ಸಂಪಾದನೆ ಚೆನ್ನಾಗಿದ್ರೆ ಮಾತ್ರ ಸಾಲ ಮಾಡಿ…

Team Udayavani, Jun 10, 2019, 6:00 AM IST

ಮನುಷ್ಯ ಅಂದಮೇಲೆ, ಒಂದಲ್ಲ ಒಂದು ಕಾರಣಕ್ಕೆ ಸಾಲ ಮಾಡಲೇಬೇಕು. ಆದರೆ ನಮ್ಮ ಸಂಪಾದನೆ ಜಾಸ್ತಿ ಇರುವ ಸಂದರ್ಭದಲ್ಲಿ ಮಾತ್ರ ಸಾಲ ಮಾಡಬೇಕು. ಹಾಗೆಯೇ, ಅಲ್ಪಾವಧಿಯಲ್ಲಿ ತೀರಿಸಿಬಿಡಲು ಸಾಧ್ಯವಾಗುವಷ್ಟು ಮೊತ್ತವನ್ನು ಮಾತ್ರ ಸಾಲವಾಗಿ ಪಡೆಯಬೇಕು. ಯಾವುದೇ ವಸ್ತುವಿನ ಖರೀದಿಗೆ ಮುಂದಾಗುವಾಗ, ಆ ವಸ್ತುವಿಗೆ ತಗಲುವ ಒಟ್ಟು ಮೊತ್ತದಲ್ಲಿ ಶೇ.60ರಷ್ಟನ್ನು ಕೈಯಾರೆ ಹಾಕಿ, ಉಳಿದ ಶೇ.40ರಷ್ಟು ಹಣವನ್ನು ಮಾತ್ರ ಸಾಲವಾಗಿ ಪಡೆಯಬೇಕು.

ಮನುಷ್ಯ ಅಂದ ಮೇಲೆ ಸಾಲ ಮಾಡಲೇಬೇಕು. ಸಾಲ ಮಾಡಿದಾಗ ಮಾತ್ರ ಕಷ್ಟಗಳ ಪರಿಚಯ ಆಗುವುದು. ಅಷ್ಟೇ ಅಲ್ಲ: ಸಾಲ ಕೇಳಲು ಹೋದಾಗ-ಗೆಳೆಯರು, ಬಂಧುಗಳು, ಜೀವಕ್ಕೆ ಜೀವ ಕೊಡುವ ಮಾತನಾಡುವವರು, ಹಿತಚಿಂತಕರು, ಮಾರ್ಗದರ್ಶಕರು, ಗಾಡ್‌ಫಾದರ್‌ಗಳು ಎಂದೆಲ್ಲ ಹೇಳಿಕೊಳ್ಳುವ ಜನರ ಅಸಲಿ ಮುಖದ ಅನಾವರಣವೂ ಆಗುವುದುಂಟು. ಇದನ್ನೆಲ್ಲ ತಿಳಿಯುವ ಕಾರಣಕ್ಕಾದರೂ ಒಂದಷ್ಟು ಸಾಲ ಮಾಡಬೇಕು ಅಥವಾ ಬಹಳ ಕಷ್ಟದಲ್ಲಿ ಇರುವವರಂತೆ ನಟಿಸುತ್ತಾ ಸಾಲ ಕೇಳಬೇಕು.

