ಕಂಪನಿ ಫಾರ್ಮಿಂಗ್‌

Team Udayavani, Jun 10, 2019, 6:00 AM IST

ನಮ್ಮ ದೇಶಕ್ಕೆ ದೊಡ್ಡ ದೊಡ್ಡ ರಿಟೇಲ್‌ ಕಂಪನಿಗಳು ಕಾಲಿಟ್ಟಾಗ ಇನ್ನೇನು ಕಿರಾಣಿ ಅಂಗಡಿಗಳ ಕಥೆ ಮುಗಿಯಿತು ಅಂದರು. ಅದರ ಜೊತೆಗೇ ಇನ್ನು ಮುಂದೆ ರೈತರು ಬೆಳೆದ ಬೆಳೆಯನ್ನು ಖರೀದಿಸುವವರೇ ಇರುವುದಿಲ್ಲ. ಈ ವಿದೇಶದ ಅಂಗಡಿಗಳೆಲ್ಲ ವಿದೇಶದಿಂದಲೇ ಬಹು ಬಗೆಯ ವಸ್ತುಗಳನ್ನು ತಂದು ನಮ್ಮ ಜನರಿಗೆ ಸುರಿಯುತ್ತವೆ ಎಂದೂ ಹುಯಿಲಿಟ್ಟರು. ಆದರೆ, ವಾಸ್ತವ ಬೇರೆಯೇ ಇದೆ. ಇಂದು ಕಿರಾಣಿ ಅಂಗಡಿಗಳೂ ಬದುಕುತ್ತಿವೆ, ದೊಡ್ಡ ದೊಡ್ಡ ರಿಟೇಲ್‌ ಚೈನ್‌ ಮಾರ್ಟ್‌ ಗಳೂ ಬದುಕುತ್ತಿವೆ. ಇನ್ನೊಂದೆಡೆ ರೈತರೂ ಮೊದಲಿನಂತೆಯೇ ಇದ್ದಾರೆ. ಆದರೆ, ಬದಲಾಗಿದ್ದು ಮಾರುಕಟ್ಟೆಯ ಸ್ವರೂಪ ಮತ್ತು ವೈವಿಧ್ಯ ಮಾತ್ರ!

ಹೊಸದೊಂದು ವ್ಯವಸ್ಥೆ ಬಂದಾಗಲೆಲ್ಲ ಇನ್ನಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ ಎನ್ನುವುದಕ್ಕೆ ರಿಟೇಲ್‌ ಮಾರ್ಟ್‌ಗಳು ರೈತರಿಗೆ ಒದಗಿಸುತ್ತಿರುವ ಹೊಸ ಅವಕಾಶದ ಹೆಬ್ಟಾಗಿಲೇ ಒಂದು ಉದಾಹರಣೆ. ಏಳೆಂಟು ವರ್ಷಗಳ ಹಿಂದೆ ರಿಲಾಯನ್ಸ್‌, ಬಿಗ್‌ ಬಜಾರ್‌ನಂಥ ಸೂಪರ್‌ ಮಾರ್ಕೆಟ್‌ಗಳು ದೊಡ್ಡ ದೊಡ್ಡ ನಗರಗಳಲ್ಲಿ ತಲೆಯೆತ್ತಿದಾಗ ಅವು ತಮಗೆ ಸಾಮಗ್ರಿಗಳನ್ನು ಪೂರೈಸುವ ಒಂದು ಚೈನ್‌ ಅನ್ನೂ ಸೃಷ್ಟಿಸಿದವು. ಅದು ಈಗಿರುವ ಉತ್ಪಾದಕರು, ದಲ್ಲಾಳಿ ಹಾಗೂ ಮಾರಾಟಗಾರನ ಸಾಮಾನ್ಯ ಚೈನ್‌ ಆಗಿರಲಿಲ್ಲ. ಬದಲಿಗೆ ಅದೊಂದು ಹೊಸ ದಾರಿಯಾಗಿತ್ತು. ನೇರವಾಗಿ ಉತ್ಪಾದಕರಿಂದಲೇ ಖರೀದಿ ಮಾಡಿ, ಅದನ್ನು ಗ್ರಾಹಕರಿಗೆ ತಲುಪಿಸುವುದು. ಅಂದರೆ, ಅಲ್ಲಿ ಕೇವಲ ಒಬ್ಬರೇ ಮಧ್ಯವರ್ತಿ ಇರುತ್ತಾರೆ.

