ಅಲ್ಲ ಕಣೋ, ಅವತ್ಯಾಕೆ ಆ ಥರಾ ನೋಡ್ತಾ ನಿಂತಿದ್ದೆ?

Team Udayavani, May 14, 2019, 6:00 AM IST

ದಿನಕ್ಕೊಂದು ಸ್ಟೈಲ್‌ ಮಾಡಿಕೊಂಡು ಬರುತ್ತಿದ್ದ ನಿನ್ನನ್ನು ನೋಡಿ ಮನಸ್ಸು ತಾಳ ತಪ್ಪಿತು. ಒಂದು ದಿನ ನೀನು ಕಾಣಿಸದಿದ್ದರೂ ಎದೆಯಲ್ಲೇನೋ ಸಂಕಟವಾಗುತ್ತಿತ್ತು. ಪ್ರೀತಿ-ಪ್ರೇಮದ ಬಗ್ಗೆ ಒಂಚೂರೂ ಅರಿವಿಲ್ಲದ ನನಗೆ, ಮನದಲ್ಲಿ ನಡೆಯುತ್ತಿದ್ದ ಕಾಳಗ ಯಾವುದೆಂದು ಅರ್ಥವಾಗಲಿಲ್ಲ.

ಹದಿನೆಂಟರ ಅಂಚಿನಲ್ಲಿರುವ ಹುಡುಗಾಟದ ವಯಸ್ಸು ನನ್ನದು. ಆದರೂ, ನಾಚಿಕೆ ಸ್ವಭಾವದ ನಾನು ಹುಡುಗರ ತಂಟೆಗೆ ಹೋದವಳಲ್ಲ. ನನ್ನ ಮಾತುಗಳೇನಿದ್ದರೂ ಗೆಳತಿಯರ ಜೊತೆಗೆ ಮಾತ್ರ. ಹುಡುಗರನ್ನು ನೋಡಿದರೆ, ಅವರ ಉಡುಪು, ಹೇರ್‌ ಸ್ಟೈಲ್, ನಡೆಯುವ ಶೈಲಿಯನ್ನು ನೋಡಿ, ಕಮೆಂಟ್‌ ಮಾಡಿ ನಗುತ್ತಿದ್ದೆನೇ ಹೊರತು, ಅದಕ್ಕಿಂತ ಜಾಸ್ತಿ ಅವರ ಬಗ್ಗೆ ತಲೆ ಕೆಡಿಸಿಕೊಂಡವಳಲ್ಲ. ಇವೆಲ್ಲಾ ನೀ ಸಿಗುವವರೆಗಿನ ಮಾತು.

ಆ ದಿನ ನಮ್ಮ ಕಾಲೇಜಿನಲ್ಲಿ ಸಾಂಸ್ಕೃತಿಕ ದಿನ ನಡೆಯುತ್ತಿತ್ತು. ಗಡಿಬಿಡಿಯಲ್ಲಿ ಎಲ್ಲಿಗೋ ಹೋಗುತ್ತಿದ್ದವಳ ಮುಂದೆ ನೀನು ಬಂದೆ, ಒಂದು ಕ್ಷಣ ನಿನ್ನ ಕಣ್ಣನ್ನೇ ನೋಡುತ್ತಾ ನಾನೂ ನಿಂತು ಬಿಟ್ಟೆ. ಆ ಕಣ್ಣಲ್ಲಿನ ಸೆಳೆತ, ನನ್ನ ಗಮನ ಬೇರೆಡೆಗೆ ಹೋಗಲು ಬಿಡಲೇ ಇಲ್ಲ. ನಾನು ಅರೆಕ್ಷ$ಣ ಮೈಮರೆತದ್ದು ನಿನ್ನ ಕಣ್ಣಲ್ಲೇ! ಆದರೆ, ನೀನು ಏನೂ ಆಗೇ ಇಲ್ಲ ಎನ್ನುವಂತೆ ಮುಂದೆ ಸಾಗಿದೆ. ಅವತ್ತು ನಾನು ಕುಳಿತು ಕಾರ್ಯಕ್ರಮ ನೋಡುವುದಕ್ಕಿಂತ ನಿನ್ನ ಹುಡುಕಾಟದಲ್ಲೇ ಮುಳುಗಿದ್ದೆ. ಅಷ್ಟು ವಿಧ್ಯಾರ್ಥಿಗಳ ನಡುವೆ ಮತ್ತೆ ನೀನು ಕಾಣಿಸಲೇ ಇಲ್ಲ.

