ಗಟರ್‌ ಬೆಟರ್‌ ಕೊಳಚೆ ನೀರಲ್ಲಿ ಭರಪೂರ ಬೆಳೆ

Team Udayavani, Oct 7, 2019, 4:14 AM IST

ಕಸದಿಂದ ರಸ ಎನ್ನುವ ಮಾತನ್ನು ಅಕ್ಷರಷಃ ನಿಜವಾಗಿಸುತ್ತಿದ್ದಾರೆ ಕುಷ್ಟಗಿಯ ರೈತ ಮಕ್ಬುಲ್‌ಸಾಬ. ಅವರು, ವ್ಯರ್ಥವಾಗಿ ಹೋಗುತ್ತಿದ್ದ ಕೊಳಚೆ ನೀರನ್ನು ಸ್ವಲ್ಪಮಟ್ಟಿಗೆ ಫಿಲ್ಟರ್‌ ಮಾಡಿ ಕೃಷಿ ಕೆಲಸಗಳಿಗೆ ಬಳಸುತ್ತಿದ್ದಾರೆ.

ಸತತ ಬರಗಾಲದಿಂದ ಅಂತರ್ಜಲ ಮಟ್ಟ ಪಾತಾಳ ಕಂಡಿದೆ. ನೀರಿನ ಮೂಲಗಳು ಬತ್ತಿವೆ. ಇದರಿಂದ ತೋಟದ, ಹೊರ ಜಮೀನುಗಳಲ್ಲಿ ಬಿತ್ತನೆ, ನಾಟಿ ಕೃಷಿ ಕೈ ಬಿಟ್ಟಿದ್ದಾರೆ. ಆದರೆ ಇಲ್ಲೊಬ್ಬ ರೈತನ ಛಲ ಮಾತ್ರ ಕಡಿಮೆಯಾಗಿಲ್ಲ. ಆತ, ಗ್ರಾಮದಲ್ಲಿ ವ್ಯರ್ಥವಾಗಿ ಚರಂಡಿ ಸೇರುತ್ತಿದ್ದ ಕೊಚ್ಚೆ ನೀರನ್ನೇ ಬೆಳೆಗೆ ಹಾಯಿಸುವ ಮೂಲಕ ಥರಹೇವಾರಿ ಬೆಳೆ ತೆಗೆದಿದ್ದಾರೆ. ಅವರೇ ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ರೈತ ಮಕ್ಬುಲ್‌ಸಾಬ ಓಲೇಕಾರ. ಅವರು ತಮ್ಮ 4 ಎಕರೆ ತೋಟದ ಬೆಳೆಗಳಿಗೆ ಕೊಚ್ಚೆ ನೀರನ್ನು ಬಳಸಿಕೊಂಡು ಲಾಭ ಪಡೆದುಕೊಂಡಿದ್ದಾರೆ. ಚರಂಡಿ ಮತ್ತು ಹಳ್ಳದ ಪಕ್ಕದಲ್ಲಿಯೇ ಜಮೀನಿದೆ. ತೋಟದಲ್ಲಿ ಮೆಕ್ಕೆ ಜೋಳ, ಸಜ್ಜೆ, ಬಿ.ಟಿ ಹತ್ತಿ, ಖಾಲಿ ಉಳಿದ ಜಮೀನಿನಲ್ಲಿ ಟೊಮೆಟೊ, ಮೂಲಂಗಿ, ಮೆಂತ್ಯೆ ಪಲ್ಲೆ, ಉಂಚಿಕ್‌ ಪಲ್ಲೆ, ಸೌತೆಕಾಯಿ ಸೇರಿ ತರಹೇವಾರಿ ತರಕಾರಿ ಬೆಳೆಯುತ್ತಿದ್ದಾರೆ.