ರಿಟೇಲ್‌ ಮಾರ್ಟ್‌ಗಳಲ್ಲಿ ಸಾಮಾನ್ಯವಾಗಿ ಬೇರೆಲ್ಲ ಸಾಮಗ್ರಿಗಳನ್ನೂ ಅವುಗಳ ಕಂಪನಿಗಳಿಂದಲೇ ಖರೀದಿಸುವುದು ಸುಲಭ. ಆದರೆ, ತರಕಾರಿಗಳ ವಿಚಾರ ಬಂದಾಗ, ಇಂಥದ್ದೊಂದು ಅಸಂಘಟಿತ ಕ್ಷೇತ್ರವನ್ನು ನಿಭಾಯಿಸುವುದು ಹೇಗೆ ಎಂಬ ಚಿಂತೆ ಶುರುವಾಯಿತು. ನಮ್ಮ ದೇಶದಲ್ಲಂತೂ ಸುಮಾರು 50 ಸಾವಿರ ಕೋಟಿ ರೂ. ಮೌಲ್ಯದ ಆಹಾರ ಧಾನ್ಯ ಪ್ರತಿ ವರ್ಷ ಹಾಳಾಗುತ್ತದೆ. ಇದಕ್ಕೆ ಸರಿಯಾದ ಪೂರೈಕೆ ವ್ಯವಸ್ಥೆ ತರಕಾರಿಗಳು ಮತ್ತು ಹಣ್ಣುಗಳಿಗೆ ಇಲ್ಲದಿರುವುದೇ ಕಾರಣ ಎಂಬುದು ಜಗಜ್ಜಾಹೀರು.

ಇಂಥ ಸನ್ನಿವೇಶದಲ್ಲಿ ಹುಟ್ಟಿಕೊಂಡಿದ್ದೇ ಕಾಂಟ್ರಾಕ್ಟ್ ಫಾರ್ಮಿಂಗ್‌ ಎಂಬ ಹೊಸ ವಿಧಾನ. ವಿದೇಶದಲ್ಲಿ ನಾಲ್ಕಾರು ದಶಕಗಳ ಹಿಂದೆಯೇ ಚಾಲ್ತಿಯಲ್ಲಿದ್ದ ಈ ವ್ಯವಸ್ಥೆ ಭಾರತಕ್ಕೆ ಬಂದಿದ್ದು ಏಳೆಂಟು ವರ್ಷಗಳಿಂದೀಚೆಗೆ. ಕಾಂಟ್ರಾಕ್ಟ್ ಫಾರ್ಮಿಂಗ್‌ನಲ್ಲಿ ಸಾಮಾನ್ಯವಾಗಿ ಕಂಪನಿಯೇ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಅವರ ಉತ್ಪನ್ನಗಳನ್ನು ಖರೀದಿ ಮಾಡುತ್ತದೆ. ಸಾಮಾನ್ಯವಾಗಿ ಮಾರುಕಟ್ಟೆಗಿಂತ ಸ್ವಲ್ಪ ಕಡಿಮೆ ಬೆಲೆಯಲ್ಲೇ ಖರೀದಿ ಮಾಡುವ ಇವು, ನಿಗದಿತ ಆದಾಯ ಕೊಡುತ್ತವೆ. ಅಂದರೆ, ರೈತ ಬೆಳೆದ ಎಲ್ಲ ಟೊಮೆಟೊವನ್ನೂ ಖರೀದಿ ಮಾಡುತ್ತದೆ. ಇದರಿಂದ ರೈತ ಮಾರುಕಟ್ಟೆಯ ಅಸ್ಥಿರತೆಯನ್ನು ಎದುರಿಸಬೇಕಿಲ್ಲ. ಈ ಬೆಳೆಗೆ ಬೆಲೆ ಹೇಗಿರುತ್ತದೆಯೋ, ಮಾರ್ಕೆಟ್‌ನಲ್ಲಿ ಕೇಳುವವರು ಇರುತ್ತಾರೆಯೋ ಇಲ್ಲವೋ ಅಥವಾ ರಸ್ತೆಯ ಮೇಲೆ ಚೆಲ್ಲಬೇಕಾಗಿ ಬರುತ್ತದೋ ಏನೋ ಎಂಬ ಚಿಂತೆ ಇರುವುದಿಲ್ಲ.

