ಕಡಿಮೆ ದರ, ಅನ್‌ಲಿಮಿಟೆಡ್‌ ಕರೆಗಳ ಯುಗಾಂತ್ಯ?

Team Udayavani, Dec 9, 2019, 6:09 AM IST

ಅನಿಯಮಿತ ಕರೆ ಸೌಲಭ್ಯ, ಕಡಿಮೆ ದರಕ್ಕೆ ಹೆಚ್ಚು ಡಾಟಾ ನೀಡುತ್ತಿದ್ದ ಕಂಪೆನಿಗಳ ಕೊಡುಗೆಗಳು ಈಗ ಅಂತ್ಯವಾಗಿವೆ. ಜಿಯೋ, ಏರ್‌ಟೆಲ್‌, ವೊಡಾಫೋನ್‌ ಕಂಪೆನಿಗಳು ಈಗ ತಮ್ಮ ಕರೆ ದರಗಳನ್ನು ಶೇ. 40ರಷ್ಟು ಏರಿಕೆ ಮಾಡಿವೆ. ಹೊಸ ಪ್ಲಾನ್‌ಗಳು ಹೇಗಿವೆ? ಯಾವುದರಲ್ಲಿ ಎಷ್ಟು ದರ? ಇಲ್ಲಿದೆ ಮಾಹಿತಿ.

ಮೊಬೈಲ್‌ ನೆಟ್‌ವರ್ಕ್‌ ಕಂಪೆನಿಗಳು ಗ್ರಾಹಕರಿಗೆ ನೀಡುತ್ತಿದ್ದ ಅನ್‌ಲಿಮಿಟೆಡ್‌ ಕರೆಗಳು, ಕಡಿಮೆ ದರದ ಪ್ಲಾನ್‌ಗಳ ಯುಗ ಅಂತ್ಯಗೊಂಡಿದೆ. 2016ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ರಿಲಯನ್ಸ್‌ ಜಿಯೋ, “ಮೊದಲು ಪ್ರತಿಸ್ಪರ್ಧಿಯನ್ನು ದರ ಸಮರದಿಂದ ಮಣಿಸು, ನಂತರ ದರ ಏರಿಸು’ ಎಂಬ ತಂತ್ರ ಹೆಣೆದು, ಅದರಲ್ಲಿ ಯಶಸ್ವಿಯಾಗಿದೆ. ಉಚಿತ ಡಾಟಾ, ಅನ್‌ಲಿಮಿಟೆಡ್‌ ಕರೆಗಳನ್ನು ಆರಂಭದ ಕೆಲವು ತಿಂಗಳು ಉಚಿತವಾಗಿ, ನಂತರ ಅತ್ಯಂತ ಕಡಿಮೆ ದರದಲ್ಲಿ ನೀಡಿದ ಜಿಯೋ ಹೊಡೆತ ತಾಳಲಾರದೆ ದೈತ್ಯ ಕಂಪೆನಿಗಳಾದ ಏರ್‌ಟೆಲ್‌, ವೊಡಾಫೋನ್‌, ಐಡಿಯಾ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ನಷ್ಟದ ಹಾದಿಯಲ್ಲಿವೆ.

ನಷ್ಟ ತಾಳಲಾರದೇ ಐಡಿಯಾ ವೊಡಾಫೋನ್‌ ಜೊತೆ ವಿಲೀನಗೊಂಡಿತು. ಆದಾಗ್ಯೂ ಅದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಟ ನಡೆಸಿದೆ. ಒಂದು ಕಾಲದ ನಂ.1 ಕಂಪೆನಿ ಏರ್‌ಟೆಲ್‌ ಏದುಸಿರು ಬಿಡುತ್ತಿದೆ. ದರ ಸಮರದಿಂದಾಗಿ ಅನೇಕ ಏರ್‌ಟೆಲ್‌ ಸ್ಟೋರ್‌ಗಳನ್ನು ಮುಚ್ಚಬೇಕಾಯಿತು. ಅನೇಕ ಗ್ರಾಹಕರು ಜಿಯೋಗೆ ಪೋರ್ಟ್‌ ಆದರು. ಇನ್ನು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಅಂತೂ ತೀವ್ರ ನಷ್ಟದಲ್ಲಿದೆ.

