ರೆಡಿಮೇಡ್‌ ಆಫೀಸ್‌!

ಸ್ಟಾರ್ಟ್‌ಅಪ್‌ ಗಳಿಗೆ ವರದಾನ

Team Udayavani, Sep 2, 2019, 6:00 AM IST

ಒಂದು ಕಂಪನಿಯನ್ನು ನಡೆಸಲು ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟು, ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಎಲ್ಲವನ್ನೂ ಅವರೇ ನೋಡಿಕೊಳ್ಳುವ ಒಂದು ಮಾದರಿಗೆ “ವರ್ಕ್‌ಸ್ಪೇಸ್‌ ಇಕೋ ಸಿಸ್ಟಮ್‌’ ಎನ್ನುತ್ತಾರೆ. ಇದರಲ್ಲಿನ ಹೊಸ ಟ್ರೆಂಡ್‌ “ಕೋವರ್ಕ್‌ ಸ್ಪೇಸ್‌’. ನಾನಾ ಕಂಪನಿಗಳ ಉದ್ಯೋಗಿಗಳು ಒಂದೇ ಸೂರಿನಡಿ ಜೊತೆಯಾಗಿ ಕೂತು ಕೆಲಸ ಮಾಡುವ ವಾತಾವರಣ ಇಲ್ಲಿನದು. ಅಡುಗೆ ಮನೆ, ಡೈನಿಂಗ್‌ ಹಾಲ್‌, ಸೋಫಾ, ಕ್ಯಾಬಿನ್‌, ಆಟದ ಕೋಣೆ, ಸ್ವಿಮ್ಮಿಂಗ್‌ ಪೂಲ್‌ ಎಲ್ಲವೂ ಇಲ್ಲಿದೆ…

ಮೊದಲೆಲ್ಲಾ ಒಂದು ಚಿಕ್ಕ ಕಂಪನಿ ಶುರು ಮಾಡಬೇಕು ಅಂದರೂ ಕೂಡ ಸಾಲ ಮಾಡು, ಜಾಗ ತಗೋ, ಕಟ್ಟಡ ನಿರ್ಮಾಣ ಮಾಡು, ಸರಕಾರಿ ಕಚೇರಿಯನ್ನು ಸುತ್ತು ಹಾಕು, ಎಲೆಕ್ಟ್ರಿಸಿಟಿ ತಗೊಂಡು ಬಾ, ನೀರು ಸರಬರಾಜು ಮಾಡು, ಹವಾನಿಯಂತ್ರಿತ ಕೊಠಡಿ ಬೇಕು… ಹೀಗೆ ಆಧುನಿಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲೇ ಅರ್ಧ ಶಕ್ತಿ ಕಳೆದುಹೋಗುತ್ತಿತ್ತು. ನಂತರ ಏನಾದರೂ ಉಳಿದರೆ ವ್ಯವಹಾರ ಶುರು ಆಗಬೇಕು. ಬಂಡವಾಳ ಹೂಡಿಕೆ ಏನಿದ್ದರೂ ಕಟ್ಟಡ, ಅದು, ಇದು ಎನ್ನುತ್ತಾ ವಿನಿಯೋಗ ಆಗುತ್ತಿತ್ತು. ಈಗ ಆ ಸಮಸ್ಯೆ ಇಲ್ಲ. ಹೊಸದೊಂದು ಟ್ರೆಂಡ್‌ ಶುರುವಾಗಿದೆ. ನಿಮಗೆ ಬೇಕಾದ ಕಡೆ ಬಾಡಿಗೆಗೆ ಆಫೀಸ್‌ ಸಿಗುವ ತರಹದ ಒಂದು ವ್ಯವಸ್ಥೆ ಬಂದಿದೆ. ಸಾಫ್ಟ್ವೇರ್‌ ಡೆವಲಪ್‌ಮೆಂಟ್‌, ಡಿಸೈನ್‌, ಚಾರ್ಟರ್ಡ್‌ ಅಕೌಂಟೆಂಟ್‌, ಪ್ರವಾಸೋದ್ಯಮ, ಪತ್ರಿಕೋದ್ಯಮ, ಆನ್‌ಲೈನ್‌ ವ್ಯಾಪಾರ, ಹೀಗೆ ಏನೇ ಇರಬಹುದು. ಎಷ್ಟೇ ಚಿಕ್ಕ ತಂಡವಿರಬಹುದು. ಕೆಲಸ ಮಾಡಲು ಇಲ್ಲಿ ಜಾಗ ಸಿಗುತ್ತದೆ. ಬಾಡಿಗೆ ತೆರಲು ತಯಾರಿದ್ದರೆ ಆಯ್ತು. ಮರುದಿನವೇ, ತಂಡವನ್ನು ಕೂರಿಸಿ ಕಚೇರಿಯಲ್ಲಿ ಕೆಲಸ ಶುರುಮಾಡಬಹುದು. ಬಯಸಿದ ಸೌಕರ್ಯಗಳೆಲ್ಲಾ ಕಟ್ಟಡದಲ್ಲಿ ಆಗಲೇ ಲಭ್ಯವಿರುತ್ತವೆ! ಇಂಥ ಒಂದು ಟ್ರೆಂಡ್‌ ನಮ್ಮ ರಾಜ್ಯದಲ್ಲಿ, ದೇಶದಲ್ಲಿ ಸ್ಟಾರ್ಟ್‌ಅಪ್‌ ಕಂಪನಿಗಳು ಬೆಳೆಯಲು ಬಹಳ ಅನುಕೂಲವಾಗಿದೆ.