ದೇಶದ ಎಲ್ಲ ನಗರಗಳಲ್ಲೂ ಬಹುತೇಕ ಎಲ್ಲ ರಿಟೇಲ್‌ ಮಾರ್ಕೆಟ್‌ಗಳೂ ಇಂಥದ್ದೊಂದು ವ್ಯವಸ್ಥೆ ಹೊಂದಿವೆ. ಹೈದರಾಬಾದ್‌ನಲ್ಲಿ 500 ಕ್ಕೂ ಹೆಚ್ಚು ರೈತರು ಹೆರಿಟೇಜ… ಫ‌ುಡ್ಸ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದರೆ, ರಿಲಾಯನ್ಸ್‌ ಮಾರ್ಟ್‌, ಮೆಟ್ರೋ, ಮದರ್‌ ಡೈರಿ, ಬಿಗ್‌ ಬಜಾರ್‌ ನಡೆಸುವ ಫ್ಯೂಚರ್‌ ಗ್ರೂಪ್‌ ಜೊತೆಗೆ ಸಾವಿರಾರು ರೈತರು ಒಪ್ಪಂದ ಮಾಡಿಕೊಂಡಿದ್ದಾರೆ.

ಕೆಲವು ಸಂದರ್ಭದಲ್ಲಿ ರೈತರಿಗೆ ಸಾರಿಗೆ ವೆಚ್ಚವೂ ಕಡಿಮೆಯಾಗುತ್ತದೆ. ಅಂದರೆ, ರಿಟೇಲ್‌ ಮಾರ್ಟ್‌ಗಳು ರೈತನ ಮನೆ ಬಾಗಿಲಿಗೇ ಬಂದು ಕೊಂಡೊಯ್ಯುತ್ತವೆ. ಇದರಿಂದ ರೈತನಿಗೆ ಸಾರಿಗೆ ವೆಚ್ಚ ಇರುವುದಿಲ್ಲ. ತನ್ನ ಹೊಲಕ್ಕೇ ಬಂದು ಖರೀದಿ ಮಾಡುವುದರಿಂದ ಒಂದು ದಿನದ ಶ್ರಮವೂ ಉಳಿಯುತ್ತದೆ. ಇದರಿಂದ ಬೆಲೆಯ ಮೇಲೆ ಶೇ. 6 -7 ರಷ್ಟು ಉಳಿತಾಯವಾಗುತ್ತದೆ.