ಶೇ. 40ರಷ್ಟು ಏರಿಕೆ: ಎಲ್ಲ ಕಂಪೆನಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುವ ಹಂತದಲ್ಲಿ ಜಿಯೋ ದಿಢೀರನೆ ಕರೆ ದರವನ್ನು ಏರಿಸಿದೆ. ಗ್ರಾಹಕರಿಗೆ ಅನಿಯಮಿತ ಕರೆಗಳ ರುಚಿ ತೋರಿಸಿದ್ದ ಜಿಯೋ, ಈಗ ಜಿಯೋದಿಂದ ಜಿಯೋಗೆ ಅನಿಯಮಿತ ಹಾಗೂ ಇತರ ನೆಟ್‌ವರ್ಕ್‌ಗಳಿಗೆ ಸೀಮಿತ ನಿಮಿಷಗಳ ಪ್ಲಾನ್‌ಅನ್ನು ಜಾರಿಗೆ ತಂದಿದೆ. ಜಿಯೋ ಕಂಪೆನಿ ಇತರ ನೆಟ್‌ವರ್ಕ್‌ಗಳಿಗೆ ಅನಿಯಮಿತ ಸೌಲಭ್ಯ ತೆಗೆದಾಗ, ನಮ್ಮಲ್ಲಿ ಅನಿಯಮಿತ ಕರೆ ಉಂಟು ಎಂದು ಹೇಳಿಕೊಂಡ ಏರ್‌ಟೆಲ್‌ ಎರಡು ಮೂರು ವಾರಕ್ಕೆ ತಾನೂ ಅನಿಯಮಿತ ಕರೆ ಸೌಲಭ್ಯ ತೆಗೆದುಹಾಕಿದೆ! ಬಿಎಸ್‌ಎನ್‌ಎಲ್‌ ಮಾತ್ರ ಇನ್ನೂ ದರ ಏರಿಕೆ ಮಾಡಿಲ್ಲ. ಡಿಸೆಂಬರ್‌ 3ರಿಂದ ಏರ್‌ಟೆಲ್‌, ವೊಡಾಫೋನ್‌ ಹಾಗೂ ಡಿ. 6ರಿಂದ ಜಿಯೋ ತಮ್ಮ ಕರೆದರಗಳನ್ನು ಶೇ. 40ರಷ್ಟು ಏರಿಕೆ ಮಾಡಿವೆ.

ಜಿಯೋ: ಜಿಯೋ ಪ್ಲಾನ್‌ಗಳು 199 ರೂ.ನಿಂದ ಆರಂಭವಾಗುತ್ತವೆ. 199 ರೂ.ಗೆ ರೀಚಾರ್ಜ್‌ ಮಾಡಿಸಿದರೆ 1 ತಿಂಗಳ (28 ದಿನಗಳ) ವಾಯಿದೆ, ಪ್ರತಿದಿನ 1.5 ಜಿಬಿ ಡಾಟಾ, ಜಿಯೋದಿಂದ ಜಿಯೋಗೆ ಅನಿಯಮಿತ ಕರೆಗಳು, ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ 1000 ನಿಮಿಷಗಳ ಟಾಕ್‌ಟೈಮ್‌ ಉಚಿತ. 1 ಸಾವಿರ ನಿಮಿಷ ಮುಗಿದ ನಂತರ ಕರೆ ಮಾಡಲು ನಿಮಿಷಕ್ಕೆ 6 ಪೈಸೆ ತಗುಲುತ್ತದೆ. ಅದಕ್ಕಾಗಿ ನಿಮಗೆ ಅನುಕೂಲಕರವಾದ ಆ್ಯಡ್‌ ಆನ್‌ ಪ್ಯಾಕನ್ನು ಹಾಕಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ 28 ದಿನಗಳ ವಾಯಿದೆಗೆ 249 ರೂ. ರೀಚಾರ್ಜ್‌ ಮಾಡಿದರೆ ಪ್ರತಿದಿನ 2 ಜಿ.ಬಿ, 349 ರೂ. ರೀಚಾರ್ಜ್‌ ಮಾಡಿದರೆ ಪ್ರತಿದಿನ 3 ಜಿ.ಬಿ ಡಾಟಾ ದೊರಕುತ್ತದೆ.

