ಪಂಡಿತ ಪಾಮರರಿಗೆ ಇಷ್ಟವಾಗುವ ಶ್ರೀದೇವಿ ಮಹಾತ್ಮೆ

Team Udayavani, May 17, 2019, 6:00 AM IST

ಪಂಡಿತ ಪಾಮರರೆಲ್ಲರನ್ನೂ ತಲೆಬಾಗಿಸಿ ಭಕ್ತಿ ಪಂಥವನ್ನು ಮೆರೆಸುವಲ್ಲಿ ಅಗ್ರಸ್ಥಾನ ಪಡೆದ ಪ್ರಸಂಗವೇ ಶ್ರೀ ದೇವಿಮಹಾತ್ಮೆ. ಈ ಪ್ರಸಂಗವನ್ನು ನಿತ್ಯವೂ ಆಡುತ್ತಾ ದಾಖಲೆಯನ್ನು ನಿರ್ಮಿಸಿ ಶ್ರೀ ದೇವಿ ಮಹಾತ್ಮೆ ಅಂದರೆ ಪಕ್ಕನೆ ಹೊಳೆವುದು ಕಟೀಲು ಮೇಳ ಎಂಬಲ್ಲಿವರೆಗೆ ಪ್ರಸಿದ್ಧಿಯನ್ನು ಪಡೆದು ಇವತ್ತಿಗೂ ಪ್ರತಿನಿತ್ಯ ಅದೇ ಪ್ರಸಂಗವನ್ನು ಆಡಿದರೂ ನಿತ್ಯ ನೂತನವಾಗಿರುವುದು ಇತ್ತೀಚೆಗೆ ಎಕ್ಕಾರ್‌ನಲ್ಲಿ ಕಟೀಲು ದೇವಳದ ಅರ್ಚಕರು ಹಾಗೂ ಅನುವಂಶಿಕ ಮೊಕ್ತೇಸರರಾದ ವಾಸುದೇವಆಸ್ರಣ್ಣರು ಹಾಗೂ ಮನೆಯವರ ಸೇವೆಯಾಟವಾಗಿ ಜರಗಿದ ಕಟೀಲು 2ನೇ ಮೇಳದ ಶ್ರೀ ದೇವಿ ಮಹಾತ್ಮೆ ಆಟದಲ್ಲಿ ಪ್ರಮಾಣೀಕರಣವಾಯಿತು.

ಚೌಕಿ ಪೂಜೆಯೊಂದಿಗೆ ಹರಕೆ ಮೇಳಗಳಲ್ಲಿ ಬಹುತೇಕ ಕಾಣೆಯಾಗಿರುವ ಕೋಡಂಗಿ ವೇಷದ ಜೊತೆ ಬಾಲಗೋಪಾಲ ಮುಖ್ಯ ಸ್ತ್ರೀವೇಷ ಹನುಮ ನಾಯಕ ಹೊಗಳಿಕೆ ಹಾಗೂ ಪೀಠಿಕೆ ಸ್ತ್ರೀವೇಷದೊಂದಿಗೆ ಪೂರ್ವರಂಗವು ಸಮೃದ್ಧವಾಯಿತು

ಆದಿ ಮಾಯೆಯ ಪ್ರತ್ಯಕ್ಷದೊಂದಿಗೆ ಬ್ರಹ್ಮ ವಿಷ್ಣು ಈಶ್ವರರ ಸತ್ವ ತಮ ರಜೋ ಗುಣಗಳಲ್ಲಿ ಮಿಕ್ಕಿದ್ದು ಯಾವುದೆಂಬ ವಾದದಿಂದ ಆರಂಭಗೊಂಡು ಮಧು ಕೈಟಭರ ವಧೆ ತನಕದ ಕಥಾ ಭಾಗವನ್ನು ಕೆಲವು ಮೇಳದಲ್ಲಿ ಅನವಶ್ಯಕವಾದ ಚರ್ಚೆಯಲ್ಲಿ ಹಿಂಜಿ ಎಳೆದು ಕೊನೆಗೆ ಬೆಳಗಿನ ಜಾವಕ್ಕೆ ಆಟವನ್ನು ಹೇಗೋ ಓಡಿಸಿ ಮುಗಿಸುತ್ತಾರೆ. ಆದರೇ ಇಲ್ಲಿ ಹಾಗೆ ಆಗದೆ ಬ್ರಹ್ಮ ವಿಷ್ಣು ಮಹೇಶ್ವರರ ಸಂವಾದವು ಪೂರ್ವ ನಿರ್ದೇಶಿತ ವಾಚಿಕ ಹಾಗೂ ಅಚ್ಚುಕಟ್ಟಿನ ನಾಟ್ಯದಲ್ಲಿ ಕಳೆಗಟ್ಟಿತು. ಕಾವಳ ಕಟ್ಟೆ ದಿನೇಶ್‌ ರವರು ವಿಷ್ಣುವಾಗಿ ಸಂಚಲನ ಮೂಡಿಸಿದರು.

