ಕೃಷಿಕರು ಬದಲಾಗಿ ಆಧುನಿಕ ವ್ಯವಸ್ಥೆ ಅಳವಡಿಸಿ

Team Udayavani, Apr 21, 2019, 6:00 AM IST

ಕರಾವಳಿ ಭಾಗದ ಹೆಚ್ಚಿನ ಜನರು ಜೀವನ ನಿರ್ವಹಣೆಗಾಗಿ ಮಾತ್ರವಲ್ಲ ಹವ್ಯಾಸವಾಗಿಯೂ ಕೃಷಿಯನ್ನು ನೆಚ್ಚಿಕೊಂಡಿದ್ದರೆ. ಹೀಗಾಗಿ ಕೃಷಿ ಕ್ಷೇತ್ರ ಬಯಸುವ ಭೂಮಿ, ನೀರಿನ ಕೊರತೆ, ಕಾರ್ಮಿಕರ ಕೊರತೆಯ ಮಧ್ಯೆ ಪರ್ಯಾಯ ಮತ್ತು ಆಧುನಿಕ ವ್ಯವಸ್ಥೆಗಳೊಂದಿಗೆ ಇಳುವರಿ ಪಡೆಯುವ ನಿಟ್ಟಿನಲ್ಲಿ ರೈತರು ಗಮನಹರಿಸಬೇಕಾಗಿದೆ. ಮುಖ್ಯವಾಗಿ ಈ ವ್ಯವಸ್ಥೆ ತರಕಾರಿ ಬೆಳೆಗೆ ಅನ್ವಯ ವಾಗಬೇಕಿದೆ. ಆಗ ಮಾತ್ರ ಉತ್ತಮ ಫ‌ಸಲು ಪಡೆಯಲು ಸಾಧ್ಯವಿದೆ.

ಸಾಂಪ್ರದಾಯಿಕ ಕೃಷಿಕರು ದೊಡ್ಡ ಪ್ರಮಾಣದಲ್ಲಿ ಬೆಳೆ ಬೆಳೆಯದೇ ಇರುವುದರಿಂದ ಆ ಕ್ರಮ ಸಾಕಾಗುತ್ತದೆ. ಆದರೆ ವಾಣಿಜ್ಯ ದೃಷ್ಟಿಯಿಂದ ಕೃಷಿಯಲ್ಲಿ ತೊಡಗಿಸಿಕೊಂಡವರು ವಿವಿಧ ರೀತಿಯ ಪ್ರಯೋಜನಗಳ ಮೂಲಕ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕೃಷಿಗೆ ಜಾಗ ಕಡಿಮೆ ಇರುವವರೂ ಈ ಕ್ರಮ ಅನುಸರಿಸಬೇಕಾಗುತ್ತದೆ.

ಹಸಿರುಮನೆ ಪರಿಹಾರ
ಹಸಿರುಮನೆ ಕೃಷಿ ವ್ಯವಸ್ಥೆ ಇಂದು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಗ್ರಾಮಾಂತರಕ್ಕೆ ಇನ್ನೂ ಲಗ್ಗೆಯಿಟ್ಟಿಲ್ಲ. ಮೂರರಿಂದ ನಾಲ್ಕು ಎಕ್ರೆ ಬಯಲು ಪ್ರದೇಶದಲ್ಲಿ ಬೆಳೆಯಬಹುದಾದ ಇಳುವರಿಯನ್ನು ಅರ್ಧ ಎಕ್ರೆ ವಿಸ್ತೀರ್ಣದ ಹಸಿರು ಮನೆಯಲ್ಲಿ ಬೆಳೆದು ಯಶಸ್ಸು ಗಳಿಸಿದವರು ಸಾಕಷ್ಟು ಮಂದಿ ಇದ್ದಾರೆ.

ಏನಿದು ಗ್ರೀನ್‌ ಹೌಸ್‌ ?
ಉಷ್ಣತೆ ಹಾಗೂ ಶೀತವನ್ನು ಸಮ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಕೃಷಿಗೆ ಪೂರಕ ವಾತಾವರಣ ನಿರ್ಮಿಸುವುದು ಗ್ರೀನ್‌ಹೌಸ್‌. ಗ್ರೀನ್‌ಹೌಸ್‌ನಲ್ಲಿ ಗಾಳಿಯ ತೇವಾಂಶವನ್ನು ಬೆಳೆಗೆ ಸೂಕ್ತವಾದ ರೀತಿಯಲ್ಲಿ ಹಿಡಿದಿಟ್ಟು ಕೊಳ್ಳಬಹುದು. ಸಾಮಾನ್ಯವಾಗಿ ಬಯಲು ಜಾಗದಲ್ಲಿ ಕೃಷಿ ಮಾಡುವುದರಿಂದ ಈ ರೀತಿ ತೇವಾಂಶವನ್ನು ಒಂದೇ ಕಡೆ ಹೊಂದಿಸಲು ಸಾಧ್ಯವಾಗುವುದಿಲ್ಲ. ಗ್ರೀನ್‌ ಹೌಸ್‌ನಲ್ಲಿ ಎಲ್ಲ ಸಮಯದಲ್ಲೂ ಕೃಷಿಗೆ ಪೂರಕವಾದ ಒಂದೇ ವಾತಾವರಣವನ್ನು ಸೃಷ್ಟಿಸಬಹುದು.