ಸಾಲ ಮಾಡದೇ ಬದುಕಲು ಯಾರಿಗೂ ಸಾಧ್ಯವಿಲ್ಲ. ಮನುಷ್ಯ ಅಂದ ಮೇಲೆ ಒಂದಲ್ಲ ಒಂದು ಸಂದರ್ಭದಲ್ಲಿ ಇನ್ನೊಬ್ಬರ ಮುಂದೆ ನಿಂತು ದೇಹೀ ಅನ್ನಲೇಬೇಕು ಎಂಬುದು ಸತ್ಯ. “ಸಾಲ ಮಾಡಿಯಾದರೂ ತುಪ್ಪ ತಿನ್ನು’, ” ಸಾಲ ಇಲ್ಲದವನೇ ನಿಜವಾದ ಶ್ರೀಮಂತ’ ಎಂಬೆಲ್ಲ ಮಾತುಗಳು ಪ್ರಚಲಿತದಲ್ಲಿವೆ. “ಸಾಲ ಕೊಂಬಾಗ ಹಾಲೊಗರುಂಡಂತೆ/ ಸಾಲಿಗರು ಕೊಂಡು ಎಳೆªಗ / ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ’ ಎಂದು ವಚನವೇ ಇದೆ. ಸಾಲ ಮಾಡುವಾಗ, ಅಂದರೆ, ಹಣ ಇನ್ನೊಬ್ಬರಿಂದ ನಮ್ಮ ಕೈ ಸೇರಿದಾಗ ಹಾಲು ಜೇನು ಪಾಯಸ ತಿಂದಷ್ಟು ಖುಷಿಯಾಗುತ್ತದೆ. ಆದರೆ, ಈ ಖುಷಿ ಬಹಳ ದಿನ ಉಳಿಯುವುದಿಲ್ಲ. ಸಾಲದ ಹಣವನ್ನು ಕೊಟ್ಟವರು ಅಸಲನ್ನು ಮಾತ್ರವಲ್ಲ;ಬಡ್ಡಿಯನ್ನೂ ಕೇಳುತ್ತಾನೆ. ಅವನು ಕೇಳಿದ ತಕ್ಷಣ ಕೊಡದಿದ್ದರೆ ಜಗಳಕ್ಕೆ ಬರುತ್ತಾನೆ. ಆಗ ಯಾವ ಅನಾಹುತ ಬೇಕಾದರೂ ಆಗಿಬಿಡಬಹುದು. ಸಾಲ ಕೊಟ್ಟವನು ಬಲಾಡ್ಯನಾಗಿದ್ದರೆ ( ಹೆಚ್ಚಿನ ಸಂದರ್ಭಗಳಲ್ಲಿ ಸಾಲ ಕೊಟ್ಟವರೆಲ್ಲ ಬಲಾಡ್ಯರೇ ಆಗಿರುತ್ತಾರೆ) ಸಾಲಗಾರನ ಕಾಲೋ, ಕೈಯೋ ಮುರಿದು ಹೋಗಬಹುದು.

ತೀರದ ಆಕರ್ಷಣೆ
“ಸಾಲ ಮಾಡುವುದರಿಂದ ಸುಖವಿಲ್ಲ’ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೂ, ಸಾಲ ಪಡೆಯಲು ಮುಂದಾಗುವವರೇ. ಬಡತನದಲ್ಲಿ, ಕಷ್ಟಗಳ ಮಧ್ಯೆ ನರಳಿದರೂ ಸೈ, ನಾನು ಸಾಲ ಮಾಡಲಾರೆ ಎಂದು ಹೇಳುವವರ ಸಂಖ್ಯೆ ಕಡಿಮೆ. ಸದ್ಯಕ್ಕೆ ಸಾಲ ಮಾಡಿಬಿಡೋಣ. ಇವತ್ತಲ್ಲ ನಾಳೆ ನಮಗೆ ದೊಡ್ಡ ಮೊತ್ತದ ಹಣ ಸಿಗಬಹುದು. ಆಗ ಅಸಲು-ಬಡ್ಡಿ ಎರಡನ್ನೂ ಒಟ್ಟಿಗೇ ತೀರಿಸಿದರಾಯ್ತು ಎಂದು ಯೋಚಿಸುವವರೇ ಹೆಚ್ಚು. ವಿಪರ್ಯಾಸವೇನು ಗೊತ್ತೆ? ಸಾಲದ ಹಣವೇನೋ ಹಲವು ಬಾರಿ ಕೇಳಿದ ಕೆಲವೇ ದಿನಗಳಲ್ಲಿ ಅದು ಹೇಗೋ ಸಿಕ್ಕಿಬಿಡುತ್ತದೆ. ಆದರೆ, ಅದನ್ನು ತೀರಿಸಲು ಬೇಕಾಗಿರುವ ಹೆಚ್ಚುವರಿ ಹಣ ಎಷ್ಟೋ ಬಾರಿ ಸಿಗುವುದೇ ಇಲ್ಲ.