ಕಾಂಟ್ರಾಕ್ಟ್ ಫಾರ್ಮಿಂಗ್‌ ಹೊರತಾಗಿ ಇನ್ನೂ ಕೆಲವು ವಿಧದ ಕ್ರಮಗಳಿವೆ. ಕೆಲವು ನಗರಗಳಲ್ಲಿ ರಿಲಾಯನ್ಸ್‌ ಹಾಗೂ ಹೆರಿಟೇಜ್‌ ಫ‌ುಡ್ಸ್‌ ನಂಥ ಖರೀದಿ ಕೇಂದ್ರಗಳನ್ನು ಸ್ಥಾಪಿಸಿವೆ. ಈ ಕೇಂದ್ರಗಳಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ರೈತರಿಂದ ಖರೀದಿಸಲಾಗುತ್ತದೆ. ಇನ್ನು ಮದರ್‌ ಡೈರಿಯು ಕೋ ಆಪರೇಟಿವ್‌ ಮಾಡೆಲ್‌ ಅನ್ನು ಬಳಸುತ್ತದೆ. ಅಂದರೆ, ಸಹಕಾರಿ ತತ್ವದ ಆಧಾರದಲ್ಲಿ ರೈತರ ಗುಂಪು ಮಾಡಿ ಅವರು ಬೆಳೆದ ಬೆಳೆಗಳನ್ನು ಖರೀದಿಸಿ ಮಾರುತ್ತದೆ. ಮೆಟ್ರೋ ಕ್ಯಾಶ್‌ ಅಂಡ್‌ ಕ್ಯಾರಿ ಸಾಮಾನ್ಯವಾಗಿ ಕಲೆಕ್ಷನ್‌ ಸೆಂಟರ್‌ಗಳಿಂದ ಖರೀದಿ ಮಾಡುತ್ತದೆ. ಕರ್ನಾಟಕದಲ್ಲಿ ಮಾಲೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಕಲೆಕ್ಷನ್‌ ಸೆಂಟರುಗಳನ್ನು ಮೆಟ್ರೋ ಕ್ಯಾಶ್‌ ಅಂಡ್‌ ಕ್ಯಾರಿ ಹೊಂದಿದೆ. ಇಲ್ಲಿಂದ ಸುಮಾರು 50 ಸಾಮಗ್ರಿಗಳನ್ನು ಖರೀದಿಸುತ್ತದೆ. ಒಟ್ಟು 1,500 ರೈತರು ಈ ಖರೀದಿಯ ಪ್ರಯೋಜನ ಪಡೆಯುತ್ತಾರೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಮಲ್ಪೆಯಲ್ಲೂ ಸೆಂಟರ್‌ ಇದ್ದು, ಇಲ್ಲಿಂದ ಮೀನು ಹಾಗೂ ಇತರ ಕರಾವಳಿಯಲ್ಲೇ ಸಿಗುವ ಸಾಮಗ್ರಿಗಳನ್ನು ಖರೀದಿಸಲಾಗುತ್ತದೆ.