ಕಡಿಮೆ ಭೂಮಿ ಸಾಕು
ಕೃಷಿ ಭೂಮಿ ಪ್ರಮಾಣ ಕಡಿಮೆಯಾದ ಸಂದರ್ಭದಲ್ಲಿ ಹಸಿರು ಮನೆ ಕೃಷಿ ವ್ಯವಸ್ಥೆ ಅತ್ಯಂತ ಸೂಕ್ತ. ಕಾರ್ಮಿಕರ ಅವಶ್ಯಕತೆ ಕಡಿಮೆ ಇದ್ದರೂ ಮನೆಯ ಒಂದಿಬ್ಬರು ಶ್ರಮ ಪಟ್ಟರೆ ಹಸಿರು ಮನೆಯಲ್ಲಿ ಸೌತೆ, ಟೊಮೆಟೋ, ಬೀನ್ಸ್‌, ಮೆಣಸಿನಕಾಯಿ, ಅಲಸಂಡೆ, ತೊಂಡೆಕಾಯಿ ಸೇರಿದಂತೆ ಹಲವು ತರಕಾರಿ ಬೆಳೆಯಬಹುದು. ಭತ್ತವನ್ನೂ ಬೆಳೆಯಬಹುದು.

ಇಲ್ಲಿಯೂ ಸಾಕಷ್ಟು ಅವಕಾಶ
ಉತ್ತರ ಕರ್ನಾಟಕದಲ್ಲಿ ಬೆಳೆಯ ಲಾಗುವ ಟೊಮೆಟೋ, ಬೀನ್ಸ್‌, ಈರುಳ್ಳಿ ಮೊದಲಾದ ತೀರಾ ಆವಶ್ಯಕವೆನಿಸಿದ ತರಕಾರಿಗಳನ್ನು ಕರಾವಳಿ ಭಾಗದವರು ಖರೀದಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಹಸಿರು ಮನೆ ಅಥವಾ ಆಧುನಿಕ ಮಾದರಿಯಲ್ಲಿ ಈ ಭಾಗದಲ್ಲೂ ಆ ತರಕಾರಿ ಗಳನ್ನು ಬೆಳೆಯ ಬಹುದು. ಜತೆಗೆ ಸೀಸನ್‌ಗೆ ಸೀಮಿತವಾಗಿರುವ ಕರಾವಳಿ ಭಾಗದ ಕೃಷಿಗಳನ್ನು ವಾರ್ಷಿಕ ಮಾದರಿಗೆ ವಿಸ್ತರಿಸಲು ಸಾಧ್ಯವಿದೆ. ಹಸಿರು ಮನೆ ವ್ಯವಸ್ಥೆ ನಿರ್ಮಾಣಕ್ಕೆ ಬೇಕಾದ ಪರಿಕರಗಳನ್ನು ಸೇರಿಸುವುದು ಸೇರಿದಂತೆ ಆರಂಭದಲ್ಲಿ ಒಂದಷ್ಟು ಹಣಕಾಸಿನ ವ್ಯವಸ್ಥೆ ಅಗತ್ಯವೆನಿಸಿದರೂ ಮುಂದೆ ಸಲೀಸಿನ ಕೃಷಿ ಮಾಡಲು ಹಸಿರು ಮನೆ ಪೂರಕವಾಗಿದೆ.

ಕೃಷಿ ಯಾವುದೇ ಇರಲಿ ಅದರಲ್ಲಿ
ಯಶಸ್ವಿಯಾಗಬೇಕು, ಉತ್ತಮ ಲಾಭಗಳಿಸಬೇಕು ಎಂದಿದ್ದರೆ ಬೇರೆ ಬೇರೆ ಪ್ರಯೋಗಗಳನ್ನು ಮಾಡಿ ನೋಡಬೇಕು. ಇತರರು ಮಾಡಿದ ಪ್ರಯೋಗಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಆಗ ಮಾತ್ರ ಕೃಷಿಯಲ್ಲಿ ಲಾಭಗಳಿಸಲು ಸಾಧ್ಯವಿದೆ. ಕೇವಲ ಒಂದೇ ವಿಧಾನದಿಂದ ಯಾವುದೇ ಕೃಷಿ ಹೆಚ್ಚು ಕಾಲ ಉಳಿಯಲಾರದು. ಅದಕ್ಕಾಗಿ ವಿಭಿನ್ನತೆಯನ್ನು ಕೃಷಿಯಲ್ಲೂ ಅನುಸರಿಸಿನೋಡಬೇಕು. ಇದು ತರಕಾರಿ ಕೃಷಿಗೂ ಅನ್ವಯವಾಗುತ್ತದೆ.