ವಾಸ್ತವ ಹೀಗಿದ್ದರೂ, ಸಾಲ ತೀರಿಸುವುದು ಕಷ್ಟ ಎಂದು ಚೆನ್ನಾಗಿ ಗೊತ್ತಿದ್ದರೂ ನಮ್ಮ ಜನ ಹೇಗೆಲ್ಲಾ ಸಾಲದ ಬಲೆಗೆ ಸಿಕ್ಕಿ ಕೊಳ್ಳುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ ನೋಡಿ; ಬಸವರಾಜ ಪಾಟೀಲ ಹುಬ್ಬಳ್ಳಿಗೆ ಸಮೀಪದ ಒಂದು ಹಳ್ಳಿಯವನು. ಅವನಿಗೆ, ದಾವಣಗೆರೆಯಲ್ಲಿ, ಒಂದು ಖಾಸಗಿ ಕಂಪನಿಯಲ್ಲಿ ಕೆಲಸವಿತ್ತು. ಖಾಸಗಿ ಕಂಪನಿಅಂದ ಮೇಲೆ ಬಿಡಿಸಿ ಹೇಳಬೇಕೆ? ಕೆಲಸ ಗ್ಯಾರಂಟಿಯೇ ಆದರೂ ಸಂಬಳ ಕಡಿಮೆಯಿತ್ತು. ಸಂಬಳವಿಲ್ಲದೆ, ಮೇಲ್ಸಂಪಾದನೆ ಅಂತ ಇನ್ನೊಂದಷ್ಟು ಹಣ ಸಿಗುವ ಯಾವುದೇ ಅವಕಾಶವೂ ಅಲ್ಲಿ ಇರಲಿಲ್ಲ. ಆದರೆ ಮೂರು ಹೊತ್ತಿನ ಅನ್ನಕ್ಕಿಂತೂ ಆ ನೌಕರಿಯಿಂದ ಅನುಕೂಲವಾಗಿತ್ತು.

ಅವರ ಮಾತು ಕೇಳಿದ ಮೇಲೆ
ಬಸವರಾಜ ಪಾಟೀಲನಿಗೆ ಹುಬ್ಬಳ್ಳಿಯ ಊರಿನಲ್ಲಿ ಹೆತ್ತವರಿದ್ದರು. ಬಂಧುಗಳೂ ಇದ್ದರು. ಅವರನ್ನೆಲ್ಲ ನೋಡುವ ನೆಪದಲ್ಲಿ, ಹಬ್ಬ ಹರಿದಿನಗಳಿಗೆ, ಕುಟುಂಬ ಕಾರ್ಯಕ್ರಮಗಳಿಗೆ ಎಂದೆಲ್ಲಾ ಇವನು ಹೆಂಡತಿ-ಮಕ್ಕಳೊಂದಿಗೆ ತಿಂಗಳಿಗೆ, ಎರಡು ತಿಂಗಳಿಗೆ ಒಮ್ಮೆ ಊರಿಗೆ ಹೋಗಿ ಬರುತ್ತಿದ್ದ. ಆ ಸಂದರ್ಭಗಳಲ್ಲೆಲ್ಲ ಅವನು ಹೆಚ್ಚಾಗಿ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಸಿದ್ದ. ಕೆಲವೊಮ್ಮೆ, ಏನಾದರೂ ತುರ್ತು ಕೆಲಸವಿತ್ತು ಅನ್ನಿಸಿದಾಗ, ಬೈಕ್‌ನಲ್ಲಿ ಒಬ್ಬನೇ ಹೋಗಿ ಬಂದುಬಿಡುತ್ತಿದ್ದ.

