ಕಾಲ ಮಿಂಚಿ ಹೋಗಿದೆ ಸಾರಿ ಕಾಣೋ

Team Udayavani, May 14, 2019, 6:00 AM IST

ಅಂದು ಬೆಳಗ್ಗೆ ತರಾತುರಿಯಲ್ಲಿ ರೆಡಿಯಾಗಿ ಕಾಲೇಜಿನ ಕಡೆಗೆ ಹೊರಟಿದ್ದೆ. ದಾರಿ ಮಧ್ಯದಲ್ಲಿ ಯಾವುದನ್ನು ನೋಡಬಾರದಾಗಿತ್ತೋ, ಅದೇ ಕಣ್ಣಿಗೆ ಬಿತ್ತು. ನಿನ್ನ ಹೆಸರು ಹೊತ್ತ, ದಾರಿಯ ಪಕ್ಕದ ಬೋರ್ಡ್‌ ನನ್ನನ್ನು ನೋಡಿ ನಕ್ಕಿತು. ಬೇಡವೆಂದರೂ ಹಳೆಯದೆಲ್ಲವೂ ಮತ್ತೆ ಕಣ್ಮುಂದೆ ಬಂತು.

ಪ್ರತಿದಿನ ನಾವು ಸೇರುತ್ತಿದ್ದ ಜಾಗ ಅಂದು ಕೂಡ ನಮಗಾಗಿ ಕಾಯುತ್ತಿತ್ತು. ನೀನಿನ್ನೂ ಬಂದಿರಲಿಲ್ಲ. ಪ್ರೇಮಿಗಳೇ ತುಂಬಿದ್ದ ಆ ಪುಟ್ಟ ಉದ್ಯಾನದಲ್ಲಿ ನಿಂತಿದ್ದ ಈ ಒಂಟಿ ಹುಡುಗ ನಿನ್ನ ದಾರಿ ಕಾಯುತ್ತಿದ್ದ. ಎಷ್ಟೊತ್ತು ಕಾದರೂ ನೀನು ಬರಲಿಲ್ಲ. ಒತ್ತಟ್ಟಿಗೆ ನಿಲ್ಲದ ಮನಸ್ಸು ಚಂಚಲವಾಗಿತ್ತು. ಕಾಲ್‌ ಮಾಡಿದರೆ, ಫೋನಿಗೂ ಸಿಗುತ್ತಿಲ್ಲ. ಗೆಳೆಯರನ್ನು ಕೇಳಿದರೆ, ನೀನು ಕಾಲೇಜಿಗೂ ಹೋಗಿಲ್ಲ ಅಂದರು. ಮನಸ್ಸು ತಡೆಯದೆ ನಿಮ್ಮ ಮನೆ ಕಡೆಗೆ ಹೊರಟೆ.

ನಿಮ್ಮೂರು ದೂರವಿದ್ದರೂ, ಮನಸಿನ ಆತುರ ಹೆಚ್ಚಿದ್ದರಿಂದ ದಾರಿ ಸಾಗಿದ್ದು ಗೊತ್ತಾಗಲೇ ಇಲ್ಲ. ಮನೆಯ ಮುಂದೆ ಯಾರಾದರೂ ಇದ್ದರೆ ತೊಂದರೆ ಎಂದು ಹಿತ್ತಲ ಬಾಗಿಲಿಗೆ ಬಂದು ನಿಂತೆ. ಕೆಲ ಸಮಯ ನೀನು ಕಾಣದಿದ್ದಕ್ಕೆ ತಾಳ್ಮೆ ಮೀರಿದ ಮನಸ್ಸು, ಒಳಗೆ ಹೋಗಿಯೇ ಬಿಡುವ ಧೈರ್ಯ ಮಾಡಿತ್ತು.