ಸ್ಟಾರ್ಟಪ್‌ಗ್ಳಿಗೆ ಸಹಕಾರಿ
ನಮ್ಮ ದೇಶದ ಸಿಲಿಕಾನ್‌ ವ್ಯಾಲಿ ಹಾಗೂ ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌ ಎರಡೂ ನಮ್ಮ ಬೆಂಗಳೂರು. ಇಲ್ಲಿ ದಿನವೂ ಹತ್ತಾರು ಹೊಸ ಸ್ಟಾರ್ಟ್‌ ಅಪ್‌ ಕಂಪನಿಗಳ ಬಾಗಿಲು ತೆರೆಯುತ್ತವೆ. ಚೆನ್ನಾಗಿ ಕೆಲಸ ಮಾಡಬೇಕೆಂದರೆ ಕೆಲಸ ಮಾಡುವ ವಾತಾವರಣ ಚೆನ್ನಾಗಿರಬೇಕು. ಆಗಲೇ ಕಂಪನಿಯೂ ಅಭಿವೃದ್ಧಿ ಹೊಂದುತ್ತದೆ. ಒಳ್ಳೆಯ ಕೆಲಸದ ವಾತಾವರಣ ನಿರ್ಮಿಸಿಕೊಡುವ ಹೊಸ ಉದ್ಯಮ ಬೆಳೆಯುತ್ತಿದೆ.