ಹೀಗಿದ್ದಾಗಲೇ, ಬಸವರಾಜನ ಎದುರು ಮನೆಯವರು ಸುಲಭ ಸಾಲದ ಕಂತುಗಳಲ್ಲಿ ಕಾರ್‌ ಖರೀದಿಸಿ ಬಿಟ್ಟರು. ಅವರೂ ಯಾವುದೋ ಹಳ್ಳಿಯಿಂದಲೇ ಬಂದವರೇ. ಅವರೂ ಒಂದು ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದವರೇ. “ಸ್ವಲ್ಪ ರಿಸ್ಕ್ ತಗೊಳ್ಳೋಣ. ಹೇಗಿದ್ರೂ ಬ್ಯಾಂಕಿನಿಂದ ಲೋನ್‌ ಸಿಗುತ್ತೆ. ಈಗ ಅಲ್ಲದಿದ್ರೆ ಇನ್ಯಾವಾಗ ಲೈಫ್ನ ಎಂಜಾಯ್‌ ಮಾಡುವುದು’ ಎಂದು ಯೋಚಿಸಿ, ಅವರು ಕಾರು ಖರೀದಿಸಿಬಿಟ್ಟರು. ಆ ಮಾಲೀಕನ ಹೆಂಡತಿ, ಇದನ್ನೆಲ್ಲ ಬಸವರಾಜ ಪಾಟೀಲನ ಹೆಂಡತಿಗೆ ಹೇಳಿದಳು. ಆನಂತರ ನಡೆದಿದ್ದನ್ನು ವಿವರಿಸಿ ಹೇಳುವುದು ಬೇಡ. ಹೆಂಡತಿ-ಮಕ್ಕಳ ಒತ್ತಾಯಕ್ಕೆ ಮಣಿದು, ಬಸವರಾಜ ಪಾಟೀಲನೂ, ಬ್ಯಾಂಕ್‌ ಸಾಲ ಪಡೆದು ಕಾರು ಖರೀದಿಸಿದ.