ಎರಡು ತಿಂಗಳ (56 ದಿನಗಳು) ವಾಯಿದೆ ಬೇಕೆನ್ನುವವರು 399 ರೂ. ರೀಚಾರ್ಜ್‌ ಮಾಡಿದರೆ ಪ್ರತಿದಿನ 1.5 ಜಿ.ಬಿ ಡಾಟಾ, 444 ರೂ. ರೀಚಾರ್ಜ್‌ ಮಾಡಿದರೆ ಪ್ರತಿದಿನ 2 ಜಿ.ಬಿ ಡಾಟಾ ದೊರಕುತ್ತದೆ. ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗಳಿಗೆ 2 ಸಾವಿರ ನಿಮಿಷಗಳ ಟಾಕ್‌ಟೈಮ್‌ ದೊರಕುತ್ತದೆ. 3 ತಿಂಗಳ (84 ದಿನಗಳು) ವಾಯಿದೆಗೆ 555 ರೂ. ರೀಚಾರ್ಜ್‌ ಮಾಡಿಸಿದರೆ ಪ್ರತಿದಿನ 1.5 ಜಿ.ಬಿ ಡಾಟಾ, 599 ರೂ.ಗೆ ಪ್ರತಿದಿನ 2 ಜಿ.ಬಿ ಡಾಟಾ, ಇತರ ನೆಟ್‌ವರ್ಕ್‌ಗೆ 3 ಸಾವಿರ ನಿಮಿಷಗಳ ಟಾಕ್‌ಟೈಮ್‌ ದೊರಕುತ್ತದೆ. ಒಂದು ವರ್ಷಕ್ಕೆ (365 ದಿನಗಳು) ಪೂರ್ತಿ ರೀಚಾರ್ಜ್‌ ಮಾಡಿಸುತ್ತೇನೆ ಎಂದುಕೊಂಡರೆ, 2199 ರೂ.ಗಳಿಗೆ ರೀಚಾರ್ಜ್‌ ಮಾಡಬೇಕು. ಇದರಲ್ಲಿ ಪ್ರತಿದಿನ 1.5 ಜಿ.ಬಿ ಡಾಟಾ, ಜಿಯೋ ದಿಂದ ಜಿಯೋ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗಳಿಗೆ 12,000 ನಿಮಿಷಗಳ ಉಚಿತ ಕರೆ ದೊರಕುತ್ತದೆ.

ಏರ್‌ಟೆಲ್‌: ಏರ್‌ಟೆಲ್‌ನಲ್ಲಿ 248 ರೂ. ನಿಂದ ಡಾಟಾ ಮತ್ತು ಕರೆಗಳ ಪ್ಯಾಕ್‌ ಆರಂಭವಾಗುತ್ತದೆ. 28 ದಿನಗಳ ವಾಯಿದೆ. 248 ರೂ.ಗಳಿಗೆ ಪ್ರತಿದಿನ 1.5 ಜಿಬಿ ಡಾಟಾ, ಏರ್‌ಟೆಲ್‌ ನೆಟ್‌ವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗಳಿಗೆ 1000 ನಿಮಿಷ (ಬಳಿಕ ನಿಮಿಷಕ್ಕೆ 6 ಪೈಸೆ, ಪ್ರತ್ಯೇಕ ಪ್ಯಾಕ್‌ ಹಾಕಿಸಿಕೊಳ್ಳಬೇಕು) ಪ್ರತಿದಿನ 2 ಜಿ.ಬಿ ಡಾಟಾ ಬೇಕೆಂದರೆ 298 ರೂ., ಪ್ರತಿದಿನ 3 ಜಿ.ಬಿ ಡಾಟಾಗೆ 398 ರೂ. ರೀಚಾರ್ಜ್‌ ಮಾಡಿಸಿಕೊಳ್ಳಬೇಕು.
3 ತಿಂಗಳ (84 ದಿನಗಳು) ವಾಯಿದೆಗೆ 598 ರೂ.ಗೆ ರೀಚಾರ್ಜ್‌ ಮಾಡಿಸಿದರೆ, ಪ್ರತಿದಿನ 1.5 ಜಿ.ಬಿ ಡಾಟಾ, ಏರ್‌ಟೆಲ್‌ಗೆ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗಳಿಗೆ 3,000 ನಿಮಿಷ ಉಚಿತ ಕರೆ ಸೌಲಭ್ಯ ಇದೆ. ಇದೇ ವಾಯಿದೆಗೆ ಪ್ರತಿದಿನ 2 ಜಿ.ಬಿ ಡಾಟಾ ಬೇಕೆಂದರೆ 698 ರೂ. ರೀಚಾರ್ಜ್‌ ಮಾಡಿಸಬೇಕು. ಒಂದು ವರ್ಷದ ಪ್ಯಾಕ್‌ ಹಾಕಿಸಬೇಕೆಂದರೆ ಈಗ 2398 ರೂ. ಕೊಡಬೇಕು (ಮುಂಚೆ ಇದಕ್ಕೆ 1699 ರೂ. ಇತ್ತು) ಇದರಲ್ಲಿ ಪ್ರತಿದಿನ 1.5 ಜಿ.ಬಿ ಡಾಟಾ, ಇತರ ನೆಟ್‌ವರ್ಕ್‌ಗಳಿಗೆ 12 ಸಾವಿರ ನಿಮಿಷಗಳು ಉಚಿತ. ಏರ್‌ಟೆಲ್‌ಗೆ ಅನಿಯಮಿತ ಉಚಿತ ಕರೆ ಇದೆ.

