CONNECT WITH US  

ಅ.3ಕ್ಕೆ ವಿಧಾನ ಪರಿಷತ್‌ ಉಪ ಚುನಾವಣೆ

ಬೆಂಗಳೂರು: ವಿಧಾನ ಪರಿಷತ್ತಿನ 3 ಖಾಲಿ ಸ್ಥಾನಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಉಪ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಅ.3ಕ್ಕೆ ಮತದಾನ ನಡೆಯಲಿದೆ. 

ಕಾಂಗ್ರೆಸ್‌ನ ಡಾ. ಜಿ. ಪರಮೇಶ್ವರ್‌, ಬಿಜೆಪಿಯ ಕೆ.ಎಸ್‌. ಈಶ್ವರಪ್ಪ ಹಾಗೂ ವಿ. ಸೋಮಣ್ಣ ರಾಜೀನಾಮೆಯಿಂದ ತೆರವುಗೊಂಡಿದ್ದ ಈ 3 ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಮೂವರು ಶಾಸಕರಾಗಿ ಆಯ್ಕೆಗೊಂಡಿದ್ದರಿಂದ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. 

ಚುನಾವಣಾ ಆಯೋಗದ ಪ್ರಕಟಣೆಯಂತೆ ಅ.3ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫ‌ಲಿತಾಂಶ ಹೊರಬೀಳಲಿದೆ. ಸೆ.14ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ. ನಾಮಪತ್ರ ಸಲ್ಲಿಕೆಗೆ ಸೆ.22ರ ಕೊನೆ ದಿನ. ಸೆ.24 ನಾಮಪತ್ರ ಪರಿಶೀಲನೆ ನಡೆಯಲಿದೆ.

ಉಮೇದುವಾರಿಕೆ ವಾಪಸ್‌ ಪಡೆಯಲು ಸೆ. 26 ಕೊನೆ ದಿನ. ಸೆ.6ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಉಪ ಚುನಾವಣೆಯಲ್ಲಿ ಗೆಲ್ಲುವ ಇಬ್ಬರು ಸದಸ್ಯರ ಸದಸ್ಯತ್ವದ ಅವಧಿ 2020ರ ಜೂನ್‌ 30 ಹಾಗೂ ಒಬ್ಬರು ಸದಸ್ಯರ ಅವಧಿ 2022ರ ಏಪ್ರಿಲ್‌ 14ರವರೆಗೆ ಇರಲಿದೆ.

Trending videos

Back to Top