ವರ್ಕ್‌ ಸ್ಪೇಸ್‌ ಅಂದರೆ ಏನು?
ಬ್ಯುಸಿನೆಸ್‌ಗೆಂದು ಕಟ್ಟಡ ಸಂಕೀರ್ಣವನ್ನು ನಿರ್ಮಿಸಿ, ಅದರಲ್ಲಿ ಒಬ್ಬರಿಗೆ ಬೇಕಾದಷ್ಟು ಅದನ್ನು ಬಾಡಿಗೆಗೆ ಕೊಟ್ಟು ಅಲ್ಲಿ ಒಂದು ಕಂಪನಿಯನ್ನು ನಡೆಸಲು ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟು, ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಎಲ್ಲವನ್ನೂ ಅವರೇ ನೋಡಿಕೊಳ್ಳುವ ಒಂದು ಮಾದರಿಗೆ “ಕೋ ವರ್ಕ್‌ಸ್ಪೇಸ್‌ ಇಕೋ ಸಿಸ್ಟಮ್‌’ ಎನ್ನುತ್ತಾರೆ. ಈ ಪರಿಸರದಲ್ಲಿ ಕಂಪನಿ ಶುರು ಮಾಡಲು ಕಡಿಮೆ ಹೂಡಿಕೆ ಇದ್ದರೆ ಸಾಕು. ಕುರ್ಚಿ, ಮೇಜು, ಕ್ಯಾಬಿನ್‌, ಲೈಟಿಂಗ್‌, ನೆಟ್‌ವರ್ಕ್‌, ಟೆಲಿಫೋನ್‌, ಒಳಗಡೆಯ ವಿನ್ಯಾಸ ಎಲ್ಲದರ ಉಸ್ತುವಾರಿಯನ್ನು ಕೂಡ ಅವರೇ ತಯಾರಿ ಮಾಡಿಕೊಡುತ್ತಾರೆ. ಪ್ರತಿ ಚದರಡಿಗೆ ಇಷ್ಟು ದರ ಅಂತ ನಿಗದಿಯಾಗಿರುತ್ತದೆ. ನಮಗೆ ಬೇಕಾದಷ್ಟು ಜಾಗಕ್ಕೆ ತಕ್ಕಂತೆ ಬಾಡಿಗೆ.

ಸಿಂಪಲ್‌ ಆಗಿ ವಿವರಿಸಬೇಕು ಅಂದರೆ, ಎರಡು ಬೆಡ್‌ ರೂಂ ಮನೆಯನ್ನು ನಾಲ್ಕು ಜನ ಸೇರಿ ಬಾಡಿಗೆಗೆ ತಗೆದುಕೊಂಡಂತೆ. ಅಲ್ಲಿ ಒಂದೇ ವೈಫೈ, ಒಂದೇ ಗ್ಯಾಸ್‌, ಒಂದೇ ಫ್ರೀಜರ್‌ ಸಾಕು, ನಾಲ್ಕು ಜನರು ಬಳಸಬಹುದು. ಪ್ರತಿಯೊಬ್ಬರೂ ತಿಂಗಳ ಬಾಡಿಗೆಯನ್ನು ಡಿವೈಡ್‌ ಮಾಡಿ ತಮ್ಮ ಪಾಲಿಗೆ ಎಷ್ಟು ಬರುತ್ತದೆಯೋ ಅಷ್ಟು ಕೊಟ್ಟಂತೆ ಇದೂ ಕೂಡ. ಕೇವಲ ಮನೆಯಷ್ಟೇ ಕೊಟ್ಟರೆ ಒಂದು ದರ, ಮನೆಯಲ್ಲಿ ಕೆಲವೇ ಕೆಲವು ಫ‌ರ್ನಿಚರ್‌ ಇದೆ ಅಂದರೆ ಅದಕ್ಕೆ ಹೆಚ್ಚು ದರ, ಮನೆಯಲ್ಲಿ ಬೇಕಾದ ಎಲ್ಲಾ ಸೌಕರ್ಯವೂ ಇದೆ ಅಂದರೆ ಅದಕ್ಕೆ ಇನ್ನೂ ಹೆಚ್ಚಿನ ದರ. ಹಾಗೆಯೇ ಇಲ್ಲೂ ಕೂಡ… ನಮಗೆ ಏನು ಬೇಕು ಎನ್ನುವುದರ ಮೇಲೆ ದರ ನಿರ್ಧಾರವಾಗುತ್ತದೆ. ಈ ರೀತಿಯ ಒಂದು ಹೊಸ ಸಾಮಾಜಿಕ ಬೆಳವಣಿಗೆ ಚಿಕ್ಕ ಪುಟ್ಟ ಕಂಪನಿಗಳಿಗೆ, ಸ್ಟಾರ್ಟ್‌ ಅಪ್‌ಗ್ಳಿಗೆ ಬಹಳ ಅನುಕೂಲ.