ವೊಡಾಫೋನ್‌-ಐಡಿಯಾ ದರ: ವೊಡಾಫೋನ್‌ ಮತ್ತು ಐಡಿಯಾ ಈಗಾಗಲೇ ವಿಲೀನವಾಗಿವೆ. ಇದರ ದರಗಳೂ ಒಂದು ರೂ.ಗಳಷ್ಟು ಹೆಚ್ಚು ಕಡಿಮೆ ಏರ್‌ಟೆಲ್‌ ರೀತಿಯೇ ಇವೆ. ಇದರಲ್ಲಿ ಮಿನಿಮಮ್‌ ಪ್ಯಾಕ್‌ (28 ದಿನಗಳ ವಾಯಿದೆ) 249 ರೂ. ಪ್ರತಿದಿನ 1.5 ಜಿ.ಬಿ ಡಾಟಾ, ಸ್ವಂತ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗೆ 1000 ನಿಮಿಷಗಳು ಉಚಿತ. ಪ್ರತಿದಿನ 2 ಜಿಬಿ ಡಾಟಾಕ್ಕೆ 299 ರೂ., ಪ್ರತಿದಿನ 3 ಜಿ.ಬಿ ಡಾಟಾಕ್ಕೆ 399 ರೂ. ರೀಚಾರ್ಜ್‌ ಇದೆ. 84 ದಿನಗಳ ವಾಯಿದೆಗೆ 599 ರೂ., ಪ್ರತಿದಿನ 1.5 ಜಿ.ಬಿ ಡಾಟಾ, ಸ್ವಂತ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆ, ಇತರ ನೆಟ್‌ವರ್ಕ್‌ಗಳಿಗೆ 3 ಸಾವಿರ ನಿಮಿಷ ಉಚಿತ ಕರೆ, ಇದೇ ವಾಯಿದೆಗೆ 699 ರೂ.ಗೆ ಪ್ರತಿದಿನ 2 ಜಿ.ಬಿ ದೊರಕುತ್ತದೆ. ಒಂದು ವರ್ಷಕ್ಕೆ ರೀಚಾರ್ಜ್‌ ಮಾಡಿಸಿಬಿಡೋಣ ಅಂದರೆ, 2399 ರೂ. ಕೊಡಬೇಕು. ಪ್ರತಿದಿನ 1.5 ಜಿ.ಬಿ ಡಾಟಾ, 12 ಸಾವಿರ ನಿಮಿಷ ಇತರ ನೆಟ್‌ವರ್ಕ್‌ಗಳಿಗೆ ಉಚಿತ ಕರೆ ದೊರಕುತ್ತದೆ. ಸ್ವಂತ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆ ಇರುತ್ತದೆ.

* ಕೆ. ಎಸ್‌. ಬನಶಂಕರ ಆರಾಧ್ಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