ಖರ್ಚಿನ ಮೇಲೆ ಖರ್ಚು
ಕಾರು ಬಂದರೆ, ಅದರ ಜೊತೆಗೇ, ಕಷ್ಟಗಳೂ ಬರುತ್ತವೆ ಎಂಬ ಮಾತು ಬಸವರಾಜನ ವಿಷಯದಲ್ಲಿ ನಿಜವಾಯಿತು. ಈ ಹಿಂದೆಲ್ಲ ಕೇವಲ ಒಂದೂವರೆ ಸಾವಿರ ರುಪಾಯಿ ಇದ್ದರೆ ಇಬ್ಬರು ಮಕ್ಕಳು ಹಾಗೂ ಹೆಂಡತಿಯೊಂದಿಗೆ ಬಸ್ಸಿನಲ್ಲಿ ಊರಿಗೆ ಹೋಗಿ ವಾಪಸ್‌ ಬರಬಹುದಿತ್ತು. ಆದರೆ, ಮನೆಯಲ್ಲಿ ಕಾರ್‌ ಇರುವಾಗ ಬಸ್‌ ಹತ್ತುವುದು ಅವಮಾನ ಎಂದು ಕೊಂಡು, ಎಲ್ಲರೂ ಕಾರಿನಲ್ಲೇ ಹೊರಟರು. ಪೆಟ್ರೋಲಿನ ಖರ್ಚೇ ಎರಡು ಸಾವಿರ ದಾಟಿತು. ಮನೆಯ ಎದುರೇ ಕಾರ್‌ ಇರುವಾಗ, ಮತ್ತೂಂದು ಊರಿಗೆ, ಬಂಧುಗಳ ಮನೆಗೆ ಹೋಗಲು ಮನಸ್ಸು ಪೀಡಿಸ ತೊಡಗಿತು. ಪರಿಣಾಮ, ಊರಿಂದ ವಾಪಸ್‌ ಬರುವುದರೊಳಗೆ ಆಗಿದ್ದ ಒಟ್ಟು ಖರ್ಚು ಆರು ಸಾವಿರ ರುಪಾಯಿಗಳನ್ನು ದಾಟಿತು. ಇನ್ನು ವಾರಕ್ಕೊಮ್ಮೆ ಸರ್ವಿಸ್‌, ಸಣ್ಣ ಪುಟ್ಟ ರಿಪೇರಿ, ಹೊರಗೆ ಹೋದಾಗ ಪಾರ್ಕಿಂಗ್‌ ಶುಲ್ಕ ಎಂದೆಲ್ಲ ಖರ್ಚು ಬರತೊಡಗಿತು. ಪ್ರತಿ ತಿಂಗಳ ಮೊದಲು ವಾರವೇ ಕಟ್ಟಬೇಕಿರುವ ಬ್ಯಾಂಕಿನ ಸಾಲದ ಕಂತು, ಹೊರಗೆ ಹೋದಾಗೆಲ್ಲ ಬೆಳೆಯುವ ಕಾರಿನ ಉಪಯೋಗದ ಖರ್ಚು ಸಂಬಾಳಿಸಲು ಸಾಧ್ಯವಾಗದೆ ಬಸವರಾಜ ಹೈರಾಣಾಗಿ ಹೋದ. ಪರಿಸ್ಥಿತಿ ಎಲ್ಲಿಗೆ ಬಂತೆಂದರೆ, ಎರಡು ವರ್ಷದ ನಂತರ, ಬ್ಯಾಂಕ್‌ ಸಾಲ ತೀರಿಸಲು ಸಾಧ್ಯವಾಗದೆ, ಕಾರನ್ನೇ ಮಾರಿ ಬಿಡಲೂ ಯೋಚಿಸಿದ!

ಇಲ್ಲಿ ” ಬಸವರಾಜ’ ಎಂಬಾತ ಒಂದು ಸಂಕೇತ ಮಾತ್ರ. ಆಸೆಗೆ ಬಲಿಯಾಗಿ, ಪ್ರಸ್ಟೀಜ್‌ ತೋರಿಸಲು ಹೋಗಿ ಸಾಲ ಮಾಡಿದವರು ನಮ್ಮ ಸುತ್ತಮುತ್ತಲೂ ಇದ್ದಾರೆ. ಅಲ್ಲ; ಸಾಲ ಮಾಡಲೇಬಾರದು ಎಂದು ಖಂಡಿತ ಅರ್ಥವಲ್ಲ. ಮೊದಲೇ ಹೇಳಿದಂತೆ, ಮನುಷ್ಯ ಅಂದಮೇಲೆ, ಒಂದಲ್ಲ ಒಂದು ಕಾರಣಕ್ಕೆ ಸಾಲ ಮಾಡಲೇಬೇಕು. ಆದರೆ ನಮ್ಮ ಸಂಪಾದನೆ ಜಾಸ್ತಿ ಇರುವ ಸಂದರ್ಭದಲ್ಲಿ ಮಾತ್ರ ಸಾಲ ಮಾಡಬೇಕು. ಹಾಗೆಯೇ, ಅಲ್ಪಾವಧಿಯಲ್ಲಿ ತೀರಿಸಿಬಿಡಲು ಸಾಧ್ಯವಾಗುವಷ್ಟು ಮೊತ್ತವನ್ನು ಮಾತ್ರ ಸಾಲವಾಗಿ ಪಡೆಯಬೇಕು. ಯಾವುದೇ ವಸ್ತುವಿನ ಖರೀದಿಗೆ ಮುಂದಾಗುವಾಗ, ಆ ವಸ್ತುವಿಗೆ ತಗಲುವ ಒಟ್ಟು ಮೊತ್ತದಲ್ಲಿ ಶೇ.60ರಷ್ಟನ್ನು ಕೈಯಾರೆ ಹಾಕಿ, ಉಳಿದ ಶೇ.40ರಷ್ಟು ಹಣವನ್ನು ಮಾತ್ರ ಸಾಲವಾಗಿ ಪಡೆಯಬೇಕು. ಆಗ ಮಾತ್ರ, ಸಾಲ ಮಾಡಿದ ನಂತರವೂ ಸಮಾಧಾನದ ಜೊತೆಗೇ ಬಾಳಲು ಸಾಧ್ಯವಾಗುತ್ತದೆ.

– ನೀಲಿಮಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಡೀ ಭಾರತಕ್ಕೇ ಬೆಳಕು ಹಂಚುವ ಶಿವಕಾಶಿ ಪಟ್ಟಣದಲ್ಲಿ 520 ನೋಂದಾಯಿತ ಮುದ್ರಣ ಕೈಗಾರಿಕೆಗಳು, 53 ಬೆಂಕಿ ಕಡ್ಡಿತಯಾರಿಕಾ ಕಾರ್ಖಾನೆಗಳು, 32 ರಾಸಾಯನಿಕ ಕಾರ್ಖಾನೆಗಳಿವೆ....

  • ಉದ್ಯೋಗದಲ್ಲಿರುವ ತಂದೆ ತಾಯಿಯರಿಗೆ ಮಕ್ಕಳ ಪಾಲನೆ ಎನ್ನುವುದು ಅತಿ ದೊಡ್ಡ ಪರೀಕ್ಷೆ. ಮಕ್ಕಳು ಚಿಕ್ಕವಾಗಿದ್ದರೆ ಮನೆಯಲ್ಲಿ ಬಿಡಲೂ ಆಗದ ಕಿರಿಕಿರಿ. ಅನಿವಾರ್ಯವಾಗಿಯಾದರೂ...

  • ಗುರುವಾರದಿಂದ ಬೆಂಗಳೂರು ಕೃಷಿ ವಿವಿ ಆವರಣದಲ್ಲಿ ಕೃಷಿ ಮೇಳ ಶುರುವಾಗುತ್ತಿದೆ. ಈ ಸಲ ಮೇಳಕ್ಕೆ ಬಂದ ರೈತರಿಗೆ ನಿರಾಸೆ ಅನ್ನೋದಿಲ್ಲ. ಏಕೆಂದರೆ, ಕೃಷಿ ವಿಶ್ವವಿದ್ಯಾಲಯ,...

  • ಹಿಂದೆ ರಾಜರು, ಬೇಸಿಗೆ ಕಾಲದ ಅರಮನೆ, ಚಳಿಗಾಲದ ಅರಮನೆ ಹೀಗೆ ಕಾಲಕ್ಕೆ ತಕ್ಕಂತೆ ವಾಸಸ್ಥಳಗಳನ್ನು ಹೊಂದಿರುತ್ತಿದ್ದರು. ಆ ಸೌಕರ್ಯ ನಮಗೆಲ್ಲಿ ಬರಬೇಕು?! ಹೀಗಾಗಿ...

  • ಇಂಟರ್‌ನೆಟ್‌ ಯುಗದಲ್ಲಿ, ಸುರಕ್ಷತೆಯ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ನಾವು ಎಲ್ಲೆಲ್ಲಾ ಎಚ್ಚರಿಕೆ ವಹಿಸಬೇಕು ಗೊತ್ತಾ? ವಿಳಾಸ ನೋಡಿ ಹಣಕಾಸು...

ಹೊಸ ಸೇರ್ಪಡೆ