ಅನುಕೂಲಗಳು ಏನೇನು?
1. ಒಂದೊಳ್ಳೆ ಏರಿಯಾದಲ್ಲಿ ಕಂಪನಿ ಶುರುಮಾಡಲು ಜಾಗ ಬೇಕು ಅಂದರೆ ಎಷ್ಟು ದುಬಾರಿ ಎನ್ನುವುದು ನಿಮಗೆ ಗೊತ್ತೇ ಇದೆ. ಅಲ್ಲಿ ಜಾಗ ಕೊಂಡು, ಕಟ್ಟಡ ಕಟ್ಟುವುದು ಉಂಟೇ? ಆದರೆ ಬಾಡಿಗೆಗೆ ಸಿಗುವಾಗ ಪ್ರೈಂ ಏರಿಯಾದಲ್ಲಿ ಕೂಡ ಕಂಪನಿ ಆಫೀಸನ್ನು ಶುರು ಮಾಡಬಹುದು.
3. ವಿದ್ಯುತ್‌ ಸಂಪರ್ಕ, ನೀರಿನ ಸರಬರಾಜು, ಟೆಲಿಫೋನ್‌ ಕೇಬಲ್‌, ಅದು ಇದು ಎನ್ನುತ್ತಾ ಸರಕಾರಿ ಕಚೇರಿಗಳ ಸುತ್ತುತ್ತ ಸಮಯ ಹಾಳು ಮಾಡುವ ಅವಶ್ಯಕತೆ ಇರುವುದಿಲ್ಲ. ವ್ಯವಹಾರದ ಬಗ್ಗೆ ಯೋಚಿಸಲು ಬೇಕಾದ ಸಮಯ ಇರುತ್ತದೆ.
4. ಕಟ್ಟಡ ಸಂಕೀರ್ಣದಲ್ಲಿಯೇ ಅಥವಾ ಅಕ್ಕಪಕ್ಕದ ಬಿಲ್ಡಿಂಗ್‌ನಲ್ಲಿ ಹಲವಾರು ಆಫೀಸ್‌ಗಳು ಹಾಗೂ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಇರುವುದರಿಂದ ನಮಗೆ ಬೇಕಾಗಿರುವ “ಸ್ಕಿಲ್‌ ಸೆಟ್‌’ ಅಲ್ಲೇ ಅಕ್ಕ ಪಕ್ಕದಲ್ಲಿಯೇ ಸಿಗುತ್ತದೆ. ಈ ಪರಿಸರದಿಂದಾಗಿ ಹೊಸ ತಂತ್ರಜ್ಞಾನದ ಮಾಹಿತಿಯ ವರ್ಗಾವಣೆ, ಹೊಸ ಟ್ರೆಂಡ್‌ ಬಗ್ಗೆ ಪರಿಚಯ ಹೀಗೆ ಬಹಳ ಅನುಕೂಲವಾಗುತ್ತದೆ.
5. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಊಟ- ತಿಂಡಿಯ ವ್ಯವಸ್ಥೆ ಮಾಡುವ ಅವಶ್ಯಕತೆ ಇಲ್ಲ. ಫ‌ುಡ್‌ ಕೋರ್ಟ್‌ ಎನ್ನುವ ಒಂದು ಕಾನ್ಸೆ±r… ಇದೆ.
6. ಬೇರೆ ಬೇರೆ ಕಡೆಯಿಂದ ಬರುವವರಿಗೆ ಪ್ರತ್ಯೇಕವಾದ ವಾಹನದ ವ್ಯವಸ್ಥೆ ಮಾಡಿದರೆ ಅದು ಆರ್ಥಿಕ ದೃಷ್ಟಿಯಿಂದ ವಕೌìಟ್‌ ಆಗುವುದಿಲ್ಲ. ಹಲವಾರು ಕಂಪನಿಗಳು ಒಂದೇ ಕಡೆ ಇರುವುದರಿಂದ, ಆಫೀಸ್‌ ನಗರದ ಮುಖ್ಯ ಸ್ಥಳಗಳಲ್ಲಿ ಇರುವುದರಿಂದ ಸರಕಾರಿ ವಾಹನದ ವ್ಯವಸ್ಥೆ ಇರುತ್ತದೆ.
8. ಎಲ್ಲದಕ್ಕಿಂತ ಹೆಚ್ಚಾಗಿ ಕಂಪನಿಯ ಶುರುವಿನಲ್ಲಿ ಮಾಡಬೇಕಾದ ಹೂಡಿಕೆ ಕಡಿಮೆ. ಕಂಪನಿ ಬೆಳೆದಂತೆ ಅದಕ್ಕೆ ತಕ್ಕನಾಗಿ ಹೂಡಿಕೆ ಮಾಡುತ್ತಾ ಹೋಗಬಹುದು. ಇವತ್ತು 10, ನಾಳೆ 100 ಹೀಗೆ ಎಷ್ಟು ಜನರಿರುತ್ತಾರೋ ಅಷ್ಟು ಜಾಗ ಬಾಡಿಗೆಗೆ ತೆಗೆದುಕೊಳ್ಳುತ್ತಾ ಹೋಗಬಹುದು.
9. ಕ್ಲೈಂಟ್‌ ಅಥವಾ ಗ್ರಾಹಕರು ಇನ್ನೊಂದು ದೊಡ್ಡ ಕಂಪನಿ ಅಥವಾ ಕಂಪನಿಗಳೇ ಆಗಿದ್ದಲ್ಲಿ ಕಂಪನಿ/ಗಳ ಹತ್ತಿರವೇ ಆಫೀಸ್‌ ತೆರೆಯಬಹುದು. ಕಂಪನಿ ನಷ್ಟ ಅನುಭವಿಸುತ್ತಿದ್ದರೆ, ಜಾಗ ದೊಡ್ಡದಿದೆ ಅನಿಸಿದಾಗ ಇಲ್ಲವೇ ಇನ್ಯಾವುದೇ ತೊಡಕು ಬಂದರೆ ತಕ್ಷಣವೇ ಖಾಲಿ ಮಾಡಬಹುದು.