ಮಾರನೆಯ ದಿನವೂ ನಿನ್ನನ್ನು ಹುಡುಕಿದೆ. ಉಹೂಂ, ಪ್ರಯೋಜನವಾಗಲಿಲ್ಲ. ಮತ್ತೆ ನಿನ್ನ ದರ್ಶನವಾಗಿದ್ದು ಐದಾರು ದಿನಗಳ ನಂತರ. ಯಾರೇ ಇವನು? ಅಂತ ಗೆಳತಿಯ ಬಳಿ ಪಿಸುಗುಟ್ಟಿದರೂ ಉತ್ತರ ಸಿಗಲಿಲ್ಲ. ನಿನ್ನ ಎತ್ತರ, ಆಕರ್ಷಕ ಕಂಗಳು, ಸದಾ ನಗು ಸೂಸುವ ಮುಖ…ಯಾವುದನ್ನೂ ನನ್ನಿಂದ ಮರೆಯಲು ಆಗಲೇ ಇಲ್ಲ. ಕಾರಿಡಾರ್‌ನಲ್ಲಿ ನಿಂತು ನೀ ಬರುವುದನ್ನೇ ನೋಡುವುದೇ ಕಾಯಕವಾಯ್ತು.

ನಿನ್ನ ಎಲ್ಲಾ ಗೆಳೆಯರಿಗಿಂತ ನೀನೇ ಸ್ವಲ್ಪ ಡಿಫ‌ರೆಂಟ್‌. ದಿನಕ್ಕೊಂದು ಸ್ಟೈಲ್‌ ಮಾಡಿಕೊಂಡು ಬರುತ್ತಿದ್ದ ನಿನ್ನನ್ನು ನೋಡಿ ಮನಸ್ಸು ತಾಳ ತಪ್ಪಿತು. ಒಂದು ದಿನ ನೀನು ಕಾಣಿಸದಿದ್ದರೂ ಎದೆಯಲ್ಲೇನೋ ಸಂಕಟವಾಗುತ್ತಿತ್ತು. ಆದರೆ, ಈ ಸುಂದರ ಭಾವನೆಗೆ ಏನೆಂದು ಹೆಸರಿಡಲಿ? ಪ್ರೀತಿ-ಪ್ರೇಮದ ಬಗ್ಗೆ ಒಂಚೂರೂ ಅರಿವಿಲ್ಲದ ನನಗೆ, ಮನದಲ್ಲಿ ನಡೆಯುತ್ತಿದ್ದ ಕಾಳಗ ಯಾವುದೆಂದು ಅರ್ಥವಾಗಲಿಲ್ಲ. ಅಷ್ಟೊತ್ತಿಗಾಗಲೇ ನಮ್ಮ ಕಾಲೇಜು ದಿನಗಳು ಮುಗಿಯುತ್ತ ಬಂದಿದ್ದವು.

ಗೆಳೆಯ, ನೆನಪಿದೆಯಾ? ಸೆಕೆಂಡ್‌ ಪಿಯು ಹಾಲ್‌ ಟಿಕೆಡ್‌ ಪಡೆಯಲು ಕಾಲೇಜಿಗೆ ಬಂದಿದ್ದೆವು. ಅವತ್ತೂ ನನ್ನ ಕಣYಳು ನಿನ್ನನ್ನೇ ಹುಡುಕುತ್ತಿದ್ದವು. ಮನಸ್ಸಿನಲ್ಲಿ ಒಂಥರಾ ಭಯ. ಈ ಎಲ್ಲಾ ಭಾವನೆಗಳು ಇಂದೇ ಕೊನೆಗೊಳ್ಳುತ್ತದೆ ಎನ್ನುವ ಕಾರಣಕ್ಕಿರಬಹುದು. ಕಣ್ಣಂಚಲ್ಲಿ ನೀರು.

ಅಂದು ನಾ ಹೋಗುತ್ತಿದ್ದ ದಾರಿಯಲ್ಲಿ, ಹಿಂದೆಯೇ ನೀನು ನಡೆದು ಬರುತ್ತಿದ್ದೆ. ನನ್ನ ಹೃದಯದ ಬಡಿತ ಹೆಚ್ಚಾಗಿ, ಮನಸ್ಸು ನಿನ್ನ ಬರುವಿಕೆಯನ್ನು ತಿಳಿಸುತ್ತಿದೆ ಅನ್ನಿಸಿತು. ಒಮ್ಮೆ ಹಿಂತಿರುಗಿ ನೋಡು ಎಂದು ಹೃದಯ ಸೂಚನೆ ನೀಡಿತು. ತಕ್ಷಣ ಹಿಂದಿರುಗಿ ನೋಡೆದೆ… ಆ ಕ್ಷಣದಲ್ಲಿ ನನ್ನ ಕಣ್ಣುಗಳು ನೇರವಾಗಿ ಸಂಧಿಸಿದ್ದು ನಿನ್ನ ಕಣ್ಣುಗಳನ್ನು. ನಿನಗೆ ಅರಿವಿದ್ದೋ, ಇಲ್ಲದೆಯೋ ನೀನೂ ಸಹ ನನ್ನನ್ನೇ ನೋಡುತ್ತಿದ್ದೆ. ಒಂದೆರಡು ಕ್ಷಣ ಇಬ್ಬರೂ ನೋಡುತ್ತಲೇ ಇದ್ದೆವು. ಹೆದರಿಕೆಯಾಗಿ ಮುಂದೆ ತಿರುಗಿಕೊಂಡವಳು ನಾನೇ.
ಮತ್ತೆ ತಿರುಗಿ ನೋಡಬೇಕೆನಿಸಿದರೂ ತಿರುಗುವ ಸಾಹಸಕ್ಕೆ ಹೋಗಲಿಲ್ಲ. ಅದೇ ನಮ್ಮ ಭೇಟಿಯ ಕೊನೆಯ ದಿನವಾಗಿತ್ತು. ಅದಾದಮೇಲೆ ನೀನು ಯಾವತ್ತೂ ಕಾಣಿಸಲೇ ಇಲ್ಲ….