ಆಕ್ಷಣ ಎದುರಾದ ನೀನು ನಾಟ್ಯಕ್ಕೆ ಸಿದ್ಧಳಾದ ಶಾಕುಂತಲೆಯಂತೆ ಕಂಡೆ. ನಿನ್ನ ಶೃಂಗಾರಕ್ಕೆ ನನ್ನ ಕಣ್ಣೇ ದೃಷ್ಟಿಯಾಗುವಂತಿತ್ತು. ಆದರೆ ಮುಖದಲ್ಲಿ ನಗುವಿರಲಿಲ್ಲ. ನನ್ನನ್ನು ನೋಡಿದಾಕ್ಷಣ ಆಶ್ಚರ್ಯವಾದರೂ, ಓಡಿ ಬಂದು ಬಿಗಿದಪ್ಪಿ ಸುರಿಸಿದ ಕಂಬನಿ ಆನಂದಭಾಷ್ಪವಾಗಿರಲಿಲ್ಲ.

“ಕ್ಷಮಿಸಿ ಬಿಡು ಗೆಳೆಯಾ.. ನಾನು ಇನ್ನು ಮುಂದೆ ನಿನ್ನವಳಲ್ಲ. ಕೊನೆ ಉಸಿರಿನವರೆಗೂ ಜೊತೆಯಾಗಿರುವ ನಮ್ಮ ಕನಸು ಇಂದು ಒಡೆದು ಹೋಯ್ತು. ನಮ್ಮ ಪ್ರೀತಿಯ ವಿಷಯ ಮನೆಯವರಿಗೆ ಗೊತ್ತಾಗಿ, ಇದ್ದಕ್ಕಿದ್ದಂತೆ ಸೋದರಮಾವನೊಂದಿಗೆ ಉಂಗುರ ಬದಲಿಸಿಬಿಟ್ಟರು ಕಣೋ’ ಎಂದು ನೀನು ಹೇಳಿಬಿಟ್ಟೆ. ಒಂದು ಕ್ಷಣ ಭೂಮಿ ಕಂಪಿಸಿದ ಅನುಭವ. ಮರುಕ್ಷಣವೇ ವಾಸ್ತವಕ್ಕೆ ಬಂದೆ. ನಾನು ನಿನ್ನವಳಲ್ಲ ಎಂಬ ಮಾತು ನೆನಪಾಗಿ, ನಿನ್ನಿಂದ ದೂರ ಸರಿದು ನಿಂತೆ. ನೀರು ತುಂಬಿಕೊಂಡ ಕಣ್ಣು ತೆರೆಯಲು ಒದ್ದಾಡುತ್ತಿತ್ತು. ಒಂದೂ ಮಾತಾಡದೆ, ನಿನಗೆ ಸಮಾಧಾನವನ್ನೂ ಮಾಡದೆ ನನ್ನ ದಾರಿ ಹಿಡಿದೆ.

ನಾವಿಬ್ಬರು ಬೇರೆಯಾಗಿದ್ದಕ್ಕೆ ಯಾರು ಹೊಣೆ? ನಮ್ಮ ಪ್ರೀತಿಯನ್ನು ಒಪ್ಪದ ಮನೆಯವರಾ ಅಥವಾ ಜಾತಿ-ಅಂತಸ್ತಿನ ಅಂತರ ಮರೆತ ನಾವಿಬ್ಬರೇ ಹೊಣೆಯಾ? ಗೊತ್ತಿಲ್ಲ.. ಕಾಲ ಮಿಂಚಿ ಹೋಗಿದೆ. ನಮ್ಮ ದುರಾದೃಷ್ಟಕ್ಕೆ ಮರುಗಿದರೂ ಫ‌ಲವಿಲ್ಲ. ಆದರೂ, ನೆನಪಿನ ಬುಟ್ಟಿಯ ಹೂಗಳೆಲ್ಲಾ ಇಂದು ಕೆಳಗೆ ಚೆಲ್ಲಿ ಮತ್ತೆ ನಿನ್ನನ್ನು ನೆನಪಿಗೆ ತರುತ್ತಿವೆ. ಬದುಕೆಂಬ ಸುಂದರ ಬನದಲ್ಲಿ ಬಿಟ್ಟ ಸೂಜಿಮಲ್ಲೇ, ನೀನು ಯಾರ ಮುಡಿಗೇರಿದರೂ ನಿನ್ನ ಮಧುರತೆ ಕಳೆಗುಂದದಿರಲಿ.

-ಯೋಗೇಶ್‌ ಮಲ್ಲೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