ಪೆಪ್ಸಿಕೋ ಇಂಡಿಯಾದ ವಿಚಿತ್ರ ಕೇಕ್‌
ಪೆಪ್ಸಿಕೋ ಇತ್ತೀಚೆಗೆ ಕೋಲ್ಕತಾದ ರೈತರ ಮೇಲೆ ಹೂಡಿದ ಪ್ರಕರಣದ ಹಿನ್ನೆಲೆಯಲ್ಲಿ ಈ ಕಾಂಟ್ರಾಕ್ಟ್ ಫಾರ್ಮಿಂಗ್‌ ಎಂಬುದು ಮತ್ತೂಮ್ಮೆ ಸುದ್ದಿಯಾಗಿದೆ. ಪೆಪ್ಸಿಕೋ ತನ್ನ ಲೇಸ್‌ ಚಿಪ್ಸ್‌ಗಾಗಿ ವಿಶಿಷ್ಟ ತಳಿಯ ಆಲೂಗಡ್ಡೆಯನ್ನು ಬೆಳೆಸುತ್ತಿತ್ತು. ಅಟ್ಲಾಂಟಾ ಮತ್ತು ಚಿಪೋ› ಎಂಬ ತಳಿಯ ಈ ಆಲೂವನ್ನು ರೈತರಿಂದಲೇ ಕಂಪನಿ ಖರೀದಿಸುತ್ತಿತ್ತು. ಹತ್ತು ಸಾವಿರಕ್ಕೂ ಹೆಚ್ಚು ರೈತರು ಈ ತಳಿಯನ್ನು ಬೆಳೆಯುತ್ತಿದ್ದರು. ಇದರಿಂದ ರೈತರಿಗೆ ಒಳ್ಳೆಯ ಲಾಭವೂ ಆಗುತ್ತಿತ್ತು. ಏಕೆಂದರೆ, ಕಂಪನಿ ನಿಗದಿತ ದರ ಕೊಟ್ಟು ಖರೀದಿಸುತ್ತಿತ್ತು. ಇದೇ ಪ್ರದೇಶದಲ್ಲಿ ಜ್ಯೋತಿ ಹಾಗೂ ಇತರ ತಳಿಯ ಆಲೂಗೆ ಒಳ್ಳೆಯ ದರವಿದ್ದರೂ, ಮಾರುಕಟ್ಟೆಯಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತಿತ್ತು. ಒಮ್ಮೊಮ್ಮೆ ಉತ್ತಮ ದರ ಸಿಕ್ಕರೆ ಮತ್ತೂಮ್ಮೆ ಮಾಲನ್ನು ವಾಪಸ್‌ ತರಬೇಕಾದ ಸ್ಥಿತಿ. ಹೀಗಾಗಿ, ಜನರು ಒಬ್ಬರಾದ ಮೇಲೆ ಒಬ್ಬರು ಈ ಕಾಂಟ್ರಾಕ್ಟ್ ಫಾರ್ಮಿಂಗ್‌ಗೆ ಕಾಲಿಟ್ಟರು.

ಒಂದೆಡೆ ರೈತರು ಒಳ್ಳೆಯ ಬೆಳೆ ಬೆಳೆದು ಗಳಿಕೆಯನ್ನೂ ಮಾಡುತ್ತಿರುವ ಹೊತ್ತಿನಲ್ಲೇ ಸಣ್ಣದೊಂದು ಚಮತ್ಕಾರವೂ ನಡೆಯುತ್ತಿತ್ತು. ಸಣ್ಣ ಕಂಪನಿಯೊಂದು ಇದೇ ಅವಧಿಯಲ್ಲಿ ಚೇತರಿಸಿಕೊಳ್ಳುತ್ತಿತ್ತು. ಅದು ಯಾವ ಮಟ್ಟಕ್ಕೆಂದರೆ ಕೆಲವು ಪ್ರದೇಶದಲ್ಲಿ ಪೆಪ್ಸಿಯ ಲೇಸ್‌ ಚಿಪ್ಸ್‌ಗೆ ಪೈಪೋಟಿ ನೀಡುವಷ್ಟು ಮಟ್ಟಕ್ಕೆ ಸ್ಪರ್ಧೆ ಒಡ್ಡುತ್ತಿತ್ತು. ಇದಷ್ಟೇ ಅಲ್ಲ, ರೈತರಿಂದ ಪೆಪ್ಸಿಗಿಂತ ಹೆಚ್ಚಿನ ಮೊತ್ತಕ್ಕೆ ಅಲೂ ಖರೀದಿಸಲೂ ಶುರು ಮಾಡಿತು. ಇದು ಪೆಪ್ಸಿಯನ್ನು ಚಿಂತೆಗೀಡು ಮಾಡಿತು. ಆಗ ರೈತರ ವಿರುದ್ಧ ದಾಖಲಾದ ಪ್ರಕರಣ ಹಲವು ವರ್ಷಗಳವರೆಗೆ ನಡೆಯಿತು. ಇದೊಂದನ್ನು ಪೆಪ್ಸಿಕೋ ಹಾಗೂ ರೈತರ ಮಧ್ಯದ ತಿಕ್ಕಾಟ ಎಂಬಂತೆ ಬಿಂಬಿಸಲಾಯಿತು. ಆದರೆ, ವಾಸ್ತವ ಬೇರೆಯೇ ಇದೆ. ಪೆಪ್ಸಿಕೋ ಕಾಳಜಿ ಇದ್ದಿದ್ದು ಆ ಕಂಪನಿ ತನಗೆ ಸ್ಪರ್ಧೆ ನೀಡುತ್ತಿರುವ ಬಗ್ಗೆಯೇ ಹೊರತು, ರೈತರ ಮೇಲೆ ಆಗಿರಲಿಲ್ಲ. ನಂತರ ಪೆಪ್ಸಿಕೋ ರೈತರ ವಿರುದ್ಧ ದಾಖಲಿಸಿದ ಮೊಕದ್ದಮೆಗಳನ್ನು ವಾಪಸ್‌ ತೆಗೆದುಕೊಂಡಿದ್ದಾಯಿತು. ಆದರೆ, ಇದು ಎಂಥ ಮಾರುಕಟ್ಟೆಯನ್ನಾದರೂ ರೈತರು ಹಾಗೂ ದಲ್ಲಾಳಿಗಳು, ಮಧ್ಯವರ್ತಿಗಳು ಹೇಗೆ ಹಾಳು ಮಾಡಬಹುದು ಎಂಬುದಕ್ಕೆ ಒಂದು ನಿದರ್ಶನವಾಗಿ ಉಳಿಯಬಲ್ಲದು.