ಆದರೆ, ಅವತ್ತು ನೀನ್ಯಾಕೆ ಹಾಗೆ ನೋಡಿದೆ ನನ್ನನ್ನು? ನಿಂಗೇನಾದ್ರೂ ಹೇಳ್ಳೋಕಿತ್ತಾ? ಅಥವಾ ಅಚಾನಕ್ಕಾಗಿ ನಡೆದ ಘಟನೆಯಾ ಅದು? ನನ್ನಲ್ಲಿ ಉತ್ತರವಿಲ್ಲ. ಉತ್ತರ ನನಗೆ ಬೇಕಾಗಿಯೂ ಇಲ್ಲ. ನನ್ನ ಪಾಲಿಗೆ ನೀನೊಂದು ಮಧುರವಾದ ನೆನಪು. ನಿನ್ನನ್ನು ಸದಾ ಕಾಲ ಎದೆಯಲ್ಲಿಟ್ಟುಕೊಂಡು ಕಾಪಾಡುತ್ತೇನೆ.

-ಅಮೃತಾ ಚಂದ್ರಶೇಖರ್‌, ತೀರ್ಥಹಳ್ಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಳೆದುಹೋದ ಭರ್ತಿಹಣವಿರುವ ಪರ್ಸ್‌ ಒಮ್ಮೆ ಸಿಕ್ಕರು ಅಷ್ಟು ಖುಷಿ ಆಗೋದಿಲ್ಲ. ಅದೇ ಹಾರಿಹೋದ ಪ್ರೀತಿ ಎಂಬ ಪಾರಿವಾಳ ಮರಳಿ ಗೂಡಿಗೆ ಬಂದಾಗ ಆಗುವ ಖುಷಿಗೆ ಪಾರವೇ...

  • ಮೂರು ದಿನದಿಂದ ನೀನು ಕಾಲೇಜಿಗೆ ಗೈರಾಗಿದ್ದೆ. ಇವತ್ತು ಬಂದರೂ ನನ್ನ ಕಡೆ ನೋಡಲಿಲ್ಲ. ನಿನ್ನನ್ನು ತಲೆ ಎತ್ತಿ ನೋಡುವ ಧೈರ್ಯ ಇಲ್ಲ,ಗೊತ್ತು ನನಗೆ, ಅಷ್ಟು ಅವಮಾನವಾಗಿದೆ...

  • ನೆನಪುಗಳ ಒಂಥರ ನೆರಳು ಇದ್ದಾಗೆ. ಆಗಾಗ ನಮ್ಮ ಹಿಂದೆ ತಿರುಗ್ತಾನೇ ಇರುತ್ತವೆ. ನೆನಪುಗಳ ಒಲೆ ಮುಂದೆ ಕೂತು ಕೆದಕಿದರೆ, ಕೆಲವು ಸಲ ಭೂತಕಾಲ ಬೆಚ್ಚಗಿರುತ್ತದೆ. ಇನ್ನೂ...

  • ಜೆ.ಬಿ.ಎಸ್‌. ಹಾಲ್ಡೇನ್ ಬ್ರಿಟಿಷ್‌ ಜೀವವಿಜ್ಞಾನಿ. ಹಾಲ್ಡೇನ್ ತಮ್ಮ ಜೀವನದ ಬಹುಭಾಗವನ್ನು ಭಾರತದಲ್ಲಿ, ಬಂಗಾಳದಲ್ಲಿ, ಅಪ್ಪಟ ಬಂಗಾಳಿಯಂತೆ ಕಳೆದರು. ಹಾಲ್ಡೇನ್...

  • ತರಬೇತಿಯ ಅವಧಿಯಲ್ಲಿ ನಮಗೆ ಸಿಗುತ್ತಿದ್ದ ಸಂಬಳ ಕಡಿಮೆಯಿತ್ತು. ಹಾಗಿದ್ದೂ ನಮ್ಮ ಜೊತೆಗಿದ್ದ ಹಲವರು ದಿನವೂ ಹೋಟೆಲ್‌ನಲ್ಲಿ ಊಟ ಮಾಡಿ ಬರುತ್ತಿದ್ದರು. ಲೆಕ್ಕ...

ಹೊಸ ಸೇರ್ಪಡೆ