ಪ್ರಕೃತಿ ರಕ್ಷಣೆಗಾಗಿ
ಸಾಮಾನ್ಯವಾಗಿ ಬಯಲು ಅಥವಾ ಗದ್ದೆಗಳಲ್ಲಿ ಕೃಷಿ ಮಾಡುವ ಸಂದರ್ಭದಲ್ಲಿ ರೋಗಗಳು ಕಾಣಿಸಿಕೊಂಡರೆ ನಿರ್ದಿಷ್ಟ ಗಿಡಕ್ಕೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಆದರೆ ಪಾಲಿಥಿನ್‌ ಹೌಸ್‌ನಲ್ಲಿ ರೋಗವನ್ನು ಕಂಡು ಹಿಡಿದು ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಿದೆ. ಜತೆಗೆ ಮಳೆ, ಬಿಸಿಲು ಸೇರಿದಂತೆ ಪ್ರಕೃತಿ ವಿಕೋಪಗಳಿಂದ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ. ಗ್ರೀನ್‌ಹೌಸ್‌ ಅಥವಾ ಪಾಲಿಥಿನ್‌ ಹೌಸ್‌ ನಿರ್ಮಾಣ ಮಾಡಿ ಬೆಳೆ ಬೆಳೆಯುವುದರಿಂದ ಪ್ರಕೃತಿ ವಿಕೋಪದಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದು.

 ರಾಜೇಶ್‌ ಪಟ್ಟೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಿಮ್ಮ ಮನೆಯನ್ನು ಆಕರ್ಷಕವಾಗಿಸಲು ಒಳಾಂಗಣದ ಜತೆಗೆ ಅಂಗಳದ ಕಡೆಗೂ ಗಮನ ಹರಿಸಬೇಕು. ಮನೆ ಸುತ್ತ ಖಾಲಿ ಜಾಗ ಇದ್ದರೆ ನಿಮ್ಮ ಅಭಿರುಚಿಗೆ ತಕ್ಕಂತೆ ಸುಂದರ ರೂಪ ಕೊಡಬಹುದು....

  • ಮನೆಯನ್ನು ಕಟ್ಟುವಾಗ ಪ್ರತಿ ಭಾಗವನ್ನು ಕಟ್ಟುವಾಗ ಇಂಚಿಚು ಗಮನಹರಿಸಬೇಕಾಗುತ್ತದೆ. ಬಾತ್‌ರೂಂ ನಿರ್ಮಿಸುವಾಗ ಕೆಲವು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ....

  • ಮನೆ ಸುಂದರವಾಗಿದ್ದರಷ್ಟೆ ಸಾಲದು. ಮನೆಯೊಳಗಿರುವ ವಸ್ತುಗಳನ್ನು ಅಷ್ಟೇ ಸುಂದರವಾಗಿರುವಂತೆ ನೋಡಿಕೊಳ್ಳವುದು ಅಗತ್ಯ. ಪ್ರತಿಯೊಂದು ವಸ್ತುಗಳ ನಿರ್ವಹಣೆಯತ್ತಲೂ...

  • ಪ್ರತಿಯೊಬ್ಬರಲ್ಲಿಯೂ ಸ್ವಂತ ಮನೆ ನಿರ್ಮಾಣದ ಕನಸುಗಳಿರುವುದು ಸಹಜವೇ. ನಾವು ನಿರ್ಮಿಸುವ ಮನೆಯ ಕೋಣೆ,ಬೆಡ್‌ ರೂಂ, ಕಿಚನ್‌ ಸಹಿತ ಹಾಲ್ ಈ ರೀತಿಯಲ್ಲಿ ಸಿಂಗರಿಸಬೇಕು...

  • ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಾಬಲ್ಯ ಸಾಧಿಸಿರುವ ರೆಡ್‌ಮಿ ಮೊಬೈಲ್‌ ತನ್ನ ನೂತನ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ರೆಡ್‌ಮಿ ಕೆ 20 ಮತ್ತು ರೆಡ್‌ಮಿ ಕೆ 20...

ಹೊಸ ಸೇರ್ಪಡೆ