ತರಬೇತಿಯೂ ಇದೆ
ಆರಂಭದಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್‌ ಅಥವಾ ಇತರ ವಿಧದ ಕೃಷಿಯಲ್ಲಿ ಕೇವಲ ಬೆಳೆಯನ್ನು ಇಂಥ ಕಂಪನಿಗಳು ಖರೀದಿಸಿ ಒಯ್ಯುತ್ತಿದ್ದವು. ಆದರೆ, ಅದಕ್ಕೆ ಬೇಕಾದ ಪೂರಕ ಸೌಕರ್ಯವನ್ನು ರೈತರಿಗೆ ಒದಗಿಸಿಕೊಡುವಲ್ಲಿ ಯಾವ ಕಂಪನಿಗಳೂ ಆಸಕ್ತಿ ವಹಿಸುತ್ತಿರಲಿಲ್ಲ. ಅಂದರೆ, ರೈತರಿಗೆ ಬೆಳೆ ಬೆಳೆಯಲು ಬೇಕಾದ ಅನುಕೂಲವನ್ನಾಗಲಿ ಅಥವಾ ತರಬೇತಿಯನ್ನಾಗಲೀ ನೀಡುತ್ತಿರಲಿಲ್ಲ. ಈ ಕೊರತೆ ರೈತರಿಗೆ ಕಾಡುತ್ತಲೇ ಇತ್ತು. ಇತ್ತೀಚಿನ ವರ್ಷಗಳಲ್ಲಿ ಈ ಕಂಪನಿಗಳು ಈ ನಿಟ್ಟಿನಲ್ಲೂ ಕ್ರಮ ಕೈಗೊಳ್ಳುತ್ತಿವೆ. ಕಳೆದ ವಾರವಷ್ಟೇ ಮೆಟ್ರೋ ತನ್ನ ರೈತರಿಗೆ ಈ ಸಂಬಂಧ ತರಬೇತಿ ನೀಡಿದೆ. ಮೆಟ್ರೋ ಕ್ಯಾಶ್‌ ಅಂಡ್‌ ಕ್ಯಾರಿ ಮಾಹಿತಿಯ ಪ್ರಕಾರ, ಪ್ರತಿ ವರ್ಷ 10 ಕಡೆಗಳಲ್ಲಿ ಈ ರೀತಿಯ ತರಬೇತಿಯನ್ನು ನೀಡುತ್ತಿದೆ.

