ಈ ಪತ್ರಗಳನ್ನು ಯಾವ ವಿಳಾಸಕ್ಕೆ ಕಳಿಸಲಿ?

Team Udayavani, Jul 2, 2019, 5:00 AM IST

ನನ್ನೆದೆಯ ತಳಮಳವನ್ನು, ಸಂಕಟವನ್ನು, ಅದರ ಜೊತೆಗೇ ಉಳಿದಿರುವ ಹಿಮಾಲಯದಂಥ ಪ್ರೀತಿಯನ್ನು ನಿಮ್ಮೆದುರು ತೆರೆದಿಡಬೇಕು. ಆದರೆ, ನೀವಿರುವ ವಿಳಾಸ ಮರೆತು ಹೋಗಿದೆ ಸಾರ್‌…

ರೀ ಹೇಗಿದ್ದೀರಿ? ಎಲ್ಲಿದ್ದೀರಿ?ಮೊದಲಿದ್ದ ನಿಮ್ಮ ಮಗುವಿನಂಥ ಮುಗ್ಧತೆಯನ್ನ ಹಾಗೇ
ಉಳಿಸಿಕೊಂಡಿದ್ದೀರೋ ಅಥವಾ ಬೆಂಗಳೂರೆಂಬ ಮಾಯಾವಿಯ ತೆಕ್ಕೆಯಲ್ಲಿ ಕಳೆದುಕೊಂಡಿದ್ದೀರೋ? ಈಗಲೂ ನಿಮ್ಮ ಹಣೆಯಲ್ಲಿ ವಿಭೂತಿ ಕುಂಕುಮಗಳೂ ಶೋಭಿಸುತ್ತಿವೆಯೆ? ಪ್ರತಿನಿತ್ಯ ಮನೆಯಲ್ಲಿ ಗಾಯತ್ರಿ ಮಂತ್ರವನ್ನ ಈಗಲೂ ಜಪಿಸುತ್ತಿದ್ದೀರಾ?ತಲೆಯ ಕೂದಲಿಗೆ ಈಗಲಾದರೂ ಶಾಂಪುವಿನ ದರ್ಶನ ಮಾಡಿಸುತ್ತಿದ್ದೀರೋ ಅಥವಾ ಲೈಫ್ ಬಾಯ್‌ ಎಲ್ಲಿದೆಯೋ ಅಲ್ಲಿದೆಆರೋಗ್ಯಅಂತ ಯಾಮಾರಿಸುತ್ತಿದ್ದೀರೋ?

ನಿಮ್ಮನ್ನ ಮರೆಯೋಕಾಗ್ತಿಲ್ಲರೀ, ಬದುಕಿನಲ್ಲಿ ಕೆಲವೊಂದು ಆದರ್ಶಗಳನ್ನಿಟ್ಟುಕೊಂಡವರಿಗೆ ನೀವೊಂದು ಆದರ್ಶ. ಪಿಜಾರೋ, ಸ್ಕೋಡ, ಫೆರಾರಿ ಕಾರುಗಳಲ್ಲಿ ಮೋಜು-ಮಸ್ತಿ ಮಾಡಲು ಕಾಲೇಜಿಗೆ ಬರುತ್ತಿದ್ದ ಹುಡುಗರ ಮಧ್ಯೆ, ಲಡಕಾಸಿ ಬೈಕ್‌ ನಲ್ಲಿ ಬರುತ್ತಿದ್ದ ನೀವು ತುಂಬಾನೆ ಹಿಡಿಸಿದ್ರಿ. ಹುಡುಗಿಯರನ್ನ ಬೈಕು ಹತ್ತಿಸಿಕೊಳ್ಳೋಕೆ ನಾ ಮುಂದು ತಾ ಮುಂದು ಅಂತ ಕಿತ್ತಾಡುತ್ತಿದ್ದ ಅಷ್ಟೂ ಹುಡುಗರ ಮಧ್ಯೆ, ಡಕೋಟ ಬೈಕ್‌ ಅನ್ನು ಅಷ್ಟು ತಳ್ಳಿಕೊಂಡು ಹೋಗಿ ಹತ್ತುತ್ತಿದ್ದ ನಿಮ್ಮ ಪುಕ್ಕಲುತನವೇ, ಅದರ ಜೊತೆಗೇ ಇದ್ದ ಮುಗ್ಧತೆಯೇ ನಿಮ್ಮೆಡೆಹೆ ನನ್ನನ್ನ ಸೆಳೆದಿದ್ದು.

ನೋಟುಗಳು,ಸೈಟುಗಳು,ಬಂಗಲೆಗಳು ನನ್ನಲ್ಲಿ ಯಾವತ್ತೂ ಪ್ರೀತಿಯನ್ನ ಹುಟ್ಟಿಸಲಿಲ್ಲ ಸಾರ್‌. ನನಗೆ ದುಬಾರಿ ಬೈಕು, ಕಾರುಗಳಲ್ಲಿ ಬರುತ್ತಿದ್ದ ಯಾವ ಹುಡುಗನ ಮೇಲೂ ಮನಸ್ಸಾಗಲಿಲ್ಲ, ಆಡಂಬರದ ಬದುಕಿನಿಂದ ದೂರವಿದ್ದು,ಹೃದಯಕ್ಕೆ ಹತ್ತಿರವಾಗಿದ್ದ ನಿಮ್ಮ ಮೇಲೆ ಇವತ್ತಿಗೂ ಮನಸ್ಸಿದೆ ಸಾರ್‌. ನೀವು ನನಗೆ ಮುಖಾಮುಖೀ ಆಗುವುದಿಲ್ಲ, ನಿಮ್ಮಿಂದ ನನಗೆ ಪತ್ರ ಬರುವುದಿಲ್ಲ, ನಾನು ಈ ಜನುಮದಲ್ಲಿ ನಿಮ್ಮ ಮುಖ ನೋಡಲಾಗುವುದಿಲ್ಲ ಅನ್ನುವ ಸತ್ಯ ನನಗೆ ತಿಳಿದಿದ್ದರೂ, ನಿಮ್ಮ ನೆನಪಾದಾಗಲೆಲ್ಲ ನನ್ನೆದೆಯ ಭಾರವನ್ನ ಕಳೆದುಕೊಳ್ಳಲು ಪತ್ರ ಬರೆಯುತ್ತಲೇ ಇರ್ತೀನಿ. ನನ್ನ ಮನಸ್ಸಿನ ಸ್ವಗತವನ್ನು, ನನ್ನೆದೆಯ ನೋವನ್ನು, ನನ್ನ ತಳಮಳವನ್ನು, ಅದೆಲ್ಲಕ್ಕಿಂತ ಹೆಚ್ಚಾಗಿರುವ, ಪ್ರೀತಿಯಲ್ಲಿ ಅದ್ದಿ ತೆಗೆದಂತಿರುವ ಪತ್ರಗಳನ್ನ ನಿಮಗೆ ಒಂದೇ ಒಂದ್ಸಲ ತೋರಿಸಬೇಕು ಅಂತ ಆಸೆ. ಹೇಳಿ ಸಾರ್‌, ನಿಮಗೆ ಇವನ್ನೆಲ್ಲ ತಲುಪಿಸುವುದಾದರೂ ಹೇಗೆ ಸಾರ್‌?

ಪಾಪದ ಹುಡುಗಿ

ಚಂದ್ರಕಲಾ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