ಅನುಕೂಲವೇ ಹೆಚ್ಚಿರುವಾಗ ಸ್ಟಾರ್ಟ್‌ ಅಪ್‌ಗ್ಳು, ಸಣ್ಣ ಪುಟ್ಟ ಕಂಪನಿಗಳಷ್ಟೇ ಅಲ್ಲ ಇದೊಂದು ಟ್ರೆಂಡ್‌ ಅಂತಾನೇ ಹೇಳಬಹುದು. ಇಂದು ಪರಿಸ್ಥಿತಿ ಬದಲಾಗುತ್ತಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸಹ ವಿಮಾನ ನಿಲ್ದಾಣ ಇದೆ, ಬೇಕಾದ ಅಂತರ್ಜಾಲ ಸೌಕರ್ಯ ಉಳಿದವೆಲ್ಲವೂ ಇವೆ. ಹೀಗಿರುವಾಗ ಕಂಪನಿಗಳು, ಆಫೀಸ್‌ಗಳು ಬೆಂಗಳೂರನ್ನು ಬಿಟ್ಟು ಅಲ್ಲೂ ಯಾಕೆ ಹೋಗಬಾರದು? ಬೆಂಗಳೂರಿಗಿಂತ ಕಡಿಮೆ ಖರ್ಚಿನಲ್ಲಿ ಕೆಲಸವಾಗುವುದರ ಜೊತೆ ನಮ್ಮ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕೂಡ ಆಗುತ್ತದೆ. ಈ ಟ್ರೆಂಡನ್ನು ಒಂದು ಹೊಸ ದೃಷ್ಟಿಯಿಂದ ನೋಡಬೇಕಿದೆ.