ಎಷ್ಟು ಪ್ರಮಾಣದ ಕೀಟನಾಶಕಗಳನ್ನು ಬಳಸಬೇಕು ಹಾಗೂ ಎಷ್ಟು ಬಳಸಿದರೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬುದೂ ಸೇರಿದಂತೆ ಕಟಾವು ಮಾಡಿದ ನಂತರ ಯಾವ ಕ್ರಮ ಅನುಸರಿಸಿದರೆ ಬೆಳೆಯನ್ನು ರಕ್ಷಿಸಬಹುದು. ಸಸ್ಯವನ್ನು ರೋಗ ರುಜಿನಗಳಿಂದ ರಕ್ಷಿಸುವುದು ಹೇಗೆ ಎಂಬ ಎಲ್ಲ ಮಾಹಿತಿಯನ್ನೂ ಈ ತರಬೇತಿಯಲ್ಲಿ ನೀಡಲಾಗುತ್ತದೆ. ಇದು ರೈತರಿಗೆ ತಮ್ಮ ಸಾಂಪ್ರದಾಯಿಕ ವಿಧಾನಗಳ ಜೊತೆಗೆ ಆಧುನಿಕ ಅಗತ್ಯವನ್ನು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ. ಇನ್ನೂ ಕೆಲವು ಕಂಪನಿಗಳು ಮಾದರಿ ಕೃಷಿ ಭೂಮಿಯನ್ನು ಸ್ಥಾಪಿಸಿದ್ದು, ಇಲ್ಲಿ ರೈತರನ್ನು ಕರೆಸಿ ತರಬೇತಿ ನೀಡಲಾಗುತ್ತದೆ.

ಏಕಸ್ವಾಮ್ಯದ ಭೀತಿ!
ಸದ್ಯ ಅಮೆರಿಕದಲ್ಲಿ ಪ್ರಮುಖ ನಾಲ್ಕು ರಿಟೇಲ್‌ ಸೂಪರ್‌ ರ್ಮಾರ್ಕೆಟ್‌ ಚೈನ್‌ಗಳಿವೆ. ಇವು ಇಡೀ ದೇಶದ ಒಟ್ಟು ಶೇ. 60 ರಷ್ಟು ವಹಿವಾಟುಗಳನ್ನು ಮಾಡುತ್ತವೆ. ಅಂದರೆ ಇವು ಖರೀದಿಯಲ್ಲೂ ಏಕಸ್ವಾಮ್ಯ ಸಾಧಿಸುತ್ತವೆ. ಹೀಗಾದಾಗ ರೈತರು ಮತ್ತದೇ ಸುಳಿಗೆ ಸಿಲುಕುತ್ತಾರೆ. ಕಡಿಮೆ ಬೆಲೆಗೆ ಈ ರಿಟೇಲ್‌ ಮಾರ್ಕೆಟ್‌ಗಳು ಖರೀದಿ ಮಾಡುತ್ತವೆ. ಆದರೆ, ಹೆಚ್ಚಿನ ಬೆಲೆಗೆ ಕೊಡೋಣ ಎಂದರೆ ಅಸ್ಥಿರತೆ ಕಾಡುತ್ತದೆ. ಇನ್ನೊಂದೆಡೆ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಾಮಗ್ರಿಗಳು ಸಿಗುವುದಿಲ್ಲ. ಈ ರಿಟೇಲ್‌ಮಾರ್ಕೆಟ್‌ಗಳೇ ರೈತರು ಏನನ್ನು ಬೆಳೆಯಬೇಕು ಮತ್ತು ಏನನ್ನು ಬೆಳೆಯಬಾರದು ಎಂಬುದನ್ನು ನಿರ್ಧರಿಸುತ್ತವೆ. ಈ ಮೂಲಕ ಗ್ರಾಹಕರೂ ಕೂಡ ಇವರಲ್ಲಿರುವ ವಸ್ತುಗಳಲ್ಲೇ
ಆಯ್ಕೆ ಮಾಡಿಕೊಂಡು ಖರೀದಿ ಮಾಡಬೇಕಾಗುತ್ತದೆ. ಹೀಗಾಗಿ, ಇಡೀ ವ್ಯವಸ್ಥೆಯನ್ನು ಮುಂದೊಂದು ದಿನ ಈ ರಿಟೇಲ್‌ಸೂಪರ್‌ಮಾರ್ಕೆಟ್‌ಗಳೇ ನಿಯಂತ್ರಿಸಿದರೂ ಅಚ್ಚರಿಯಿಲ್ಲ.

