ಮೂಕರಾಗಿದ್ದೇವೆ. ಇದರಿಂದ ಮುಕ್ತವಾಗಲು ವಜ್ರದ ವ್ಯಾಪಾರಿಯಂತೆ ಎಲ್ಲವನ್ನು ಬಲ್ಲವನಾಗಿ ಮಹಾತ್ಮರೆನಿಸಿಕೊಳ್ಳಬೇಕಿದೆ ಎಂದರು.

ಬುದ್ಧಿ ಎಂಬ ವಿಜ್ಞಾನದ ಜೊತೆಗೆ ಹೃದಯವೆಂಬ ಅಧ್ಯಾತ್ಮವನ್ನು ಬೋಧಿಸಬೇಕು. ಮತ್ತೆ ಗುರುಕುಲ ಮಾದರಿ
ಶಿಕ್ಷಣ ಪದ್ಧತಿ ಜಾರಿಯಾಗಬೇಕು. ಮಕಾಡೆ ಮಲಗಿರುವ ಅಜ್ಞಾನವನ್ನು ಬಡಿದೆಚ್ಚರಿಸಿ, ಸಂಘಟನೆ ಬಲಪಡಿಸಲು
ಸಿಂಹಗಳಾಗಬೇಕು. ಸಮಾಜದಲ್ಲಿರುವ ಭ್ರಷ್ಟಾಚಾರ ನಿರ್ನಾಮಗೊಳ್ಳಲು ವಸ್ತುವನ್ನು ಅರಿಯುವ ಬದಲು ಅದರ ಸ್ವರುಪ ತಿಳಿಯಬೇಕು. ವೀರರಾಗಿ, ಶ್ರದ್ಧಾವಂತರಾಗಿ ಹಾಗೂ ಪ್ರಾಮಾಣಿಕತೆಯಿಂದ ಮುಂದೆ ಬರಬೇಕು. ವಿವೇಕಾನಂದರ ಆದರ್ಶಗಳನ್ನು ಸೂಕ್ಷ್ಮಮವಾಗಿ ಅರಿತು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಭವಿಷ್ಯದ ಭಾರತ ಉಜ್ವಲಗೊಂಡು ವಿಶ್ವಗುರುವಾಗಿ ಗುರುತಿಸಕೊಳ್ಳುತ್ತದೆ ಎಂದರು.

ಇದಕ್ಕೂ ಮೊದಲು ವಿಭಾಗೀಯ ಪ್ರಮುಖ ಸ್ವಾಮಿ ಮರಳಾಪೂರ ಪ್ರಾಸ್ತಾವಿಕ ಮಾತನಾಡಿದರು. ವಿಷ್ಣುಸೇನಾ ಸಮಿತಿ ಅಧ್ಯಕ್ಷ ಗುರುನಾಥ ರಾಜಗೀರಾ, ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ್‌, ಡಿ.ಬಿ. ಕುಂಬಾರ ವೇದಿಕೆಯಲ್ಲಿದ್ದರು. ಆಶಾರಾಣಿ ಸ್ವಾಗತಿಸಿ, ನಿರ್ವಹಿಸಿದರು. ಎಂ.ಡಿ. ಯೋಗೇಶ ವಂದಿಸಿದರು. ಕಲಬುರಗಿ ಹಾಗೂ
ಬಳ್ಳಾರಿ ವಿಭಾಗಗಳ ನೂರಾರು ಎಬಿವಿಪಿ ಕಾರ್ಯಕರ್ತರು ಭಾಗವಹಿಸಿದ್ದರು.


Trending videos

Back to Top