ಸರಪಾಡಿ ವಿಠ್ಠಲ ಶೆಟ್ಟಿ ಹಾಗೂ ನಾರಾಯಣ ಪೇಜಾವರವರು ಮಧು – ಕೈಟಭರಾಗಿ ಅತಿಯಾಗಿ ಸಭೆ ಸುತ್ತದೆ ರಂಗಸ್ಥಳ ಪ್ರವೇಶ ಮಾಡಿ ರಂಗಸ್ಥಳ ಕಾವು ಏರಿಸಿದ್ದು ಮಾತ್ರವಲ್ಲದೆ ಪಾತ್ರೋಚಿತ ಅರ್ಥಗಾರಿಕೆಯಲ್ಲಿಯೂ ಮಿಂಚಿದರು.ಇತ್ತೀಚೆಗೆ ಅತಿಯಾಗಿ ಕುಣಿದು ವಿಮರ್ಶಕರ ಬಾಯಿಗೆ ಆಹಾರವಾದ ಮಾಲಿನಿಯ ಸನ್ನಿವೇಷದ ನಾಲ್ಕು ಪದಗಳು ಈ ವರ್ಷ ಕಟೀಲು ಮೇಳದಲ್ಲಿ ಎಷ್ಟು ಬೇಕೋ ಅಷ್ಟಕ್ಕೇ ಹ್ರಸ್ವಗೊಳಿಸಿದ ಪರಿಣಾಮವಾಗಿ ಹರೀಶ್‌ ಬೆಳ್ಳಾರೆಯವರ ಅಂದದ ಮಾಲಿನಿಯು ಯಾವುದೇ ಪದ್ಯಕ್ಕೂ ವಿಸ್ತರಿತ ಚಾಲು ಕುಣಿಯದೆ ಸ್ಥಾಯಿಭಾವದ ಅಭಿನಯವು ಉತ್ತಮ ನಿರ್ವಹಣೆಯಾಗಿತ್ತು ವಿದ್ಯುನ್ಮಾಲಿ ಹಾಗೂ ದಿತಿಯಾಗಿ ಬಾಬು ಕುಲಾಲ್‌ರು ತೆಂಕುತಿಟ್ಟಿನ ಹಳೆಯ ಸಂಪ್ರದಾಯವನ್ನು ನೆನಪಿಸಿದರು ಮಹಿಷಾಸುರನಾದ ಲಕ್ಷ್ಮಣ ಕೋಟ್ಯಾನ್‌ರು ಬಣ್ಣದ ವೇಷದ ನರ್ತನದ ವೇಗದಲ್ಲಿಯ ನಿಖರತೆಯನ್ನು ತೋರಿಸಿದರು.

ಪ್ರಧಾನ ಪಾತ್ರವಾದ ಶ್ರೀದೇವಿಯಾಗಿ ಅರುಣ್‌ ಕೋಟ್ಯಾನ್‌ರು ಉನ್ನತ ಸ್ವರಭಾರದ ತೂಕದ ಮಾತುಗಳಿಂದ ಲಾಲಿತ್ಯ ಕಠೊರ ಕೋಪ ರೌದ್ರ ಇತ್ಯಾದಿ ಭಾವಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಒಂದು ಕಾಲದಲ್ಲಿ ಕಟೀಲು ಮೇಳದಲ್ಲಿ ಶ್ರೀದೇವಿ ಪಾತ್ರವನ್ನು ಮೆರೆಸಿದ ಬಾಯಾರು ರಮೇಶ ಭಟ್‌ ರವರು ರಕ್ತಬೀಜನಾಗಿ ಶ್ರೀದೇವಿಯನ್ನು ಸ್ವಾಮಿ ಶುಂಭನಿಗಾಗಿ ಬಯಸುವ ಪರಿಯನ್ನು ಮನೋಜ್ಞವಾಗಿ ನಿರ್ವಹಿಸಿದರು. ಅವರಿಗೆ ದೇವಿ ಹಾಗೂ ರಕ್ತಬೀಜ ಎರಡೂ ಪಾತ್ರಗಳಲ್ಲಿ ತಾದ್ಯಾತ್ಮತೆ ಹೊಂದಿದ ಅನುಭವ ಎದ್ದು ಕಾಣುತ್ತಾ ಇತ್ತು. ಶಶಿಧರ ಪಂಜರವರ ಶುಂಭ ಹಾಗೂ ಪ್ರಧಾನ ಹಾಸ್ಯಗಾರರಾದ ಚಂದ್ರಹಾಸರವರ ನಿರ್ವಹಣೆಯೂ ಉತ್ತಮವಾಗಿತ್ತು