ಹಿನ್ನಡೆಯೂ ಇದೆ…
ಈಗ ಈ ತರಹದ ಕಟ್ಟಡದಲ್ಲಿ ಬಾಡಿಗೆ ತೆಗೆದುಕೊಂಡು ಆಫೀಸ್‌ ನಡೆಸುವುದರಿಂದ ಆಗುವ ನಷ್ಟಗಳೇನು ಎನ್ನುವುದನ್ನು ನೋಡೋಣ. ಮೊದಲನೆಯದಾಗಿ, ಬಹಳಷ್ಟು ಸಲ ಜಾಗದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತದೆ. ಸ್ವಂತ ಕಟ್ಟಡವಾಗಿದ್ದರೆ ಅದು ಕಂಪನಿ ಆಸ್ತಿಯಾಗುತ್ತದೆ. ಬಾಡಿಗೆಗೆ ತೆಗೆದುಕೊಂಡು ಆಫೀಸ್‌ ನಡೆಸುವುದರಿಂದ ನಷ್ಟ ಆಗುವ ಸಾಧ್ಯತೆ ಇದೆ. ಎರಡನೆಯದಾಗಿ ಕೆಲವರಿಗೆ ತಮ್ಮ ಕಚೇರಿಯನ್ನು ತಾವೇ ಡಿಸೈನ್‌ ಮಾಡಬೇಕು, ವಾಸ್ತು ವಿನ್ಯಾಸ ಹೀಗಿರಬೇಕು, ಹಾಗಿರಬೇಕು ಎನ್ನುವ ನಂಬಿಕೆ ಇರುತ್ತದೆ. ಪ್ರತಿಯೊಂದು ಕಂಪನಿಗಳಲ್ಲೂ ವಿಭಿನ್ನ ರೀತಿಯ ಕೆಲಸದ ಸಂಸ್ಕೃತಿ ಇರುತ್ತದೆ. ರೆಡಿಮೇಡ್‌ ಆಫೀಸಿನಲ್ಲಿ ಸ್ವಲ್ಪ ಹೊಂದಾಣಿಕೆ ಅಗತ್ಯ.

ಸ್ಟಾರ್ಟ್‌ ಅಪ್‌ಗ್ಳನ್ನು ಪೋ›ತ್ಸಾಹಿಸುವ ಹಲವಾರು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಿವೆ.
1. ಸ್ಟಾರ್ಟ್‌ಅಪ್‌ ಇಂಡಿಯಾ ಸ್ಕೀಮ್‌ (5 ಕೋಟಿಯ ತನಕ ಸಾಲ)
2. ಸ್ಕಿಲ್‌ ಇಂಡಿಯಾ (ಹೊಸ ತಂತ್ರಜ್ಞಾನ, ಕೌಶಲ್ಯ ಬೆಳವಣಿಗೆಗೆ ಸಹಾಯ)
3. ರಾಷ್ಟ್ರೀಕೃತ ಬ್ಯಾಂಕುಗಳು ಸಾಲದ ಮೂಲಕ ಸ್ಟಾರ್ಟ್‌ಅಪ್‌ಗ್ಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.
4. ದೇಶದಲ್ಲಿನ ಹಲವಾರು ಗ್ರಾಮೀಣ ಬ್ಯಾಂಕುಗಳು ಹೊಸ ಪ್ರಯತ್ನಕ್ಕೆ ಸಹಾಯ ಮಾಡುತ್ತವೆ.
5. ವೆಂಚರ್‌ ಕ್ಯಾಪಿಟಲಿ… ಎನ್ನುವ ಹಲವಾರು ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಕೂಡ ಸ್ಟಾರ್ಟ್‌ಅಪ್‌ ಸಂಸ್ಥೆಗಳಿಗೆ ನೆರವಾಗುತ್ತವೆ.

– ವಿಕ್ರಮ್‌ ಜೋಶಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