ಬಳಸುವ ಮುನ್ನ ಫಿಲ್ಟರ್‌
ಹಲವು ವರ್ಷಗಳಿಂದ ಈ ನೀರು ಚರಂಡಿ ಮೂಲಕ ಹಳ್ಳಕ್ಕೆ ಹರಿಯುತ್ತಿತ್ತು. ಆಗ ಯಾರೂ ಅದರತ್ತ ಗಮನ ಹರಿಸಿರಲಿಲ್ಲ. ಆದರೆ ಅಂತರ್ಜಲ ಮತ್ತು ಮಳೆ ಕೈ ಕೊಟ್ಟಾಗಲೇ ಕೊಚ್ಚೆ ನೀರನ್ನು ಕೃಷಿಗೆ ಬಳಸುವ ಯೋಚನೆ ಬಂದಿದ್ದು. ಜಮೀನಿನ ಮೇಲ್ಭಾಗದಿಂದ ಕೊಚ್ಚೆ ನೀರು ಹರಿದು ಬರುತ್ತದೆ. ಅದನ್ನು ಗುಂಡಿಯಲ್ಲಿ ನಿಲ್ಲಿಸಿ, ಗುಂಡಿ ಪಕ್ಕದಲ್ಲಿಯೇ ಒಂದು ರಿಂಗ್‌ ಬಾವಿ ತೆಗೆಯಲಾಗಿದೆ. ನೀರು ಫಿಲ್ಟರ್‌ ಆದ ಬಳಿಕ ರಿಂಗ್‌ ಬಾವಿಯಲ್ಲಿ ಸಂಗ್ರಹವಾಗುತ್ತದೆ. ಈ ನೀರನ್ನು ಪಂಪ್‌ ಸೆಟ್‌ ಅಳವಡಿಸಿ, ಪೈಪ್‌ಲೈನ್‌ ಮೂಲಕ ನೀರು ಹರಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಭರಪೂರ ಫ‌ಸಲು
ಒಂದು ಎಕರೆಯಲ್ಲಿ ಬಿ.ಟಿ ಹತ್ತಿ ನಾಟಿ ಮಾಡಿದ್ದು, ಸಾಕಷ್ಟು ಪ್ರಮಾಣದಲ್ಲಿ ಕಾಯಿ ಕಟ್ಟಿದೆ. 1 ಎಕರೆಗೆ ಮೆಕ್ಕೆ ಜೋಳ ನಾಟಿ ಮಾಡಿದ್ದು 6 ಅಡಿ ಎತ್ತರ ಬೆಳೆದು ಒಂದು ದಂಟಿಗೆ 3- 4 ತೆನೆ ಬಿಟ್ಟಿದೆ. 1 ಎಕರೆಯಲ್ಲಿ ಸಜ್ಜೆ ಬಿತ್ತನೆ ಮಾಡಿದ್ದು, ಈಗಾಗಲೇ ಕಟಾವು ಹಂತಕ್ಕೆ ಬಂದಿದೆ. ಈ ಎಲ್ಲಾ ಬೆಳೆಗಳಿಗೆ 3- 4 ಸಾರಿ ನೀರು ಹರಿಸಲಾಗಿದೆ. ಈ ಎಲ್ಲಾ ಬೆಳೆಗಳಿಗೆ ಯಾವುದೇ ರೋಗ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಬೆಳೆಗಳು, ನಾನಾ ಬಗೆಯ ತರಕಾರಿ ಸೊಪ್ಪುಗಳು ಬೆಳೆದಿದೆ. ಸಜ್ಜೆಗೆ 3,000 ರೂ., ಹತ್ತಿಗೆ ನಾಟಿ, ಕಸ ಕಳೆಗೆ ಸೇರಿ 8,000 ರೂ., ಮೆಕ್ಕೆ ಜೋಳಕ್ಕೆ 6,000 ರೂ., ಒಟ್ಟು 17,000 ರೂ. ಖರ್ಚು ಬಿದ್ದಿದೆ. ಇದೀಗ ಬೆಳೆ ಚೆನ್ನಾಗಿ ಬಂದಿರುವುದರಿಂದ ಲಾಭದ ನಿರೀಕ್ಷೆಯಲ್ಲಿದ್ದಾರೆ. ತರಕಾರಿ ಬೆಳೆಗಳಿಂದ ಕುಟುಂಬ ನಿರ್ವಹಣೆಗೆ ತುಂಬಾ ಅನುಕೂಲವಾಗಿದೆ ಎನ್ನುತ್ತಾರೆ ಅವರು.

ಮಳೆಯನ್ನೇ ನೆಚ್ಚಿ ಕುಳಿತರೆ ಏನೂ ಬೆಳೆಯಲು ಸಾಧ್ಯವಿಲ್ಲ. ಕೃಷಿಯಲ್ಲಿ ಲಾಭ ಕಾಣಬೇಕು ಎನ್ನುವ ಛಲಕ್ಕೆ ಕೊಚ್ಚೆ ನೀರು ಆಸರೆಯಾಗಿರುವುದು ಅಚ್ಚರಿಯೇ ಸರಿ. ಇದೇ ರೀತಿ ಎಲ್ಲರೂ ಕಾರ್ಯಪ್ರವೃತ್ತರಾದರೆ ಸರ್ಕಾರದ ಜಲಾಮೃತ ಯೋಜನೆ ಸಫ‌ಲವಾಗುತ್ತದೆ. “ಮನಸ್ಸಿದ್ದರೆ ಮಾರ್ಗ’ ಎನ್ನುವುದಕ್ಕೆ ಇದೇ ಸಾಕ್ಷಿ.

ಚರಂಡಿ ನೀರನ್ನು ಬೆಳೆಗೆ ಹರಿಸಿದ್ದರಿಂದ ಇದುವರೆಗೂ ಯಾವ ತೊಂದರೆಯೂ ಆಗಿಲ್ಲ. ಬರಗಾಲದಲ್ಲೂ ಬೆಳೆ ಬೆಳೆಯುವುದು ಇದರಿಂದ ಸಾಧ್ಯವಾಗಿದೆ. ಇನ್ನು 15- 20 ದಿನದಲ್ಲಿ ಸಜ್ಜೆ, ಮೆಕ್ಕೆ ಜೋಳ ಕಟಾವಿಗೆ ಬರುತ್ತದೆ. ಹತ್ತಿ ಗುಣಮಟ್ಟದಲ್ಲಿ ಕಾಯಿ ಬಿಟ್ಟಿದೆ. ಲಾಭ ದೊರೆಯುವ ನಿರೀಕ್ಷೆ ಇದೆ.

– ಮಕ್ಬುಲ್‌ಸಾಬ ಓಲೇಕಾರ, ರೈತ, ಬಳೂಟಗಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