ಆದರೂ ಇದೆ ಹಿಂಜರಿಕೆ
ಈ ಇಡೀ ವ್ಯವಸ್ಥೆ ಕೆಲಸ ಮಾಡಬೇಕೆಂದರೆ ದೊಡ್ಡ ಪ್ರಮಾಣದಲ್ಲಿ ಸೆಟಪ್‌ ಮಾಡಬೇಕು. ಅಂದರೆ, ಎರಡು ಅಥವಾ ಹೆಚ್ಚು ಎಕರೆಯಲ್ಲಿ ವ್ಯಕ್ತಿ ಬೆಳೆಯುತ್ತಿದ್ದರೆ ಇದು ಅನುಕೂಲಕರ. ಸಣ್ಣ ಹಿಡುವಳಿದಾರರಿಗೆ ಈ ವ್ಯವಸ್ಥೆಯಲ್ಲಿ ಯಾವ ಲಾಭವೂ ಇಲ್ಲ. ಯಾಕೆಂದರೆ, ಇಂಥ ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಸಾಮಗ್ರಿಗಳು ಬೇಕು. ತರಕಾರಿಗಳೇ ಆಗಲಿ ಅಥವಾ ಹಣ್ಣುಗಳೇ ಆಗಲಿ, ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ ಮತ್ತು ಉತ್ತಮ ಗುಣಮಟ್ಟದ ಸಾಮಗ್ರಿ ಸಿಗುತ್ತದೆ ಎಂದಾದಲ್ಲಿ ಮಾತ್ರ ಅವು ಹೆಚ್ಚಿನ ಆಸಕ್ತಿ ವಹಿಸುತ್ತವೆ. ಇಲ್ಲವಾದರೆ ಅದು ಖರೀದಿಸುವವರಿಗೂ ಮಾರುವವರಿಗೂ ಉಪಯುಕ್ತವಲ್ಲ.

-ಕೃಷ್ಣ ಭಟ್‌


ಈ ವಿಭಾಗದಿಂದ ಇನ್ನಷ್ಟು

  • ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ...

  • ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ....

  • ದೇಶದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸದೇ ಹೋದರೆ ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ದಕ್ಷಿಣ ಅಮೆರಿಕದ...

  • ಮನೆ ವಿನ್ಯಾಸ ಮಾಡುವಾಗ ಆರ್ಕಿಟೆಕ್ಟ್ ಹಾಗೂ ಮನೆಯವರು ಸಾಕಷ್ಟು ಯೋಚಿಸುವುದು ವಿವಿಧ ಭಾಗಗಳು ಎಷ್ಟೆಷ್ಟು ಎತ್ತರ ಇರಬೇಕು? ಎಂಬುದರ ಬಗ್ಗೆ. ಮುಂದಿರುವ ರಸ್ತೆಯ...

  • ಅನಿಯಮಿತ ಕರೆ ಸೌಲಭ್ಯ, ಕಡಿಮೆ ದರಕ್ಕೆ ಹೆಚ್ಚು ಡಾಟಾ ನೀಡುತ್ತಿದ್ದ ಕಂಪೆನಿಗಳ ಕೊಡುಗೆಗಳು ಈಗ ಅಂತ್ಯವಾಗಿವೆ. ಜಿಯೋ, ಏರ್‌ಟೆಲ್‌, ವೊಡಾಫೋನ್‌ ಕಂಪೆನಿಗಳು...

ಹೊಸ ಸೇರ್ಪಡೆ