ಪೂರ್ವಾರ್ಧದ ಹಿಮ್ಮೇಳದಲ್ಲಿ ಅಲಾಪನೆಯ ಅತಿರೇಕ ಸಾಹಿತ್ಯದ ಚರ್ವಿತ ಚರ್ವಣ ಇಲ್ಲದ ಭಾಗವತಿಕೆಯಲ್ಲಿ ಹರಿಪ್ರಸಾದರು ಹಾಗೂ ಪ್ರಫ‌ುಲ್ಲ ಚಂದ್ರ ನೆಲ್ಯಾಡಿಯವರು ತಮ್ಮ ಸಾಥಿಯವರೊಂದಿಗೆ ರಂಗ ಬಯಕೆಯ ಭಾಗವತಿಕೆಯನ್ನು ಉಣಬಡಿಸಿದ್ದು ವಿಶೇಷ. ಇನ್ನು ರಾತ್ರಿಯ ಉತ್ತರಾರ್ಧದಲ್ಲಿ ಬಲಿಪ ಶೈಲಿಯ ಉತ್ತರಾಧಿಕಾರಿ ಪ್ರಸಾದ ಬಲಿಪರು ತೆಂಕಿನ ಪರಂಪರೆಯ ಏರು ಶ್ರುತಿಯ 4ನೇ ಕಾಲದ ಭಾಗವತಿಕೆಯಲ್ಲಿ ಬೆಳಗಿನ ಜಾವದ ರಂಗಸ್ಥಳದ ಕಾವಿನ ಉಠಾವು ತೋರಿಸುವಲ್ಲಿ ಮುರಾರಿ ಕಡಂಬಳಿತ್ತಾಯರ ಚೆಂಡೆ ಹಾಗೂ ಗಣೇಶ ಬೆಳ್ಳಾರೆಯವರ ಮದ್ದಳೆ ಸಾಥ್‌ ಅನನ್ಯ.

– ಸುರೇಂದ್ರ ಪಣಿಯೂರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇವಕಾನ ಕೃಷ್ಣ ಭಟ್‌ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದವರು. ಯಕ್ಷಗಾನ ಇವರನ್ನು ತೀವ್ರವಾಗಿ ಆಕರ್ಷಿಸಿದ ಕಲೆ. ಆದುದರಿಂದ ಅಧ್ಯಾಪನ ವೃತ್ತಿಯ ನಡುವೆಯೂ ಯಕ್ಷಗಾನದಲ್ಲಿ...

  • ತನ್ನ ಜೀವನದುದ್ದಕ್ಕೂ ಸಣ್ಣ ತಪ್ಪನ್ನು ಎಸಗದೇ ಜನಾನುರಾಗಿಯಾಗಿ ರಾಜ್ಯಬಾರ ಮಾಡುತ್ತಿದ್ದ ರಾಜನೆಂದೇ ಖ್ಯಾತಿಗಳಿಸಿದವನು ನಳ ಮಹಾರಾಜ. ಈತನಲ್ಲಿ ಏನಾದರೂ ಒಂದು...

  • ಅರೆಹೊಳೆ ಪ್ರತಿಷ್ಠಾನ ಮಂಗಳೂರು, ನಾಟ್ಯರಂಗ ಪುತ್ತೂರು ಇವರುಗಳ ಪ್ರಸ್ತುತಿ- ರಾಧಾ. ತನ್ನ ಗೆಜ್ಜೆಯನ್ನ ರಾಧಾಳಿಗೆ ತೊಡಿಸಿ ಅವಳ ಹೆಜ್ಜೆ ತನ್ನದಾಗಿಸಿಕೊಳ್ಳುವ...

  • ಸಂದೇಹ ಹಾಗೂ ಅತಾರ್ಕಿಕ ಸಂಗತಿಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡುವುದಾದರೆ ಇಡೀ ನಾಟಕ ಒಂದು ದೃಶ್ಯಕಾವ್ಯವಾಗಿ ಮೂಡಿಬಂದಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳು...

  • ಶ್ರೀಕೃಷ್ಣಮಠದ ಸುವರ್ಣ ಗೋಪುರ ಸಮರ್ಪಣೋತ್ಸವದಲ್ಲಿ ರೂಪುಗೊಂಡ ವಿವಿಧ ಗೋಪುರಗಳಲ್ಲಿ ಕಲಾಗೋಪುರವೂ ಒಂದು. ಈ ಪ್ರಕಾರದಲ್ಲಿ ಮೊದಲ ಬಾರಿಗೆ ಪ್ರಸ್ತುತಗೊಂಡ...

ಹೊಸ ಸೇರ್ಪಡೆ